ಉಡುಪಿ: ಈ ಬಾರಿ 1 ಲಕ್ಷ ಮಕ್ಕಳಿಂದ ಸೂರ್ಯಗ್ರಹಣ ವೀಕ್ಷಣೆ..!

By Kannadaprabha News  |  First Published Nov 23, 2019, 10:56 AM IST

ಡಿಸೆಂಬರ್‌ 26ರಂದು ಬೆಳಗ್ಗೆ ನಡೆಯಲಿರುವ ಅದ್ಭುತವಾದ ಕಂಕಣ ಸೂರ್ಯಗ್ರಹಣವನ್ನು ನಮ್ಮ ರಾಜ್ಯದ 1 ಲಕ್ಷಕ್ಕೂ ಅಧಿಕ ಹೈಸ್ಕೂಲು ವಿದ್ಯಾರ್ಥಿಗಳು ನೋಡಿ, ಅದರ ಖುಷಿಯನ್ನು ಅನುಭವಿಸಲಿದ್ದಾರೆ.





-ಸುಭಾಶ್ಚಂದ್ರ ಎಸ್‌. ವಾಗ್ಳೆ

ಉಡುಪಿ(ನ.23): ಡಿಸೆಂಬರ್‌ 26ರಂದು ಬೆಳಗ್ಗೆ ನಡೆಯಲಿರುವ ಅದ್ಭುತವಾದ ಕಂಕಣ ಸೂರ್ಯಗ್ರಹಣವನ್ನು ನಮ್ಮ ರಾಜ್ಯದ 1 ಲಕ್ಷಕ್ಕೂ ಅಧಿಕ ಹೈಸ್ಕೂಲು ವಿದ್ಯಾರ್ಥಿಗಳು ನೋಡಿ, ಅದರ ಖುಷಿಯನ್ನು ಅನುಭವಿಸಲಿದ್ದಾರೆ.

Tap to resize

Latest Videos

undefined

ಉಡುಪಿಯ ಪೂರ್ಣಪ್ರಜ್ಞಾ ಕಾಲೇಜಿನ ನಿವೃತ್ತ ಭೌತಶಾಸ್ತ್ರ ಪ್ರಾಧ್ಯಾಪಕ ಡಾ. ಅನಂತಪದ್ಮನಾಭ ಭಟ್‌ ಮತ್ತು ಅವರ ತಂಡ ಈ ವಿದ್ಯಾರ್ಥಿಗಳನ್ನು ಸೂರ್ಯಗ್ರಹಣ ನೋಡುವುದಕ್ಕೆ ತಯಾರಿ ನಡೆಸಿದ್ದಾರೆ. ಯಾಕೆಂದರೆ ಈ ಬಾರಿ ಸೂರ್ಯಗ್ರಹಣ ನೋಡದಿದ್ದರೆ ಮತ್ತೆ 2064ರ ವರೆಗೆ ನೋಡುವುದಕ್ಕೆ ಅವಕಾಶ ಇಲ್ಲ.

ಕರಾವಳಿಯ ವೈದ್ಯೆ ಮುಡಿಗೆ ಮಿಸೆಸ್‌ ವಲ್ರ್ಡ್ ಸೂಪರ್‌ ಮಾಡೆಲ್‌ ಕಿರೀಟ..!

ಗ್ರಹಣಗಳನ್ನು ನೋಡಬಾರದು, ಗ್ರಹಣ ಎಂದರೆ ಸೂರ್ಯ- ಚಂದ್ರರಿಗೆ ಬರುವ ಸಂಕಷ್ಟ, ಅದನ್ನು ನೋಡಿದರೆ ನಮಗೂ ಸಂಕಷ್ಟಬರುತ್ತದೆ ಎಂಬಿತ್ಯಾದಿಯಾಗಿ ಗ್ರಹಣದ ಬಗ್ಗೆ ಜನರ ಮನಸ್ಸಿನಲ್ಲಿರುವ ಗ್ರಹಣವನ್ನು ದೂರ ಮಾಡುವುದಕ್ಕೆ ಹೊರಟಿದ್ದಾರೆ ಡಾ.ಎ.ಪಿ. ಭಟ್‌.

ಐದಾರು ತಿಂಗಳ ಹಿಂದೆ ಕಾಲೇಜಿನಿಂದ ನಿವೃತ್ತರಾದ ಎ.ಪಿ. ಭಟ್‌ ಅವರು, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಶಾಲೆಶಾಲೆಗಳಿಗೆ ಹೋಗಿ ಪಾಠ ಮಾಡುತ್ತಿದ್ದಾರೆ. ಅಲ್ಲಿನ ವಿದ್ಯಾರ್ಥಿಗಳ ಜೊತೆಗೆ ಶಿಕ್ಷಕರ ಮನಸ್ಸಲ್ಲಿರುವ ಗ್ರಹಣದ ಬಗೆಗಿನ ತಪ್ಪು ಕಲ್ಪನೆಗಳನ್ನು ದೂರ ಮಾಡಿ, ಗ್ರಹಣ ಎಂತಹ ಅದ್ಭುತ, ಎಷ್ಟುಸುಂದರ ವಿದ್ಯಮಾನ ಮತ್ತದನ್ನು ಹೇಗೆ ನೋಡಬಹುದು ಎಂಬುದನ್ನು ಮನವರಿಕೆ ಮಾಡುತ್ತಿದ್ದಾರೆ.

