ಕೊಪ್ಪಳ (ಮೇ.12): ಕೋವಿಡ್ ಸಂಕಷ್ಟದಿಂದ ಉಂಟಾಗಿರುವ ಬೆಡ್ ಸಮಸ್ಯೆಗೆ ಸ್ಪಂದಿಸಿರುವ ಶ್ರೀ ಗವಿಸಿದ್ಧೇಶ್ವರ ಸ್ವಾಮೀಜಿ ಕೇವಲ ವಾರದಲ್ಲಿಯೇ 100 ಹಾಸಿಗೆಯ ಕೋವಿಡ್ ಆಸ್ಪತ್ರೆಯನ್ನು ಪ್ರಾರಂಭಿಸಿದ್ದಾರೆ. ಮಠದ ಆವರಣದಲ್ಲಿ ಇರುವ ವೃದ್ಧಾಶ್ರಮವನ್ನು ಸಂಪೂರ್ಣ ಆಸ್ಪತ್ರೆಯನ್ನಾಗಿ ಪರಿವರ್ತನೆ ಮಾಡಲಾಗಿದ್ದು ಕೊಯಿಮತ್ತೂರಿನಿಂದ ಆಕ್ಸಿಜನ್ ಪೈಪ್‌ಗಳನ್ನು ತಂದು ಜೋಡಿಸಲಾಗಿದೆ. ಜಿಲ್ಲಾಡಳಿತದ ಸಹಯೋಗ ಇರುವ ಈ ಆಸ್ಪತ್ರೆಗೆ ಗವಿಮಠಶ್ರೀಗಳೇ ಸಾರಥ್ಯ ವಹಿಸಿ ಸಿದ್ಧಪಡಿಸಿದ್ದಾರೆ.
ಈಗಾಗಲೇ ಆಕ್ಸಿಜನ್‌ನ 72 ಬೆಡ್‌ಗಳು ಸಂಪೂರ್ಣ ಸನ್ನದ್ಧವಾಗಿದ್ದು, ಚಿಕಿತ್ಸೆಯಿನ್ನಷ್ಟೇ ಪ್ರಾರಂಭವಾಗಲಿದೆ. ಇದಲ್ಲದೆ 30 ಸಾಮಾನ್ಯ ಹಾಸಿಗೆಗಳು ಇದ್ದು, ಕೋವಿಡ್ ರೋಗಿಗಳಿಗಾಗಿಯೇ ಮೀಸಲು ಇರಿಸಲಾಗಿದೆ. ಕೋವಿಡ್ ಆಸ್ಪತ್ರೆಯನ್ನು ಸಂಪೂರ್ಣ ಆಧುನೀಕರಣಗೊಳಿಸಲಾಗಿದ್ದು, ಹೈಟೆಕ್ ತಂತ್ರಜ್ಞಾನ ಅಳವಡಿಸಲಾಗಿದೆ. ಸೂಕ್ತ ಚಿಕಿತ್ಸೆಗೆ ಬೇಕಾಗಿರುವ ಸಕಲ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ.
ಕೊಪ್ಪಳದಲ್ಲಿ ವೈರಸ್ ಅಟ್ಟಹಾಸ: ಕೊರೋನಾ ಸಂಕಷ್ಟಕ್ಕೆ ಮಿಡಿದ ಗವಿಸಿದ್ಧೇಶ್ವರ ಶ್ರೀ ...
ರೋಗಿಗಳಿಗೆ ಬೇಕಾಗಿರುವ ಪ್ರೋಟೀನ್‌ಯುಕ್ತ ಆಹಾರವನ್ನು ಶ್ರೀಮಠದಿಂದಲೇ ನೀಡಲಾಗುತ್ತಿದ್ದು ಇದಕ್ಕಾಗಿ ಪ್ರತ್ಯೇಕ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಆಸ್ಪತ್ರೆಯ ನಿರ್ವಹಣೆ ಹೊಣೆ ಜಿಲ್ಲಾಸ್ಪತ್ರೆಯ ಅಧೀನದಲ್ಲಿರುತ್ತದೆ. ವೈದ್ಯರು ಹಾಗೂ ವೈದ್ಯ ಸಹಾಯಕ ಸಿಬ್ಬಂದಿಯನ್ನು ಜಿಲ್ಲಾಡಳಿತವೇ ನೋಡಿಕೊಳ್ಳುತ್ತದೆ. ಇದರ ಹೊರತಾಗಿಯೂ ಗವಿಮಠದಿಂದಲೂ ವೈದ್ಯರು ಮತ್ತು ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗುತ್ತದೆ.
ಕನ್ನಡಪ್ರಭ ವರದಿ ಪ್ರಸ್ತಾಪಿಸಿದ ಶ್ರೀಗಳು
ರಾಜಸ್ಥಾನದ ಹಳ್ಳಿಯೊಂದರಲ್ಲಿ ಗ್ರಾಮಸ್ಥರೇ ಸೇರಿ ಕೋವಿಡ್ ಆಸ್ಪತ್ರೆ ಮಾಡಿದ್ದಾರೆ. ನಮಗ್ಯಾಕ ಮಾಡೋಕಾಗಲ್ಲ ಎಂದು ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಪ್ರಶ್ನೆ ಮಾಡಿದ್ದಾರೆ. ಈ ಕುರಿತು ‘ಕನ್ನಡಪ್ರಭ’ ಮುಖಪುಟದಲ್ಲಿಯೇ ವರದಿಯಾಗಿದೆ. ಅಲ್ಲಿರುವುದು ಕೇವಲ 1 ಫ್ಯಾಕ್ಟರಿ, ಆದರೆ ಇಲ್ಲಿ 10-15 ಫ್ಯಾಕ್ಟರಿ ಇದ್ದು, ಯಾಕೆ ಮಾಡಬಾರದು ಎಂದಿದ್ದಾರೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona