ಅನ್ನಭಾಗ್ಯ ಅಕ್ಕಿ ಅಕ್ರಮ ಸಾಗಣೆ : ಕ್ರಿಮಿನಲ್ ಕೇಸ್ ದಾಖಲು

By Web Desk  |  First Published Oct 15, 2018, 5:20 PM IST

ಕೋಲಾರ ಜಿಲ್ಲೆ ಬಂಗಾರಪೇಟೆಯಿಂದ ಮುಂಬೈ ಬಳಿಯಿರುವ ವಸಾಯಿಗೆ ಲಾರಿಯಲ್ಲಿ ಅಕ್ಕಿ ಸಾಗಿಸಲಾಗುತ್ತಿತ್ತು. 25 ಕೆಜಿ ಪ್ಯಾಕೆಟ್‌ನಲ್ಲಿ ಅಕ್ಕಿ ತುಂಬಿ ಸಾಗಿಸಲಾಗುತ್ತಿತ್ತು. ಛಬ್ಬಿ ಕ್ರಾಸ್ ಬಳಿ ಅ. 7ರಂದು ಆಹಾರ ಇಲಾಖೆ ನಿರೀಕ್ಷಕರು ಹಾಗೂ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ವಶಕ್ಕೆ ತೆಗೆದುಕೊಂಡಿದ್ದರು.


ಹುಬ್ಬಳ್ಳಿ[ಅ.15]: ತಾಲೂಕಿನ ಛಬ್ಬಿ ಗ್ರಾಮದ ಬಳಿ ಕಳೆದ ಭಾನುವಾರ ಪತ್ತೆಯಾಗಿದ್ದ ಸಾವಿರ ಚೀಲ ಅಕ್ಕಿಯು ಪಡಿತರರಿಗೆ ವಿತರಿಸುವ ಅನ್ನಭಾಗ್ಯದ ಅಕ್ಕಿಯೇ ಎಂಬುದು ಸಾಬೀತಾಗಿದೆ.

ಪ್ರಯೋಗಾಲಯದ ವರದಿ ಬಂದಿದ್ದು, ಇದರಿಂದ ಅನ್ನಭಾಗ್ಯದ ಅಕ್ಕಿಗೇ ಕನ್ನ ಹಾಕಿರುವುದು ಬೆಳಕಿಗೆ ಬಂದಿದೆ. ಇದೀಗ ಅಕ್ಕಿ ಮಿಲ್ ಮಾಲೀಕರ ಮೇಲೆ ಕ್ರಿಮಿನಲ್ ಕೇಸ್ ದಾಖಲಾಗಿದೆ.

Latest Videos

undefined

ಕೋಲಾರ ಜಿಲ್ಲೆ ಬಂಗಾರಪೇಟೆಯಿಂದ ಮುಂಬೈ ಬಳಿಯಿರುವ ವಸಾಯಿಗೆ ಲಾರಿಯಲ್ಲಿ ಅಕ್ಕಿ ಸಾಗಿಸಲಾಗುತ್ತಿತ್ತು. 25 ಕೆಜಿ ಪ್ಯಾಕೆಟ್‌ನಲ್ಲಿ ಅಕ್ಕಿ ತುಂಬಿ ಸಾಗಿಸಲಾಗುತ್ತಿತ್ತು. ಛಬ್ಬಿ ಕ್ರಾಸ್ ಬಳಿ ಅ. 7ರಂದು ಆಹಾರ ಇಲಾಖೆ ನಿರೀಕ್ಷಕರು ಹಾಗೂ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ವಶಕ್ಕೆ ತೆಗೆದುಕೊಂಡಿದ್ದರು.

ಲಾರಿಯಲ್ಲಿರುವ ಅಕ್ಕಿ ಹಾಗೂ ಪಡಿತರಿಗೆ ವಿತರಿಸುವ ಅಕ್ಕಿಯ ಎರಡು ಮಾದರಿಯನ್ನು ಪಡೆದು ಹೋಲಿಸಿ ಪರೀಕ್ಷಿಸಲು ಬೆಳಗಾವಿಯ ಟಿಳಕವಾಡಿಯಲ್ಲಿರುವ ಪ್ರಯೋಗಾಲಯಕ್ಕೆ ರವಾನಿಸಲಾಗಿತ್ತು. ಇದೀಗ ಪ್ರಯೋಗಾಲಯದ ವರದಿ ಬಂದಿದೆ. ಎರಡು ಅಕ್ಕಿಯಲ್ಲಿ ಯಾವುದೇ ಬಗೆಯ ವ್ಯತ್ಯಾಸವಿಲ್ಲ. ಎರಡು ಅಕ್ಕಿಯೂ ಒಂದೇ ಗುಣಮಟ್ಟದಾಗಿದೆ. ಹೀಗಾಗಿ, ಲಾರಿಯಲ್ಲಿ ಸಾಗಿಸುತ್ತಿದ್ದ ಸಾವಿರ ಚೀಲ ಅಕ್ಕಿ ಅನ್ನಭಾಗ್ಯದ್ದೇ. ಅದನ್ನು ಅಕ್ರಮವಾಗಿ ಸಾಗಿಸಲಾಗುತ್ತಿತ್ತು ಎಂಬುದು ಸಾಬೀತಾದಂತಾಗಿದೆ. 

ಈ ಹಿನ್ನೆಲೆಯಲ್ಲಿ ಬಂಗಾರಪೇಟೆಯ ಅಕ್ಕಿ ಮಿಲ್‌ನ ಮಾಲೀಕ ವಾಸೀಂ ಪಾಷಾ ವಿರುದ್ಧ ಇಲ್ಲಿನ ಗ್ರಾಮೀಣ ಠಾಣೆಯಲ್ಲಿ ಆಹಾರ ನಿರೀಕ್ಷಕ ಎ.ಎ. ಖತೀಬ ಕ್ರಿಮಿನಲ್ ಕೇಸ್ ದಾಖಲಿಸಿದ್ದಾರೆ. ಇದೀಗ ಪೊಲೀಸರು ಅಕ್ಕಿ ಮಿಲ್ ಮಾಲೀಕನನ್ನು ಬಂಧಿಸಲು ಜಾಲ ಬೀಸಿದ್ದಾರೆ. ತೀವ್ರ ಶೋಧ ಕಾರ್ಯ ಆರಂಭಿಸಿದ್ದಾರೆ.

ಪಡಿತರ ಅಕ್ಕಿ ಮೋಸ:

ಅನ್ನಭಾಗ್ಯದಲ್ಲಿ ಪಾರದರ್ಶಕ ಇರಬೇಕೆಂಬ ಉದ್ದೇಶದಿಂದ ಸರ್ಕಾರ ಬಯೋಮೆಟ್ರಿಕ್ ಜಾರಿಗೊಳಿಸಿದೆ. ಪಡಿತರದಾರರು ಕೂಡ ಬಯೋಮೆಟ್ರಿಕ್ ಮೂಲಕ ಪಡಿತರ ಪಡೆಯಬೇಕು. ಅಧಿಕಾರಿಗಳು ಎಷ್ಟೆಷ್ಟು ಪಡಿತರ ಕೊಡಲಾಗಿದೆ ಎಂಬುದು ಸೇರಿದಂತೆ ಎಲ್ಲ ಬಗೆಯ ಡಾಟಾಗಳನ್ನು ಆಗಲೇ ಕಂಪ್ಯೂಟರ್‌ನಲ್ಲಿ ಅಪ್ ಲೋಡ್ ಮಾಡಿರುತ್ತಾರೆ. ಅಧಿಕಾರಿಗಳು ಇದೀಗ ಅಕ್ರಮ ನಡೆಸಲು ಬರುವುದೇ ಇಲ್ಲ ಎಂದೇ ಹೇಳುತ್ತಾರೆ. ಹಾಗಾದರೆ ಇಷ್ಟೊಂದು ಅಕ್ಕಿ ಸಾಗಿಸಿದ್ದು ಹೇಗೆ? ಅಧಿಕಾರಿಗಳ ಕೈವಾಡ ಇಲ್ಲದೇ ಮಾಡಲು ಸಾಧ್ಯವೆ ಎಂಬ ಪ್ರಶ್ನೆ ಇದೀಗ ಸಾರ್ವಜನಿಕ ವಲಯದಲ್ಲಿ ಉಂಟಾಗಿದೆ.

(ಸಾಂದರ್ಭಿಕ ಚಿತ್ರ)
 

click me!