ಉಡುಪಿ: ಹತ್ತೇ ದಿನಗಳಲ್ಲಿ ಶತಕ ದಾಟಿದ ಸೋಂಕಿತರ ಸಂಖ್ಯೆ, ಜಿಪಂ ಸಿಬ್ಬಂದಿಗೂ ಸೋಂಕು

By Kannadaprabha NewsFirst Published May 26, 2020, 8:24 AM IST
Highlights

ಉಡುಪಿ ಜಿಲ್ಲೆಗೆ ಮತ್ತೆ ಮುಂಬೈ ಕೊರೋನಾ ಭಾರಿ ಆಘಾತ ನೀಡಿದೆ. ಸೋಮವಾರ ಜಿಲ್ಲೆಯಲ್ಲಿ ಒಟ್ಟು 32 ಕೊರೋನಾ ಸೋಂಕು ಪ್ರಕರಣಗಳು ದೃಢಪಟ್ಟಿವೆ. ಅವುಗಳಲ್ಲಿ 27 ಮುಂಬೈಯಿಂದಲೇ ಬಂದಿವೆ.

ಉಡುಪಿ(ಮೇ 26): ಉಡುಪಿ ಜಿಲ್ಲೆಗೆ ಮತ್ತೆ ಮುಂಬೈ ಕೊರೋನಾ ಭಾರಿ ಆಘಾತ ನೀಡಿದೆ. ಸೋಮವಾರ ಜಿಲ್ಲೆಯಲ್ಲಿ ಒಟ್ಟು 32 ಕೊರೋನಾ ಸೋಂಕು ಪ್ರಕರಣಗಳು ದೃಢಪಟ್ಟಿವೆ. ಅವುಗಳಲ್ಲಿ 27 ಮುಂಬೈಯಿಂದಲೇ ಬಂದಿವೆ.

ಉಳಿದ ಪ್ರಕರಣಗಳಲ್ಲಿ 2 ದುಬೈ ಮೂಲದಿಂದ ಬಂದಿವೆ. ಮುಂಬೈಯಿಂದ ಬಂದ (ಪಿ 1435) ಸೋಂಕಿತನ ಸಂಪರ್ಕದಿಂದ ಒಬ್ಬ ಮಹಿಳೆಗೆ ಸೋಂಕು ತಗಲಿದೆ. ಇನ್ನೆರಡು ಪ್ರಕರಣಗಳಲ್ಲಿ ಉಡುಪಿ ಜಿಲ್ಲಾ ಪಂಚಾಯಿತಿ ಸಿಬ್ಬಂದಿಗೆ ಹಾಗೂ ಕಾರ್ಕಳದ ಪೊಲೀಸ್‌ ಸಿಬ್ಬಂದಿಗೆ ಸೋಂಕು ಖಚಿತವಾಗಿದೆ. ಸೋಮವಾರ ದೃಢಪಟ್ಟಪ್ರಕರಣಗಳಲ್ಲಿ 10 ಮಹಿಳೆಯರು, 12 ಗಂಡಸರು ಮತ್ತು 10 ಮಕ್ಕಳು (8 ಹೆಣ್ಣುಮಕ್ಕಳು ಮತ್ತು 2 ಗಂಡು ಮಕ್ಕಳು) ಸೇರಿದ್ದಾರೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್‌ ತಿಳಿಸಿದ್ದಾರೆ.

ಪ್ರಯಾಣಿಕರ ಕೊರತೆ: ಮುಂಬೈ, ಚೆನ್ನೈ 4 ವಿಮಾನ ರದ್ದು

ಈ 32 ಮಂದಿಯನ್ನೂ ನಿಗದಿತ ಕೋವಿಡ್‌ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಮತ್ತು ಅವರೊಂದಿಗೆ ಸಂಪರ್ಕದಲ್ಲಿದ್ದವರನ್ನು ಗುರುತಿಸಿ ಐಸೋಲೇಶನ್‌ ವಾರ್ಡ್‌ಗಳಿಗೆ ದಾಖಲಿಸಲಾಗುತ್ತಿದೆ.

