ಕಲಬುರಗಿಯಲ್ಲಿ ಉಪನ್ಯಾಸ ಕಾರ್ಯಕ್ರಮ ರದ್ದು| ಅಸಮಾಧಾನ ವ್ಯಕ್ತಪಡಿಸಿದ JNU ಮಾಜಿ ವಿದ್ಯಾರ್ಥಿ ಮುಖಂಡ, ಸಿಪಿಐ ನಾಯಕ ಕನ್ಹಯ್ಯ ಕುಮಾರ್| ಕಲಬುರಗಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಕನ್ಹಯ್ಯ ಕುಮಾರ್.
ಕಲಬುರಗಿ(ಅ.15): ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಲಿ ಇಂದು [ಮಂಗಳವಾರ] ಆಯೋಜಿಸಲಾಗಿದ್ದ ಕನ್ಹಯ್ಯ ಕುಮಾರ್ ಕಾರ್ಯಕ್ರಮವನ್ನು ದಿಢೀರ್ ರದ್ದುಗೊಳಿಸಲಾಗಿದೆ.
ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಜೆ.ಎನ್.ಯು. ಮಾಜಿ ವಿದ್ಯಾರ್ಥಿ ಮುಖಂಡ, ಸಿಪಿಐ ನಾಯಕ ಕನ್ಹಯ್ಯ ಕುಮಾರ್, ಕಲಬುರಗಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.
ಕಲಬುರಗಿ: ಕನ್ಹಯ್ಯ ಕುಮಾರ್ ಉಪನ್ಯಾಸ ದಿಢೀರ್ ರದ್ದು
ಪ್ರಧಾನಿ ನರೇಂದ್ರ ಮೋದಿ ಅಣ್ಣನ ಮಗಳ ಪರ್ಸ್ ಕಳೆದ್ರೆ 700 ಪೊಲೀಸರು ಶೋಧ ಮಾಡಿ ಹುಡುಕಿ ಕೊಟ್ಟಿದ್ದಾರೆ. ಆದ್ರೆ JNU ವಿದ್ಯಾರ್ಥಿ ನಜೀಬ್ ನಾಪತ್ತೆಯಾಗಿ ವರ್ಷಗಳೇ ಕಳೆದ್ರೂ ಹುಡುಕುವ ಕೆಲಸ ಆಗುತ್ತಿಲ್ಲ. ಮೋದಿ ಅಣ್ಣನ ಮಗಳ ಪರ್ಸ್ ಗೆ ಇರುವ ಬೆಲೆ ವಿದ್ಯಾರ್ಥಿಯ ಜೀವಕ್ಕೆ ಇಲ್ವಾ? ಎಂದು ಪ್ರಶ್ನಿಸಿದರು.
ಮೋದಿ ವಿರುದ್ಧ ಮಾತನಾಡುವವರ ಮೇಲೆ ಸಿಬಿಐ ದಾಳಿ ನಡೆಸುತ್ತಾರೆ. ಆದ್ರೆ ನಾಪತ್ತೆಯಾದ ವಿದ್ಯಾರ್ಥಿ ಬಗ್ಗೆ ಸಿಬಿಐ ಏನು ಮಾಡುತ್ತಿದೆ. ನನ್ನ ವಿರುದ್ಧ ಮೋದಿ ಸಿಬಿಐ ದಾಳಿ ನಡೆಸಲಿ, ಇಡಿ , ಐಟಿ ದಾಳಿ ನಡೆಸಲಿ ಎಂದು ಸವಾಲು ಹಾಕಿದರು.
ಕನ್ಹಯ್ಯ ಗುಲಬರ್ಗಾ ವಿವಿಗೆ ಬರೋದು ಬೇಡ! 'ಕೃಷ್ಣ'ನ ಉಪನ್ಯಾಸಕ್ಕೆ 'ಶ್ರೀರಾಮ' ವಿರೋಧ!
ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸ ಕಾರ್ಯಕ್ರಮ ರದ್ದು ಪಡಿಸಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ರಾಜ್ಯ ಸರ್ಕಾರ ನನ್ನ ಕಾರ್ಯಕ್ರಮ ರದ್ದು ಪಡಿಸಬಹುದೇ ಹೊರತು ನನ್ನ ಧ್ವನಿ ಅಡಗಿಸಲು ಸಾಧ್ಯವಿಲ್ಲ. ದೇಶ ಮತ್ತು ಸಂವಿಧಾನ ರಕ್ಷಣೆಗಾಗಿ ನನ್ನ ಧ್ವನಿ ಯಾವತ್ತೂ ನಿಲ್ಲುವುದಿಲ್ಲ ಎಂದು ಗುಡುಗಿದರು.
ಸಂಶೋಧನಾ ವಿಷಯದ ಮೇಲೆ ನಾನು ಮಾತನಾಡಲಾರೆ ಎನ್ನುವ ಕಾರಣವೊಡ್ಡಿ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಲಾಗಿದೆ. ನಾನು ಸಂಶೋಧನೆ ಮಾಡಿಯೇ ಪಿ.ಎಚ್.ಡಿ ಪೂರ್ಣಗೊಳಿಸಿದ್ದೇನೆ ಎಂದರು.
ಇಂದು [ಮಂಗಳವಾರ] ಗುಲ್ಬರ್ಗಾ ವಿಶ್ವವಿದ್ಯಾಲಯದ ಅಂಬೇಡ್ಕರ್ ಭವನದಲ್ಲಿ ಕನ್ಹಯ್ಯ ಕುಮಾರ್ ಉಪನ್ಯಾಸ ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳ ಒತ್ತಡಕ್ಕೆ ಮಣಿದ ವಿಶ್ವವಿದ್ಯಾಲಯ ಕುಲಪತಿ ಪ್ರೊ. ಪರಿಮಳಾ ಅಂಬೇಕರ್ ಕಾರ್ಯಕ್ರಮಕ್ಕೆ ಷರತ್ತುಬದ್ಧ ಅನುಮತಿ ನೀಡಿದ್ದರು.
ಆದರೆ ರಾಜ್ಯ ಸರ್ಕಾರದ ಮೌಖಿಕ ಆದೇಶದ ಮೇರೆಗೆ ಕಾರ್ಯಕ್ರಮಕ್ಕೆ ನೀಡಿದ ಅನುಮತಿಯನ್ನು ರಾತ್ರೋರಾತ್ರಿ ವಾಪಸ್ ಪಡೆಯಲಾಗಿತ್ತು. ಇದ್ರಿಂದ ಕನ್ಹಯ್ಯ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.