ಕಾಂಗ್ರೆಸ್‌ ಮಣಿಸಲು ಬಿಜೆಪಿ ಜಿದ್ದಾಜಿದ್ದಿ ಫೈಟ್‌

Published : Apr 30, 2018, 10:58 AM ISTUpdated : Apr 30, 2018, 05:29 PM IST
ಕಾಂಗ್ರೆಸ್‌ ಮಣಿಸಲು ಬಿಜೆಪಿ ಜಿದ್ದಾಜಿದ್ದಿ ಫೈಟ್‌

ಸಾರಾಂಶ

ನವಲಗುಂದ ಹೊರತುಪಡಿಸಿ ಧಾರವಾಡ ಜಿಲ್ಲೆಯ ಉಳಿದ ಆರು ಕ್ಷೇತ್ರಗಳಲ್ಲಿ ಈ ಬಾರಿ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ಹಣಾಹಣಿ ನಡೆಯುತ್ತಿದೆ. ಕಳೆದ ಬಾರಿ 4ರಲ್ಲಿ ಕಾಂಗ್ರೆಸ್‌, 2ರಲ್ಲಿ ಬಿಜೆಪಿ ಹಾಗೂ ಒಂದು ಕ್ಷೇತ್ರದಲ್ಲಿ ಜೆಡಿಎಸ್‌ ಗೆಲುವು ಸಾಧಿಸಿತ್ತು. ಈ ಬಾರಿ ಕಾಂಗ್ರೆಸ್‌ ಆ ಕ್ಷೇತ್ರಗಳನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿದ್ದರೆ, ಕಾಂಗ್ರೆಸ್‌ ಗೆದ್ದಿರುವ ಕ್ಷೇತ್ರಗಳನ್ನು ಕಸಿದುಕೊಳ್ಳಲು ಬಿಜೆಪಿ ತಂತ್ರ ರೂಪಿಸಿದೆ. 

ಧಾರವಾಡ:  ನವಲಗುಂದ ಹೊರತುಪಡಿಸಿ ಧಾರವಾಡ ಜಿಲ್ಲೆಯ ಉಳಿದ ಆರು ಕ್ಷೇತ್ರಗಳಲ್ಲಿ ಈ ಬಾರಿ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ಹಣಾಹಣಿ ನಡೆಯುತ್ತಿದೆ. ಕಳೆದ ಬಾರಿ 4ರಲ್ಲಿ ಕಾಂಗ್ರೆಸ್‌, 2ರಲ್ಲಿ ಬಿಜೆಪಿ ಹಾಗೂ ಒಂದು ಕ್ಷೇತ್ರದಲ್ಲಿ ಜೆಡಿಎಸ್‌ ಗೆಲುವು ಸಾಧಿಸಿತ್ತು. ಈ ಬಾರಿ ಕಾಂಗ್ರೆಸ್‌ ಆ ಕ್ಷೇತ್ರಗಳನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿದ್ದರೆ, ಕಾಂಗ್ರೆಸ್‌ ಗೆದ್ದಿರುವ ಕ್ಷೇತ್ರಗಳನ್ನು ಕಸಿದುಕೊಳ್ಳಲು ಬಿಜೆಪಿ ತಂತ್ರ ರೂಪಿಸಿದೆ. ನವಲಗುಂದದಲ್ಲಿ ಮಾತ್ರ ಜೆಡಿಎಸ್‌, ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.