ಮತ್ತೆ ಮಕ್ಕಳಿಗೆ ಸೋಂಕು:

ಜಿಲ್ಲೆಯಲ್ಲಿ ಕೊರೋನಾ ಸೋಂಕಿಗೊಳಗಾಗುತ್ತಿರುವವರಲ್ಲಿ ಮಕ್ಕಳ ಸಂಖ್ಯೆ ದೊಡ್ಡದಿದೆ. ಮೇ 21ರಂದು 16, ಮೇ 24ರಂದು 8 ಮತ್ತು ಸೋಮವಾರ 10 ಮಕ್ಕಳಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ಇದುವರೆಗಿನ 108 ಕೊರೋನಾ ಪ್ರಕರಣಗಳಲ್ಲಿ 31 ಮಕ್ಕಳು 10 ವರ್ಷದೊಳಗಿನವರಾಗಿದ್ದಾರೆ. ಸೋಮವಾರ ಪತ್ತೆಯಾದ ಮಕ್ಕಳಲ್ಲಿ 1, 3, 4, 5 ವರ್ಷದ ಮಕ್ಕಳು, 6, 9 ಮತ್ತು 11 ವರ್ಷದ ತಲಾ ಇಬ್ಬರು ಮಕ್ಕಳಿದ್ದಾರೆ, ಮತ್ತು ಇವರೆಲ್ಲರೂ ಮುಂಬೈಯಿಂದ ಬಂದವರಾಗಿದ್ದಾರೆ.

ಮತ್ತೆ ದುಬೈ ಸೋಂಕು:

ಉಡುಪಿ ಜಿಲ್ಲೆಯಲ್ಲಿ ಮಾಚ್‌ರ್‍ ತಿಂಗಳಲ್ಲಿ ಪತ್ತೆಯಾಗಿದ್ದ ಮೊದಲ 2 ಪ್ರಕರಣಗಳು ದುಬೈಯಿಂದ ಬಂದವರಾಗಿದ್ದರು. ನಂತರ ಮೇ 15ರಂದು ದುಬೈಯಿಂದ ಬಂದ 6 ಮಂದಿಗೆ, ಮೇ 24ರಂದು ಒಬ್ಬರಿಗೆ ಸೋಂಕು ಪತ್ತೆಯಾಗಿತ್ತು. ಇದೀಗ ಸೋಮವಾರ ಮತ್ತೆ ಇಬ್ಬರಿಗೆ ಸೋಂಕು ಪತ್ತೆಯಾಗಿದ್ದು, ಜಿಲ್ಲೆಯಲ್ಲಿ ದುಬೈ ಮೂಲದಿಂದ ಸೋಂಕು ಹೆಚ್ಚಾಗುವ ಆತಂಕವನ್ನು ಇನ್ನಷ್ಟುಹೆಚ್ಚಿಸಿದೆ.

ಹತ್ತೇ ದಿನಗಳಲ್ಲಿ ಶತಕ ದಾಟಿತು

ಜಿಲ್ಲೆಯಲ್ಲಿ ಇದುವರೆಗಿನ ಕೊರೋನಾ ಸೋಂಕಿನ ಪ್ರಕರಣಗಳ ಸಂಖ್ಯೆ ಬರೋಬ್ಬರಿ 108ಕ್ಕೇರಿದೆ. 3 ಪ್ರಕರಣಗಳು ಮಾಚ್‌ರ್‍ ತಿಂಗಳಲ್ಲಿ ಪತ್ತೆಯಾಗಿದ್ದವು. ನಂತರ ಸುಮಾರು 50 ದಿನಗಳ ಕಾಲ ಒಂದೇ ಒಂದು ಪಾಸಿಟಿವ್‌ ಪ್ರಕರಣಗಳಿಲ್ಲದೆ ಉಡುಪಿ ಜಿಲ್ಲೆ ಹಸಿರು ವಲಯ ಎಂದು ಘೋಷಿಸಲಾಯಿತು. ಆದರೆ ಕಳೆದ 10 ದಿನಗಳಲ್ಲಿಯೇ ಒಟ್ಟು 105 ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿವೆ. ಈಗ ಪ್ರಕರಣಗಳು ಪತ್ತೆಯಾಗುತ್ತಿರುವ ವೇಗ ಮತ್ತು ಸಂಖ್ಯೆಯನ್ನು ಗಮನಿಸಿದರೆ 8 ಸಾವಿರ ಮಂದಿ ಕ್ವಾರಂಟೈನ್‌ನಲ್ಲಿರುವವರಲ್ಲಿ ಶೇ.10 ರಷ್ಟುಮಂದಿಗೆ ಸೋಂಕು ತಗಲುವ ಸಾಧ್ಯತೆ ಇದೆ ಎಂಬ ಜಿಲ್ಲಾಧಿಕಾರಿಗಳ ಮಾತು ಸತ್ಯವಾಗುವಂತಿದೆ.

