* ಮನೆ ಆರೈಕೆಯಲ್ಲಿ ಚೇತರಿಕೆ ಕಂಡ ಹಿರಿಯ ಜೀವಗಳು
* ವೈದ್ಯರು ಸೂಚಿಸಿದ ಔಷಧ, ಊಟೋಪಚಾರದಿಂದ ಕೋವಿಡ್‌ಗೆ ಎದುರೇಟು
* ಕೋವಿಡ್‌ನಿಂದ ಪೂರ್ಣ ಹೊರ ಬಂದು ನಿಟ್ಟಿಸಿರು ಬಿಟ್ಟ ದಂಪತಿ
ಬಳ್ಳಾರಿ(ಮೇ.31): ಸಂಡೂರು ತಾಲೂಕಿನ ತುಂಬರಗುದ್ದಿ ಗ್ರಾಮದ ಶತಾಯುಷಿ ವೀರಣ್ಣ (103) ಹಾಗೂ ಈರಮ್ಮ (101) ಕೊರೋನಾ ಸೋಂಕಿನಿಂದ ಪಾರಾಗಿ ಬಂದಿದ್ದಾರೆ. ಕೋವಿಡ್ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ 12 ದಿನಗಳ ಕಾಲ ಹೋಂ ಐಸೋಲೇಷನ್‌ನಲ್ಲಿದ್ದ ಈ ಹಿರಿಯ ದಂಪತಿ, ವೈದ್ಯರು ಸೂಚಿಸಿದ ಔಷಧ, ಊಟೋಪಚಾರದಿಂದ ಕೋವಿಡ್‌ಗೆ ಎದುರೇಟು ನೀಡಿದ್ದಾರೆ.
ಈ ದಂಪತಿಗೆ ಮೇ 17ರಂದು ಕೆಮ್ಮು, ಜ್ವರ ಇತರ ಕೋವಿಡ್ ಲಕ್ಷಣಗಳು ಕಾಣಿಸಿಕೊಂಡವು. ವೈದ್ಯಕೀಯ ಪರೀಕ್ಷೆಗೊಳಪಡಿಸಿದಾಗ ಕೋವಿಡ್ ಇರುವುದು ಖಚಿತವಾಗಿದೆ. ಕೂಡಲೇ ಅವರನ್ನು ಮನೆ ಆರೈಕೆಯಲ್ಲಿ ಚಿಕಿತ್ಸೆ ನೀಡಲು ನಿರ್ಧರಿಸಿದ ಕುಟುಂಬ ಸದಸ್ಯರು, ಸೂಕ್ತ ಚಿಕಿತ್ಸೆಯ ಮೂಲಕ ವೃದ್ಧರನ್ನು ಕೋವಿಡ್‌ನಿಂದ ಕಾಪಾಡಿಕೊಂಡಿದ್ದಾರೆ.
undefined
ವೃದ್ಧ ದಂಪತಿಯ ಮಗ ಎಂ. ತಿಪ್ಪೇಸ್ವಾಮಿ ಅವರು ಸರ್ಕಾರಿ ಪ್ರೌಢಶಾಲೆಯ ಮುಖ್ಯಗುರುಗಳಾಗಿದ್ದು, ಸೊಸೆ ಎನ್. ಸಾವಿತ್ರಮ್ಮ ಸಹ ಸರ್ಕಾರಿ ಶಾಲೆಯ ಶಿಕ್ಷಕಿ. ಮೊಮ್ಮಗ ಡಾ. ಭರತ್ ಕುಮಾರ್ ವೈದ್ಯರಾಗಿದ್ದು, ಕೆಲವು ವೈದ್ಯರ ಸಲಹೆಗಳನ್ನು ಪಡೆದು ಅಜ್ಜ-ಅಜ್ಜಿಗೆ ಸಕಾಲಕ್ಕೆ ಅಗತ್ಯದ ಚಿಕಿತ್ಸೆ ನೀಡಿದ್ದಾರೆ. ಮಗ ಹಾಗೂ ಸೊಸೆ ಊಟೋಪಚಾರದ ಜತೆಗೆ ಅವರ ಆರೋಗ್ಯದ ಕಡೆ ನಿಗಾ ಇರಿಸಿದ್ದಾರೆ. ಇದರಿಂದ 12 ದಿನಗಳ ಬಳಿಕ ವೃದ್ಧ ದಂಪತಿಯಲ್ಲಿ ಆರೋಗ್ಯ ಪೂರ್ಣ ಚೇತರಿಕೆ ಕಂಡು ಬಂದಿದ್ದು, ಇದೀಗ ಕೋವಿಡ್‌ನಿಂದ ಪೂರ್ಣ ಹೊರ ಬಂದು ನಿಟ್ಟಿಸಿರು ಬಿಟ್ಟಿದ್ದಾರೆ.
ಫ್ಲೂ, ಕೊರೋನಾ ಎರಡೂ ಗೆದ್ದ ಶತಾಯುಷಿ ಅಜ್ಜಿ!
ವೃದ್ಧ ದಂಪತಿ ಕೊರೋನಾದಿಂದ ಗೆದ್ದ ಸುದ್ದಿ ತಿಳಿದ ತಹಸೀಲ್ದಾರ್ ರಶ್ಮಿ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಎಸ್.ಡಿ. ಸಂತಿ, ಕಂದಾಯ ನಿರೀಕ್ಷಕ ಎರ್ರಿಸ್ವಾಮಿ, ಸಮುದಾಯ ಆರೋಗ್ಯ ಕೇಂದ್ರ ಅಧಿಕಾರಿ ಮಲ್ಲಿಕಾರ್ಜುನ ಸ್ಥಳಕ್ಕೆ ತೆರಳಿ, ವೃದ್ಧ ದಂಪತಿಗೆ ಸನ್ಮಾನಿಸಿ, ಹೋಂ ಐಸೋಲೇಷನ್ ಡಿಸ್‌ಚಾರ್ಜ್ ಪ್ರಮಾಣಪತ್ರ ನೀಡಿದ್ದಾರೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona