* ಮೇ 24ರಂದು ಜಿಲ್ಲಾ ಸಚಿವ ಆನಂದ ಸಿಂಗ್‌ರಿಂದ ಉದ್ಘಾಟನೆ
* ಸಕಲ ಸೌಕರ್ಯವುಳ್ಳ ಸುಸಜ್ಜಿತ ಕೇಂದ್ರ
* 100 ಹಾಸಿಗೆಗೆ 25 ನರ್ಸ್‌ಗಳು ಪಾಳಯದಲ್ಲಿ ಕಾರ್ಯನಿರ್ವಹಣೆ
ಬಳ್ಳಾರಿ(ಮೇ.23): ಅವಳಿ ಜಿಲ್ಲೆಯಲ್ಲಿ ಕೊರೋನಾ ಸೋಂಕು ದಿನದಿನಕ್ಕೆ ಏರಿಕೆಯಾಗುತ್ತಿದ್ದು ಮನೆ ಆರೈಕೆಗೆ (ಹೋಂ ಐಸೋಲೇಷನ್) ಸಮಸ್ಯೆ ಎದುರಿಸುತ್ತಿರುವವರಿಗಾಗಿ ನಗರದ ತಾಳೂರು ರಸ್ತೆಯಲ್ಲಿರುವ ನಾರಾಯಣಮ್ಮ ಗೋವಿಂದಪ್ಪ ಕಲ್ಯಾಣಮಂಟಪದಲ್ಲಿ ಬಳ್ಳಾರಿಯ ರೆಡ್ಡಿ ಜನಸಂಘ 100 ಹಾಸಿಗೆಗಳ ಕೋವಿಡ್ ಕೇರ್ ಸೆಂಟರ್ ಸ್ಥಾಪಿಸಿದೆ.
undefined
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಕೋವಿಡ್ ಕೇರ್ ಸೆಂಟರ್‌ನ ಪ್ರಾಮುಖ್ಯತೆ ಕುರಿತು ತಿಳಿಸಿದ ರೆಡ್ಡಿ ಜನಸಂಘದ ಗೌರವಾಧ್ಯಕ್ಷ ಶಾಸಕ ಜಿ. ಸೋಮಶೇಖರ ರೆಡ್ಡಿ ಹಾಗೂ ಅಧ್ಯಕ್ಷ ನಾರಾ ಪ್ರತಾಪ ರೆಡ್ಡಿ, ಹೋಂ ಐಸೋಲೇಷನ್‌ನಲ್ಲಿರುವ ಸೋಂಕಿತರು ತೀವ್ರ ಸಮಸ್ಯೆ ಎದುರಿಸುತ್ತಿರುವ ಜತೆಗೆ ಮನೆಯವರಿಗೆ ಸೋಂಕು ಹರಡಿಸುವ ಸಾಧ್ಯತೆ ಇರುವುದರಿಂದ ರೆಡ್ಡಿ ಜನಸಂಘದಿಂದ ಕೇರ್ ಸೆಂಟರ್ ಸ್ಥಾಪನೆಯ ನಿರ್ಧಾರ ತೆಗೆದುಕೊಳ್ಳಲಾಯಿತು ಎಂದು ಹೇಳಿದರು.
ಕೇರ್ ಸೆಂಟರ್‌ನ ವಿಶೇಷ:
ಕೇರ್ ಸೆಂಟರ್‌ನಲ್ಲಿ 100 ಬೆಡ್‌ಗಳ ವ್ಯವಸ್ಥೆ ಮಾಡಲಾಗಿದೆ. ಆರೈಕೆ ಕೇಂದ್ರದಲ್ಲಿ ಇರುವವರು 24 ತಾಸುಗಳ ಕಾಲ ವೈದ್ಯಕೀಯ ಸಿಬ್ಬಂದಿ ನಿಗಾದಲ್ಲಿರುತ್ತಾರೆ. ನಗರದ ಖ್ಯಾತ ವೈದ್ಯರಾದ ಡಾ. ಯೋಗಾನಂದ ರೆಡ್ಡಿ, ಡಾ.ತಿಪ್ಪಾರೆಡ್ಡಿ, ಡಾ. ಸತೀಶ್ ರೆಡ್ಡಿ, ಡಾ. ಲಿಂಗಾರೆಡ್ಡಿ ಸೇರಿದಂತೆ ಅನೇಕ ನುರಿತ ವೈದ್ಯರ ತಂಡ ಕೇಂದ್ರಕ್ಕೆ ಆಗಮಿಸಿ, ಕೇಂದ್ರದಲ್ಲಿರುವ ಸೋಂಕಿತರ ಆರೋಗ್ಯ ವಿಚಾರಿಸಲಿದ್ದಾರೆ. ಈ ಎಲ್ಲ ಹಿರಿಯ ತಜ್ಞ ವೈದ್ಯರು ಉಚಿತ ಸೇವೆ ನೀಡಲಿದ್ದಾರೆ. ಕೋವಿಡ್ ಕೇರ್ ಸೆಂಟರ್‌ನಲ್ಲಿರುವ ಸೋಂಕಿತರಿಗೆ ಬೆಳಗ್ಗೆ ಉಪಾಹಾರ, ಸಂಜೆ ಸ್ನ್ಯಾಕ್ಸ್, ಎರಡು ಬಾರಿ ಊಟ, ಜ್ಯೂಸ್, ಕಷಾಯ, ಔಷಧಿ ಸೇರಿದಂತೆ ಆರೋಗ್ಯ ವೃದ್ಧಿಗೆ ಬೇಕಾದ ಅಗತ್ಯ ಪೌಷ್ಟಿಕಾಂಶದ ಆಹಾರ ವಿತರಿಸಲಾಗುವುದು ಎಂದರು.
ಬಳ್ಳಾರಿಯೀಗ ಕೊರೋನಾ ಡೇಂಜರಸ್ ಸ್ಪಾಟ್..!
ಕುಡಿಯುವ ನೀರು, ಶೌಚಾಲಯ, ಸ್ನಾನದ ಗೃಹ ಸೇರಿದಂತೆ ಎಲ್ಲ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ದಿನಕ್ಕೆ ಮೂರು ಬಾರಿ ಸ್ಯಾನಿಟೈಸ್ ಮಾಡಲಾಗುತ್ತಿದೆ. ಕೇಂದ್ರದಲ್ಲಿದ್ದವರಿಗೆ ಆರೋಗ್ಯ ಸಮಸ್ಯೆ ಉಲ್ಬಣಿಸಿದಲ್ಲಿ 10 ಆಕ್ಸಿಜನ್ ಕಿಟ್ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದ್ದು, ತುರ್ತು ಸಂದರ್ಭದಲ್ಲಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲು ಬೇಕಾದ ಅಂಬ್ಯುಲೆನ್ಸ್ ಸಹ ಇರಲಿದೆ ಎಂದು ವಿವರಿಸಿದರು.
100 ಹಾಸಿಗೆಗೆ 25 ನರ್ಸ್‌ಗಳು ಪಾಳಯದಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ರೆಡ್ಡಿ ಜನಸಂಘದಿಂದ ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಏನಾದರೂ ಸೇವೆ ಮಾಡಬೇಕು ಎಂದು ನಿರ್ಧರಿಸಿದಾಗ ಕೋವಿಡ್ ಕೇರ್ ಸೆಂಟರ್ ಮಾಡಲು ನಿರ್ಧರಿಸಲಾಯಿತು. ಜಿಲ್ಲಾಡಳಿತ ಸೇರಿದಂತೆ ಯಾರಿದಂಲೂ ಸಹಾಯ ಪಡೆಯುತ್ತಿಲ್ಲ. ರೆಡ್ಡಿ ಜನಸಂಘದಿಂದಲೇ ಕೇಂದ್ರವನ್ನು ನಿರ್ವಹಣೆ ಮಾಡಲಾಗುವುದು. ಬರೀ ಒಂದು ವಾರದಲ್ಲಿ ಕೇರ್ ಸೆಂಟರ್‌ನ್ನು ಸಿದ್ಧ ಮಾಡಲಾಗಿದೆ. ಸೋಂಕು ಸಂಪೂರ್ಣ ನಿಯಂತ್ರಣವಾಗುವವರೆಗೆ ಕೇಂದ್ರ ಕಾರ್ಯನಿರ್ವಹಿಸಲಿದೆ. ಉಚಿತವಾಗಿ ಕೇಂದ್ರ ಆರಂಭಿಸಬೇಕು ಎಂದು ನಿರ್ಧರಿಸಿದ್ದೆವು. ಅನೇಕರ ಸಲಹೆ ಮೇರೆಗೆ ದಿನವೊಂದಕ್ಕೆ . 3500 ಮಾತ್ರ ಪಡೆದುಕೊಳ್ಳಲಾಗುತ್ತಿದೆ. ನಮಗೆ ಗೊತ್ತಿರುವಂತೆ ಈ ರೀತಿಯ ವೈದ್ಯಕೀಯ ಸಿಬ್ಬಂದಿಯುಳ್ಳ ಕೇಂದ್ರ ರಾಜ್ಯದಲ್ಲಿ ಎಲ್ಲೂ ಇಲ್ಲ. ಇಷ್ಟೊಂದು ಕಡಿಮೆ ಹಣಕ್ಕೆ ಯಾರೂ ಇಷ್ಟುಸೌಕರ್ಯ ಕಲ್ಪಿಸುತ್ತಿಲ್ಲ ಎಂದು ತಿಳಿಸಿದರು.
ಮೇ 24ರಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್ ಅವರು ಕೋವಿಡ್ ಆರೈಕೆ ಕೇಂದ್ರಕ್ಕೆ ಚಾಲನೆ ನೀಡುವರು. ರೆಡ್ಡಿ ಗುರುಪೀಠದ ಶ್ರೀವೇಮನಾನಂದ ಸ್ವಾಮಿಗಳು ಸಾನ್ನಿಧ್ಯ ವಹಿಸುವರು. ವಿಪ ಸದಸ್ಯರಾದ ಕೆ.ಸಿ. ಕೊಂಡಯ್ಯ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದರು. ರೆಡ್ಡಿ ಜನಸಂಘ ಕಾರ್ಯದರ್ಶಿ ಸಿದ್ದಮ್ಮನಹಳ್ಳಿ ತಿಮ್ಮಾರೆಡ್ಡಿ, ಮರಿಸ್ವಾಮಿ ರೆಡ್ಡಿ, ಗೋಪಾಲ ರೆಡ್ಡಿ, ಯಲ್ಲಾರೆಡ್ಡಿ, ಪಾರ್ಥರೆಡ್ಡಿ ಸುದ್ದಿಗೋಷ್ಠಿಯಲ್ಲಿದ್ದರು.