ಸ್ವಾತಂತ್ರ್ಯ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಸ್ವಾತಂತ್ರ್ಯೋತ್ಸವದ ಗಣೇಶೋತ್ಸವವಾಗಿ ಆಚರಿಸಿದ ಹಲವು ಸಂಘಟನೆಗಳು, ಹಿಂದೂ ಪರ ವೇದಿಕೆಗಳು
ಬೆಂಗಳೂರು(ಸೆ.02): ರಾಜಧಾನಿಯಾದ್ಯಂತ ಈ ಬಾರಿಯ ಗಣೇಶೋತ್ಸವ ಅದ್ಧೂರಿಯಾಗಿ ಜರುಗಿತು. ಈ ಬಾರಿ ಸ್ವಾತಂತ್ರ್ಯ ಅಮೃತಮಹೋತ್ಸವ ಹಿನ್ನೆಲೆ ಸ್ವಾತಂತ್ರ್ಯ ಹೋರಾಟಗಾರರ ನಮನ, ಅಗಲಿದ ನಟ ಅಪ್ಪು ಆರಾಧನೆಯು ಸಾರ್ವಜನಿಕ ಗಣೇಶೋತ್ಸವಕ್ಕೆ ಮೆರುಗು ನೀಡಿದ್ದವು.
ಸ್ವಾತಂತ್ರ್ಯೋತ್ಸವದ ಗಣೇಶೋತ್ಸವ:
ಈ ವರ್ಷ ನಿರ್ಬಂಧಗಳು ಇಲ್ಲದ ಕಾರಣ ಸಾರ್ವಜನಿಕ ಸ್ಥಳಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗಣೇಶ ಪ್ರತಿಷ್ಠಾಪಿಸಲಾಗಿತ್ತು. ಸ್ವಾತಂತ್ರ್ಯ ಅಮೃತ ಮಹೋತ್ಸವದ ಹಿನ್ನೆಲೆ ಹಲವು ಸಂಘಟನೆಗಳು, ಹಿಂದೂ ಪರ ವೇದಿಕೆಗಳು ಸ್ವಾತಂತ್ರ್ಯೋತ್ಸವದ ಗಣೇಶೋತ್ಸವವಾಗಿ ಆಚರಿಸಿದವು. ತ್ರಿವರ್ಣ ಧ್ವಜವನ್ನು ಹಿಡಿದ ಗಣೇಶ ಮೂರ್ತಿ, ಸ್ವಾತಂತ್ರ್ಯ ಹೋರಾಟಗಾರರ ಜತೆಗಿರುವ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗಿತ್ತು. ವೇದಿಕೆಗಳ ಸುತ್ತ ಸ್ವಾತಂತ್ರ್ಯ ಹೋರಾಟಗಾರರ ಪೋಟೊ, ಫ್ಲೆಕ್ಸ್, ಮಾಹಿತಿ ಫಲಕಗಳನ್ನು ಹಾಕಲಾಗಿತ್ತು. ಸಂಜೆ ಬಳಿಕ ಸ್ವಾತಂತ್ರ್ಯ ಹೋರಾಟಗಾರರ ಕುರಿತ ಸಾಂಸ್ಕೃತಿಕ ಕಾರ್ಯಕ್ರಮಗಳು, ಪುಸ್ತಕ ವಿತರಣೆ ನಡೆಸಲಾಯಿತು.
Hubballi : ಈದ್ಗಾ ಮೈದಾನದಲ್ಲಿ ವೈಭವದ ಗಣೇಶೋತ್ಸವ
ಅಪ್ಪು ಆರಾಧನೆ:
ಬಹುತೇಕ ಸಾರ್ವಜನಿಕ ಗಣೇಶೋತ್ಸವ ವೇದಿಕೆ ಮುಂಭಾಗ ನಟ ಡಾ.ಪುನೀತ್ ರಾಜಕುಮಾರ್ ಫೋಟೊ, ಫ್ಲೆಕ್ಸ್ ಹಾಕಲಾಗಿತ್ತು. ಪುನೀತ್ ಮೂರ್ತಿ ಒಳಗೊಂಡು ‘ಅಪ್ಪು’ ಗಣೇಶ ಮೂರ್ತಿಗಳನ್ನು ಕೂಡಾ ಹಲವರು ಪ್ರತಿಷ್ಠಾಪಿಸಿದ್ದರು. ಪುನೀತ್ ಹೆಸರಿನಲ್ಲಿ ಅನ್ನ ಸಂತರ್ಪಣೆ ಸೇರಿದಂತೆ ಸಮಾಜಮುಖಿ ಕಾರ್ಯಕ್ರಮಗಳು ಜರುಗಿದವು. ಮೆರವಣಿಗೆಯಲ್ಲಿಯೂ ಪುನೀತ್ ನಟನೆಯ ಸಿನಿಮಾ ಹಾಡುಗಳ ಅಬ್ಬರವಿತ್ತು.
