
ವರದಿ: ನಂದನ್ ರಾಮಕೃಷ್ಣ, ಏಷ್ಯಾನೆಟ್ ಸುವರ್ಣ ನ್ಯೂಸ್, ಮಂಡ್ಯ
ಮಂಡ್ಯ (ಅ. 19): ಮಳವಳ್ಳಿಯಲ್ಲಿ ನಡೆದ ಬಾಲಕಿ ಅತ್ಯಾಚಾರ ಮತ್ತು ಕೊಲೆ ಪ್ರಕರಣದ (Malavalli Rape and Murder) ಆರೋಪಿಗೆ ಗಲ್ಲು ಶಿಕ್ಷೆ ಒತ್ತಾಯ ದಿನೇ ದಿನೇ ಹೆಚ್ಚಾಗುತ್ತಿದೆ. ಮತ್ತೊಂದೆಡೆ ರಾಜಕೀಯ ನಾಯಕರು, ಸಿನೆಮಾ ನಟ, ನಟಿಯರು ಆಗಮಿಸಿ ಬಾಲಕಿ ಕುಟುಂಬಕ್ಕೆ ಸಾಂತ್ವನ ಹೇಳುತ್ತಿದ್ದಾರೆ. ಇಂದು ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಸೇರಿದಂತೆ ಹಲವು ಗಣ್ಯರು ನೊಂದ ಪೋಷಕರಿಗೆ ಧೈರ್ಯ ಹೇಳಿ ಸಹಾಯ ಹಸ್ತ ಚಾಚಿದರು. ಅಲ್ಲದೇ ಸಿಎಂ ಪರಿಹಾರ ನಿಧಿಯಿಂದಲೂ ಕೂಡ 10 ಲಕ್ಷ ರೂಪಾಯಿ ವಿತರಿಸಲಾಯಿತು.
ಮಂಡ್ಯದ ಮಳವಳ್ಳಿಯಲ್ಲಿ ನಡೆದ 10 ವರ್ಷದ ಬಾಲಕಿ ಅತ್ಯಾಚಾರ ಮತ್ತು ಕೊಲೆ ಪ್ರಕರಣ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಬದುಕಿ ಬಾಳ ಬೇಕಾದ ಪುಟ್ಟ ಕಂದಮ್ಮ ಕಾಮಪಿಶಾಚಿಯ ಕ್ರೌರ್ಯಕ್ಕೆ ಸಿಲುಕಿ ಅಸುನೀಗಿದೆ. ಒಂದೆಡೆ ಘಟನೆ ಬೆನ್ನಲ್ಲೇ ಆರೋಪಿಯ ಬಂಧನವಾದರೂ ಹೀನ ಕೃತ್ಯ ಎಸಗಿದ ಪಾಪಿಷ್ಠನಿಗೆ ಗಲ್ಲುಶಿಕ್ಷೆ ನೀಡುವಂತೆ ಆಗ್ರಹ ಹೆಚ್ಚಾಗುತ್ತಿದೆ. ಮತ್ತೊಂದೆಡೆ ಮನೆಯ ಬೆಳಕನ್ನು ಕಳೆದುಕೊಂಡು ಕಣ್ಣೀರಿಡುತ್ತಿರುವ ಬಾಲಕಿ ಪೋಷಕರನ್ನು ಭೇಟಿ ಮಾಡುತ್ತಿರುವ ಗಣ್ಯರ ದಂಡು ಸಾಂತ್ವನ ಹೇಳುವ ಜೊತೆಗೆ ಆರ್ಥಿಕವಾಗಿಯೂ ನೆರವಾಗುತ್ತಿದೆ.
₹10 ಲಕ್ಷ ಚೆಕ್ ಹಸ್ತಾಂತರ: ಇಂದು ಬೆಳಿಗ್ಗೆ ಮಳವಳ್ಳಿಯ ಬಾಲಕಿ ನಿವಾಸಕ್ಕೆ ಭೇಟಿ ನೀಡಿದ ಸಚಿವ ಗೋಪಾಲಯ್ಯ ಹಾಗೂ ಸಂಸದೆ ಸುಮಲತಾ ಅಂಬರೀಶ್, ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆಯಂತೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 10 ಲಕ್ಷ ರೂಪಾಯಿಯ ಚೆಕ್ ಹಸ್ತಾಂತರಿಸಿದರು. ಆರೋಪಿಗೆ ಶೀಘ್ರ ಕಠಿಣ ಶಿಕ್ಷೆ ಕೊಡಿಸುವ ಭರವಸೆ ನೀಡಿದ ಸಂಸದೆ ಹಾಗೂ ಸಚಿವರು ಸರ್ಕಾರ ಸದಾ ನಿಮ್ಮ ಕುಟುಂಬದ ಜೊತೆ ಇರಲಿದೆ ಎಂದು ಧೈರ್ಯ ಹೇಳಿದರು.