ಬಸವರಾಜ ಹಿರೇಮಠ/ಶಿವಾನಂದ ಗೊಂಬಿ

ಹುಬ್ಬಳ್ಳಿ- ಧಾರವಾಡ

ವಿನಯ ಕುಲಕರ್ಣಿ- ಕಾಂಗ್ರೆಸ್‌

ಅಮೃತ ದೇಸಾಯಿ- ಬಿಜೆಪಿ

ಶ್ರೀಕಾಂತ ಜಮನಾಳ- ಜೆಡಿಎಸ್‌

ಸಚಿವ ವಿನಯ ವರ್ಸಸ್‌ ಅಮೃತ

ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟದ ಮುಂಚೂಣಿಯಲ್ಲಿದ್ದ ಸಚಿವ ವಿನಯ ಕುಲಕರ್ಣಿ ವಿರುದ್ಧ ಈ ಬಾರಿ ಬಿಜೆಪಿಯಿಂದ ಅಮೃತ ದೇಸಾಯಿ ಕಣದಲ್ಲಿದ್ದಾರೆ. ಬಿಜೆಪಿ, ಕಾಂಗ್ರೆಸ್‌ ಹಣಾಹಣಿ ಬದಲಾಗಿ ಇಬ್ಬರು ವ್ಯಕ್ತಿಗಳ ನಡುವಿನ ಮಧ್ಯೆ ನೇರ ಪೈಪೋಟಿ ಎನಿಸುವ ರೀತಿಯಲ್ಲಿ ಬೆಳವಣಿಗೆಗಳು ನಡೆದಿವೆ. ತಮ್ಮ ಸರ್ಕಾರದ ಸಾಧನೆಗಳನ್ನು ಮುಂದಿಟ್ಟು ಸಚಿವ ವಿನಯ ಪ್ರಚಾರ ಆರಂಭಿಸಿದ್ದರೆ, ಕಾಂಗ್ರೆಸ್‌ ಸರ್ಕಾರದ ದುರಾಡಳಿತ ಹಾಗೂ ಕಾನೂನು- ಸುವ್ಯವಸ್ಥೆಗೆ ಭಂಗ, ಜಿಪಂ ಸದಸ್ಯ ಯೋಗೀಶಗೌಡ ಗೌಡರ ಕೊಲೆ ಪ್ರಕರಣದ ಜೊತೆಗೆ ಜಾತಿ-ಜಾತಿ ಮಧ್ಯೆ ಕಾಂಗ್ರೆಸ್‌ ಒಡೆದಾಳಿದೆ ಎಂದು ಬಿಜೆಪಿ ಪ್ರಚಾರ ಮಾಡುತ್ತಿದೆ. ಇನ್ನು ಜೆಡಿಎಸ್‌ನಿಂದ ಪಾಲಿಕೆ ಸದಸ್ಯ ಶ್ರೀಕಾಂತ ಜಮನಾಳ ಸ್ಪರ್ಧೆಯಲ್ಲಿದ್ದಾರೆ. ಆದರೆ, ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವಿನ ನೇರ ಹಣಾಹಣಿಯಲ್ಲಿ ಇವರ ಆಟ ನಡೆಯುವುದು ಕಷ್ಟ.