1.6 ಲಕ್ಷ ಮೂರ್ತಿಗಳ ವಿಸರ್ಜನೆ:
ಕಳೆದ ಎರಡು ವರ್ಷ ಸರಳವಾಗಿ ಹಬ್ಬ ಆಚರಿಸಿದ್ದ ನಗರದ ಜನ ಈ ಬಾರಿ ನಿರ್ಬಂಧ ವಿನಾಯ್ತಿ ಹಿನ್ನೆಲೆ ಭರ್ಜರಿ ಮೆರವಣಿಗೆ ಮೂಲಕ ಗಣೇಶ ವಿಸರ್ಜನೆ ಮಾಡಿದರು. ಡಿಜೆ ನಿಷೇಧವಿದ್ದ ಹಿನ್ನೆಲೆ ಧ್ವನಿವರ್ಧಕಗಳಲ್ಲಿ ಸಂಗೀತ, ತಮಟೆ, ಡೊಳ್ಳು ಬಾರಿಸಿದರು. ಬಹುತೇಕರು ಸಂಜೆಯೇ ಮೂರ್ತಿ ವಿಸರ್ಜಿಸಿದ್ದು, ನಗರದಾದ್ಯಂತ ಬುಧವಾರ ತಡರಾತ್ರಿವರೆಗೂ ಕೆರೆ, ತಾತ್ಕಾಲಿಕ ಕಲ್ಯಾಣ ಹಾಗೂ ಟ್ಯಾಂಕರ್‌ಗಳಲ್ಲಿ 1.6 ಲಕ್ಷ ಮೂರ್ತಿಗಳು ವಿಸರ್ಜನೆ ಮಾಡಲಾಯಿತು.
ಅನಧಿಕೃತ ಪ್ರತಿಷ್ಠಾಪನೆ ಹೆಚ್ಚು
ಈ ಬಾರಿ ಅನಧಿಕೃತ ಗಣೇಶ ಪ್ರತಿಷ್ಠಾಪನೆ ಹೆಚ್ಚಾಗಿವೆ. ಸಾರ್ವಜನಿಕ ಗಣೇಶ ಪ್ರತಿಷ್ಠಾಪಿಸುವವರಿಗೆ ಕಡ್ಡಾಯವಾಗಿ ಬಿಬಿಎಂಪಿ, ಪೊಲೀಸ್ ಇಲಾಖೆ, ಅಗ್ನಿಶಾಮಕ ದಳ ಹಾಗೂ ಬೆಸ್ಕಾಂನಿಂದ ಅನುಮತಿ ಕಡ್ಡಾಯಗೊಳಿಸಿ ಏಕಗವಾಕ್ಷಿ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿತ್ತು. ಆದರೆ, ಈ ಪೈಕಿ 3,263 ಸಂಘಸಂಸ್ಥೆಗಳು ಮಾತ್ರ ಅನುಮತಿ ಪಡೆದಿವೆ. ಆದರೆ, ಬುಧವಾರ ಬಿಬಿಎಂಪಿ ಕರೆ, ಕಲ್ಯಾಣಿಗಳಲ್ಲಿ ಸಾರ್ವಜನಿಕ ಸ್ಥಳದಲ್ಲಿ ಪ್ರತಿಷ್ಠಾಪಿಸಿದ್ದ 12 ಸಾವಿರಕ್ಕೂ ಅಧಿಕ ಪಿಒಪಿ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲಾಗಿದೆ. ಕೆಲವೆಡೆ ಅಧಿಕಾರಿಗಳು ವಿಚಾರಿಸಿದಾಗ ಅನುಮತಿ ಪತ್ರ ಪಡೆದಿಲ್ಲದ ವಿಷಯ ಬೆಳಕಿಗೆ ಬಂದಿದೆ. ಈ ಮೂಲಕ ಬಹುತೇಕರು ಅನುಮತಿ ಇಲ್ಲದೆ ಪ್ರತಿಷ್ಠಾಪಿಸಿರುವುದು ಸ್ಪಷ್ಟವಾಗಿದೆ.
