ಸ್ವಾತಂತ್ರ್ಯ ಸಿಕ್ಕು 7 ದಶಕಗಳು ಗತಿಸಿದ್ರೂ ಈ ಗ್ರಾಮಕ್ಕೆ ಬಸ್ಸೇ ಬಂದಿಲ್ಲ!

By Web Desk  |  First Published Oct 17, 2019, 10:54 AM IST

ಸ್ವಾತಂತ್ರ್ಯ ಸಿಕ್ಕು 73 ವರ್ಷಗಳಾದರೂ ತಾಲೂಕಿನ ಭೀಮಾ ತೀರದ ಕುಗ್ರಾಮ ಕುಡಿಗನೂರು ಬಸ್ ಸೇವೆ ಕಂಡಿಲ್ಲ| ಈ ಗ್ರಾಮಕ್ಕೆ ತೆರಳಬೇಕಾದರೆ ಮುಳ್ಳು ಕಂಟಿಗಳ ಮಧ್ಯೆ ಹಾಯ್ದು ದುರ್ಗಮ ರಸ್ತೆ ಮೂಲಕ ನಡೆದುಕೊಂಡೇ ತೆರಳಬೇಕು| ಸಮಯಕ್ಕೆ ಸರಿಯಾಗಿ ಖಾಸಗಿ ವಾಹನಗಳು ಗ್ರಾಮಕ್ಕೆ ಬರೆದೆ ಹೋದರೆ ಎಷ್ಟೋ ಬಾರಿ ವಿದ್ಯಾರ್ಥಿಗಳು ಶಾಲೆ ಕಾಲೇಜುಗಳಿಗೆ ಸಮಯಕ್ಕೆ ಸರಿಯಾಗಿ ಹೋಗದೆ ಪರೀಕ್ಷೆ ಬರೆಯಲು ಸಾಧ್ಯವಾಗಿಲ್ಲ|  ಅದೆಷ್ಟೋ ಬಾರಿ ವಿದ್ಯಾರ್ಥಿಗಳು ಪರೀಕ್ಷೆ ತಪ್ಪಿಸಿಕೊಂಡ ಉದಾಹರಣೆಗಳಿವೆ| 


ಬಿಂದುಮಾಧವ/ ಶಿವಲಿಂಗೇಶ್ವರ 

ಅಪಜಲ್ಪುರ/ ಕರಜಗಿ: ಸ್ವಾತಂತ್ರ್ಯ ಸಿಕ್ಕು 73 ವರ್ಷಗಳಾದರೂ ತಾಲೂಕಿನ ಭೀಮಾ ತೀರದ ಕುಗ್ರಾಮ ಕುಡಿಗನೂರು ಬಸ್ ಸೇವೆ ಕಂಡಿಲ್ಲ. ಈ ಗ್ರಾಮಕ್ಕೆ ತೆರಳಬೇಕಾದರೆ ಮುಳ್ಳು ಕಂಟಿಗಳ ಮಧ್ಯೆ ಹಾಯ್ದು ದುರ್ಗಮ ರಸ್ತೆಯಲ್ಲಿ ಸಂಚರಿಸಿ ನೆರೆಪೀಡಿತ ಗ್ರಾಮಕ್ಕೆ ನಡೆದುಕೊಂಡೇ ತೆರಳಬೇಕಾದ ಪರಿಸ್ಥಿತಿ ಇಲ್ಲಿದೆ. 

Tap to resize

Latest Videos

ಈ ಗ್ರಾಮ ಸಾರಿಗೆ ಬಸ್ ಸೌಲಭ್ಯ ಕಾಣದ್ದಕ್ಕೆ ಬಸ್ ಗ್ರಾಮಕ್ಕೆ ಸಂಪರ್ಕಿಸುವ ಇಕ್ಕಟ್ಟಾದ ರಸ್ತೆ ಸ್ಥಿತಿ ಕಾರಣವಾಗಿದೆ. ಸೂಕ್ತ ಸಾರಿಗೆ ಸೌಲಭ್ಯ ಇಲ್ಲದ ಕಾರಣ ಗ್ರಾಮಸ್ಥರು ಮೂರು ಕಿ.ಮೀ. ನಡೆದುಕೊಂಡು ಹೋಗಿ ಶಿವೂರ ಕ್ರಾಸ್ ರಸ್ತೆಗೆ ಹೋದರೆ ಸಾರಿಗೆ ಬಸ್‌ಗಳು ದ್ವಿಚಕ್ರ ವಾಹನಗಳಲ್ಲಿ ಅಥವಾ ಟಂಟಂ ಜೀಪ್ ಮೂಲಕ ಅಪಜಲ್ಪುರ ಪಟ್ಟಣಕ್ಕೆ, ಮಣ್ಣೂರ ಹಾಗೂ ಕರಜಗಿ ಸಂತೆಗೆ ಹೋಗಬೇಕು. ಇಲ್ಲಿನ ಮಕ್ಕಳು ಪ್ರೌಢ ಶಿಕ್ಷಣಕ್ಕಾಗಿ ಅಪಜಲ್ಪುರ, ಮಣ್ಣೂರ, ಕರಜಗಿ, ಇಂಡಿಗೆ ಹೋಗುತ್ತಾರೆ. ಸಮಯಕ್ಕೆ ಸರಿಯಾಗಿ ಖಾಸಗಿ ವಾಹನಗಳು ಗ್ರಾಮಕ್ಕೆ ಬರೆದೆ ಹೋದರೆ ಎಷ್ಟೋ ಬಾರಿ ವಿದ್ಯಾರ್ಥಿಗಳು ಶಾಲೆ ಕಾಲೇಜುಗಳಿಗೆ ಸಮಯಕ್ಕೆ ಸರಿಯಾಗಿ ಹೋಗದೆ ಪರೀಕ್ಷೆ ಬರೆಯಲು ಸಾಧ್ಯವಾಗಿಲ್ಲ. ಅಲ್ಲದೇ ಅದೆಷ್ಟೋ ಬಾರಿ ವಿದ್ಯಾರ್ಥಿಗಳು ಪರೀಕ್ಷೆ ತಪ್ಪಿಸಿಕೊಂಡ ಉದಾಹರಣೆಗಳಿವೆ. 