ಜಿಪಂ ಸಿಬ್ಬಂದಿಗೂ ಕೊರೋನಾ ಹೇಗೆ ಬಂತು ?

ಉಡುಪಿ: ಉಡುಪಿ ಜಿ.ಪಂ.ನಲ್ಲಿ ಕೆಲಸ ಮಾಡುವ 30 ವರ್ಷದ ಪುರುಷ ಸಿಬ್ಬಂದಿಗೂ ಕೊರೋನಾ ಸೋಂಕು ತಗಲಿದ್ದು ಇದೀಗ ಇಡೀ ಆಡಳಿತ ವರ್ಗದಲ್ಲಿ ಕಳವಳ ಉಂಟಾಗಿದೆ. ಸೋಂಕು ಸಮುದಾಯಕ್ಕೆ ಹರಡಿರುವ ಸಂಶಯಗಳು ನಿಜವಾಗುತ್ತಿದೆ.

23,236 ಉತ್ತರ ಭಾರತ ಕಾರ್ಮಿಕರು ಮರಳಿ ಊರಿಗೆ

ಕಚೇರಿಯಲ್ಲಿಯೇ ಕೆಲಸ ಮಾಡುವ ಈ ಸಿಬ್ಬಂದಿಗೆ ಸೋಂಕು ತಗಲಿದ ಮೂಲ ಯಾವುದು ಎಂಬುದೇ ಈಗ ಜಿಲ್ಲಾಡಳಿತಕ್ಕೆ ತಲೆನೋವಿನ ವಿಷಯವಾಗಿದೆ. ಅಲ್ಲದೆ ಅವರಿಂದ 4 ಮಂದಿ ಸಿಬ್ಬಂದಿಗಳನ್ನು ಹೈರಿಸ್ಕ್ ಎಂದು ಗುರುತಿಸಿ ಅವರನ್ನೂ ಇದೀಗ ಪರೀಕ್ಷೆಗೊಳಪಡಿಸಲಾಗಿದೆ. ಅವರ ಪರೀಕ್ಷೆಯ ವರದಿಯನ್ನು ಕಾಯಲಾಗುತ್ತಿದೆ. ಒಂದು ವೇಳೆ ಜಿ.ಪಂ. ಕಚೇರಿಯಲ್ಲಿರುವ ಇತರ ಸಿಬ್ಬಂದಿಗಳಿಗೂ ಸೋಂಕು ಹರಡಿದ್ದರೆ, ಜಿಲ್ಲೆಯಲ್ಲಿ ಸಮುದಾಯಕ್ಕೆ ಸೋಂಕು ಹರಡಿರುವುದು ಖಚಿತವಾಗುತ್ತಿದೆ.

ಜಿಪಂ ಇಂದು ಮುಚ್ಚಲಾಗುತ್ತದೆ:

ಈ ಸಿಬ್ಬಂದಿ ಮೇ 19ರಂದು ಕೊನೆಯ ಬಾರಿಗೆ ಕಚೇರಿಗೆ ಬಂದಿದ್ದರು. ಅಂದು ಅವರಿಗೆ ಜ್ವರ ಇದ್ದುದರಿಂದ ಅವರನ್ನು ತಕ್ಷಣ ಆಸ್ಪತ್ರೆಗೆ ಕಳುಹಿಸಿ ಗಂಟಲದ್ರವವನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಸೋಮವಾರ ಅವರಿಗೆ ಕೊರೋನಾ ಇರುವುದು ಖಚಿತವಾಗಿದೆ ಎಂದು ಜಿಪಂ ಸಿಇಣಿ ಪ್ರೀತಿ ಗೆಹಲೋತ್‌ ತಿಳಿಸಿದ್ದಾರೆ.

