ಜಿಲ್ಲಾ ಉಸ್ತುವಾರಿ ಸಚಿವರಾಗಿ ಜವಾಬ್ದಾರಿ ಹೊತ್ತ ನಂತರ ಬಡಿಸಿಎಂ ಗೋವಿಂದ ಕಾರಜೋಳ ಕಲಬುರಗಿಗೆ ಭೇಟಿ| ಜಿಲ್ಲಾ ಉಸ್ತುವಾರಿ ಸಚಿವರಾದ ನಂತರ ಇವರು ಒಮ್ಮೆಯೂ ಕಲಬುರಗಿ ಭೇಟಿ ನೀಡಿರಲಿಲ್ಲ| ಈಗ ಗೋವಿಂದ ಕಾರಜೋಳ ಅವರ ಜಿಲ್ಲಾ ಭೇಟಿ ಪ್ರವಾಸ ವಿವರ ಬಿಡುಗಡೆಯಾಗಿದ್ದು, ಅದರಂತೆ ಅವರು ಅ.17 ರಂದು ಕಲಬುರಗಿಗೆ ಭೇಟಿ ನೀಡುತ್ತಿದ್ದಾರೆ| ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಜೊತೆಗೆ ಯಡಿಯೂರಪ್ಪ ಅವರು ಕಾರಜೋಳ ಅವರಿಗೆ ಕಲಬುರಗಿ ಜಿಲ್ಲೆಯ ಉಸ್ತುವಾರಿ ಹೆಚ್ಚುವರಿ ಹೊಣೆಗಾರಿಕೆ ವಹಿಸಿಕೊಟ್ಟಿದ್ದರು|
ಶೇಷಮೂರ್ತಿ ಅವಧಾನಿ
ಕಲಬುರಗಿ[ಅ.16]: ಜಿಲ್ಲಾ ಉಸ್ತುವಾರಿ ಸಚಿವರಾಗಿ ಜವಾಬ್ದಾರಿ ಹೊತ್ತ ನಂತರ ಬರೋಬ್ಬರಿ 29 ದಿನಗಳ ನಂತರ ಡಿಸಿಎಂ ಗೋವಿಂದ ಕಾರಜೋಳ ಸಾಹೇಬರ ಚಿತ್ತ ಕಲಬುರಗಿ ಜಿಲ್ಲೆಯತ್ತ ನೆಟ್ಟಿದೆ. ಜಿಲ್ಲಾ ಉಸ್ತುವಾರಿ ಸಚಿವರಾದ ನಂತರ (ಕಳೆದ ಸೆ.19 ರಂದು ಘೋಷಣೆ) ಇವರು ಒಮ್ಮೆಯೂ ಕಲಬುರಗಿ ಭೇಟಿ ನೀಡಿರಲಿಲ್ಲ. ಆದರೆ ಈಗ ಗೋವಿಂದ ಕಾರಜೋಳ ಅವರ ಜಿಲ್ಲಾ ಭೇಟಿ ಪ್ರವಾಸ ವಿವರ ಬಿಡುಗಡೆಯಾಗಿದ್ದು, ಅದರಂತೆ ಅವರು ಅ.17 ರಂದು ಕಲಬುರಗಿಗೆ ಭೇಟಿ ನೀಡುತ್ತಿದ್ದಾರೆ.
undefined
ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಜೊತೆಗೆ ಯಡಿಯೂರಪ್ಪ ಅವರು ಕಾರಜೋಳ ಅವರಿಗೆ ಕಲಬುರಗಿ ಜಿಲ್ಲೆಯ ಉಸ್ತುವಾರಿ ಹೆಚ್ಚುವರಿ ಹೊಣೆಗಾರಿಕೆ ವಹಿಸಿಕೊಟ್ಟಿದ್ದರು. ಹೀಗೆ ಹೆಚ್ಚುವರಿ ಉಸ್ತುವಾರಿ ಹೊಣೆಗಾರಿಕೆ ವಹಿಸಿಕೊಂಡ ನಂತರ ಗೋವಿಂದ ಕಾರಜೋಳ ಇತ್ತ ಹೆಜ್ಜೆ ಇಟ್ಟಿರಲೇಇಲ್ಲ.
ಕಲಬುರಗಿ ಭೇಟಿಗೆ ಕೂಡಿ ಬಂದ ಮುಹೂರ್ತ
ಸಚಿವರ ಈ ಧೋರಣೆ ಸಾರ್ವಜನಿಕವಾಗಿ ತೀವ್ರ ಟೀಕೆಗೂ ಗುರಿಯಾಗಿತ್ತು. ಸಾಮಾಜಿಕ ಜಾಲ ತಾಣಗಳಲ್ಲಂತೂ ಕಾರಜೋಳ ಅವರು ನಾಪತ್ತೆಯಾಗಿದ್ದಾರೆ. ಉಸ್ತುವಾರಿ ಸಚಿವರುಇಲ್ಲದೇ, ಕಲಬುರಗಿ ಅನಾಥವಾಗಿದೆ, ರೈತರು,ಸಾರ್ವಜನಿಕರ ಗೋಳು ಕೇಳೋರಿಲ್ಲ ಎಂದು ಗೋವಿಂದ ಕಾರಜೋಳ ಭಾವಚಿತ್ರ ಜೊತೆಗೆ ಅನೇಕ ಸಂದೇಶಗಳು ಹರಿದಾಡಿದ್ದುಂಟು. ಇವೆಲ್ಲಅತೃಪ್ತಿ, ಅಸಮಾಧಾನಗಳ ನಡುವೆಯೇ ಕೊನೆಗೂ ಕಾರಜೋಳ ಕಲಬುರಗಿ ಭೇಟಿಗೆ ಅ.17 ರಂದು ಮುಹೂರ್ತ ಕೂಡಿ ಬಂದಿದೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಜಿಲ್ಲಾ ಉಸ್ತುವಾರಿ ಸಚಿವರೆಂದರೆ ಜಿಲ್ಲೆಯ ಕೇಂದ್ರ ಸ್ಥಾನದಲ್ಲೇ ಸದಾಕಾಲ ಲಭ್ಯವಿರಬೇಕು. ಅವರ ಕಚೇರಿಯಂತೂ ಇಲ್ಲಿನ ಡಿಸಿ ಕಚೇರಿ ಹಿಂಭಾಗದಲ್ಲೇ ಇದೆ. ಇಲ್ಲೇ ಕಾರಜೋಳ ಅವರು ತಮ್ಮ ಲಭ್ಯತೆ ಜನಕ್ಕೆ ದೊರಕುವಂತೆ ಮಾಡಬೇಕು ಎಂಬುದು ಇಲ್ಲಿನವರ ಆಗ್ರಹ. ಜನರ ಜವಾಬ್ದಾರಿ ಹೊತ್ತುಕೊಂಡ ನಂತರ ಕಲಬುರಗಿಗೆಬರಲು ತಿಂಗಳು ತೆಗೆದುಕೊಂಡಿರುವ ಕಾರಜೋಳ ಅವರು ಅ. 17ರ ಭೇಟಿ ನಂತರ ಮತ್ಯಾವಾಗ ತಮ್ಮದರ್ಶನ ನೀಡುವರೋ ಎಂದು ಜನತೆ ಎದುರು ನೋಡುವಂತಾಗಿದೆ. ಅದಕ್ಕೇ ಕಾರಜೋಳ ಅವರು ತಾವಿಲ್ಲದಿದ್ದರೂ ಇಲ್ಲಿನ ಜನರ ಅಹವಾಲು ಆಲಿಸಿ ಪರಿಹಾರಕ್ಕೆ ಸೂಕ್ತವ್ಯವಸ್ಥೆ ಮಾಡುವ ಅಗತ್ಯ ಇದೆ.
ಅಲ್ಪಾವಧಿ ಕೆಡಿಪಿ ಸಭೆ!
ಗೋವಿಂದ ಕಾರಜೋಳ ತಿಂಗಳ ನಂತರ ಅ.17ಕ್ಕೆ ಕಲಬುರಗಿಗೆ ಬರುತ್ತಿದ್ದು,ಅಂದು ಬೆ.10ಕ್ಕೆ ಕೆಡಿಪಿ ಸಭೆ, ಅಂದೇ ಮ. 3.30ಕ್ಕೆ ಪಿಡಬ್ಲ್ಯೂಡಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ಸಭೆ ಆಯೋಜಿಸಿದ್ದರು. ಆದರೆ, ಬದಲಾದ ಅವರ ವೇಳಾಪಟ್ಟಿಯಂತೆ ಕಾರಜೋಳ ಅವರು ಕೆಡಿಪಿ ಸಭೆ ಮುಂದೂಡಿ ಅ.17ರಂದು ಮ.3.30 ಕ್ಕೆ ಮರು ನಿಗದಿಗೊಳಿಸಿದ್ದಾರೆ.
