ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕೇರೂರ ಪಪೂ ಕಾಲೇಜಿನ ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಮಾದರಿ ನಡೆ, ಕಾರ್ಯಕ್ರಮಾಧಿಕಾರಿ ಶ್ರೀಶೈಲ ಕೋಲಾರ ಕುಟುಂಬ ಸಹಿತ ನೇತ್ರದಾನ ವಾಗ್ದಾನ, ಎನ್‌ಎಸ್‌ಎಸ್ ಸ್ವಯಂ ಸೇವಕರಾಗಿರುವ 85 ವಿದ್ಯಾರ್ಥಿಗಳಿಂದಲೂ ನೇತ್ರದಾನ ವಾಗ್ದಾನ. ತಮ್ಮ ಕುಟುಂಬದ ಸದಸ್ಯರಿಂದಲೂ ನೇತ್ರದಾನ ವಾಗ್ದಾನ ಮಾಡಿಸಿದ ಕೆಲವು ವಿದ್ಯಾರ್ಥಿಗಳು.
ಜಗದೀಶ ವಿರಕ್ತಮಠ
ಬೆಳಗಾವಿ(ಜ.25): ದಿ.ಪುನೀತ್ ರಾಜಕುಮಾರ ಅವರ ನೇತ್ರದಾನದ ಪ್ರೇರಣೆಯಿಂದ ಒಂದೇ ಕಾಲೇಜಿನ ವಿದ್ಯಾರ್ಥಿಗಳು ಮರಣಾನಂತರ ತಮ್ಮ ಕಣ್ಣುಗಳನ್ನು ದಾನ ಮಾಡುವುದರ ಮೂಲಕ ಮತ್ತೊಬ್ಬರ ಬಾಳಿಗೆ ಬೆಳಕಾಗುವ ಸಮಾಜಮುಖಿ ಕಾರ್ಯದೊಂದಿಗೆ ಇತರರಿಗೂ ಮಾದರಿಯಾಗುವ ಕಾರ್ಯ ಮಾಡಿದ್ದಾರೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕೇರೂರ ಗ್ರಾಮದ ಸರ್ಕಾರಿ ಪಪೂ ಕಾಲೇಜಿನ ಎನ್‌ಎಸ್‌ಎಸ್ ಘಟಕದ 85ಕ್ಕೂ ಅಧಿಕ ವಿದ್ಯಾರ್ಥಿಗಳು ಹಾಗೂ ಕೆಲವು ವಿದ್ಯಾರ್ಥಿಗಳ ಕುಟುಂಬಸ್ಥರು ತಮ್ಮ ನೇತ್ರಗಳನ್ನು ದಾನ ಮಾಡಲು ಒಪ್ಪಿಗೆ ಪತ್ರವನ್ನು ನೀಡಿದ್ದಾರೆ. ಕರ್ನಾಟಕ ರತ್ನ ದಿ.ಪುನೀತರಾಜಕುಮಾರ ಅವರ ಇಚ್ಚೆಯಂತೆ ಮರಣಾನಂತರ ನೇತ್ರದಾನ ಮಾಡುವ ಮೂಲಕ ಇಬ್ಬರು ಅಂಧರ ಬಾಳಿಗೆ ಬೆಳಕಾಗಿದ್ದರು. ಈ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿರುವ 100 ವಿದ್ಯಾರ್ಥಿಗಳ ಪೈಕಿ ಎನ್‌ಎಸ್‌ಎಸ್‌ನ 85 ಸ್ವಯಂ ಸೇವಕರು ಮತ್ತು ಅವರ ಕುಟುಂಬದ ಸದಸ್ಯರು ಸೇರಿದಂತೆ ಒಟ್ಟು 105 ಜನರು ನೇತ್ರದಾನದ ವಾಗ್ದಾನ ಮಾಡಿದ್ದಾರೆ. ಕಾಲೇಜಿನ ಎನ್‌ಎಸ್‌ಎಸ್ ಘಟಕದ ಕೋ-ಆರ್ಡಿನೇಟರ್ ಆಗಿ ಸೇವೆ ಸಲ್ಲಿಸುತ್ತಿರುವ, ಸಮಾಜಶಾಸ್ತ್ರ ಉಪನ್ಯಾಸಕ ಶ್ರೀಶೈಲ ಕೋಲಾರ ಅವರು ಕೂಡ ಡಾ.ಪುನೀತರಾಜಕುಮಾರ ಅವರ ನೇತ್ರದಾನದಿಂದ ಪ್ರೇರಣೆ ಪಡೆದು, ತಮ್ಮ ಕುಟುಂಬಸ್ಥರೆಲ್ಲರ ನೇತ್ರದಾನ ವಾಗ್ದಾನ ಮಾಡಿದ್ದಾರೆ. ಮಾತ್ರವಲ್ಲ, ಎನ್‌ಎಸ್‌ಎಸ್ ಘಟಕದಲ್ಲಿ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಮರಣಾನಂತರ ಅಂಗಾಂಗಗಳನ್ನು ದಾನ ಮಾಡುವುದರಿಂದ ಮತ್ತೊಬ್ಬರಿಗೆ ನೆರವಾಗುವುದರ ಜೊತೆಗೆ ತಮ್ಮ ಜೀವನದ ಸಾರ್ಥಕತೆ ಕಂಡುಕೊಳ್ಳಬಹುದು ಎಂಬುವುದನ್ನು ಮನವರಿಕೆ ಮಾಡಿದ್ದಾರೆ. ಇದರಿಂದ ಎನ್‌ಎಸ್‌ಎಸ್ ವಿದ್ಯಾರ್ಥಿಗಳು ನೇತ್ರದಾನ ದಾನಕ್ಕೆ ಮುಂದಾಗಿರುವುದು ಇಡೀ ಸಮಾಜಕ್ಕೆ ಮಾದರಿಯಾಗಿದೆ.
ಪುನೀತ್ ಸ್ಪೂರ್ತಿ: ನೇತ್ರ, ಅಂಗದಾನದಲ್ಲಿ ಭಾರೀ ಹೆಚ್ಚಳ
ನಾಲ್ಕೈದು ವಿದ್ಯಾರ್ಥಿಗಳ ಕುಟುಂಬಸ್ಥರಿಂದಲೂ ನೇತ್ರದಾನ ವಾಗ್ದಾನ:
ಎನ್‌ಎಸ್‌ಎಸ್ ಸ್ವಯಂ ಸೇವಕರಾಗಿರುವ ಕೇರೂರ ಪಿಯು ವಿದ್ಯಾರ್ಥಿಗಳು ತಮ್ಮ ನೇತ್ರದಾನ ಮಾಡುವ ವಾಗ್ದಾನವನ್ನು ಮಾತ್ರ ಮಾಡಿಲ್ಲ. ಈ ಪೈಕಿ ಮೂವರು ಸ್ವಯಂ ಸೇವಕರು ತಮ್ಮ ಇಡೀ ಕುಟುಂಬದಲ್ಲಿರುವ ತಂದೆ, ತಾಯಿ, ಸಹೋದರ, ಸಹೋದರಿ ಅವರನ್ನು ಒಪ್ಪಿಸಿ ನೇತ್ರದಾನ ಮಾಡುವಂತೆ ಪ್ರೇರೇಪಣೆ ಮಾಡಿದ್ದಾರೆ. ಇಂತಹ ಅದಮ್ಯ ಉತ್ಸಾಹ ತೋರಿರುವುದು ನಿಜಕ್ಕೂ ಮಾದರಿಯಾದ ವಿಚಾರ ಎಂಬ ಮಾತುಗಳು ಕೂಡ ಕೇಳಿಬಂದಿವೆ.
ಕನ್ನಡದ ಖ್ಯಾತ ನಟ, ಕರ್ನಾಟಕ ರತ್ನ ಡಾ.ರಾಜಕುಮಾರ ಹಾಗೂ ಅವರ ಪುತ್ರ ಪುನೀತರಾಜಕುಮಾರ ಅವರ ಕಣ್ಣುಗಳನ್ನು ಅವರ ನಿಧನದ ನಂತರ ದಾನ ಮಾಡಲಾಯಿತು. ಅಂದರೆ ಅವರ ಕಣ್ಣುಗಳು ಇಂದಿಗೂ ಜೀವಂತವಾಗಿವೆ. ಆದ್ದರಿಂದ ಕಾಲೇಜಿನಿಂದ ಸಮಾಜದವರೆಗೆ ನಮ್ಮ ಸಾರ್ಥಕ ಬದುಕು ಇರುವಂತಾಗಬೇಕು. ನೀವು ನೇತ್ರದಾನ ಮಾಡಿ ನಿಮ್ಮ ನೆರೆಹೊರೆಯವರಿಗೂ ನೇತ್ರದಾನದ ಮನವರಿಕೆ ಮಾಡುವ ಯತ್ನವನ್ನು ಸ್ವಯಂಸೇವಕರು ಮಾಡಿದ್ದಾರೆ. ಎನ್‌ಎಸ್‌ಎಸ್ ಘಟಕ ಕೋ ಆಡಿನೆಟರ್ ಶ್ರೀಶೈಲ್ ಕೋಲಾರ ಅವರ ಕಾರ್ಯಕ್ಕೆ ಕೈ ಜೋಡಿಸಿರುವ ವಿದ್ಯಾರ್ಥಿಗಳು ತಾವಷ್ಟೇ ಅಲ್ಲದೇ ತಮ್ಮ ತಂದೆ, ತಾಯಿ, ಸಹೋದರ, ಸಹೋದರಿಯರನ್ನು ಮನವರಿಕೆ ಮಾಡಿ ನೇತ್ರದಾನಕ್ಕೆ ಒಪ್ಪಿಸಿರುವುದು ಮಾದರಿ ನಡೆ ಎಂಬುವುದರಲ್ಲಿ ಎರಡು ಮಾತಿಲ್ಲ.