ಹು-ಧಾ ಪಶ್ಚಿಮ

ಅರವಿಂದ ಬೆಲ್ಲದ- ಬಿಜೆಪಿ

ಇಸ್ಮಾಯಿಲ್‌ ತಮಟಗಾರ- ಕಾಂಗ್ರೆಸ್‌

ಜೆಡಿಎಸ್‌ ಅಭ್ಯರ್ಥಿಯೇ ಇಲ್ಲ

ಬಿಜೆಪಿಯ ಭದ್ರಕೋಟೆ ಎನಿಸಿರುವ ಈ ಕ್ಷೇತ್ರದಲ್ಲಿ ಈ ಬಾರಿಯೂ ಪ್ರಾಬಲ್ಯ ಮುಂದುವರಿಸಲು ಶಾಸಕ ಅರವಿಂದ ಬೆಲ್ಲದ ಸ್ಪರ್ಧಿಸಿದ್ದಾರೆ. ಕಳೆದ ಬಾರಿ ಕಾಂಗ್ರೆಸ್‌ನಿಂದ ಮಾಜಿ ಸಚಿವ, ಮರಾಠಾ ಸಮುದಾಯದ ಎಸ್‌.ಆರ್‌. ಮೋರೆ ಹಾಗೂ ಜೆಡಿಎಸ್‌ನಿಂದ ಇಸ್ಮಾಯಿಲ್‌ ತಮಟಗಾರ ಸ್ಪರ್ಧಿಸಿದ ಹಿನ್ನೆಲೆಯಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು. ಆದರೆ, ಇದೀಗ ಜೆಡಿಎಸ್‌ನಿಂದ ವಲಸೆ ಬಂದ ಇಸ್ಮಾಯಿಲ್‌ ತಮಟಗಾರರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡಿದೆ. ಇನ್ನು, ಕಾದು ನೋಡುವ ತಂತ್ರ ಉಪಯೋಗಿಸಿದ ಜೆಡಿಎಸ್‌ ಕೊನೆ ಕ್ಷಣದಲ್ಲಿ ಹುಬ್ಬಳ್ಳಿ ಮುಸ್ಲಿಂ ಸಮುದಾಯದ ಅಲ್ತಾಫ್‌ ಕಿತ್ತೂರ ಅವರನ್ನು ನಿಲ್ಲಿಸಿತ್ತು. ಆದರೆ, ಅಲ್ತಾಫ್‌ ನಾಮಪತ್ರ ವಾಪಸು ಪಡೆದ ಕಾರಣ ಕ್ಷೇತ್ರದಲ್ಲೀಗ ಪಕ್ಷದ ಅಭ್ಯರ್ಥಿಯೇ ಇಲ್ಲ. ಹೀಗಾಗಿ ಈ ಬಾರಿ ಇಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ಮಧ್ಯೆ ಫೈಟ್‌ ಆರಂಭವಾಗಿದೆ. ಕೇಂದ್ರ ಸರ್ಕಾರದ ಜನಪರ ಯೋಜನೆಗಳನ್ನು ಮುಂದಿಟ್ಟು ಬೆಲ್ಲದ ಅವರು ಹೈಟೆಕ್‌ ಪ್ರಚಾರ ಆರಂಭಿಸಿದ್ದಾರೆ. ಪ್ರತಿಸ್ಪರ್ಧಿ ತಮಟಗಾರ ಅವರು ಅನೇಕ ತಂಡಗಳನ್ನು ರಚಿಸಿಕೊಂಡು ರಾಜ್ಯ ಸರ್ಕಾರದ ಸಾಧನೆಗಳನ್ನು ಜನರಿಗೆ ಮನವರಿಕೆ ಮಾಡುತ್ತಿದ್ದಾರೆ.

ಕಲಘಟಗಿ

ಸಂತೋಷ್‌ ಲಾಡ್‌-ಕಾಂಗ್ರೆಸ್‌

ಸಿ.ಎಂ.ನಿಂಬಣ್ಣ-ಬಿಜೆಪಿ

ಶಿವಾನಂದ ಅಂಬಡಗಟ್ಟಿ-ಜೆಡಿಎಸ್‌

ಲಾಡ್‌ಗೆ ಮತ್ತೆ ಒಲಿಯಲಿದೆಯೇ ಅದೃಷ್ಟ?

ಹಲವು ನಾಟಕೀಯ ಬೆಳವಣಿಗೆಗಳನ್ನು ಕಂಡ ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಸಚಿವ ಸಂತೋಷ ಲಾಡ್‌ ಅವರಿಗೆ ಮತ್ತೆ ಟಿಕೆಟ್‌ ಲಭಿಸಿದೆ. ಸ್ವಪಕ್ಷೀಯರ ಟೀಕೆಗಳ ಮಧ್ಯೆಯೂ ಲಾಡ್‌ ಅವರನ್ನು ಕಣಕ್ಕೆ ಇಳಿಸಿದ್ದು ಮೂಲ ಕಾಂಗ್ರೆಸ್‌ ಕಾರ್ಯಕರ್ತರಿಗೆ ಬೇಸರ ಮೂಡಿಸಿತ್ತು. ಇದೀಗ ಎಲ್ಲರನ್ನು ಒಗ್ಗೂಡಿಸಿಕೊಂಡು ಲಾಡ್‌ ಅವರು ಪ್ರಚಾರಕ್ಕೆ ಧುಮುಕಿದ್ದು, ಕ್ಷೇತ್ರದ ಜನ ಮತ್ತೆ ಅವರತ್ತ ಒಲವು ತೋರುತ್ತಿದ್ದಾರೆ. ಈ ಬಾರಿಯೂ ಲಾಡ್‌ ವಿರುದ್ಧ ಬಿಜೆಪಿಯಿಂದ ಸಿ.ಎಂ. ನಿಂಬಣ್ಣವರ ಸ್ಪರ್ಧಿಸಿದ್ದಾರೆ. ಆದರೆ, ಟಿಕೆಟ್‌ ಪಡೆಯಲು ನಿಂಬಣ್ಣವರ ಹೈಡ್ರಾಮಾ ಮಾಡಬೇಕಾಯಿತು. ಮೊದಲಿಗೆ ಮಹೇಶ ಟೆಂಗಿನಕಾಯಿಗೆ ಬಿಜೆಪಿ ಟಿಕೆಟ್‌ ಘೋಷಿಸಲಾಗಿತ್ತು. ಆದರೆ, ಸ್ಥಳೀಯ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ನಾಮಪತ್ರ ಸಲ್ಲಿಕೆಯ ಕೊನೆ ಕ್ಷಣದಲ್ಲಿ ನಿಂಬಣ್ಣವರಗೆ ಬಿ ಫಾರಂ ವಿತರಿಸಲಾಯಿತು. ಇನ್ನು ಜೆಡಿಎಸ್‌ನಿಂದ ಮಾಜಿ ಶಾಸಕ ಶಿವಾನಂದ ಅಂಬಡಗಟ್ಟಿಕಣದಲ್ಲಿದ್ದರೂ ಬಿಜೆಪಿ ಮತ್ತು ಕಾಂಗ್ರೆಸ್‌ ಮಧ್ಯೆ ಪೈಪೋಟಿ ಇದೆ.


ಹು-ಧಾ ಸೆಂಟ್ರಲ್‌

ಜಗದೀಶ ಶೆಟ್ಟರ್‌- ಬಿಜೆಪಿ

ಡಾ.ಮಹೇಶ ನಾಲವಾಡ- ಕಾಂಗ್ರೆಸ್‌

ರಾಜಣ್ಣ ಕೊರವಿ- ಜೆಡಿಎಸ್‌

ಕೈ ಭಿನ್ನಮತ: ಶೆಟ್ಟರ್‌ಗೆ ಲಾಭ?