ಅವರಿಗೆ ಜ್ವರ ಬಂದ ದಿನವೇ ಅವರು ಕುಳಿತುಕೊಳ್ಳುವ ಟೇಬಲ್‌ ಪ್ರದೇಶವನ್ನು ಸ್ವಾನಿಟೈಸರ್‌ನಿಂದ ಶುಚಿಗೊಳಿಸಲಾಗಿತ್ತು. ಅದರ ನಂತರ ಪ್ರತಿದಿನ ಇಡಿ ಜಿಪಂ ಕಚೇರಿಯನ್ನೇ ಶುದ್ಧೀಕರಿಸಲಾಗುತ್ತಿದೆ. ಮಂಗಳವಾರ ಜಿಪಂ ಕಚೇರಿಯನ್ನು ತೆರೆಯುವುದಿಲ್ಲ, ಅದನ್ನು ಸಂಪೂರ್ಣ ಸ್ಯಾನಿಟೈಸ್‌ ಮಾಡಲಾಗುತ್ತದೆ ಎಂದವರು ಹೇಳಿದ್ದಾರೆ.

ಅಲ್ಲದೇ ಈ ಸೋಂಕಿತ ಸಿಬ್ಬಂದಿಯೊಂದಿಗೆ ನೇರ ಸಂಪರ್ಕದಲ್ಲಿದ್ದ 4 ಮಂದಿಯನ್ನು ಪರೀಕ್ಷೆಗೊಳಪಡಿಸಲಾಗಿದೆ. ಇಂದು ಅವರ ಇತರ ಪ್ರಾಥಮಿಕ ಸಂಪರ್ಕಿತರನ್ನು ಗುರುತಿಸಲಾಗುತ್ತದೆ. ಪ್ರಸ್ತುತ ಜಿಪಂನ ಎಲ್ಲ ಸಿಬ್ಬಂದಿಗಳಿಗೆ ಹೋಮ್‌ ಕ್ವಾರಂಟೈನ್‌ ಮಾಡುವಂತೆ ಸೂಚಿಸಲಾಗಿದೆ ಎಂದು ಸಿಇಒ ಹೇಳಿದ್ದಾರೆ.

ಸೆಂಟ್ರಿ ಪೊಲೀಸ್‌ ಸಿಬ್ಬಂದಿಗೆ ಹೇಗೆ ಕೊರೋನಾ ಬಂತು?

ಸೋಮವಾರ ಮತ್ತೆ ಉಡುಪಿ ಜಿಲ್ಲೆಯಲ್ಲಿ ಇನ್ನೊಬ್ಬ ಪೊಲೀಸ್‌ ಸಿಬ್ಬಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ. 57 ವರ್ಷ ವಯಸ್ಸಿನ ಈ ಸಿಬ್ಬಂದಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿಯಾಗಿದ್ದು, ಜಿಲ್ಲಾ ಪೊಲೀಸ್‌ ಕಚೇರಿಯ ದ್ವಾರದಲ್ಲಿ ಸೆಂಟ್ರಿಯಾಗಿ ಕೆಲಸ ಮಾಡುತ್ತಿದ್ದರು.

ಅವರಿಗೆ ಕೊರೋನಾ ಹೇಗೆ ಬಂತು ಎಂಬುದು ಮಾತ್ರ ಪತ್ತೆಯಾಗುತ್ತಿಲ್ಲ. ಎಲ್ಲಾ ಪೊಲೀಸ್‌ ಸಿಬ್ಬಂದಿಗಳನ್ನು ಪರೀಕ್ಷೆಗೊಳಪಡಿಸಲಾಗಿದ್ದು, ಅದರಂತೆ ಈ ಸಿಬ್ಬಂದಿಗೆ ಕೊರೋನಾ ಪತ್ತೆಯಾಗಿದೆ. ಅವರನ್ನು ಕೋವಿಡ್‌ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಎಸ್ಪಿ ವಿಷ್ಣುವರ್ಧನ್‌ ತಿಳಿಸಿದ್ದಾರೆ.