ಸಾವಿನಲ್ಲೂ ಸಾರ್ಥಕತೆ: ಕಿರುತೆರೆ ನಟಿ ವೈಶಾಲಿ ನೇತ್ರದಾನ ಮಾಡಿದ ಪೋಷಕರು
ಅಷ್ಟೇ ಅಲ್ಲದೇ ಆಜಾದಿಕಾ ಅಮೃತ ಮಹೋತ್ಸವ ಸಮಯದಲ್ಲಿ ವಿದ್ಯಾರ್ಥಿಗಳಿಂದ ರಕ್ತದಾನವನ್ನು ಮಾಡಿಸಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಹಳೆಯ ವಿದ್ಯಾರ್ಥಿಗಳ ಸಮ್ಮೇಳನದಲ್ಲಿಯೂ ಶ್ರೀಶೈಲ ಕೋಲಾರ ಅವರ ಕಾರ್ಯವನ್ನು ಮೆಚ್ಚುಗೆ ವ್ಯಕ್ತಪಡಿಸಿದ ಹಳೆಯ ವಿದ್ಯಾರ್ಥಿಗಳು ಹಾಗೂ ಅದೇ ಗ್ರಾಮದ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ಶಿಕ್ಷಕರು ತಾವು ಕೂಡ ನಮ್ಮ ನೇತ್ರಗಳನ್ನು ಹಾಗೂ ಇನ್ನೂ ಕೆಲವರು ದೇಹವನ್ನೇ ದಾನ ಮಾಡಲು ಮುಂದೆ ಬಂದಿರುವುದು ವಿಶೇಷವಾಗಿದೆ.
ಡಾ.ಪುನೀತರಾಜಕುಮಾರ ಅವರು ತಮ್ಮ ಮರಣಾನಂತರ ನೇತ್ರಗಳನ್ನು ದಾನ ಮಾಡಿದ್ದು ನಮಗೆ ಪ್ರೇರಣೆಯಾಗಿದೆ. ಆದ್ದರಿಂದ ಮರಣಾಂತರ ನಾಶವಾಗುವ ನಮ್ಮ ನೇತ್ರಗಳನ್ನು ದಾನ ಮಾಡಿದ್ದಲ್ಲಿ, ನಮ್ಮ ಕಣ್ಣುಗಳು ಮತ್ತೊಬ್ಬ ಅಂಧರ ಬಾಳಿಗೆ ಬೆಳಕಾಗುವುದರ ಜತೆಗೆ ನಾವು ಜೀವಂತವಾಗಿರುತ್ತವೆ. ಆದ್ದರಿಂದ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದ್ದರಿಂದ ತಾವಷ್ಟೇ ಅಲ್ಲ, ತಮ್ಮ ಕುಟುಂಬಸ್ಥರನ್ನು ನೇತ್ರದಾನಕ್ಕೆ ಮನವೊಲಿಸಿದ್ದಾರೆ. ಪ್ರತಿ ವರ್ಷವೂ ನಮ್ಮ ಈ ನೇತ್ರದಾನದ ಮನವರಿಕೆ ಕಾರ್ಯ ಮುಂದುವರೆಯಲಿದೆ ಅಂತ ಎನ್‌ಎಸ್‌ಎಸ್ ಘಟಕ ಕೋ-ಆಡಿನೇಟರ್ ಶ್ರೀಶೈಲ ಕೋಲಾರ ತಿಳಿಸಿದ್ದಾರೆ.