ಇಂದಿನಿಂದ 2 ದಿನಗಳ ಕಾಲ ರಾಜ್ಯದಲ್ಲಿ ರಾಹುಲ್ ಹವಾ

First Published May 3, 2018, 7:52 AM IST
Highlights

ರಾಜ್ಯದಲ್ಲಿ 6 ಹಂತದ ಜನಾಶೀರ್ವಾದ ಯಾತ್ರೆ ಬಳಿಕ 2ನೇ ಸುತ್ತಿನ ಪ್ರಚಾರ ಕೈಗೊಂಡಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಇಂದಿನಿಂದ 2 ದಿನಗಳ ಕಾಲ ಬೀದರ್, ಕಲಬುರಗಿ, ಗದಗ, ಹಾವೇರಿ ಜಿಲ್ಲೆಗಳ ವಿವಿಧೆಡೆ ಭರ್ಜರಿ ಪ್ರಚಾರ ಕೈಗೊಳ್ಳಲಿದ್ದಾರೆ. 

ಬೀದರ್ : ರಾಜ್ಯದಲ್ಲಿ 6 ಹಂತದ ಜನಾಶೀರ್ವಾದ ಯಾತ್ರೆ ಬಳಿಕ 2ನೇ ಸುತ್ತಿನ ಪ್ರಚಾರ ಕೈಗೊಂಡಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಇಂದಿನಿಂದ 2 ದಿನಗಳ ಕಾಲ ಬೀದರ್, ಕಲಬುರಗಿ, ಗದಗ, ಹಾವೇರಿ ಜಿಲ್ಲೆಗಳ ವಿವಿಧೆಡೆ ಭರ್ಜರಿ ಪ್ರಚಾರ ಕೈಗೊಳ್ಳಲಿದ್ದಾರೆ. 
ಜನಾಶೀರ್ವಾದ ಯಾತ್ರೆ ಬಳಿಕ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಎರಡನೇ ಬಾರಿಗೆ ಚುನಾವಣಾ ಪ್ರಚಾರಕ್ಕಾಗಿ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಇಂದು ನಾಳೆ ಎರಡು ದಿನಗಳ ಕಾಲ ಬೀದರ್, ಕಲಬುರ್ಗಿ, ಗದಗ ಹಾಗೂ ಹಾವೇರಿ ಜಿಲ್ಲೆಗಳಲ್ಲಿ ಅವರು ಪ್ರಚಾರ ಕಾರ್ಯ ಹಮ್ಮಿಕೊಂಡಿದ್ದಾರೆ. ಪ್ರಚಾರಕ್ಕಾಗಿ ಏ.26 ಮತ್ತು 27 ರಂದು ದಕ್ಷಿಣ ಭಾಗದಲ್ಲಿ ಅಬ್ಬರದ ಪ್ರಚಾರ ನಡೆಸಿದ್ದರು. ಇದೀಗ ಚುನಾವಣಾ ದಿನಾಂಕ ಹತ್ತಿರವಾಗುತ್ತಿದ್ದಂತೆ ಮೇ 3 ಹಾಗೂ 4ರಂದು ನಾಲ್ಕು ಜಿಲ್ಲೆಗಳಲ್ಲಿ ಪ್ರಚಾರ ಮಾಡಲು ಏಳನೇ ಬಾರಿಗೆ ರಾಜ್ಯಕ್ಕೆ ಕಾಲಿಡುತ್ತಿದ್ದಾರೆ.
ಮೊದಲಿಗೆ ಗುರುವಾರ ಬೆಳಗ್ಗೆ 11.30 ಕ್ಕೆ ವಿಶೇಷ ವಿಮಾನದ ಮೂಲಕ ಬೀದರ್‌ಗೆ ಆಗಮಿಸಲಿರುವ ಅವರು, ಹೆಲಿಕಾಪ್ಟರ್ ಮೂಲಕ ಮಧ್ಯಾಹ್ನ 12 ಗಂಟೆಗೆ ಔರಾದ್‌ಗೆ ತಲುಪಲಿದ್ದಾರೆ. ಮಧ್ಯಾಹ್ನ 12.30ಕ್ಕೆ ಔರಾದ್ ನಲ್ಲಿ ನಡೆಯಲಿರುವ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಲಿದ್ದಾರೆ.
ಬಳಿಕ ಅಲ್ಲಿಂದ ಮಧ್ಯಾಹ್ನ 1.20ಕ್ಕೆ ಭಾಲ್ಕಿಗೆ ತೆರಳಲಿದ್ದಾರೆ. ಮಧ್ಯಾಹ್ನ 2.20ಕ್ಕೆ ಬೀದರ್‌ನ ಭಾಲ್ಕಿಯಲ್ಲಿ ನಡೆಯಲಿರುವ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಬಳಿಕ 3.30ಕ್ಕೆ ಹುಮ್ನಾಬಾದ್‌ಗೆ ತೆರಳಿ ಸಂಜೆ 4ರಿಂದ 5 ಗಂಟೆವರೆಗೆ ಹುಮ್ನಾಬಾದ್‌ನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿ ಚುನಾವಣಾ ಪ್ರಚಾರ ಮಾಡಲಿದ್ದಾರೆ.
ಎರಡನೇ ದಿನವಾದ ಶುಕ್ರವಾರ ಕಲಬುರ್ಗಿ, ಗದಗ ಹಾಗೂ ಹಾವೇರಿಯಲ್ಲಿ ಪ್ರಚಾರ ನಡೆಸಲಿದ್ದಾರೆ. ಕಲಬುರ್ಗಿ ಜಿಲ್ಲೆಯ ಕಲಗಿಗೆ ಬೆಳಗ್ಗೆ 11 ಗಂಟೆಗೆ ಹೆಲಿಕಾಪ್ಟರ್ ಮೂಲಕ ಆಗಮಿಸಲಿರುವ ಅವರು, ಮಧ್ಯಾಹ್ನ 12 ಗಂಟೆಗೆ ಕಲಬುರ್ಗಿಯ ಕಲಗಿಯಲ್ಲಿ ನಡೆಯಲಿರುವ ಬೃಹತ್ ಸಾರ್ವಜನಿಕ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.

1.10ಕ್ಕೆ ಹೆಲಿಕಾಪ್ಟರ್ ಮೂಲಕ ಬೀದರ್‌ಗೆ ತೆರಳಿ, ಮಧ್ಯಾಹ್ನ 2.20 ಗಂಟೆಗೆ ಬೀದರ್‌ನಿಂದ ಹುಬ್ಬಳ್ಳಿಗೆ ವಿಶೇಷ ವಿಮಾನದಲ್ಲಿ ತೆರಳಲಿದ್ದಾರೆ. ಅಲ್ಲಿಂದ ಗದಗದ ಗಜೇಂದ್ರಗಢಕ್ಕೆ ಹೆಲಿಕಾಪ್ಟರ್ ಮೂಲಕ ತಲುಪಿ 3.45ಕ್ಕೆ ಗಜೇಂದ್ರಗಢದಲ್ಲಿ ಕಾರ್ಯಕರ್ತರ ಸಮಾವೇಶ ಉದ್ದೇಶಿಸಿ  ಮಾತನಾಡಲಿದ್ದಾರೆ. ಬಳಿಕ ಹಾವೇರಿಯ ಶಿಗ್ಗಾವಿಗೆ ಹೆಲಿಕಾಪ್ಟರ್‌ನಲ್ಲಿ ತೆರಳಿ ಸಂಜೆ 6 ಗಂಟೆಗೆ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಸಂಜೆ 7 ಗಂಟೆಗೆ ಶಿಗ್ಗಾವಿಯಿಂದ ಹುಬ್ಬಳ್ಳಿ ವಿಮಾನ ನಿಲ್ದಾಣದ ಮೂಲಕ ದೆಹಲಿಗೆ ವಾಪಸಾಗಲಿದ್ದಾರೆ.

click me!