ದಕ್ಷಿಣ ಕನ್ನಡದಲ್ಲಿ ಮತ್ತೆ ನಾಲ್ವರಿಗೆ ಕೊರೋನಾ, ಒಂದು ಬಲಿ

ಎರಡು ದಿನಗಳ ಹಿಂದೆಯಷ್ಟೇ ಜಿಲ್ಲಾ ಪೊಲೀಸ್‌ ಕಚೇರಿ - ಆವರಣವನ್ನು ಸಂಪೂರ್ಣ ಸ್ಯಾನಿಟೈಸ್‌ ಮಾಡಲಾಗಿತ್ತು. ಈಗ ಮತ್ತೊಮ್ಮೆ ಮಾಡಲಾಗುತ್ತದೆ. ಈ ಸೋಂಕಿತ ಸಿಬ್ಬಂದಿ ಸೆಂಟ್ರಿಯಾಗಿರುವುದರಿಂದ ಕಚೇರಿಯೊಳಗಿನ ಇತರ ಪೊಲೀಸರೊಂದಿಗೆ ಸಂಪರ್ಕ ಇರುವುದಿಲ್ಲ. ಆದ್ದರಿಂದ ಪೊಲೀಸ್‌ ಕಚೇರಿಯನ್ನು ಮುಚ್ಚಲಾಗುವುದಿಲ್ಲ ಎಂದವರು ಸ್ಪಷ್ಟಪಡಿಸಿದ್ದಾರೆ.

ಈ ಸಿಬ್ಬಂದಿಯ ಮನೆ ಬ್ರಹ್ಮಾವರ ತಾಲೂಕಿನ ಚಾಂತಾರುನಲ್ಲಿದ್ದು, ಆತನ ಮನೆಯವರನ್ನು ಕ್ವಾರಂಟೈನ್‌ ಗೊಳಪಡಿಸಿ, ಮನೆಯಲ್ಲಿ ಕಂಟೈನ್ಮೆಂಟ್‌ ಮಾಡಲಾಗುತ್ತಿದೆ.

ಪೊಲೀಸರಲ್ಲಿ ಹೆಚ್ಚಿದ ಆತಂಕ:

ಉಡುಪಿ ಜಿಲ್ಲೆಯಲ್ಲಿ ಭಾನುವಾರ 3 ಮಂದಿ ಪೊಲೀಸ್‌ ಸಿಬ್ಬಂದಿಗಳಿಗೆ ಕೊರೋನಾ ಸೋಂಕು ಪತ್ತೆಯಾಗಿತ್ತು. ಇದರೊಂದಿಗೆ ಜಿಲ್ಲೆಯಲ್ಲಿ ಒಟ್ಟು 4 ಮಂದಿ ಪೊಲೀಸ್‌ ಸಿಬ್ಬಂದಿಗಳಿಗೆ ಕೊರೋನಾ ಸೋಂಕು ದೃಢಪಟ್ಟಿದೆ.

ಅವರೆಲ್ಲರೂ ಲಾಕ್‌ ಡೌನ್‌ ಸಂದರ್ಭದಲ್ಲಿ ಜಿಲ್ಲೆಯ ಚೆಕ್‌ ಪೋಸ್ಟ್ ಗಳಲ್ಲಿ ಹೊರ ಜಿಲ್ಲೆ - ರಾಜ್ಯಗಳಿಂದ ಬಂದವರನ್ನು ತಪಾಸಣೆ ನಡೆಸುವ ಕರ್ತವ್ಯದಲ್ಲಿದ್ದರು. ಈ ಸಂದರ್ಭದಲ್ಲಿ ಹೊರರಾಜ್ಯದಿಂದ ಬಂದ ಕೊರೋನಾ ಸೋಂಕಿತರಿಂದ ಈ ಪೊಲೀಸರಿಗೂ ಸೋಂಕು ತಗಲಿರುವುದು ದೃಢಪಟ್ಟಿದೆ.

ಆದರೆ ಅವರು ಈ ನಡುವೆ ತಂತಮ್ಮ ಠಾಣೆಗಳಲ್ಲಿಯೂ ಕರ್ತವ್ಯ ನಿರ್ವಹಿಸಿದ್ದಾರೆ ಮತ್ತು ಮನೆಗೂ ಹೋಗಿದ್ದಾರೆ. ಆದ್ದರಿಂದ ಅವರಿಗೆ ಸಂಪರ್ಕಕ್ಕೆ ಬಂದವರೂ ಈಗ ಶಂಕಿತರಾಗಿದ್ದಾರೆ. ಅವರನ್ನೆಲ್ಲಾ ಕ್ವಾರಂಟೈನ್‌ ಗೊಳಪಡಿಸಿ, ಅವರ ಗಂಟಲದ್ರವದ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗುತ್ತಿದೆ.

click me!