ಬಿಜೆಪಿಯ ಭದ್ರಕೋಟೆಯಂತಿರುವ ಹುಬ್ಬಳ್ಳಿ- ಧಾರವಾಡ ಸೆಂಟ್ರಲ್‌ ಕ್ಷೇತ್ರವನ್ನು ಮಾಜಿ ಸಿಎಂ ಜಗದೀಶ ಶೆಟ್ಟರ್‌ ಪ್ರತಿನಿಧಿಸುತ್ತಿದ್ದಾರೆ. ಶೆಟ್ಟರ್‌ ಅವರು ಇಲ್ಲಿಂದ ಸತತವಾಗಿ ಐದು ಬಾರಿ ಆಯ್ಕೆಯಾಗಿದ್ದಾರೆ. ಈ ಸಲವೂ ಶೆಟ್ಟರ್‌ ಅವರೇ ಬಿಜೆಪಿ ಅಭ್ಯರ್ಥಿ. ಕಾಂಗ್ರೆಸ್‌ನಿಂದ ಕಳೆದ ಬಾರಿ ಸ್ಪರ್ಧಿಸಿದ್ದ ಡಾ. ಮಹೇಶ ನಾಲವಾಡ ಮತ್ತೆ ಕಣಕ್ಕಿಳಿದಿದ್ದಾರೆ. ವಿಧಾನ ಪರಿಷತ್‌ ಸದಸ್ಯ ನಾಗರಾಜ ಛಬ್ಬಿ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಆದರೆ ಪಕ್ಷ ಮಹೇಶ ನಾಲವಾಡಗೆ ಟಿಕೆಟ್‌ ನೀಡಿದೆ. ಇದರಿಂದ ಕಾಂಗ್ರೆಸ್‌ನಲ್ಲಿ ಒಳಗೊಳಗೆ ಅಸಮಾಧಾನ ಕುದಿಯುತ್ತಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಶಾಸಕ ಪ್ರಸಾದ ಅಬ್ಬಯ್ಯ ಅವರ ಸಹೋದರ ಧರ್ಮರಾಜ್‌ ಅಬ್ಬಯ್ಯ ಇಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಕೊನೆಗೆ ಅವರು ನಾಮಪತ್ರ ಹಿಂಪಡೆದಿದ್ದಾರೆ. ಆದರೂ ಕಾಂಗ್ರೆಸ್‌ನಲ್ಲಿನ ಒಳಜಗಳದ ಲಾಭ ಶೆಟ್ಟರ್‌ ಅವರಿಗೆ ಸಿಗುವ ಸಾಧ್ಯತೆ ಹೆಚ್ಚಿದೆ. ಇಲ್ಲಿ ನಾಲ್ವರು ಪಕ್ಷೇತರರು ತಮ್ಮ ನಾಮಪತ್ರವನ್ನು ವಾಪಸ್‌ ಪಡೆದಿದ್ದಾರೆ. ಅದರಲ್ಲಿ ಇಬ್ಬರು ಶೆಟ್ಟರ್‌ಗೆ ತಮ್ಮ ಬೆಂಬಲ ಸೂಚಿಸಿದ್ದಾರೆ. ಪ್ರಚಾರದಲ್ಲೂ ಶೆಟ್ಟರ್‌ ಮುಂದಿದ್ದಾರೆ. ಇನ್ನು ಜೆಡಿಎಸ್‌ನಿಂದ ಪಾಲಿಕೆ ಸದಸ್ಯ ರಾಜಣ್ಣ ಕೊರವಿ ಕಣದಲ್ಲಿದ್ದಾರೆ. ಕೊರವಿ ಕೂಡ ಅಬ್ಬರದ ಪ್ರಚಾರ ಕೈಗೊಂಡಿದ್ದಾರೆ. ಆದರೂ ಸ್ಪರ್ಧೆಯೇನಿದ್ದರೂ ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆಯೇ.


