ಪ್ರಮುಖ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸಿದ ಅತೀ ಕಿರಿಯ ಅಭ್ಯರ್ಥಿ ಇವರು

First Published Apr 28, 2018, 1:49 PM IST
Highlights

ರಾಜ್ಯದಲ್ಲಿ ಪ್ರಮುಖ ಪಕ್ಷವೊಂದರಿಂದ ಕಣಕ್ಕಿಳಿದಿರುವ ಅತಿ ಕಿರಿಯ ಅಭ್ಯರ್ಥಿ ಎಂಬ ಶ್ರೇಯಸ್ಸು ೨೭ ವರ್ಷದ ಎಚ್.ಎಸ್. ಮಂಜುನಾಥ್ ಅವರದ್ದು. ಇಂತಹ ಕಿರಿಯ ಅಭ್ಯರ್ಥಿ ಜೆಡಿಎಸ್ ನಿಂದ ಶಾಸಕರಾಗಿ ಮರು ಆಯ್ಕೆ ಬಯಸಿರುವ ಎನ್. ಗೋಪಾಲಯ್ಯ ಹಾಗೂ ಎರಡು ಬಾರಿ ಶಾಸಕರಾಗಿ ಅನುಭವ ಹೊಂದಿರುವ ಬಿಜೆಪಿ ಅಭ್ಯರ್ಥಿ ನೆ.ಲ.ನರೇಂದ್ರ ಬಾಬು ವಿರುದ್ಧ ಮಹಾಲಕ್ಷ್ಮೀ ಬಡಾವಣೆಯಲ್ಲಿ ಸೆಣಸಾಟಕ್ಕೆ ನಿಂತಿದ್ದಾರೆ.

ಬೆಂಗಳೂರು : ರಾಜ್ಯದಲ್ಲಿ ಪ್ರಮುಖ ಪಕ್ಷವೊಂದರಿಂದ ಕಣಕ್ಕಿಳಿದಿರುವ ಅತಿ ಕಿರಿಯ ಅಭ್ಯರ್ಥಿ ಎಂಬ ಶ್ರೇಯಸ್ಸು 27 ವರ್ಷದ ಎಚ್.ಎಸ್. ಮಂಜುನಾಥ್ ಅವರದ್ದು. ಇಂತಹ ಕಿರಿಯ ಅಭ್ಯರ್ಥಿ ಜೆಡಿಎಸ್ ನಿಂದ ಶಾಸಕರಾಗಿ ಮರು ಆಯ್ಕೆ ಬಯಸಿರುವ ಎನ್. ಗೋಪಾಲಯ್ಯ ಹಾಗೂ ಎರಡು ಬಾರಿ ಶಾಸಕರಾಗಿ ಅನುಭವ ಹೊಂದಿರುವ ಬಿಜೆಪಿ ಅಭ್ಯರ್ಥಿ ನೆ.ಲ.ನರೇಂದ್ರ ಬಾಬು ವಿರುದ್ಧ ಮಹಾಲಕ್ಷ್ಮೀ ಬಡಾವಣೆಯಲ್ಲಿ ಸೆಣಸಾಟಕ್ಕೆ ನಿಂತಿದ್ದಾರೆ. ‘ಹಳೆಯ ನೀರು ಹರಿಯಲು ಬಿಡಿ,  ಹೊಸ ಚಿಗುರಿಗೆ ಅವಕಾಶ ಕೊಡಿ’ ಎಂಬ ಘೋಷವ್ಯಾಖ್ಯೆಯೊಂದಿಗೆ ಅಬ್ಬರದ ಪ್ರಚಾರಕ್ಕಿಳಿದಿದ್ದಾರೆ. ಪ್ರತಿಸ್ಪರ್ಧಿಗಳು ಬೆವರು ಹರಿಸುವಂತೆ ಮಾಡಿದ್ದಾರೆ. ರಾಜಕೀಯ ಹಿನ್ನೆಲೆ ಇಲ್ಲದ, ಸಂಘಟನೆ ಮೂಲಕ ಬೆಳೆದು, ಇಂಧನ ಸಚಿವ ಡಿ.ಕೆ. ಶಿವಕುಮಾರ್ ಬೆಂಬಲ ಗಳಿಸಿದ ಮಂಜುನಾಥ್ ಎನ್‌ಎಸ್‌ಯುಐ ಅಧ್ಯಕ್ಷರಾಗಿ ಹಲವು ವಿದ್ಯಾರ್ಥಿ ಹೋರಾಟ ಸಂಘಟಿಸಿದ್ದರು. ಯುವಕರಿಗೆ ಮನ್ನಣೆ ನೀಡಬೇಕು ಎಂಬ ರಾಹುಲ್ ಗಾಂಧಿ ಮಾನದಂಡದ ಪರಿಣಾಮವಾಗಿ ಟಿಕೆಟ್ ಗಿಟ್ಟಿಸಿದ ಮಂಜುನಾಥ್ ಚುನಾವಣೆಗೆ ಮಾಡಿಕೊಂಡಿರುವ ಸಿದ್ಧತೆ ಬಗ್ಗೆ ಹೇಳಿದ್ದು ಇಷ್ಟು.


ರಾಜ್ಯದ ಅತಿ ಕಿರಿಯ ಅಭ್ಯರ್ಥಿಯಾಗಿರುವ ತಮಗೆ ಕ್ಷೇತ್ರದಲ್ಲಿ ಸ್ಪಂದನೆ ಹೇಗಿದೆ?

ಈಗಾಗಲೇ ಶೇ.35 ರಷ್ಟು ಕ್ಷೇತ್ರವನ್ನು ಸಂಚರಿಸಿದ್ದೇನೆ. ಸಿದ್ದರಾಮಯ್ಯ ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಜನ ಸಾಕಷ್ಟು ತೃಪ್ತಿ ಹೊಂದಿದ್ದಾರೆ. ಪಕ್ಷಕ್ಕೆ ಉತ್ತಮ ಸ್ಪಂದನೆ ದೊರೆತಿದ್ದು, ಜತೆಗೆ ಡಿ.ಕೆ.ಶಿವಕುಮಾರ್ ಅವರ ಬೆಂಬಲ ಹಾಗೂ ಕ್ಷೇತ್ರದ ಉಸ್ತುವಾರಿ ಹೊಂದಿರುವ ಡಿ.ಕೆ. ಸುರೇಶ್ ಅವರ ಬೆಂಬಲ ನನ್ನ ಜತೆಗಿದೆ. ಕ್ಷೇತ್ರದ ಜನತೆ ಹೊಸ ಚಿಗುರಿಗೆ ಅವಕಾಶ ನೀಡುತ್ತಾರೆ ಎಂಬ
ತುಂಬು ವಿಶ್ವಾಸವಿದೆ.

ಹಿರಿಯರನ್ನು ಹಿಂದಿಕ್ಕಿ ಟಿಕೆಟ್ ಗಿಟ್ಟಿಸಿದ್ದೀರಿ, ಅಸಮಾಧಾನ, ಬಂಡಾಯದ ಅಲೆಯನ್ನು ಹೇಗೆ ಎದುರಿಸುವಿರಿ?

ಅಸಮಾಧಾನ ಇದ್ದದ್ದು ನಿಜ. ಆದರೆ, ಈಗ ಇಲ್ಲ. ಗಿರೀಶ್ ನಾಶಿ ಅವರು ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಅವರ ಜತೆ ಯಶೋಮತಿ ಠಾಕೂರ್, ಡಿ.ಕೆ. ಶಿವಕುಮಾರ್ ಅವರು ಚರ್ಚೆ ಮಾಡಿ ಶುಕ್ರವಾರ ನಾಮಪತ್ರ ವಾಪಸ್ಸು ಪಡೆದಿದ್ದಾರೆ. ಅವರು ಶನಿವಾರದಿಂದ ನಮ್ಮ ಜತೆಯಲ್ಲೇ ಬಂದು ಪ್ರಚಾರ ಮಾಡುವ ಭರವಸೆ ನೀಡಿದ್ದಾರೆ. ಹೀಗಾಗಿ ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಇಬ್ಬರು ಪಾಲಿಕೆ ಸದಸ್ಯರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ರಾಜ್ಯಸಭಾ ಸದಸ್ಯ ಚಂದ್ರಶೇಖರ್ ಸೇರಿ ಎಲ್ಲರೂ ಬೆಂಬಲವಾಗಿ ನಿಂತಿದ್ದಾರೆ.

ಅನುಭವಿ ಪ್ರತಿಸ್ಪರ್ಧಿಗಳ ಮಣಿಸಲು ನಿಮ್ಮಿಂದಾಗುವುದೇ?

