ಮೋದಿ ಮತ್ತು ಯಡಿಯೂರಪ್ಪರಿಂದ ಕಾಂಗ್ರೆಸ್ ಕೋಟೆ ಛಿದ್ರ

First Published May 16, 2018, 12:28 PM IST
Highlights

ಈ ಬಾರಿಯ ವಿಧಾನಸಭೆ ಚುನಾವಣೆ ಮಧ್ಯ ಕರ್ನಾಟಕದ ವಿಭಿನ್ನ ಸಂಸ್ಕೃತಿಯ ನೆಲೆಯಲ್ಲಿ ‘ಕಮಲ’ ಅರಳಲು ಜಾಗ ಮಾಡಿಕೊಟ್ಟಿದೆ. ಹಲವೆಡೆ ಜಾತಿ ಲೆಕ್ಕಾಚಾರಗಳು ಪೂರ್ಣ ಪ್ರಮಾಣದಲ್ಲಿ ಕೆಲಸ ಮಾಡಿದ್ದರೆ, ಒಂದಿಷ್ಟು ಕಡೆ ಸ್ಥಳೀಯ ಪ್ರಾಬಲ್ಯ ಹಾಗೂ ಸಮಸ್ಯೆಗಳಿಗೆ ಮತದಾರ ಮಣೆ ಹಾಕಿದ್ದಾನೆ.

ಚಿತ್ರದುರ್ಗ: ಈ ಬಾರಿಯ ವಿಧಾನಸಭೆ ಚುನಾವಣೆ ಮಧ್ಯ ಕರ್ನಾಟಕದ ವಿಭಿನ್ನ ಸಂಸ್ಕೃತಿಯ ನೆಲೆಯಲ್ಲಿ ‘ಕಮಲ’ ಅರಳಲು ಜಾಗ ಮಾಡಿಕೊಟ್ಟಿದೆ. ಹಲವೆಡೆ ಜಾತಿ ಲೆಕ್ಕಾಚಾರಗಳು ಪೂರ್ಣ ಪ್ರಮಾಣದಲ್ಲಿ ಕೆಲಸ ಮಾಡಿದ್ದರೆ, ಒಂದಿಷ್ಟು ಕಡೆ ಸ್ಥಳೀಯ ಪ್ರಾಬಲ್ಯ ಹಾಗೂ ಸಮಸ್ಯೆಗಳಿಗೆ ಮತದಾರ ಮಣೆ ಹಾಕಿದ್ದಾನೆ.

 ಶಿವಮೊಗ್ಗ ಜಿಲ್ಲೆಯಲ್ಲಿ ಭದ್ರಾವತಿ ಹೊರತುಪಡಿಸಿ ಉಳಿದ 6 ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿದೆ. 2013ರಲ್ಲಿ 3 ಶಾಸಕರನ್ನು ಹೊಂದಿದ್ದ ಜೆಡಿಎಸ್ ಈ ಬಾರಿ ಒಂದೂ ಸ್ಥಾನ ಗೆದ್ದಿಲ್ಲ. ಶಿಕಾರಿಪುರದಲ್ಲಿ ಯಡಿಯೂರಪ್ಪ ತೀರ್ಥಹಳ್ಳಿಯಲ್ಲಿ ಆರಗ ಜ್ಞಾನೇಂದ್ರ ಗೆದ್ದಿದ್ದಾರೆ. ಅಮಿತ್ ಶಾ ಅಡಕೆಯ ಬಗ್ಗೆ ಮಾತನಾಡಿದ್ದು ಗುರಿತಾಕಿದೆ. ಸಾಗರದಲ್ಲಿ ಕಾಗೋಡು ತಿಮ್ಮಪ್ಪ ಸೋಲಿಗೆ ಅತಿಯಾದ ಆತ್ಮವಿಶ್ವಾಸವೇ ಕಾರಣ ಎನ್ನಬಹುದು. 

ಸಹೋದರರ ಸವಾಲ್ ಎದುರಿಸುತ್ತಿದ್ದ ಸೊರಬದಲ್ಲಿ ಜನ ಕುಮಾರ್ ಬಂಗಾರಪ್ಪರನ್ನು ಗೆಲ್ಲಿಸಿದ್ದಾರೆ. ಶಿವಮೊಗ್ಗ ಗ್ರಾಮಾಂತರ  ಕ್ಷೇತ್ರದಲ್ಲಿ ಬಿಜೆಪಿಯ ಅಶೋಕ್‌ನಾಯ್ಕ್ ಗೆದ್ದಿದ್ದಾರೆ. ಮೋದಿ ಪ್ರಭಾವದಿಂದ ಕೆ.ಎಸ್. ಈಶ್ವರಪ್ಪ ಅವರು ಒಂದು ಲಕ್ಷಕ್ಕೂ ಹೆಚ್ಚು ಮತಗಳಿಸಿ ಗೆದ್ದಿದ್ದಾರೆ. ಭದ್ರಾವತಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಬಿ.ಕೆ. ಸಂಗಮೇಶ್ವರ ಗೆಲುವು ಪಡೆದಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಯಡಿಯೂರಪ್ಪ ಹವಾ ಕೆಲಸ ಮಾಡಿದೆ. ಲಿಂಗಾಯತ ಸಮುದಾಯ ಬಿಜೆಪಿ ಕಡೆ ವಾಲಿದ ಪರಿಣಾಮ ಘಟಾನುಘಟಿಗಳೆಲ್ಲ ಮೂಲೆ ಗುಂಪಾಗಿದ್ದಾರೆ. ಶೃಂಗೇರಿಯಲ್ಲಿ ಸ್ಥಳೀಯ ಕಾರಣಕ್ಕೆ ಬಿಜೆಪಿಯ ಡಿ.ಎನ್. ಜೀವರಾಜ್ ಸೋತಿದ್ದು ಕಾಂಗ್ರೆಸ್‌ನ ಟಿ.ಡಿ.ರಾಜೇಗೌಡ ಜಯಸಾಧಿಸಿದ್ದಾರೆ. ಕಡೂರಿನಲ್ಲಿ ಬೆಳ್ಳಿ ಪ್ರಕಾಶ ಮಂದೆ ದತ್ತ ಸೋಲುಂಡಿದ್ದಾರೆ. ಮೂಡಿಗೆರೆಯಲ್ಲಿ  ಮೋಟಮ್ಮ ಅವರನ್ನು ಎಂ.ಪಿ. ಕುಮಾರಸ್ವಾಮಿ ಸೋಲಿಸಿದ್ದಾರೆ. ಚಿಕ್ಕಮಗಳೂರಲ್ಲಿ ಸಿ.ಟಿ.ರವಿ ಗೆದ್ದಿದ್ದಾರೆ.

ದಾವಣಗೆರೆ ಜಿಲ್ಲೆಯಲ್ಲಿ ಕಾಂಗ್ರೆಸ್‌ಗೆ ಮತದಾರ ಪೆಟ್ಟು ನೀಡಿದ್ದಾನೆ. ಕಳೆದ ಬಾರಿ 7 ಮಂದಿ ಕಾಂಗ್ರೆಸ್ ಹಾಗೂ ಓರ್ವ ಜೆಡಿಎಸ್ ಸದಸ್ಯರಿಗೆ ಜಿಲ್ಲೆ ಜಾಗ ಮಾಡಿಕೊಟ್ಟಿತ್ತು. ಈ ಬಾರಿ ಸಚಿವ ಮಲ್ಲಿಕಾರ್ಜುನ ಸೋಲುಂಡಿರುವುದು ದಾವಣಗೆರೆ ಮಟ್ಟಿಗೆ ಆಘಾತಕಾರಿ ಸಂಗತಿ. ಈ ಬಾರಿ 6  ಮಂದಿ ಬಿಜೆಪಿಯವರು ಗೆದ್ದಿದ್ದಾರೆ. ಚಿತ್ರದುರ್ಗದಲ್ಲಿ ಕಳೆದ ಬಾರಿ 4 ಕಾಂಗ್ರೆಸ್, 1 ಬಿಜೆಪಿ ಹಾಗೂ 1 ಬಿಎಸ್ಸಾರ್  ಅಭ್ಯರ್ಥಿಗಳು ಗೆದ್ದಿದ್ದರು.ಈ ಬಾರಿ ಕಾಂಗ್ರೆಸ್ ಚಳ್ಳಕೆರೆಗೆ ಸೀಮಿತವಾಗಿದೆ. ಐದು ಕ್ಷೇತ್ರದಲ್ಲಿ ಬಿಜೆಪಿ ಗೆದ್ದಿದೆ.

click me!