ಲಾಕ್‌ಡೌನ್‌ ಎಫೆಕ್ಟ್: ನೌಕರಿಗೆ ಗುಡ್‌ ಬೈ ಹೇಳಿ ಕೃಷಿಗೆ ಜೈ ಎಂದ ಯುವಕರು..!

By Kannadaprabha News  |  First Published May 31, 2021, 11:59 AM IST

* ತವರಿಗೆ ಮರಳಿದವರ ಕೈಹಿಡಿದ ಕೃಷಿ
* ಲಾಕ್‌ಡೌನ್‌ನಿಂದಾಗಿ ಎಲ್ಲ ಕ್ಷೇತ್ರಗಳ ಕಾರ್ಯಚಟುವಟಿಕೆ ಸ್ಥಗಿತ
* ನೌಕರಿಯಿಲ್ಲದೆ ಕೃಷಿಗೆ ಮರಳಿದ ಯುವಕರು


ಮಂಜುನಾಥ ಯರವಿನತಲಿ

ಗುತ್ತಲ(ಮೇ.31):  ಜೀವನ ನಿರ್ವಹಣೆಗೆಂದು ನಗರ, ಪಟ್ಟಣ ಸೇರಿ ಅರೆಕಾಲಿಕ ಗುತ್ತಿಗೆ ಆಧಾರದಲ್ಲಿ ಕಡಿಮೆ ಸಂಬಳಕ್ಕೆ ದುಡಿಯುತ್ತಿದ್ದ ಯುವ ಸಮೂಹ ಮಹಾಮಾರಿ ಕೊರೋನಾ ಲಾಕ್‌ಡೌನ್‌ದಿಂದ ಸ್ವಂತ ಊರುಗಳಿಗೆ ಮರಳಿದ್ದು, ಹೀಗೆ ಊರಿಗೆ ವಾಪಸಾದ ಯುವಕರು ಕೃಷಿಯಲ್ಲಿ ಜೀವನ ರೂಪಿಸಿಕೊಂಡು ಇತರರಿಗೆ ಮಾದರಿಯಾಗುತ್ತಿದ್ದಾರೆ.

Tap to resize

Latest Videos

ಹಾವೇರಿ ಜಿಲ್ಲಾದ್ಯಂತ 25 ಸಾವಿರಕ್ಕೂ ಅಧಿಕ ಜನರು ಮಂಗಳೂರು, ಬೆಂಗಳೂರು, ಗೋವಾ, ಕೇರಳ, ಮುಂಬೈ, ಹೈದರಾಬಾದ್‌ ಸೇರಿ ದೊಡ್ಡ ನಗರಗಳಲ್ಲಿ ಹೋಟೆಲ್‌, ಕಾಫಿ ತೋಟ, ಸಣ್ಣ ಸಣ್ಣ ಕಂಪನಿಗಳಲ್ಲಿ ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿದ್ದರು. ಲಾಕ್‌ಡೌನ್‌ನಿಂದಾಗಿ ಎಲ್ಲ ಕ್ಷೇತ್ರಗಳ ಕಾರ್ಯಚಟುವಟಿಕೆ ಸ್ಥಗಿತಗೊಂಡಿವೆ. ಉದ್ಯೋಗ ಹಾಗೂ ವೇತನವಿಲ್ಲದಂತಾಗಿದೆ. ಕೆಲವರನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ಇವರೆಲ್ಲರೂ ಸ್ವ ಗ್ರಾಮಗಳಿಗೆ ಮರಳಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ನಗರಗಳತ್ತ ಮುಖ ಮಾಡದೇ ಇಲ್ಲಿಯೇ ಕೃಷಿ ಮಾಡಲು ನಿರ್ಧರಿಸಿದ್ದಾರೆ. ಮುಂಗಾರು ಹಂಗಾಮಿಗಾಗಿ ಜಮೀನುಗಳನ್ನು ಹದಗೊಳಿಸುತ್ತಿದ್ದಾರೆ. ಕೆಲವರು ನೀರಾವರಿ ಜಮೀನಿನಲ್ಲಿ ರೇಷ್ಮೆ, ಕಬ್ಬು ಬೆಳೆಯತೊಡಗಿದ್ದಾರೆ.

ಪೈಲೆಟ್‌ ಆಗಿ ಆಯ್ಕೆಯಾದ ಹಾವೇರಿಯ ಹಳ್ಳಿ ಯುವಕ

ಪಾಲಕರಲ್ಲಿ ಮಂದಹಾಸ:

ನಮ್ಮ ಮಕ್ಕಳು ದೂರದ ನಗರಗಳಲ್ಲಿ ದುಡಿಯುತ್ತಿದ್ದರು. ಇದು ನಮಗೆಲ್ಲ ಆತಂಕವನ್ನುಂಟು ಮಾಡಿತ್ತು. ಮಕ್ಕಳು ಇತ್ತೀಚೆಗೆ ಗ್ರಾಮಕ್ಕೆ ಮರಳಿದ್ದು, ಕೃಷಿ ಚಟುವಟಿಕೆಗಳಿಗೆ ಸಹಾಯ ಮಾಡುತ್ತಿರುವುದು ಸಂತಸವಾಗಿದೆ. ಮಕ್ಕಳು ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನಮ್ಮ ಕಣ್ಣು ಮುಂದೆ ಇರುವುದು ನಮಗೆ ಆತಂಕವನ್ನು ದೂರ ಮಾಡಿದೆ ಎನ್ನುತ್ತಾರೆ ನೆಗಳೂರ ಗ್ರಾಮದ ಮಲ್ಲಪ್ಪ ಗುಂಜಾಳ.