ಹು- ಧಾ ಪೂರ್ವ

ಪ್ರಸಾದ ಅಬ್ಬಯ್ಯ- ಕಾಂಗ್ರೆಸ್‌

ಚಂದ್ರಶೇಖರ್‌ ಗೋಕಾಕ- ಬಿಜೆಪಿ

ಶೋಭಾ ಬಳ್ಳಾರಿ- ಬಿಎಸ್ಪಿ

ಕಾಂಗ್ರೆಸ್‌ ಕೋಟೆಯಲ್ಲಿ ಒಳಜಗಳದ ಭೀತಿ

ಹುಬ್ಬಳ್ಳಿ-ಧಾರವಾಡ ಪೂರ್ವ ಕ್ಷೇತ್ರ ಕಾಂಗ್ರೆಸ್‌ ಭದ್ರಕೋಟೆಯಂತೆ ಇದೆಯಾದರೂ ಬಿಜೆಪಿಯೂ ಹಿಡಿತ ಹೊಂದಿದೆ. ಕಾಂಗ್ರೆಸ್‌ನಿಂದ ಶಾಸಕ ಪ್ರಸಾದ ಅಬ್ಬಯ್ಯ ಮತ್ತೊಂದು ಬಾರಿಗೆ ಅದೃಷ್ಟಪರೀಕ್ಷೆಗೆ ಇಳಿದಿದ್ದಾರೆ. ಇವರ ಸಹೋದರ ಧರ್ಮರಾಜ್‌ ಅಬ್ಬಯ್ಯ ಅವರು ಸೆಂಟ್ರಲ್‌ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಈ ಕಾರಣಕ್ಕಾಗಿಯೇ ಪೂರ್ವದಲ್ಲಿ ಅಬ್ಬಯ್ಯಗೆ ಸಡ್ಡು ಹೊಡೆಯಲು ಕಾಂಗ್ರೆಸ್‌ನಿಂದ ಪಾಲಿಕೆ ಸದಸ್ಯ ಮೋಹನ ಹಿರೇಮನಿ ಬಂಡಾಯವಾಗಿ ನಾಮಪತ್ರ ಸಲ್ಲಿಸಿದ್ದರು. ಇದೀಗ ಅಬ್ಬಯ್ಯ ಸಹೋದರ ಸೆಂಟ್ರಲ್‌ ಕ್ಷೇತ್ರದಿಂದ ಹಾಗೂ ಪೂರ್ವದಿಂದ ಹಿರೇಮನಿ ಇಬ್ಬರೂ ವಾಪಸ್‌ ಪಡೆದಿದ್ದಾರೆ. ಆದರೂ ಸೆಂಟ್ರಲ್‌ನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಸೋಲಿಗೆ ಪ್ರಸಾದ ಅಬ್ಬಯ್ಯ ಪ್ರಯತ್ನಿಸಿದ್ದರು ಎಂಬ ಮಾತು ಪಕ್ಷದ ವಲಯದಲ್ಲಿ ಹಬ್ಬಿದೆ. ಇದು ಅಬ್ಬಯ್ಯ ಗೆಲುವಿಗೆ ತೊಡಕಾದರೂ ಅಚ್ಚರಿಯಿಲ್ಲ. ಇನ್ನು ಬಿಜೆಪಿ ತನ್ನ ಅಭ್ಯರ್ಥಿಯನ್ನಾಗಿ ಆರ್‌ಎಸ್‌ಎಸ್‌ ಮೂಲದ ಚಂದ್ರಶೇಖರ್‌ ಗೋಕಾಕ ಅವರನ್ನು ಕಣಕ್ಕಿಳಿಸಿದೆ. ಇಲ್ಲೂ ಟಿಕೆಟ್‌ ವಂಚಿತರು ಬಂಡಾಯದ ಕೂಗು ಹಾಕಿದ್ದರು. ಶೆಟ್ಟರ್‌ ಹಾಗೂ ಜೋಶಿ ಬಂಡಾಯ ಧ್ವನಿಯನ್ನು ಮಾತುಕತೆ ಮೂಲಕ ಅಡಗಿಸಿದ್ದಾರೆ. ಜೆಡಿಎಸ್‌-ಬಿಎಸ್ಪಿ ಮೈತ್ರಿಯಿಂದಾಗಿ ಬಿಎಸ್ಪಿಯು ಶೋಭಾ ಬಳ್ಳಾರಿ ಅವರನ್ನು ಕಣಕ್ಕಿಳಿಸಿದೆ. ಆದರೂ ಸ್ಪರ್ಧೆ ಮಾತ್ರ ಕಾಂಗ್ರೆಸ್‌ ಹಾಗೂ ಬಿಜೆಪಿ ನಡುವೆಯೇ ಇದೆ.