ರಾಜ್ಯದಲ್ಲಿ 31 ಮತ್ಸ್ಯ ದರ್ಶಿನಿ ಹೋಟೆಲ್, ಮಲ್ಪೆಗೆ ಬರಲಿದೆ ತೇಲುವ ಜೆಟ್ಟಿ..!

ಉಭಯ ಜಿಲ್ಲೆಗಳ ಅದರಲ್ಲೂ ಗ್ರಾಮೀಣ ಭಾಗದ 1000 ಶಾಲೆಗಳಿಗೆ ಹೋಗಿ ಗ್ರಹಣದ ಬಗ್ಗೆ ವೈಜ್ಞಾನಿಕ ಮಾಹಿತಿ ನೀಡುವ ಗುರಿ ಹಾಕಿಕೊಂಡಿರುವ ಡಾ. ಭಟ್‌ ಮತ್ತವರ ತಂಡ, ಈಗಾಗಲೇ 380ಕ್ಕೂ ಅಧಿಕ ಶಾಲೆಗೆ ಭೇಟಿ ನೀಡಿದ್ದಾರೆ. ಸರಿಸುಮಾರು 40,000 ಮಕ್ಕಳಿಗೆ ಸೂರ್ಯಗ್ರಹಣವನ್ನು ನೋಡುವ ಆಸಕ್ತಿ ಹುಟ್ಟಿಸಿದ್ದಾರೆ.

ಎರಡು ತಿಂಗಳ ಹಿಂದೆ ಈ ಯೋಜನೆಯನ್ನು ಆರಂಭಿಸಿದಾಗ ಕೇವಲ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಿಗಷ್ಟೇ ಸೀಮಿತವಾಗಿತ್ತು. ಆದರೆ ಈಗ ಡಾ. ಭಟ್‌ ಮತ್ತವರ ತಂಡದ ಈ ಸೇವೆಯ ಬಗ್ಗೆ ಮಾಹಿತಿ ಪಡೆದ ಮೈಸೂರು, ಬೆಂಗಳೂರು, ಉತ್ತರ ಕನ್ನಡ, ಮಡಿಕೇರಿ, ಶಿವಮೊಗ್ಗ, ದಾವಣಗೆರೆ, ರಾಮನಗರ, ಭದ್ರಾವತಿ, ದೂರದ ಬಳ್ಳಾರಿ ಜಿಲ್ಲೆಯ ನೂರಾರು ಶಾಲೆಗಳಿಂದಲೂ ಕರೆ ಬಂದಿದೆ.

ಉಪಚುನಾವಣೆ: ಬೀಗರ ಔತಣದ ನೆಪದಲ್ಲಿ 6 ಸಾವಿರ ಜನಕ್ಕೆ ಬಾಡೂಟ

ಈ ಎಲ್ಲ ಶಾಲೆಗಳಿಗೆ ಖುದ್ದು ಡಾ. ಭಟ್‌ ಹೋಗುವುದು ಕಷ್ಟಸಾಧ್ಯವಾದ್ದರಿಂದ, ತಮ್ಮ ಕಾಲೇಜಿನ ಭೌತಶಾಸ್ತ್ರ ಪ್ರಾಧ್ಯಾಪಕರು, ವಿದ್ಯಾರ್ಥಿಗಳು, ಹಳೆವಿದ್ಯಾರ್ಥಿಗಳು ಮತ್ತು ಕಾಲೇಜಿನಲ್ಲಿ ತಾವೇ ಆರಂಭಿಸಿರುವ ಪೂರ್ಣಪ್ರಜ್ಞಾ ಹವ್ಯಾಸಿ ಖಗೋಳ ವೀಕ್ಷಕರ ಕ್ಲಬ್‌ನ ನೂರಾರು ಸದಸ್ಯರನ್ನು ಇದರಲ್ಲಿ ತೊಡಗಿಸಿಕೊಂಡಿದ್ದಾರೆ. ದಿನಕ್ಕೆ ಹತ್ತಾರು ಶಾಲೆಗಳಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ.

100 ರು.ಗೆ ಪಿನ್‌ ಹೋಲ್‌ ಯಂತ್ರ ನೀಡುತ್ತಾರೆ

ಗ್ರಹಣ ಎಂದರೇನು, ಯಾಕೆ, ಹೇಗೆ, ಬಾಹ್ಯಾಕಾಶದಲ್ಲಿ ಬೇರೆ ಏನೇನಿದೆ ಇತ್ಯಾದಿಗಳ ಬಗ್ಗೆ ಒಂದು ಗಂಟೆಯ ಪವರ್‌ ಪಾಯಿಂಟ್‌ ಮಾಹಿತಿ ಜೊತೆಗೆ, ಪಿನ್‌ ಹೋಲ್‌ ಎಂಬ ಅಂಗೈ ಗಾತ್ರದ ಸರಳ ಯಂತ್ರದಲ್ಲಿ ಗೋಡೆಯ ಮೇಲೆ ಗ್ರಹಣಗಳನ್ನು ಮೂಡಿಸಿ ಒಂದರ್ಧ ಗಂಟೆ ಪ್ರಾಯೋಗಿಕ ಜ್ಞಾನವನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ. ಉಡುಪಿ ಸಮೀಪದ ಸಾಲಿಗ್ರಾಮದ ವೆಂಕಟರಮಣ ಐತಾಳ್‌ ಅವರು ರಚಿಸಿರುವ ಈ ಪಿನ್‌ ಹೋಲ್‌ ಯಂತ್ರವನ್ನು ಮತ್ತು ಗ್ರಹಣ ವೀಕ್ಷಿಸುವ ಕನ್ನಡಕಗಳನ್ನು ಡಾ.ಎ.ಪಿ. ಭಟ್‌ ಅವರು ಶಾಲೆಗಳಿಗೆ ಕೇವಲ 100 ರು.ಗೆ ನೀಡುತ್ತಿದ್ದಾರೆ. ಈ ಪಿನ್‌ ಹೋಲ್‌ ಯಂತ್ರದ ಮೂಲಕ ಡಿ.26ರಂದು ಶಾಲೆಯಲ್ಲಿಯೇ ಯಾವುದೇ ಅಪಾಯವಿಲ್ಲದೇ ಎಲ್ಲ ವಿದ್ಯಾರ್ಥಿಗಳು ಒಟ್ಟಿಗೆ ಸೂರ್ಯಗ್ರಹಣವನ್ನು ವೀಕ್ಷಿಸಬಹುದಾಗಿದೆ ಎನ್ನುತ್ತಾರೆ ಈ ತಂಡದಲ್ಲಿರುವ ಪ್ರಾಧ್ಯಾಪಕ ಅತುಲ್‌ ಭಟ್‌.

ಗ್ರಹಣ ಅದ್ಭುತ ಬೆಳಕಿನಾಟ, ಬೇರೇನೂ ಅಲ್ಲ

ಸೂರ್ಯಗ್ರಹಣ ಎಂದರೇ ಅದೊಂದು ಸುಂದರ ವಿದ್ಯಮಾನ, ಸೂರ್ಯ, ಚಂದ್ರ ಮತ್ತು ಭೂಮಿಯ ನಡುವೆ ನಡೆಯುವ ಒಂದು ಅದ್ಭುತ ಬೆಳಕಿನಾಟ ಅದು. ಅದನ್ನು ಎಲ್ಲರೂ ನೋಡಬೇಕು. ಆದರೆ ಇವತ್ತಿಗೂ ಗ್ರಾಮೀಣ ಭಾಗದಲ್ಲಿ ಗ್ರಹಣವನ್ನು ನೋಡಬಾರದು ಎನ್ನುವ ಮೂಢನಂಬಿಕೆಗಳಿವೆ. ಅದನ್ನು ಹೋಗಲಾಡಿಸಿ, ವೈಜ್ಞಾನಿಕವಾಗಿ ಗ್ರಹಣವನ್ನು ಹೇಗೆ ನೋಡಬೇಕು ಎನ್ನುವುದನ್ನು ಹೇಳಿಕೊಡುವ ಪ್ರಯತ್ನ ನಮ್ಮದು. ವಿದ್ಯಾರ್ಥಿಗಳಂತೂ ಬಹಳ ಖುಷಿಯಾಗಿ ನಮ್ಮ ಮಾತನ್ನು ಕೇಳುತ್ತಿದ್ದಾರೆ. ವಿವಿಧ ಶಾಲೆಗಳಿಂದಲೂ ಕರೆ ಬರುತ್ತಿದೆ. 1000 ಶಾಲೆಗಳಿಗೆ ನಾವು ಭೇಟಿ ನೀಡಿದ್ರೆ 1 ಲಕ್ಷ ವಿದ್ಯಾರ್ಥಿಗಳು ಅಂದು ಚಂದದ ಕಂಕಣ ಸೂರ್ಯಗ್ರಹವನ್ನು ನೋಡಲಿದ್ದಾರೆ ಎಂದು ಡಾ.ಎ.ಪಿ. ಭಟ್‌ ಹೇಳಿದ್ದಾರೆ. ಸಂಪರ್ಕ ಸಂಖ್ಯೆ (91 94483 09077).

 

click me!