ಆರೋಗ್ಯ ಸುಧಾರಣೆ:

ಬೆಂಗಳೂರಿನ ವಾತಾವರಣಕ್ಕೆ ನನ್ನ ಆರೋಗ್ಯದಲ್ಲಿ ಆಗಾಗ ವ್ಯತ್ಯಾಸವಾಗುತ್ತಿತ್ತು. ಲಾಕ್‌ಡೌನ್‌ ಹಿನ್ನೆಲೆ ಕಳೆದ ಒಂದು ವರ್ಷದಿಂದ ಗ್ರಾಮಕ್ಕೆ ಮರಳಿದ್ದೇನೆ. ಇಲ್ಲಿಯೇ ಕಾರ್ಯನಿರ್ವಹಿಸುತ್ತಿದ್ದು, ನನ್ನ ಆರೋಗ್ಯವೂ ಸುಧಾರಿಸಿದೆ ಎನ್ನುತ್ತಾರೆ ಐಟಿ ಕಂಪನಿ ಉದ್ಯೋಗಿ ಗುರುರಾಜ ಗುಂಜಾಳ.

ನೌಕರಿಯಿಲ್ಲದೆ ಕೃಷಿಗೆ ಮರಳಿದೆ:

ಕಳೆದ 10 ವರ್ಷಗಳಿಂದ ಬೆಂಗಳೂರಿನ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದೇನೆ. ಆದರೆ ಕಳೆದ 1 ವರ್ಷದಿಂದ ಲಾಕ್‌ಡೌನ್‌ನಿಂದಾಗಿ ಕಂಪನಿಯ ಕಾರ್ಯಗಳು ಸ್ಥಗಿತಗೊಂಡ ಹಿನ್ನೆಲೆ ಗ್ರಾಮಕ್ಕೆ ಮರಳಿದ್ದೇನೆ. ನಮ್ಮ ಪಿತ್ರಾರ್ಜಿತ ಜಮೀನಿನಲ್ಲಿ ಬೋರ್‌ವೆಲ್‌ ಹಾಕಿಸಿ ಕಬ್ಬು, ರೇಷ್ಮೆ ಬೆಳೆಯುತ್ತಿದ್ದೇನೆ. ಕೊರೋನಾ ಹಾವಳಿ ಮುಗಿಯುವರೆಗೂ ನೌಕರಿಯೂ ಅಭದ್ರತೆಯಾಗಿದ್ದು, ನಾನು ಸಂಪೂರ್ಣವಾಗಿ ಕೃಷಿಯತ್ತ ಒಲವು ತೋರಿದ್ದೇನೆ. ಮುಂಬರುವ ದಿನಗಳಲ್ಲಿ ಕೃಷಿ ಬಗ್ಗೆ ಹೆಚ್ಚಿನ ಮಾಹಿತಿ ಪಡೆದು ಸಾವಯವ ಮಿಶ್ರ ಬೇಸಾಯದ ಕಡೆಗೆ ಗಮನ ಹರಿಸಿ ತಾಯಿಗೆ ಆಸರೆಯಾಗಿ ಗ್ರಾಮದಲ್ಲಿಯೇ ನೆಲೆಸಬೇಕೆಂದಿರುವೆ ಎಂದು ಖಾಸಗಿ ಕಂಪನಿಯ ನೌಕರ ಬಸನಗೌಡ ದಾನಗೌಡ್ರ ಎನ್ನುತ್ತಾರೆ.

ಡಾ. ರಾಜಕುಮಾರ ಅಭಿನಯದ ಬಂಗಾರದ ಮನುಷ್ಯ ಚಲನಚಿತ್ರ ನೋಡಿ ಎಷ್ಟೊಜನ ನೌಕರಿಯನ್ನು ಬಿಟ್ಟು ಕೃಷಿಕರಾದರು ಎಂಬುದನ್ನು ಕೇಳಿದ್ದೇವೆ. ಲಾಕ್‌ಡೌನ್‌ದಿಂದ ಹಲವರು ಸ್ವ ಗ್ರಾಮಗಳಲ್ಲಿ ನೆಲೆಸಿ ಸಂಬಂಧಗಳ ಮೌಲ್ಯವನ್ನು ಹೆಚ್ಚಿಸುತ್ತಿದ್ದಾರೆ. ಜತೆಗೆ ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಲೇಸು ಎಂಬುದನ್ನು ಅರಿಯತೊಡಗಿದ್ದಾರೆ ಎಂದು ಡ್ರೀಮ್‌ ನೆಗಳೂರು ಯೂಥ್‌ ಕ್ಲಬ್‌ ಅಧ್ಯಕ್ಷ ಗಿರೀಶ ಅರಳಿಮರದ ತಿಳಿಸಿದ್ದಾರೆ. 
 

click me!