
ಬೆಂಗಳೂರು : ವಿಧಾನಸಭಾ ಚುನಾವಣೆ ಮತದಾನಕ್ಕೆ ಕ್ಷಣಗಣನೆ ಶುರುವಾಗಿರುವಾಗಲೇ ಮತ್ತೊಂದು ಸಮೀಕ್ಷೆ ಪ್ರಕಟವಾಗಿದ್ದು, ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಹೇಳಿದೆ. ‘ಜನ್ ಕೀ ಬಾತ್’ ಸಮೀಕ್ಷೆ ಅನ್ವಯ ಬಿಜೆಪಿ 102-108 ಸ್ಥಾನ ಪಡೆಯಲಿದೆ.
ಇತ್ತೀಚೆಗೆ ಎಬಿಪಿ ನ್ಯೂಸ್ - ಲೋಕನೀತಿ ಸಿಎಸ್‌ಡಿಎಸ್ ಸಮೀಕ್ಷೆ ಕೂಡಾ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಹೇಳಿತ್ತು ‘ಜನ್ ಕೀ ಬಾತ್’ ಸಮೀಕ್ಷೆ ಅನ್ವಯ, ಈ ಬಾರಿ ಕರ್ನಾಟಕದಲ್ಲಿ ಅತಂತ್ರ ವಿಧಾನಸಭೆ ರಚನೆಯಾಗಲಿದೆ, ಆದರೆ ಬಿಜೆಪಿ ತನ್ನ ಸ್ಥಾನಬಲ ಏರಿಸಿಕೊಳ್ಳುವ ಮೂಲಕ 100 ಸ್ಥಾನಗಳನ್ನು ದಾಟಲಿದೆ. 224 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ 102 - 108 ಸ್ಥಾನಗಳನ್ನು ಪಡೆಯಲಿದೆ.
ಇನ್ನು ಆಡಳಿತಾರೂಢ ಕಾಂಗ್ರೆಸ್ 72-74 ಮತ್ತು ಕಿಂಗ್‌ಮೇಕರ್ ಆಗಲಿದೆ ಎಂದು ಹೇಳಲಾಗುತ್ತಿರುವ ಜೆಡಿಎಸ್ 42-44 ಸ್ಥಾನಗಳನ್ನು ಗೆಲ್ಲಲಿದೆ ಎಂದು ಸಮೀಕ್ಷೆ ಅಂದಾಜಿಸಿದೆ. 1.2 ಲಕ್ಷ ಮಂದಿಯನ್ನು ಮಾತನಾಡಿಸಿ ಸಮೀಕ್ಷೆ ಸಿದ್ಧ ಪಡಿಸಲಾಗಿದೆ. 2013ರಲ್ಲಿ ಕಾಂಗ್ರೆಸ್‌ನ ಬಲ 80ರಿಂದ 122 ಸ್ಥಾನಗಳಿಗೆ ಏರಿಕೆಯಾಗಿತ್ತು ಮತ್ತು ಬಿಜೆಪಿ 110 ಸ್ಥಾನಗಳಿಂದ 40ಕ್ಕೆ ಇಳಿಕೆಯಾಗಿತ್ತು. ಜನ್ ಕೀ ಬಾತ್ ಸಮೀಕ್ಷೆ ಪ್ರಕಾರ, ಈ ಚುನಾವಣೆಯಲ್ಲಿ ಬಿಜೆಪಿ ಸ್ಥಾನಗಳು ಏರಿಕೆಯಾಗುತ್ತಿವೆ, ಕಾಂಗ್ರೆಸ್ ಮತ್ತು ಜೆಡಿಎಸ್ ಸ್ಥಾನಗಳು ಇಳಿಕೆಯಾಗುತ್ತಿವೆ.
ಮತ ಹಂಚಿಕೆಯ ವಿಷಯದಲ್ಲಿ ಬಿಜೆಪಿ ಶೇ.40, ಕಾಂಗ್ರೆಸ್ ಶೇ.38 ಮತ್ತು ಜೆಡಿಎಸ್ ಶೇ.20 ಮತಗಳನ್ನು ಪಡೆಯಲಿದೆ ಎಂದು ಸಮೀಕ್ಷೆ ಅಂದಾಜಿಸಿದೆ. ಆದಾಗ್ಯೂ, ಯಾವುದೇ ಪಕ್ಷಕ್ಕೆ ಪೂರ್ಣ ಬಹುಮತ ದೊರೆಯುವುದಿಲ್ಲ. ಈ ಹಿಂದೆ ಎಬಿಪಿ ನ್ಯೂಸ್ - ಲೋಕನೀತಿ ಸಿಎಸ್ ಡಿಎಸ್ ಸಮೀಕ್ಷೆಯಲ್ಲೂ ಬಿಜೆಪಿಗೆ ಹೆಚ್ಚಿನ ಸ್ಥಾನ ನೀಡಲಾಗಿತ್ತು. ಆ ಸಮೀಕ್ಷೆಯಲ್ಲಿ ಬಿಜೆಪಿಗೆ 89 -95, ಕಾಂಗ್ರೆಸ್‌ಗೆ 85-91 ಮತ್ತು ಜೆಡಿಎಸ್‌ಗೆ32-38 ಸ್ಥಾನಗಳು ದೊರೆಯಲಿವೆ ಎಂದು ತಿಳಿಸಲಾಗಿತ್ತು.