ಗ್ರಾಮ ಪಂಚಾಯತ್ ನಿಂದ ಬಡವರಿಗೆ 10 ಎಕರೆ ಜಮೀನು ನೀಡುವ ಯೋಜನೆಯೊಂದರ ಪ್ರಸ್ತಾಪವಾಗಿದೆ.
ಮಂಗಳೂರು [ಡಿ.02]: ಮಂಗಳೂರು ತಾಲೂಕಿನ ಪ್ರತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಸರ್ಕಾರಿ ಜಾಗ ಎಷ್ಟಿದೆ, ಡೀಮ್ಡ್ ಫಾರೆಸ್ಟ್ ಎಷ್ಟಿದೆ ಎಂಬುದನ್ನು ಗುರುತಿಸಬೇಕು. ಬಳಿಕ ತಾಲೂಕಿನ ಪ್ರತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬಡವರಿಗೆ ನಿವೇಶನ ಒದಗಿಸಲು ಕನಿಷ್ಠ 10 ಎಕರೆ ಜಾಗ ಗುರುತಿಸಬೇಕು ಎಂದು ಶಾಸಕ ಉಮಾನಾಥ ಕೋಟ್ಯಾನ್ ತಹಸೀಲ್ದಾರರಿಗೆ ಸೂಚನೆ ನೀಡಿದ್ದಾರೆ.
ನಗರದ ಜಿಲ್ಲಾ ಪಂಚಾಯ್ತಿ ಸಭೆಯಲ್ಲಿ ಮಂಗಳೂರು ತಾಲೂಕು ಪಂಚಾಯ್ತಿ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ಬಡವರಿಗೆ ನಿವೇಶನ ನೀಡಲು ಜಾಗ ಗುರುತಿಸುವುದರೊಂದಿಗೆ ಮುಂದಿನ ಸಭೆಯಲ್ಲಿ ಅದರ ಸಾಧಕ ಬಾಧಕಗಳ ಬಗ್ಗೆ ಮಾಹಿತಿ ನೀಡಬೇಕು ಎಂದು ಸೂಚಿಸಿದರು. ಸರ್ಕಾರಿ ಜಾಗ ಅತಿಕ್ರಮಣ ಮಾಡುತ್ತಿರುವುದರಿಂದ ನಿವೇಶನರಹಿತರಿಗೆ ಜಾಗ ನೀಡಲು ತೊಂದರೆಯಾಗುತ್ತಿದೆ. ಅದಕ್ಕಾಗಿ ಸರ್ಕಾರಿ ಜಾಗ ಗುರುತಿಸಬೇಕಾಗಿದೆ ಎಂದರು.
undefined
ಪ್ರತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಘನತ್ಯಾಜ್ಯ ಘಟಕ ನಿರ್ಮಿಸಲು ಜಾಗ ಗುರುತಿಸಿ ವರದಿ ನೀಡಬೇಕು ಎಂದು ಸಂಬಂಧಪಟ್ಟಅಧಿಕಾರಿಗಳಿಗೆ ಸೂಚಿಸಿದ ಕೋಟ್ಯಾನ್, ಸ್ಮಶಾನಕ್ಕೆ ಎಷ್ಟುಜಾಗ ಮೀಸಲಿಡಲಾಗಿದೆ ಎಂಬ ಬಗ್ಗೆಯೂ ಮಾಹಿತಿ ನೀಡುವಂತೆ ಆದೇಶಿಸಿದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
30 ಸಾವಿರ ಪಡಿತರ ಚೀಟಿ ರದ್ದು: ಮಂಗಳೂರು ತಾಲೂಕಿನಲ್ಲಿ 2017-18ನೇ ಸಾಲಿನಲ್ಲಿ ಪಡಿತರ ಚೀಟಿಗೆ ಆಧಾರ್ ಲಿಂಕ್ ಮಾಡದ 30,709 ಮಂದಿಯನ್ನು ಪಡಿತರ ಚೀಟಿಯಿಂದ ಹೆಸರು ತೆಗೆಯಲಾಗಿದೆ ಎಂದು ಆಹಾರ ಇಲಾಖೆ ಅಧಿಕಾರಿಗಳು ಇದೇ ಸಂದರ್ಭ ಮಾಹಿತಿ ನೀಡಿದರು.
ತಾಲೂಕು ಪಶು ಸಂಗೋಪನಾ ಇಲಾಖೆಯಡಿ ಬರುವ ಒಟ್ಟು 35 ಪಶು ಆಸ್ಪತ್ರೆ, ಚಿಕಿತ್ಸಾ ಕೇಂದ್ರಗಳಲ್ಲಿ ಸಿಬ್ಬಂದಿ ಕೊರತೆ ಎದುರಾಗಿದೆ. ಮಂಜೂರಾದ ಒಟ್ಟು 130 ಹುದ್ದೆಗಳ ಪೈಕಿ 5 ಮುಖ್ಯ ಪಶು ವೈದ್ಯಾಧಿಕಾರಿಗಳು, 5 ಹಿರಿಯ ಪಶು ವೈದ್ಯಾಧಿಕಾರಿಗಳು ಸೇರಿದಂತೆ 95 ಹುದ್ದೆ ಖಾಲಿ ಇದೆ ಎಂದು ಪಶು ಸಂಗೋಪನಾ ಇಲಾಖೆ ಅಧಿಕಾರಿಗಳು ಗಮನ ಸೆಳೆದರು.
ಉಜ್ವಲ ಯೋಜನೆಯಡಿ ಕೆಲವರು ಎರಡೆರಡು ಕಡೆಗಳಲ್ಲಿ ಅರ್ಜಿ ಹಾಕಿದ್ದಾರೆ. ಇದರಿಂದಾಗಿ ಯೋಜನೆಯ ಪ್ರಯೋಜನ ಪಡೆಯಲು ಅವರಿಗೆ ಸಾಧ್ಯವಾಗುತ್ತಿಲ್ಲ. ಇದನ್ನು ಪರಿಹರಿಸಲು ಅಧಿಕಾರಿಗಳು ಗಮನ ಹರಿಸಬೇಕು ಎಂದು ಜಿಪಂ ಸದಸ್ಯ ವಿನೋದ್ ಕುಮಾರ್ ಬೊಳ್ಳೂರು ಹೇಳಿದರು. ಇದು ಗ್ಯಾಸ್ ಏಜೆನ್ಸಿಗಳ ವ್ಯಾಪ್ತಿಗೆ ಬರುತ್ತದೆ ಎಂದು ಅಧಿಕಾರಿಗಳು ಸಮಜಾಯಿಶಿ ನೀಡಿದರು.
ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ಸದಸ್ಯ ಸುಚರಿತ ಶೆಟ್ಟಿ, ತಾಪಂ ಕಾರ್ಯ ನಿರ್ವಹಣಾಧಿಕಾರಿ ಸದಾನಂದ ಮತ್ತಿತರರು ಇದ್ದರು.