ರಾಜ್ಯದಲ್ಲೇ ಅತಿ ದೊಡ್ಡ ಜಿಂದಾಲ್‌ನಲ್ಲಿ 1000 ಬೆಡ್‌ನ ಕೋವಿಡ್‌ ಆಸ್ಪತ್ರೆ

By Kannadaprabha News  |  First Published May 20, 2021, 10:29 AM IST
  •  1 ಸಾವಿರ ಆಕ್ಸಿಜನ್‌ ಹಾಸಿಗೆ ಸೌಲಭ್ಯವುಳ್ಳ ರಾಜ್ಯದ ಅತಿ ದೊಡ್ಡ ತಾತ್ಕಾಲಿಕ ಕೋವಿಡ್‌ ಆಸ್ಪತ್ರೆ
  • ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ಜಿಂದಾಲ್‌ ಬಳಿ ಆರಂಭ
  • ಬಳ್ಳಾರಿ, ವಿಜಯನಗರ, ಕೊಪ್ಪಳ, ರಾಯಚೂರು ಜಿಲ್ಲೆಗಳ ಕೋವಿಡ್‌ ರೋಗಿಗಳಿಗೆ ಅನುಕೂಲ

ಬಳ್ಳಾರಿ (ಮೇ.20):  ಸಂಡೂರು ತಾಲೂಕಿನ ಜಿಂದಾಲ್‌ ಬಳಿ ರಾಜ್ಯದಲ್ಲೇ ಅತಿ ದೊಡ್ಡದಾದ, 1 ಸಾವಿರ ಆಕ್ಸಿಜನ್‌ ಹಾಸಿಗೆ ಸೌಲಭ್ಯವುಳ್ಳ ರಾಜ್ಯದ ಅತಿ ದೊಡ್ಡ ತಾತ್ಕಾಲಿಕ ಕೋವಿಡ್‌ ಆಸ್ಪತ್ರೆಯನ್ನು ಆರಂಭಿಸಲಾಗಿದೆ. ಬಳ್ಳಾರಿ, ವಿಜಯನಗರ, ಕೊಪ್ಪಳ, ರಾಯಚೂರು ಜಿಲ್ಲೆಗಳ ಕೋವಿಡ್‌ ರೋಗಿಗಳಿಗೆ ಈ ಆಸ್ಪತ್ರೆಯಿಂದ ಅನುಕೂಲವಾಗಲಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬೆಂಗಳೂರಿನ ಗೃಹ ಕಚೇರಿ ಕೃಷ್ಣಾದಿಂದ ವರ್ಚುವಲ್‌ ಮೂಲಕ ಬುಧವಾರ ಆಸ್ಪತ್ರೆಯನ್ನು ಲೋಕಾರ್ಪಣೆಗೊಳಿಸಿದರು.

Latest Videos

undefined

ಬಳಿಕ ಮಾತನಾಡಿದ ಅವರು, ಜಿಂದಾಲ್‌ ಸಂಸ್ಥೆಯಿಂದ 1 ಸಾವಿರ ಆಕ್ಸಿಜನ್‌ ಸಹಿತ ಹಾಸಿಗೆಯುಳ್ಳ ಆಸ್ಪತ್ರೆಯಲ್ಲಿ ಲಭ್ಯವಾಗುತ್ತಿರುವುದರಿಂದ ಸೋಂಕಿತರಿಗೆ ಸಾಕಷ್ಟುಸಹಾಯವಾಗಲಿದೆ. ರಾಜ್ಯದ ವಿವಿಧೆಡೆಗೆ ಆಕ್ಸಿಜನ್‌ ಪೂರೈಕೆ ಮಾಡುತ್ತಿರುವ ಜಿಂದಾಲ್‌ ಸಂಸ್ಥೆಯು ಜೀವ ಸಂಜೀವಿನಿಯಾಗಿದೆ. ಸಕಾಲದಲ್ಲಿ ಅತ್ಯುತ್ತಮ ಚಿಕಿತ್ಸೆ ನೀಡುವುದರಲ್ಲಿ ಜಿಂದಾಲ್‌ ಆಸ್ಪತ್ರೆ ದೇಶಕ್ಕೆ ಮಾದರಿಯಾಗಲಿದೆ ಎಂದರು.

ಬಳ್ಳಾರಿ: ಜಿಂದಾಲ್‌ನಲ್ಲಿ 300 ಆಕ್ಸಿಜನ್ ಬೆಡ್ ಸಿದ್ಧ, ಆನಂದ ಸಿಂಗ್ ..

