* ಧಾರವಾಡ ತಾಲೂಕಿನ ಹಳ್ಳಿಗೇರಿ ಗ್ರಾಮದಲ್ಲಿ ನಡೆದ ಘಟನೆ
* ಬೈಕ್ ಜಖಂಗೊಳಿಸಿದ ಯುವಕ
* ಪಿಡಿಒ ಮೇಲೆ ಹಲ್ಲೆ ನಡೆಸಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ದಾಖಲು
ಹುಬ್ಬಳ್ಳಿ(ಮೇ.20): ಕ್ರಿಕೆಟ್ ಆಡಬೇಡಿ, ಮಾಸ್ಕ್ ಹಾಕಿಕೊಳ್ಳಿ ಎಂದು ತಿಳಿಹೇಳಿದ್ದಕ್ಕೆ ಪಿಡಿಒಗೆ ಯುವಕನೊಬ್ಬ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ ಘಟನೆ ಧಾರವಾಡ ತಾಲೂಕಿನ ಹಳ್ಳಿಗೇರಿ ಗ್ರಾಮದಲ್ಲಿ ನಡೆದಿದೆ. ಹಳ್ಳಿಗೇರಿ ಪಿಡಿಒ ಮೃತ್ಯುಂಜಯ ಹಲ್ಲೆಗೊಳಗಾದವರು.
undefined
ಗ್ರಾಮದ ಮೈದಾನದಲ್ಲಿ ಕೆಲವು ಯುವಕರು ಕ್ರಿಕೆಟ್ ಆಡುತ್ತಿದ್ದರು. ಯಾರೊಬ್ಬರೂ ಮಾಸ್ಕ್ ಧರಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಕೊರೋನಾ ಗ್ರಾಮದಲ್ಲಿ ಹಬ್ಬುತ್ತಿದೆ. ಹೀಗೆಲ್ಲ ಆಡುವಂತಿಲ್ಲ. ಸೆಮಿಲಾಕ್‌ಡೌನ್ ಘೋಷಿಸಲಾಗಿದೆ. ನೀವೆಲ್ಲರೂ ತೆರಳಿ ಎಂದು ಪಿಡಿಒ ತಿಳಿಹೇಳಿದ್ದಾರೆ. ಕೆಲವು ಯುವಕರು ಅಲ್ಲಿಂದ ತೆರಳಿದ್ದಾರೆ. ಕೆಲವರು ಮಾಸ್ಕ್ ಹಾಕಿಕೊಂಡಿದ್ದಾರೆ.
ಆದರೆ, ಯುವಕನೊಬ್ಬ ಪಿಡಿಒಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ನಮಗೇನು ನೀನು ಹೇಳ್ತಿಯಾ? ಮಾಸ್ಕ್ ಹಾಕಿಕೊಳ್ಳುವುದಿಲ್ಲ. ಏನು ಮಾಡ್ತಿಯೋ ಮಾಡಿಕೋ, ಪೊಲೀಸ್ ಕಂಪ್ಲೇಂಟ್ ಕೊಡ್ತೀಯಾ? ಕೊಡು. ನಾನೇನು ಪೊಲೀಸರಿಗೂ ಹೆದರುವುದಿಲ್ಲ.. ಎಂದೆಲ್ಲಾ ದಬಾಯಿಸಿದ್ದಾನೆ. ಅಲ್ಲದೇ, ಗ್ರಾಪಂ ಕಚೇರಿವರೆಗೂ ಆಗಮಿಸಿ ಪಿಡಿಒ ಹಾಗೂ ಪಂಚಾಯಿತಿ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾನೆ. ಪಿಡಿಒ ಬೈಕ್‌ನ ಹೆಡ್‌ಲೈಟ್‌ನ್ನು ಕಲ್ಲಿನಿಂದ ಒಡೆದು ಜಖಂಗೊಳಿಸಿದ್ದಾನೆ. ಬಳಿಕ ಗ್ರಾಮದ ಕೆಲವರು ಆಗಮಿಸಿ ಸಮಾಧಾನಪಡಿಸಲು ಯತ್ನಿಸಿದರೂ ಆತ ಪಿಡಿಒನನ್ನು ನಿಂದಿಸುತ್ತಲೇ ಇದ್ದನಂತೆ. ಮಾಸ್ಕ್ ಹಾಕಿಕೊಳ್ಳಲ್ಲ ಏನ್ಮಾಡ್ತೀರೋ ಮಾಡಿಕೊಳ್ಳಿ ಎಂದು ಚೀರಾಡಿದ್ದಾನೆ.
ಹಳ್ಳಿಗಳಲ್ಲಿ ಕೊರೋನಾ ಟೆಸ್ಟ್ ಮಾಡಿಸಲು ಹಿಂಜರಿಕೆ
ಪಿಡಿಒ ಮೇಲೆ ಹಲ್ಲೆ ನಡೆಸಿರುವ ದೃಶ್ಯಗಳೆಲ್ಲ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿವೆ. ಜತೆಗೆ ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬರು ಅಲ್ಲಿನ ದೃಶ್ಯಗಳನ್ನು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ. ಅದೀಗ ವೈರಲ್ ಆಗಿದೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona