ಚಿಕ್ಕಬಳ್ಳಾಪುರ : ಆನ್‌ಲೈನ್‌ ಮೂಲಕ 1 ಕೋಟಿ ಮೌಲ್ಯದ ಮಾವು ಮಾರಾಟ

By Kannadaprabha News  |  First Published Jul 8, 2021, 11:55 AM IST
  • ಲಾಕ್‌ಡೌನ್‌ನಿಂದ ಮಾವು ಬೆಳೆಗಾರರಿಗೆ ನೆರವು ಒದಗಿಸಲು ಸರ್ಕಾರ ಹೊಸ ಮಾರ್ಗ
  • ಆನ್‌ಲೈನ್‌ ಮೂಲಕ ಗ್ರಾಹಕರಿಗೆ ನೇರವಾಗಿ ಮನೆ ಬಾಗಿಲಿಗೆ ಮಾವು ಪೂರೈಕೆ
  • ಬರೋಬ್ಬರಿ 1 ಕೋಟಿಗಿಂತ ಹೆಚ್ಚು ಮಾವು ಮಾರಾಟ 

ವರದಿ : ಕಾಗತಿ ನಾಗರಾಜಪ್ಪ.

 ಚಿಕ್ಕಬಳ್ಳಾಪುರ (ಜು.08):  ಕೊರೋನಾ 2ನೇ ಅಲೆಯ ಸಂಕಷ್ಟದ ಸಂದರ್ಭದಲ್ಲಿ ಹೇರಲಾಗಿದ್ದ ಲಾಕ್‌ಡೌನ್‌ನಿಂದ ಮಾವು ಬೆಳೆಗಾರರಿಗೆ ನೇರ ಮಾರುಕಟ್ಟೆಒದಗಿಸುವುದರ ಜೊತೆಗೆ ಉತ್ತಮ ಬೆಲೆ ಕೈಗೆಟುಕುವಂತೆ ಮಾಡಲು ಸರ್ಕಾರ ಆನ್‌ಲೈನ್‌ ಮೂಲಕ ಗ್ರಾಹಕರಿಗೆ ನೇರವಾಗಿ ಮನೆ ಬಾಗಿಲಿಗೆ ಮಾವು ಪೂರೈಸಲು ಕಲ್ಪಿಸಿದ್ದ ಆನ್‌ಲೈನ್‌ ವಹಿವಾಟುಗೆ ಉತ್ತಮ ಸ್ಪಂದನೆ ಸಿಕ್ಕಿದ್ದು ಇದುವರೆಗೂ ಬರೋಬ್ಬರಿ 1 ಕೋಟಿಗಿಂತ ಹೆಚ್ಚು ಮಾವು ಮಾರಾಟ ನಡೆದಿದೆ.

Tap to resize

Latest Videos

ರಸ್ತೆಬದಿ ಹಣ್ಣು ಮಾರುತ್ತಿದ್ದಾಕೆಯ ಅದೃಷ್ಟ: 12 ಮಾವು ಮಾರಿ 1.20 ಲಕ್ಷ ಸಂಪಾದಿಸಿದ ಬಾಲೆ! ..

ಏಷ್ಯಾದಲ್ಲಿಯೆ ಅತಿ ಹೆಚ್ಚು ಪ್ರಮಾಣದಲ್ಲಿ ಮಾವು ಬೆಳೆಯುವ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಮಾವು ಬೆಳೆಗಾರರಿಗೆ ಲಾಕ್‌ಡೌನ್‌ ಸಂದರ್ಭದಲ್ಲಿ ಅನುಕೂಲವಾಗಲೆಂದು ಕಲ್ಪಿಸಿದ ಅನ್‌ಲೈನ್‌ ಮಾವು ಮಾರಾಟಕ್ಕೆ ರಾಜ್ಯದಲ್ಲಿ ಗ್ರಾಹಕರಿಂದ ಸಾಕಷ್ಟುಬೇಡಿಕೆ ಬಂದು ಟನ್‌ಗಟ್ಟಲೇ ತರಹೇವಾರಿ ಮಾವು ಮಾರಾಟವಾಗಿರುವುದು ಮಾವು ಬೆಳೆಗಾರರಲ್ಲಿ ತುಸು ಸಮಾಧಾನ ತಂದಿದೆ. ಇಲ್ಲಿಯವರೆಗೂ ಒಟ್ಟು 47,712 ಮಂದಿ ಮಾವಿಗೆ ಬೇಡಿಕೆ ಸಲ್ಲಿಸಿದ್ದರು.

ಮಧ್ಯವರ್ತಿಗಳಿಲ್ಲದೆ ವಹಿವಾಟು

ರಾಜ್ಯದ ತೋಟಗಾರಿಕೆ ಇಲಾಖೆ ಹಾಗೂ ರಾಜ್ಯ ಮಾವು ಅಭಿವೃದ್ಧಿ ನಿಗಮದ ಸಹಭಾಗಿತ್ವದಲ್ಲಿ ನಡೆದ   ಆನ್‌ಲೈನ್‌ ಮಾವು ಮಾರಾಟದಲ್ಲಿ ಒಟ್ಟು ರಾಜ್ಯಾದ್ಯಂತ 147 ಮಾವು ಬೆಳೆಗಾರರು ತಮ್ಮ ಹೆಸರು ನೊಂದಾಯಿಸಿಕೊಂಡಿದ್ದರು. ಆ ಪೈಕಿ ಚಿಕ್ಕಬಳ್ಳಾಪುರ ಜಿಲ್ಲೆಯ 30 ಮಂದಿ ಮಾವು ಬೆಳೆಗಾರರು ತಮ್ಮ ಹೆಸರು ನೊಂದಾಯಿಸಿಕೊಂಡು ಗ್ರಾಹಕರ ಬೇಡಿಕೆಯಂತೆ ತಾವು ಬೆಳೆದ ಮಾವಿನ ಹಣ್ಣುಗಳನ್ನು ಗ್ರಾಹಕರ ಮನೆಗೆ ಬಾಗಿಲಿಗೆ ನೇರವಾಗಿ ಅಂಚೆ ಮೂಲಕ ಕಳುಹಿಸಿ ಕೊಟ್ಟಿದ್ದರು. ಯಾವುದೇ ಮದ್ಯವರ್ತಿಗಳು ಇಲ್ಲದೇ ಕಮಿಷನ್‌ ಏಜೆಂಟರ ಸಹವಾಸ ಇಲ್ಲದೇ ಮಾವು ಬೆಳೆಗಾರರು ಕೈ ತುಂಬ ಕಾಸು ಮಾಡಿಕೊಂಡಿದ್ದಾರೆ.

ಕೋಲಾರದಿಂದ 250 ಟನ್ ಮಾವು ಹೊತ್ತು ದೆಹಲಿಗೆ ತೆರಳಿದ ಕರ್ನಾಟಕದ ಮೊದಲ ಕಿಸಾನ್ ರೈಲು! ..

ಆನ್‌ಲೈನ್‌ ಮೂಲಕ ಗ್ರಾಹಕರಿಗೆ ಮಾವು ಮಾರಾಟ ಮಾಡಲು ಅವಕಾಶ ಕಲ್ಪಿಸಿದ್ದೆ ತಡ ರಾಜ್ಯದ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಮಾವು ಹಣ್ಣಿನ ಪ್ರಿಯರು ಒಟ್ಟು ವಿವಿಧ ಮಾವಿನ ಹಣ್ಣುಗಗಳನ್ನು ಪೂರೈಸುವಂತೆ 22,258 ಬಾಕ್ಸ್‌ಗಳಿಗೆ ಬುಕ್ಕಿಂಗ್‌ ಮಾಡಿಕೊಂಡಿದ್ದಾರೆ. ಆ ಪೈಕಿ ಇದುವೆರೆಗೂ ಒಟ್ಟು 20,748 ಬಾಕ್ಸ್‌ಗಳ ಮಾವಿನ ಹಣ್ಣುಗಳನ್ನು ಗ್ರಾಹಕರಿಗೆ ಅಂಚೆ ಮೂಲಕ ತಲುಪಿಸಲಾಗಿದೆ. ಒಟ್ಟು ಇದುವರೆಗೂ ಒಟ್ಟು 1,01,21,393 ರು, ಆರ್ಥಿಕ ವಹಿವಾಟು ಮಾವು ಮಾರಾಟದಿಂದ ನಡೆದಿದೆ.

ಬಾದಾಮಿಗೆ ಹೆಚ್ಚು ಬೇಡಿಕೆ

ಆನ್‌ಲೈನ್‌ ಮೂಲಕ ಗ್ರಾಹಕರಿಗೆ ನೇರವಾಗಿ ಬೆಳೆಗಾರರಿಂದಲೇ ಮಾವು ಮಾರಾಟಕ್ಕೆ ಅವಕಾಶ ಕಲ್ಪಿಸಿದ್ದು ವಿಶೇಷವಾಗಿ ಅತ್ಯಂತ ರುಚಿಕರಕ್ಕೆ ಹೆಸರಾದ ಬಾದಾಮಿ ಮಾವುಗೆ ಹೆಚ್ಚು ಬೇಡಿಕೆ ಕಂಡು ಬಂದಿದೆ. ಅಂಚೆ ಮೂಲಕ ಇದುವರೆಗೂ ಗ್ರಾಹಕರ ಮನೆ ಬಾಗಿಲಿಗೆ ಅಂಚೆ ಮೂಲಕ ಪೂರೈಕೆಯಾದ ಒಟ್ಟು 20,7848 ತರಹೇವಾರಿ ಮಾವಿನ ಬಾಕ್ಸ್‌ಗಳ ಪೈಕಿ ಬಾದಾಮಿಯ ಒಟ್ಟು 9,973 ಬಾಕ್ಸ್‌ಗಳು ಪೂರೈಕೆ ಆಗಿವೆ.

ರಾಜ್ಯದಲ್ಲಿ ಆನ್‌ಲೈನ್‌ ಮಾವು ಮಾರಾಟಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು ಒಟ್ಟು 147 ಮಂದಿ ಮಾವು ಬೆಳೆಗಾರರು ತಮ್ಮ ಹೆಸರುಗಳನ್ನು ನೊಂದಾಯಿಸಿಕೊಂಡಿದ್ದಾರೆ. ಬುಕ್ಕಿಂಗ್‌ ಮಾಡಿದ 22,258 ಬಾಕ್ಸ್‌ಗಳ ಪೈಕಿ ಇದುವರೆಗೂ 20,748 ಬಾಕ್ಸ್‌ಗಳನ್ನು ಅಂಚೆ ಮೂಲಕ ಗ್ರಾಹಕರಿಗೆ ಪೂರೈಕೆ ಮಾಡಲಾಗಿದ್ದು, ಒಟ್ಟು 1,01,21,393 ಹಣಕಾಸಿನ ವಹಿವಾಟು ನಡೆದಿದೆ.

ಕುಮಾರಸ್ವಾಮಿ, ಉಪ ನಿರ್ದೇಶಕರು, ಮಾವು ಅಭಿವೃದ್ದಿ ಕೇಂದ್ರ, ಮಾಡಿಕೆರೆ

click me!