ಈ ಆಸ್ಪತ್ರೆಗೆ ನಿರಂತರವಾಗಿ ಆಮ್ಲಜನಕ ಪೂರೈಸಲು ಜಿಂದಾಲ್‌ ಉಕ್ಕಿನ ಸ್ಥಾವರದಿಂದ 4.8 ಕಿ.ಮೀ. ಪೈಪ್‌ಲೈನ್‌ ವ್ಯವಸ್ಥೆ ಮಾಡಲಾಗಿದೆ. ಈ ಮೂಲ ಸೌಕರ್ಯವನ್ನು ಕೇವಲ 15 ದಿನಗಳಲ್ಲಿ ನಿರ್ಮಿಸಿರುವುದು ದಾಖಲೆಯೇ ಸರಿ ಎಂದ ಮುಖ್ಯಮಂತ್ರಿ, ಈ ಆಸ್ಪತ್ರೆಯನ್ನು ಬಳ್ಳಾರಿ ಜಿಲ್ಲಾಡಳಿತ ನಿರ್ವಹಿಸಲಿದೆ ಎಂದು ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್‌, ಜೆಎಸ್‌ಡಬ್ಲ್ಯೂ ಫೌಂಡೇಶನ್‌ನ ಅಧ್ಯಕ್ಷೆ ಸಂಗೀತಾ ಜಿಂದಾಲ್‌ , ಜೆಎಸ್‌ಡಬ್ಲ್ಯೂ ಸಮೂಹದ ಅಧ್ಯಕ್ಷ ಸಜ್ಜನ್‌ ಜಿಂದಾಲ್‌, ಇತರರು ಹಾಜರಿದ್ದರು.

ರಾಜ್ಯದ ಅತಿ ದೊಡ್ಡ ಆಸ್ಪತ್ರೆಯಲ್ಲಿ ಏನೇನಿದೆ?

ಇದು ಸಂಪೂರ್ಣ ಹವಾನಿಯಂತ್ರಿತ ಆಸ್ಪತ್ರೆಯಾಗಿದ್ದು, ಸುಸಜ್ಜಿತ ಹಾಸಿಗೆ, ಸ್ನಾನಗೃಹ, ಶೌಚಾಲಯ ಹೊಂದಿದೆ. ನಿರಂತರ ವಿದ್ಯುತ್‌ ಪೂರೈಕೆಯಾಗಲಿದ್ದು, ಒಂದು ಸಾವಿರ ಮೆ.ವ್ಯಾ. ವಿದ್ಯುತ್‌ ಸರಬರಾಜು ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರತಿ ರೋಗಿಗೆ ಶುದ್ಧ ಕುಡಿಯುವ ನೀರು, ಹಾಸಿಗೆ ಬಳಿ ಫ್ಯಾನ್‌, ಟೇಬಲ್‌, ಚೇರ್‌, ಗುಣಮಟ್ಟದ ಊಟ, ಉಪಾಹಾರ ವ್ಯವಸ್ಥೆ ಇರಲಿದೆ. ಪ್ರತಿ ರೋಗಿಗೆ 20 ಲೀ. ಆಮ್ಲಜನಕವನ್ನು ಅಡೆತಡೆಯಿಲ್ಲದೆ ನಿರಂತರ ಪೂರೈಕೆ ಮಾಡುವ ವ್ಯವಸ್ಥೆ ಇದೆ.

ಜಿಂದಾಲ್‌ ಕಾರ್ಖಾನೆಯಿಂದ 4.5 ಕಿ.ಮೀ.ನಿಂದ ಪೈಪ್‌ಲೈನ್‌ ಮೂಲಕ ಆಸ್ಪತ್ರೆಗೆ ಆಕ್ಸಿಜನ್‌ ಸರಬರಾಜು ಮಾಡಲಾಗುತ್ತಿದೆ. ಬಳ್ಳಾರಿಯ ಈ ಹಿಂದಿನ ವಿಮ್ಸ್‌ ನಿರ್ದೇಶಕರಾಗಿದ್ದ ಡಾ. ದೇವಾನಂದ್‌ ಅವರನ್ನು ನೋಡಲ್‌ ಅಧಿಕಾರಿಯನ್ನಾಗಿ ನೇಮಿಸಲಾಗಿದೆ. ಎಲ್ಲ ರೋಗಿಗಳಿಗೆ ವೈದ್ಯಕೀಯ ಚಿಕಿತ್ಸೆಗೆ ಅಗತ್ಯ ಇರುವ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗಿದ್ದು, ಬೇರೆ ರಾಜ್ಯಗಳಿಂದಲೂ ಉಚಿತವಾಗಿ ಸೇವೆ ನೀಡಲು ನರ್ಸ್‌ಗಳು ಆಗಮಿಸುತ್ತಿದ್ದಾರೆ. ಗುಜರಾತ್‌ನಿಂದ 28 ವಿದ್ಯಾರ್ಥಿಗಳು ಆಗಮಿಸಿದ್ದು, ಇನ್ನು 50ಕ್ಕೂ ಹೆಚ್ಚು ವೈದ್ಯಕೀಯ ಸಿಬ್ಬಂದಿ ಆಗಮಿಸುವ ನಿರೀಕ್ಷೆ ಇದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!