ರಾಮನಗರ ಜಿಲ್ಲೆ: ಸೈನಿಕನಿಗೆ ಸೋಲು, ನಾಯಕನಿಗೆ ಎರಡು ಗೆಲವು

First Published May 15, 2018, 4:00 PM IST
Highlights

ಕೇವಲ ನಾಲ್ಕೇ ಕ್ಷೇತ್ರಗಳಿದ್ದರೂ, ವಿಪರೀತ ಕುತೂಹಲ ಕೆರಳಿಸಿತ್ತು ರಾಮನಗರ ಚುನಾವಣಾ ಕಣ. ಚೆನ್ನಪಟ್ಟಣ ಮತ್ತು ರಾಮನಗರ ಎರಡೂ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಕುಮಾರಸ್ವಾಮಿ ನಗೆಯ ಗೆಲವು ಬೀರಿದ್ದಾರೆ.

ರಾಮನಗರ: ಕೇವಲ ನಾಲ್ಕೇ ಕ್ಷೇತ್ರಗಳಿದ್ದರೂ, ವಿಪರೀತ ಕುತೂಹಲ ಕೆರಳಿಸಿತ್ತು ರಾಮನಗರ ಚುನಾವಣಾ ಕಣ. ಚೆನ್ನಪಟ್ಟಣ ಮತ್ತು ರಾಮನಗರ ಎರಡೂ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಕುಮಾರಸ್ವಾಮಿ ನಗೆಯ ಗೆಲವು ಬೀರಿದ್ದಾರೆ.

ಚೆನ್ನಪಟ್ಟಣದಿಂದ ಆತ್ಮವಿಶ್ವಾಸದೊಂದಿಗೆ ಕಣಕ್ಕಿಳಿದಿದ್ದ ಸಿ.ಪಿ.ಯೋಗೇಶ್ವರ್ ಹ್ಯಾಟ್ರಿಕ್ ಗೆಲವು ಸಾಧಿಸುವಲ್ಲಿ ವಿಫಲರಾಗಿದ್ದಾರೆ. ಕುಮಾರಸ್ವಾಮಿ ವಿರುದ್ಧ ಫಲಿತಾಂಶಕ್ಕೂ ಮುನ್ನವೇ ಸೋಲನ್ನು ಒಪ್ಪಿಕೊಂಡಿದ್ದ ಯೋಗೇಶ್ವರ್, ಸೋಲಿಗೆ ಸುಪಾರಿ ಕಾರಣವೆಂದೂ ಆರೋಪಿಸಿದ್ದರು. ಯಾವ ಪಕ್ಷದಿಂದಲೇ ಸ್ಪರ್ಧಿಸಿದರೂ ಗೆಲವು ಗ್ಯಾರಂಟಿ ಎಂದು ಬೀಗುತ್ತಿದ್ದ ಯೋಗೇಶ್ವರ್‌ಗೆ ಮುಖಭಂಗವಾಗಿದ್ದು, ಜನರು ಸೋಲಿಸುವ ಮೂಲಕ ರಾಜಕಾರಣಿಗೆ ಪಕ್ಷ ನಿಷ್ಠೆಯೂ ಮುಖ್ಯ ಎಂಬುದನ್ನು ಕಲಿಸಿಕೊಟ್ಟಿದ್ದಾರೆ.

ನಿರೀಕ್ಷೆಯಂತೆ ಕನಕಪುರದಲ್ಲಿ ಪವರ್ ಮಿನಿಸ್ಟರ್ ಡಿ.ಕೆ. ಶಿವಕುಮಾರ್ ಮತ್ತೊಮ್ಮೆ ಗೆಲವು ಸಾಧಿಸಿದ್ದು, ತಾವೇ ಅಲ್ಲಿ ಅನಭಿಷಿಕ್ತ ನಾಯಕನೆಂದು ಸಾಬೀತು ಪಡಿಸಿದ್ದಾರೆ. ಸುಮಾರು 79 ಸಾವಿರ ಮತಗಳಿಂದ ಅಂತರದಿಂದ ಡಿಕೆಶಿ ಗೆಲವು ಸಾಧಿಸಿರುವುದು ಮತ್ತೊಂದು ವಿಶೇಷ.

ಇನ್ನು ಮಾಗಡಿಯಲ್ಲಿಯೂ ಜೆಡಿಎಸ್‌ನ ಎ.ಮಂಜುನಾಥ್, ಕಾಂಗ್ರೆಸ್ ಅಭ್ಯರ್ಥಿ ಎಚ್.ಸಿ.ಬಾಲಕೃಷ್ಣ ಅವರ ವಿರುದ್ಧ ಗೆಲುವಿನ ನಗೆ ಬೀರಿದ್ದು, ನಾಲ್ಕರಲ್ಲಿ ಮೂರು ಕ್ಷೇತ್ರಗಳನ್ನು ಜೆಡಿಎಸ್ ಗೆದ್ದು ಕೊಂಡಿದೆ. ಈ ಕ್ಷೇತ್ರದಲ್ಲಿ ಮಂಜುನಾಥ್ 51 ಸಾವಿರ ಮತಗಳ ಅಂತರದಿಂದ ಗೆದ್ದಿದ್ದಾರೆ. ಬಾಲಕೃಷ್ಣ ಜೆಡಿಎಸ್‌ನಿಂದ ಬಂಡಾಯವಿದ್ದು, ಕಡೇ ಕ್ಷಣದಲ್ಲಿ ಕಾಂಗ್ರೆಸ್ ಕೈ ಹಿಡಿದಿದ್ದರಿಂದ ಈ ಕ್ಷೇತ್ರವೂ ಅಪಾರ ಕುತೂಹಲ ಕೆರಳಿಸಿತ್ತು.

click me!