ವರ್ಷ ಕಳೆದರೂ ನಡೆಯದ ಕೆಡಿಪಿ ಹೀಗೆ ಮರುನಿಗದಿಗೊಂಡಿದೆ. ಜಿಲ್ಲೆಯ ಪ್ರಗತಿ- ವಿಗತಿ ವಿಚಾರಗಳು ಅದೆಷ್ಟರ ಮಟ್ಟಿಗೆ ಸಭೆಯಲ್ಲಿ ಚರ್ಚೆಗೆ ಬರುತ್ತವೋ ಎಂಬ ಶಂಕೆ ಕಾಡುವಂತೆ ಮಾಡಿದೆ. ಕಾರಜೋಳ ಅವರು ಅ.17 ರಂದು ಸಿಎಂ ಯಡಿಯೂರಪ್ಪ ಜೊತೆಗೆ ಗಾಣಗಾಪುರಕ್ಕೆ ಭೇಟಿ ನೀಡುತ್ತಿದ್ದಾರೆ. ಮಹಾರಾಷ್ಟ್ರ ಚುನಾವಣೆ ಪ್ರಚಾರದಲ್ಲಿರುವ ಯಡಿಯೂರಪ್ಪ ಅಂದು ಲಾತೂರದಿಂದ ಬೆಳಗಿನ ಜಾವವೇ ಕಲಬುರಗಿಗೆ ಬಂದು ದತ್ತಾತ್ರೇಯ ದೇವರ ಪೂಜೆಗಾಗಿ ಗಾಣಗಾಪುರಕ್ಕೆ ತೆರಳುವ ಕಾರ್ಯಕ್ರಮವಿದೆ. ಹೀಗಾಗಿ ಗೋವಿಂದ ಕಾರಜೋಳ ಅವರು ತಮ್ಮ ಕೆಡಿಪಿ ಸಭೆಯ ಸಮಯವನ್ನು ಈ ಕಾರಣಕ್ಕಾಗಿಯೇ ಮರುನಿಗದಿ ಮಾಡುವ ಮೂಲಕ ಸಿಎಂ ಜೊತೆ ಗಾಣಗಾಪುರಕ್ಕೆ ಜೊತೆಯಾಗುತ್ತಿದ್ದಾರೆ. ಅಲ್ಲಿಂದ ಕಲಬುರಗಿಗೆ ಬರುವ ಸಿಎಂ ಮಧ್ಯಾಹ್ನ ವಿಮಾನದ ಮೂಲಕ ಬೆಂಗಳೂರಿಗೆ ಪಯಣಿಸಲಿದ್ದಾರೆ. ಅದಾದ ನಂತರವೇ ಗೋವಿಂದ ಕಾರಜೋಳ ಅವರ ಕೆಡಿಪಿ ಸಭೆ ನಡೆಯಲಿದೆ ಎನ್ನಲಾಗುತ್ತಿದೆ.
ಕಾರಜೋಳ ಭೇಟಿ ಜಿಲ್ಲೆಗೆ, ಜನರಪಾಲಿಗೆ ಯಾಕೆ ಮಹತ್ವದ್ದಾಗಿತ್ತು
1. ನೆರೆ, ಬರಿದಂದ ಕಂಗೆಟ್ಟಿರುವ ಜಿಲ್ಲೆಯರೈತರು ಪರಿಹಾರ, ನೆರವಿನನಿರೀಕ್ಷೆಯಲ್ಲಿದ್ದರು. ಇಂದಿಗೂ ಅವರಕೈಗೆ ಸರಿಯಾದ ಪರಿಹಾರ ದೊರಕಿಲ್ಲ.
2. ಆಳಂದ ತಾಲೂಕಿನಲ್ಲಿರುವ ಎನ್‌ಎಸ್‌ಎಲ್ ಸಕ್ಕರೆ ಕಾರ್ಖಾನೆ ಸಮಸ್ಯೆಗೆಇಂದಿಗೂ ಪಕ್ಕಾ ಪರಿಹಾರ ಮರೀಚಿಕೆ,ರೈತರ ಬೇಡಿಕೆ ಕಬ್ಬು ದರ ಇನ್ನೂ ನಿಗದಿಯಾಗಿಲ್ಲ.
3. ಜಿಲ್ಲೆಯಲ್ಲಿ ಕಳೆದ 1 ವರ್ಷದಿಂದ ಕರ್ನಾಟಕ ಅಭಿವೃದ್ಧಿ ಯೋಜನೆಗಳ ಪ್ರಗತಿ ಪರಿಶೀಲನೆ ಸಭೆ ನಡೆದಿರಲಿಲ್ಲ.
4. ಕಲಬುರಗಿ ವಿಮಾನ ನಿಲ್ದಾಣ ಅದ್ಯಾವಾಗ ಸಾರ್ವಜನಿಕ ಸೇವೆಗೆ ಲಭ್ಯವಾಗುವುದೋ ಎಂಬ ