ಗೌಡರ ವಿರುದ್ಧ ವಾಗ್ದಾಳಿ ನಿಲ್ಲಿಸಲು ಕಾಂಗ್ರೆಸ್ ನಾಯಕರ ಮನವಿ

Published : May 02, 2018, 07:29 AM IST
ಗೌಡರ ವಿರುದ್ಧ ವಾಗ್ದಾಳಿ ನಿಲ್ಲಿಸಲು ಕಾಂಗ್ರೆಸ್ ನಾಯಕರ ಮನವಿ

ಸಾರಾಂಶ

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಆದಿ ಯಾಗಿ ಕಾಂಗ್ರೆಸ್ ನಾಯಕರು ಈ ಚುನಾವಣೆಯಲ್ಲಿ ಜೆಡಿಎಸ್ ಹಾಗೂ ಬಿಜೆಪಿ ನಡುವಿನ ಹೊಂದಾಣಿಕೆಯನ್ನು ಸ್ಥಾಪಿಸುವ ಭರದಲ್ಲಿ ದೇವೇಗೌಡರ ಕುಟುಂಬದ ವಿರುದ್ಧ ಹರಿಹಾಯುತ್ತಿರುವುದು ಕೆಲ ಕಾಂಗ್ರೆಸ್ ನಾಯಕರಿಗೆ ಅಪಥ್ಯವಾಗಿದೆ.

ಬೆಂಗಳೂರು : ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಆದಿ ಯಾಗಿ ಕಾಂಗ್ರೆಸ್ ನಾಯಕರು ಈ ಚುನಾವಣೆಯಲ್ಲಿ ಜೆಡಿಎಸ್ ಹಾಗೂ ಬಿಜೆಪಿ ನಡುವಿನ ಹೊಂದಾಣಿಕೆಯನ್ನು ಸ್ಥಾಪಿಸುವ ಭರದಲ್ಲಿ ದೇವೇಗೌಡರ ಕುಟುಂಬದ ವಿರುದ್ಧ ಹರಿಹಾಯುತ್ತಿರುವುದು ಕೆಲ ಕಾಂಗ್ರೆಸ್ ನಾಯಕರಿಗೆ ಅಪಥ್ಯವಾಗಿದೆ.
ಹಳೆ ಮೈಸೂರು ಭಾಗದಲ್ಲಿ ಬೇರುಗಳನ್ನು ಹೊಂದಿರುವ ಕಾಂಗ್ರೆಸ್ ನಾಯಕರು ಈ ಪ್ರಮಾಣದಲ್ಲಿ ಕಾಂಗ್ರೆಸ್ ಪಕ್ಷ ಜೆಡಿಎಸ್ ಹಾಗೂ ಆ ಪಕ್ಷದ ವರಿಷ್ಠರ ವಿರುದ್ಧ ಮುಗಿ ಬಿದ್ದಿರುವುದು ಕ್ಷೇತ್ರದಲ್ಲಿ ತಮ್ಮ ಹಿತಾಸಕ್ತಿ ಗಳಿಗೆ ಹಾನಿಯುಂಟುಮಾಡುವುದೇ ಎಂಬ ಗುಮಾನಿಗೆ ಒಳಗಾಗಿದ್ದಾರೆ. ಅಲ್ಲದೆ, ಈ ನಿಲುವು ಪುನರ್ ಪರಿಶೀಲಿಸುವಂತೆರಾಜ್ಯ ಉಸ್ತುವಾರಿ ವೇಣುಗೋಪಾಲ್  ಮುಂದೆ ಅಹವಾಲು ತೋಡಿಕೊಂಡಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ

ಜೆಡಿಎಸ್ ಅನ್ನು ಬಿಜೆಪಿಯ ಬಿ ಟೀಮ್ ಎಂದು ಖುದ್ದು ರಾಹುಲ್ ಅವರೇ ಗುರುತಿಸುವುದರೊಂದಿಗೆ ಜೆಡಿಎಸ್ ಮೇಲಿನ ವಾಗ್ದಾಳಿ ಮತ್ತೊಂದು ಹಂತಕ್ಕೆ ಹೋಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಂತೂ ಜೆಡಿಎಸ್ ಹಾಗೂ ಆ ಪಕ್ಷದ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ಆರಂಭಿಸಿದ್ದಾರೆ. ಇದು ಜೆಡಿಎಸ್ ಹಾಗೂ ಬಿಜೆಪಿಯು ಚುನಾವಣೆಯಲ್ಲಿ ಮಾಡಿಕೊಂಡಿದೆ ಎನ್ನಲಾದ ಒಳ ಒಪ್ಪಂದವನ್ನು ಮತದಾರರ ಮುಂದೆ ತೆರೆದಿಡುವ ಉದ್ದೇಶ ಹೊಂದಿದೆ. ಆದರೆ, ಈ ಉದ್ದೇಶ ಸಾಧನೆಯ ಭರದಲ್ಲಿ ಒಕ್ಕಲಿಗ ಸಮುದಾಯದ ಮೇರು ನಾಯಕ ದೇವೇಗೌಡ, ಕುಮಾರಸ್ವಾಮಿ ಅವರ ವಿರುದ್ಧ ವೈಯಕ್ತಿಕ  ಆರೋಪಗಳನ್ನು ಮಾಡುತ್ತಿದ್ದಾರೆ. ಇದನ್ನು ಜೆಡಿಎಸ್ 
ಬಳಸಿಕೊಂಡು ಕಾಂಗ್ರೆಸ್ ಇಡೀ ಸಮುದಾಯದ ವಿರುದ್ಧವಿದೆ ಎಂದು ಬಿಂಬಿಸುತ್ತಿದೆ. ಅಲ್ಲದೆ, ಸಾಮಾಜಿಕ  ಜಾಲತಾಣಗಳಲ್ಲಿ  ದೇವೇಗೌಡ, ಕುಮಾರಸ್ವಾಮಿ ವಿರುದ್ಧ ಸಿದ್ದರಾಮಯ್ಯ ಅವರು ಮಾಡುತ್ತಿರುವ ವಾಗ್ದಾಳಿಯನ್ನು ವೈರಲ್ ಮಾಡಲಾಗುತ್ತಿದೆ.

ತನ್ಮೂಲಕ ಇಡೀ ಸಮುದಾಯ ಕಾಂಗ್ರೆಸ್ ವಿರುದ್ಧ ನಿಲ್ಲುವಂತೆ ಮಾಡಿದೆ. ಒಂದು ಕಡೆ ಪ್ರಧಾನಿ ನರೇಂದ್ರ ಮೋದಿ ಆದಿಯಾಗಿ ಬಿಜೆಪಿ ನಾಯಕರು ದೇವೇಗೌಡರ ಬಗ್ಗೆ ಗೌರವಯುತ ಮಾತುಗಳನ್ನು ಆಡುತ್ತಿದ್ದರೆ, ಮತ್ತೊಂದು ಕಡೆ ಕಾಂಗ್ರೆಸ್ ನಾಯಕರು ದೇವೇಗೌಡರ ವಿರುದ್ಧ ವಾಗ್ದಾಳಿ ನಡೆಸುತ್ತಿರುವುದು ಸಮುದಾಯಕ್ಕೆ ತಪ್ಪು ಸಂದೇಶ ರವಾನೆಯಾಗುವಂತೆ ಮಾಡುತ್ತಿದೆ.

ಹೀಗಾಗಿ ಜೆಡಿಎಸ್ ನಾಯಕರ ಮೇಲೆ ತೀರಾ ವೈಯಕ್ತಿಕ ನೆಲೆಯಲ್ಲಿ ವಾಗ್ದಾಳಿ ನಡೆಸದಂತೆ ಪಕ್ಷದ ನಾಯಕರಿಗೆ ಸೂಚಿಸಬೇಕು ಎಂದು ಕೆಲ ಕಾಂಗ್ರೆಸ್ ಒಕ್ಕಲಿಗ ನಾಯಕರು ವೇಣುಗೋಪಾಲ್‌ಗೆ ಮನವಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

PREV
click me!

Recommended Stories

ಕರ್ನಾಟಕ ಬಂದ್ : ಖಾಸಗಿ ಮ್ಯಾಕ್ಸಿಕ್ಯಾಬ್, ಪೆಟ್ರೋಲ್ ಯಥಾಸ್ಥಿತಿ
ಚುನಾವಣಾ ಪ್ರಚಾರದಿಂದ ದೂರ ಉಳಿದ ಎಸ್ ಎಂ ಕೃಷ್ಣ