ರಾಮನಗರ ಗ್ರಾಪಂ ವ್ಯಾಪ್ತಿಗೆ: 

ತಾಲೂಕಿನ ರಾಮನಗರ ಗ್ರಾಪಂಗೆ ಬರುವ ಕುಡಿಗನೂರ ಗ್ರಾಮ ಭೀಮಾನದಿ ದಂಡೆಗೆ ಹೊಂದಿಕೊಂಡಿದ್ದು ಗ್ರಾಮಸ್ಥರು ಗ್ರಾಪಂಗೆ ಹೋಗಬೇಕಾದರೆ ಸುಮಾರು 8 ಕಿ.ಮೀ. ಸುತ್ತು ತಿರುಗಿ ಶಿವೂರ ಕ್ರಾಸ್ ಮೂಲಕ ಬರಬೇಕು. ಇಲ್ಲವಾದರೆ ಹೊಲಗಳ ನಡುವೆ ಇರುವ ರಾಮ ನಗರದಿಂದ ಕುಡಿಗನೂರಗೆ 6 ಕಿ.ಮೀ. ಅಂತರದಲ್ಲಿರುವ ಮಧ್ಯ ರಸ್ತೆ ಮೂಲಕ ಬಂದು ಪಂಚಾಯತ್ ಕೆಲಸ ಮುಗಿಸಿಕೊಂಡು ಹೋಗುವ ಪರಿಸ್ಥಿತಿಯಿದೆ. 
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇದ್ದು, ಇಲ್ಲಿನ ಶಿಕ್ಷಕರು ಪರ ಊರಿನಿಂದ ಶಾಲೆಗೆ ಬಂದು ಹೋಗಲು ಹರಸಾಹಸ ಪಡುತ್ತಿದ್ದಾರೆ. ಒಂದು ವೇಳೆ ಮಳೆ ಬಂದು ಸಂಚಾರ ಸ್ಥಗಿತಗೊಂಡರೆ ಅಂದು ಶಾಲೆಗೆ ಶಿಕ್ಷಕರು ಕೆಸರಿನಲ್ಲಿ ತಗ್ಗು ದಿನ್ನೆಗಳು ಬಿದ್ದ ರಸ್ತೆ ಮೂಲಕ ಸರ್ಕಸ್ ಮಾಡುತ್ತ ಬಂದು ವಿದ್ಯಾರ್ಥಿಗಳಿಗೆ ಪಾಠ ಬೋಧನೆ ಮಾಡಬೇಕು. ಒಳ ರಸ್ತೆ 

ಸಂಪರ್ಕ ಕಲ್ಪಿಸಿ: 

