
ಬೆಂಗಳೂರು[ಮೇ.19]: ಬಿ.ಎಸ್ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಎಚ್.ಡಿ ಕುಮಾರಸ್ವಾಮಿ ಸೋಮವಾರ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವುದಾಗಿ ಹೇಳಿದ್ದರು. ಇದೀಗ ಎಚ್ಡಿಕೆ ಪ್ರಮಾಣವಚನ ಎರಡು ದಿನ ಮುಂದಕ್ಕೆ ಹೋಗಿದ್ದು, ಬುಧವಾರ ಮುಖ್ಯಮಂತ್ರಿಯಾಗಲಿದ್ದಾರೆ ಎನ್ನಲಾಗಿದೆ.
ಮೇ.21 ಅಂದರೆ ಸೋಮವಾರ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಪುಣ್ಯತಿಥಿ ಹಿನ್ನಲೆಯಲ್ಲಿ ಎಚ್ಡಿಕೆ ಪದಗ್ರಹಣ ಬುಧವಾರಕ್ಕೆ ಮುಂದೂಡಲಾಗಿದೆ. ಅಶೋಕ ಹೋಟೆಲ್’ನಲ್ಲಿ ನಡೆದ ಕಾಂಗ್ರೆಸ್-ಜೆಡಿಎಸ್ ನಾಯಕರ ಸಭೆ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಎಚ್ಡಿಕೆ, ಸೋಮವಾರ ರಾಜೀವ್ ಗಾಂಧಿಯವರ ಪುಣ್ಯತಿಥಿ ಕಾರ್ಯಕ್ರಮವಿದ್ದು, ಅಂದು ಪ್ರಮಾಣವಚನ ಕಾರ್ಯಕ್ರಮ ಬೇಡವೆಂದು ಕಾಂಗ್ರೆಸ್ ನಾಯಕರು ತೀರ್ಮಾನಿಸಿದ್ದಾರೆ. ಹೀಗಾಗಿ ಪದಗ್ರಹಣ ಕಾರ್ಯಕ್ರಮ ಬುಧವಾರಕ್ಕೆ ಮುಂದೂಡಲಾಗಿದೆ ಎಂದು ಹೇಳಿದರು.
ಎಚ್ಡಿಕೆ ಪದಗ್ರಹಣ ಸಂದರ್ಭದಲ್ಲಿ ರಾಷ್ಟ್ರೀಯ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಾಯಾವತಿ, ಗುಲಾಮ್ ನಬಿ ಆಜಾದ್ ಸೇರಿದಂತೆ ಹಲವರು ಭಾಗವಹಿಸುವ ಸಾಧ್ಯತೆಯಿದೆ. ಕುಮಾರಸ್ವಾಮಿ ಸಚಿವ ಸಂಪುಟದಲ್ಲಿ ಯಾರಿಗೆ ಯಾವ ಖಾತೆ ಸಿಗಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.