ಕುಂದಗೋಳ

ಸಿ.ಎಸ್‌.ಶಿವಳ್ಳಿ- ಕಾಂಗ್ರೆಸ್‌

ಎಸ್‌.ಐ.ಚಿಕ್ಕನಗೌಡರ-ಬಿಜೆಪಿ

ಎಂ.ಎಸ್‌.ಅಕ್ಕಿ- ಜೆಡಿಎಸ್‌

ಬಿಜೆಪಿ ಒಗ್ಗಟ್ಟು, ಕಾಂಗ್ರೆಸ್ಸಿಗೆ ಇಕ್ಕಟ್ಟು

ಕೆಜೆಪಿ- ಬಿಜೆಪಿ ಜಗಳದಲ್ಲಿ ಕಳೆದ ಬಾರಿ ಜಯ ದಾಖಲಿಸಿದ್ದ ಕಾಂಗ್ರೆಸ್‌ನ ಸಿ.ಎಸ್‌. ಶಿವಳ್ಳಿ ಇನ್ನೊಮ್ಮೆ ಅದೃಷ್ಟಪರೀಕ್ಷಿಸಲು ಕಣಕ್ಕಿಳಿದಿದ್ದಾರೆ. ಕಳೆದ ಬಾರಿ ಕೆಜೆಪಿಯಿಂದ ಯಡಿಯೂರಪ್ಪ ಅವರ ಸಂಬಂಧಿಯೂ ಆದ ಎಸ್‌.ಐ. ಚಿಕ್ಕನಗೌಡರ ಕಣಕ್ಕಿಳಿದಿದ್ದರು. ಈ ಸಲ ಅವರೇ ಬಿಜೆಪಿ ಅಭ್ಯರ್ಥಿ. ಇನ್ನು 2013ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಎಂ.ಆರ್‌. ಪಾಟೀಲ ಈ ಸಲ ಟಿಕೆಟ್‌ ತಪ್ಪಿದ್ದಕ್ಕೆ ಅಸಮಾಧಾನಗೊಂಡಿದ್ದರು. ಬಂಡಾಯ ಏಳುವ ಮುನ್ಸೂಚನೆಯನ್ನೂ ನೀಡಿದ್ದರು. ಆದರೆ ಈಗ ವರಿಷ್ಠರ ಮಾತಿಗೆ ಸಮಾಧಾನಗೊಂಡು ಬಿಜೆಪಿ ಪರ ಪ್ರಚಾರದಲ್ಲಿ ತೊಡಗಿದ್ದಾರೆ. ಇದು ಶಿವಳ್ಳಿಗೆ ಸಂಕಷ್ಟತಂದೊಡ್ಡಬಹುದು. ಕಾಂಗ್ರೆಸ್‌-ಬಿಜೆಪಿ ಎರಡೂ ಕಡೆಯಿಂದ ಅಬ್ಬರದ ಪ್ರಚಾರ ನಡೆಯುತ್ತಿದೆ. ಇನ್ನು ಜೆಡಿಎಸ್‌ನಿಂದ ಮಾಜಿ ಶಾಸಕ ಎಂ.ಎಸ್‌. ಅಕ್ಕಿ ಕಣಕ್ಕಿಳಿದಿದ್ದಾರೆ. ಆದರೂ ಸ್ಪರ್ಧೆ ಇರುವುದು ಮಾತ್ರ ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆ.