ತಾಲೂಕಿನ ಕಡೆ ಗ್ರಾಮ ಪಕ್ಕದ ಇಂಡಿ ತಾಲೂಕಿಗೆ ಹೊಂದಿಕೊಂಡಿರುವ ಗ್ರಾಮಸ್ಥರಿಗೆ ಪಟ್ಟಣ ಸಂಪರ್ಕವೇ ಇಲ್ಲದಂತಾಗಿದೆ ಕೃಷಿಯನ್ನೇ ಅವಲಂಬಿಸಿರುವ, ದುಡಿಯುವ ವರ್ಗ ಹೆಚ್ಚಾಗಿರುವ ಗ್ರಾಮದೊಳಗಿನ ಮುಖ್ಯ ರಸ್ತೆ ಕಾಂಕ್ರೀಟ್ ರಸ್ತೆಯಾಗಿ ಅಭಿವದ್ಧಿ ಹೊಂದಿದೆ. ಆದರೆ ಹೊರ ಸಂಪರ್ಕ ವಂಚಿತ ಗ್ರಾಮಕ್ಕೆ ಸಾರಿಗೆ ಸೌಲಭ್ಯವಿಲ್ಲದೆ ಇಲ್ಲಿನ ಮಕ್ಕಳು ಪ್ರೌಢ ಹಾಗೂ ಕಾಲೇಜು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಹೆಣ್ಣು ಮಕ್ಕಳು ಮನೆಯಲ್ಲೇ ಕುಳಿತುಕೊಳ್ಳಬೇಕಾದ ಅನಿವಾರ್ಯ ಸ್ಥಿತಿ ಇಲ್ಲಿ ನಿರ್ಮಾಣವಾಗಿದೆ. ಕುಡಿಗನೂರದಿಂದ ಶಿವೂರ ಕ್ರಾಸ್ ವರೆಗೆ ದ್ವಿಚಕ್ರ ವಾಹನ ಹಾಗೂ ಜೀಪ್ ಟಂಟಂ ಗೂಡ್ಸ್ ವಾಹನ ಮೂಲಕ ಬರಬೇಕು. ಗ್ರಾಮದಿಂದ ಶಿವೂರ ಕ್ರಾಸ್ 3 ಕಿ.ಮೀ. ಅಂತರವಿದ್ದು ರಸ್ತೆ ಮಧ್ಯೆ ಒಂದು ಸೇತುವೆ ನಿರ್ಮಾಣಗೊಳಿಸಿ ಮೂರು ಕಿ.ಮೀ. ರಸ್ತೆ ನಿರ್ಮಾಣ ಮಾಡಿದರೆ ಗ್ರಾಮಕ್ಕೆ ಬಸ್ ಸೌಲಭ್ಯ ಪ್ರಾರಂಭಿಸಲಾಗುವುದು ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ಹೇಳುತ್ತಾರೆ ಎಂದು ಗ್ರಾಮಸ್ಥರು ತಿಳಿಸಿದರು. 
ಇದರಿಂದ ಗ್ರಾಮದ ಮಕ್ಕಳು ಪ್ರೌಢ ಶಿಕ್ಷಣ ಹಾಗೂ ಕಾಲೇಜು ಶಿಕ್ಷಣದ ಜೊತೆಗೆ ಉನ್ನತ ಶಿಕ್ಷಣ ಸೌಲಭ್ಯ ಪಡೆಯಲು ಹೊಸೂರ ಕರಜಗಿ ರಾಜ್ಯ ಹೆದ್ದಾರಿ ಮೂಲಕ ಅಪಜಲ್ಪುರ ಪಟ್ಟಣವನ್ನು ಸುಲಭವಾಗಿ ತಲುಪಲು ತುಂಬಾ ಅನುಕೂಲವಾಗುತ್ತದೆ.

ಭೀಮಾ ನದಿಯ ನೆರೆ ಪೀಡಿತ ಗ್ರಾಮ

ಭೀಮಾ ನದಿ ದಂಡೆ ಮೇಲಿರುವ ಕುಡಿಗನೂರ ಗ್ರಾಮ ಪ್ರತಿ ವರ್ಷ ಹೊಳೆ ಪ್ರವಾಹಕ್ಕೆ ಸಿಲುಕಿ ನಷ್ಟ ಅನುಭವಿಸುತ್ತ ಬಂದಿದೆ. ಆದರೆ ಫಲವತ್ತಾದ ಭೂಮಿ ಹೊಂದಿದ ರೈತಾಪಿ ಜನ ಗ್ರಾಮ ತೊರೆದು ಸುರಕ್ಷಿತ ಸ್ಥಳಕ್ಕೆ ಹೋಗಲು ನಿರಾಕರಿಸುತ್ತಾರೆ. ಪ್ರವಾಹ ಗ್ರಾಮದೊಳಗೆ ಬಾರದಂತೆ ತಡೆಗೋಡೆ ನಿರ್ಮಿಸಿ ಎಂಬ ಬೇಡಿಕೆ ಮುಂದಿಟ್ಟಿದ್ದು ಅದು ಈಡೇರಿಲ್ಲ. ಇದರಿಂದ ಪ್ರತಿವರ್ಷ ಪ್ರವಾಹದ ಭಯದಲ್ಲೇ ತಮ್ಮ ಜೀವನ ಕಂಡುಕೊಳ್ಳುತ್ತಿದ್ದಾರೆ. ಆದರೆ ಮೂಲ ಸೌಲಭ್ಯ ದೂರವಾಗಿದ್ದು ಗ್ರಾಮ ನಿರ್ಲಕ್ಷ್ಯಕ್ಕೆ ಒಳಗಾಗಿದೆ.    
 

click me!