ಹಾಲಿ ಶಾಸಕ ಜೆಡಿಎಸ್‌ನ ಗೋಪಾಲಯ್ಯ ಅಭಿವೃದ್ಧಿ ಮಾಡಿದ್ದೇವೆ ಎಂದು ಹೇಳುತ್ತಾರೆ. ಆದರೆ, ಅದು ಸುಳ್ಳು ಎಂಬುದು ಜನರಿಗೆ ಗೊತ್ತಿದೆ. ಜನರಿಗೆ ನಿಜ ಅಭಿವೃದ್ಧಿ ಬೇಕಿದೆ. ಹೀಗಾಗಿ ನಾನು ಮಾಡಲು ಇಚ್ಛಿಸಿರುವ ಕಾರ್ಯಕ್ರಮಗಳನ್ನು ಜನರ ಮುಂದಿಡುತ್ತೇನೆ. ಮಹಾಲಕ್ಷ್ಮೀ ಲೇಔಟ್‌ನಲ್ಲಿ ಜೆಡಿಎಸ್‌ನ ೩ ಸ್ಥಾಯಿ ಸಮಿತಿ ಅಧ್ಯಕ್ಷರು, ಒಬ್ಬರು ಉಪಮೇಯರ್, ಶಾಸಕರು ಸೇರಿದಂತೆ 400 ಕೋಟಿ ರು. ಅನುದಾನ ತಂದಿದ್ದಾರೆ. ಆದರೆ, ಅಭಿವೃದ್ಧಿಯಾಗಿಲ್ಲ. ಇದರರ್ಥ ಹಣ ದುರ್ಬಳಕೆಯಾಗಿದೆ ಎಂದೇ ಅಲ್ಲವೇ?. ಇನ್ನುನೆ.ಲ. ನರೇಂದ್ರ ಬಾಬು ಅವರ ಪಕ್ಷನಿಷ್ಠೆ ಹಾಗೂ ವ್ಯಕ್ತಿತ್ವವನ್ನು ಕಂಡು ಕ್ಷೇತ್ರದ ಜನ ರೋಸಿ ಹೋಗಿದ್ದಾರೆ.

 ಅಭಿವೃದ್ಧಿ ಮಾಡುತ್ತೇನೆ ಅಂತೀರಲ್ಲ. ನಿಮ್ಮ ಯೋಜನೆಗಳೇನು?

ಕ್ಷೇತ್ರದ ತುಂಬೆಲ್ಲಾ ಸಂಚಾರ ಮಾಡಿ ಸಮಸ್ಯೆಗಳನ್ನು ಪಟ್ಟಿ ಮಾಡುತ್ತಿದ್ದೇನೆ. ಕ್ಷೇತ್ರದಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದೆ. ಹೀಗಾಗಿ ನೀರು ಭದ್ರತಾ ಕಾಯ್ದೆ ತರಬೇಕು. ಪಾದಚಾರಿ ಮಾರ್ಗ, ರಸ್ತೆ, ಉದ್ಯಾನಗಳ ಅಭಿವೃದ್ಧಿ, ಆರೋಗ್ಯ ಕೇಂದ್ರಗಳ ಅಭಿವೃದ್ಧಿಗೆ ಒತ್ತು ನೀಡುತ್ತೇನೆ. ಉಬ್ಬು-ತಗ್ಗುಗಳ ಪ್ರದೇಶವಾಗಿರುವ ಕ್ಷೇತ್ರದಲ್ಲಿ ಸ್ಯಾನಿಟರಿ ಸಮಸ್ಯೆ, ಸಂಪರ್ಕ ರಸ್ತೆಗಳ ನಿರ್ಮಾಣಕ್ಕೆ ಆದ್ಯತೆ ನೀಡುತ್ತೇನೆ.

ನಾನು ಕ್ಷೇತ್ರದಲ್ಲಿ ಪ್ರಚಾರ ಮಾಡುವ ಅಗತ್ಯವೇ ಇಲ್ಲ ಹಾಗೆಯೇ ಗೆಲ್ಲುತ್ತೇನೆ ಎಂದು ಕೆ. ಗೋಪಾಲಯ್ಯ ಹೇಳಿದ್ದರು?

ಹೌದು, ನಾಮಪತ್ರ ಸಲ್ಲಿಕೆ ಮಾಡಿ ಹೊರ ಬಂದು ಈ ಮಾತು ಹೇಳಿದ್ದರು. ಜನ ಮತ ಹಾಕುವ ಮೊದಲು ಯೋಚನೆ ಮಾಡುತ್ತಾರೆ. ಶೇ.80 ರಷ್ಟು ಜನ ಅಭ್ಯರ್ಥಿಯ ವ್ಯಕ್ತಿತ್ವ ನೋಡಿ ಮತ ಹಾಕುತ್ತಾರೆ. ಶೇ. ೨೦ ರಷ್ಟು ಮತಗಳು ಮಾತ್ರ ರಾಜಕೀಯ ಆಮಿಷಗಳಿಗೆ ಮತ ನೀಡುತ್ತಾರೆ. ಹೀಗಾಗಿ ಇಬ್ಬರ ವ್ಯಕ್ತಿತ್ವಗಳನ್ನೂ ನೋಡಿರುವ ಜನ ನನ್ನ ಪರ ಒಲವು ತೋರಿದ್ದಾರೆ. ಈಗ ಕ್ಷೇತ್ರದಲ್ಲಿ ನನಗೆ ದೊರೆಯುತ್ತಿರುವ ಬೆಂಬಲದಿಂದಾಗಿ ನಿದ್ದೆಗೆಟ್ಟಿದ್ದಾರೆ. ಹಗಲು-ರಾತ್ರಿ ಪ್ರಚಾರ ಮಾಡುತ್ತಿದ್ದಾರೆ ಎಂದರು.

click me!