12 ಸಾವಿರ ಪಿಒಪಿ ಮೂರ್ತಿ ವಿಸರ್ಜನೆ
ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಗಣೇಶ ಮೂರ್ತಿ ತಯಾರಿಕೆ, ಮಾರಾಟದ ನಿಷೇಧದ ನಡುವೆಯೂ ಬೆಂಗಳೂರಿನಲ್ಲಿ ಸಾವಿರಾರು ಸಂಖ್ಯೆಯ ಪಿಒಪಿ ಮೂರ್ತಿಗಳನ್ನು ಗಣೇಶ ಚತುರ್ಥಿ ವೇಳೆ ಪ್ರತಿಷ್ಠಾಪಿಸಿರುವುದು ಕಂಡು ಬಂದಿದೆ.
ನಗರದಲ್ಲಿ ಲಕ್ಷಾಂತರ ಸಂಖ್ಯೆ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗಿದ್ದು, ಪರಿಸರ ಸ್ನೇಹಿ ಹಾಗೂ ರಾಸಾಯನಿಕ ಮುಕ್ತ ಮೂರ್ತಿ ಪ್ರತಿಷ್ಠಾಪಿಸುವಂತೆ ಕರೆ ನೀಡಲಾಗಿತ್ತು. ಆದರೂ ನಗರದಲ್ಲಿ ಸಾವಿರಾರು ಸಂಖ್ಯೆಯ ಪಿಒಪಿ ಮೂರ್ತಿ ಪ್ರತಿಷ್ಠಾಪಿಸಲಾಗಿದೆ.
ADGP ಅಲೋಕ್‌ಕುಮಾರ್ ವಿರುದ್ಧ ಶಾಸಕ ಅಭಯ್ ಪಾಟೀಲ್, ಪ್ರಮೋದ್ ಮುತಾಲಿಕ್ ಗರಂ!
ಪಿಒಪಿ ಮೂರ್ತಿಗಳಿಂದ ಉಂಟಾಗುವ ದುಷ್ಪರಿಣಾಮದ ಬಗ್ಗೆ ಜಾಗೃತಿ ಕೊರತೆಯಿಂದ ಪಿಒಪಿ ಪ್ರತಿಷ್ಠಾಪನೆ ಮಾಡಲಾಗಿದ್ದು, ಇನ್ನು ಈ ರೀತಿಯ ನಿಷೇಧಿತ ಮೂರ್ತಿಗಳ ತಯಾರಿಕೆ ಮಾರಾಟ ತಡೆಯುವಲ್ಲಿ ಬಿಬಿಎಂಪಿ ಮತ್ತು ಕೆಎಸ್‌ಪಿಸಿಬಿ ಅಧಿಕಾರಿಗಳು ವಿಫಲರಾಗಿರುವುದು ಸ್ಪಷ್ಟವಾಗಿದೆ. ನಿಷೇಧದ 12,086 ಪಿಒಪಿ ಗಣೇಶ ಮೂರ್ತಿ ವಿಸರ್ಜನೆ ಮಾಡಲಾಗಿದೆ.
ವಲಯವಾರು ವಿಸರ್ಜನೆ ವಿವರ
ವಲಯ ಮಣ್ಣಿನ ಮೂರ್ತಿಗಳು ಪಿಒಪಿ ಮೂರ್ತಿಗಳು
ಪಶ್ಚಿಮ 34,471 306
ದಕ್ಷಿಣ 68,521 11,402
ದಾಸರಹಳ್ಳಿ 1,382 22
ಪೂರ್ವ 12,750 00
ಆರ್‌ಆರ್ ನಗರ 14,479 152
ಬೊಮ್ಮನಹಳ್ಳಿ 6,136 131
ಯಲಹಂಕ 6 ಸಾವಿರ 73
ಮಹದೇವಪುರ 4155 00