ನವಲಗುಂದ

ಎನ್‌.ಎಚ್‌. ಕೋನರಡ್ಡಿ- ಜೆಡಿಎಸ್‌

ಶಂಕರ ಪಾಟೀಲ ಮನೇನಕೊಪ್ಪ- ಬಿಜೆಪಿ

ವಿನೋದ ಅಸೂಟಿ- ಕಾಂಗ್ರೆಸ್‌

ಬಂಡಾಯ ನೆಲದಲ್ಲಿ ತ್ರಿಕೋನ ಸ್ಪರ್ಧೆ

ಧಾರವಾಡ ಜಿಲ್ಲೆಯಲ್ಲಿ ಬಂಡಾಯದ ನೆಲವೆಂದೇ ಖ್ಯಾತಿ ಪಡೆದಿರುವ ನವಲಗುಂದ ಮಹದಾಯಿ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಕ್ಷೇತ್ರ. ಜೆಡಿಎಸ್‌ನಿಂದ ಎನ್‌.ಎಚ್‌. ಕೋನರಡ್ಡಿ ಮತ್ತೊಮ್ಮೆ ತಮ್ಮ ಅದೃಷ್ಟಪರೀಕ್ಷೆಗಿಳಿದಿದ್ದಾರೆ. ಮಹದಾಯಿ ಹೋರಾಟಗಾರರೊಬ್ಬರು ನಾಮಪತ್ರ ಸಲ್ಲಿಸಿದ್ದರು. ಆದರೆ ಕೊನೇ ಘಳಿಗೆಯಲ್ಲಿ ವಾಪಸ್‌ ಪಡೆದು ಜೆಡಿಎಸ್‌ಗೆ ಬೆಂಬಲ ಸೂಚಿಸಿದ್ದಾರೆ. ಇದು ಕೋನರೆಡ್ಡಿ ಅವರಿಗೆ ಸ್ವಲ್ಪ ಅನುಕೂಲವಾಗಬಹುದು. ಇನ್ನು ಬಿಜೆಪಿಯಿಂದ ಶಂಕರಪಾಟೀಲ ಮುನೇನಕೊಪ್ಪ ಸ್ಪರ್ಧಿಸಿದ್ದಾರೆ. ಆದರೆ ಬಿಜೆಪಿ ಬಗ್ಗೆ ಮಹದಾಯಿ ಹೋರಾಟಗಾರರಲ್ಲಿ ಮುನಿಸಿದೆ. ಕಾಂಗ್ರೆಸ್‌ನಿಂದ ಯುವ ಮುಖಂಡ ವಿನೋದ ಅಸೂಟಿ ಕಣಕ್ಕಿಳಿದಿದ್ದಾರೆ. ಟಿಕೆಟ್‌ ಆಕಾಂಕ್ಷಿಯಾಗಿದ್ದ ಮಾಜಿ ಸಚಿವ ಕೆ.ಎನ್‌.ಗಡ್ಡಿ ಅಸಮಾಧಾನಗೊಂಡು ಚುನಾವಣೆಯಲ್ಲಿ ತಟಸ್ಥರಾಗಿದ್ದರೆ, ಇನ್ನೊಬ್ಬ ಆಕಾಂಕ್ಷಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಶಿವಾನಂದ ಕರಿಗಾರ ಬಂಡಾಯ ಅಭ್ಯರ್ಥಿಯಾಗಿದ್ದಾರೆ. ಇದು ಕಾಂಗ್ರೆಸ್‌ನ ವಿನೋದ ಅಸೂಟಿಗೆ ಕೊಂಚ ಹಿನ್ನಡೆಯೆನಿಸಿದರೂ ಅವರು ತಕ್ಕ ಪೈಪೋಟಿ ನೀಡುತ್ತಿದ್ದಾರೆ. ಕ್ಷೇತ್ರದಲ್ಲಿ ಮೇಲ್ನೋಟಕ್ಕೆ ತ್ರಿಕೋನ ಸ್ಪರ್ಧೆ ನಡೆಯುತ್ತಿದೆ.

PREV
click me!

Recommended Stories

ಕರ್ನಾಟಕ ಬಂದ್ : ಖಾಸಗಿ ಮ್ಯಾಕ್ಸಿಕ್ಯಾಬ್, ಪೆಟ್ರೋಲ್ ಯಥಾಸ್ಥಿತಿ
ಚುನಾವಣಾ ಪ್ರಚಾರದಿಂದ ದೂರ ಉಳಿದ ಎಸ್ ಎಂ ಕೃಷ್ಣ