ಮಾಜಿ ಸಿಎಂ ಸಿದ್ದು ಭೇಟಿ: ಬಳಿಕ ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ಬಾಲಕಿ ಕುಟುಂಬ ಭೇಟಿ ಮಾಡಿ ನೊಂದ ಪೋಷಕರಿಗೆ ಧೈರ್ಯ ತುಂಬುವ ಕೆಲಸ ಮಾಡಿದರು. ಜೊತೆಗೆ ವೈಯಕ್ತಿಕ 2 ಲಕ್ಷ ರೂಪಾಯಿ ಧನಸಹಾಯ ನೀಡಿದರು. ಬಳಿಕ ಮಾತನಾಡಿದ ಸಿದ್ದರಾಮಯ್ಯ ಇದು ಅತ್ಯಂತ ಅಮಾನುಷ ಕೃತ್ಯ. ರಾಕ್ಷಸರು ಹೀಗೆ ನಡೆದುಕೊಳ್ಳುವುದಿಲ್ಲ. ಆತನಿಗೆ ಸಮಾಜದಲ್ಲಿ ಉಳಿಗಾಲ ಇಲ್ಲ, ಮರಣದಂಡನೆ ನೀಡಿ ಶಿಕ್ಷಿಸಬೇಕು ಎಂದರು.
ಮಂಡ್ಯ ಬಾಲಕಿ ಅತ್ಯಾಚಾರ, ಕೊಲೆ ಪ್ರಕರಣ: ಆರೋಪಿ ಕಾಂತರಾಜು ಶಿಕ್ಷಕನೇ ಅಲ್ಲ!
ಜಮೀರ್ 5 ಲಕ್ಷ ಪರಿಹಾರ: ಇನ್ನು ಬಾಲಕಿ ಪೋಷಕರನ್ನು ಭೇಟಿಯಾದ ಶಾಸಕ ಜಮೀರ್ ಅಹಮದ್ ಸಾಂತ್ವನ ಹೇಳುವ ಜೊತೆ 5 ಲಕ್ಷ ಪರಿಹಾರ ನೀಡಿದರು. ಬಳಿಕ ಮಾತನಾಡಿದ ಜಮೀರ್ ಈಗ ಕಠಿಣ ಕಾನೂನು ತರದಿದ್ರೆ ಇಂತಹ ಘಟನೆ ತಡೆಯಲು ಸಾಧ್ಯವಿಲ್ಲ. ಆರೋಪಿಯನ್ನು ಸಾರ್ವಜನಿಕರ ಮುಂದೆ ತುಂಡು ತುಂಡಾಗಿ ಕತ್ತರಿಸಿ ಬೀಸಾಕಬೇಕು ಎಂದು ಆಕ್ರೋಶ ಹೊರಹಾಕಿದರು.
ರಾಜಕೀಯ ನಾಯಕರು ಮಾತ್ರವಲ್ಲದೆ ಸಿನಿಮಾ ನಟ, ನಟಿಯರು ಬಾಲಕಿ ನಿವಾಸಕ್ಕೆ ಭೇಟಿ ನೀಡ್ತಿದ್ದಾರೆ. ಇಂದು ಮಳವಳ್ಳಿಗೆ ಆಗಮಿಸಿ ನಟ ಭುವನ್ ಪೊನ್ನಣ್ಣ ಹಾಗೂ ನಟಿ ಹರ್ಷಿಕಾ ಪೂಣಚ್ಚ ಬಾಲಕಿ ಕುಟುಂಬಸ್ಥರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು. ಪೋಷಕರ ಗೋಳಾಟ ಕಂಡು ಭಾವುಕರಾದ ಹರ್ಷಿಕಾ ಪೂಣಚ್ಚ ಕಾನೂನು ಮತ್ತಷ್ಟು ಗಟ್ಟಿ ಆಗಬೇಕಿದೆ. ಇಂತಹ ಘಟನೆಗಳಿಂದ ಅಪ್ಪ ಅಮ್ಮನ ಬಿಟ್ಟು ಬೇರೆ ಯಾರನ್ನು ನಂಬದ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಪ್ರಕರಣಗಳು ಮರುಕಳಿಸದಂತೆ ಆರೋಪಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿದರು.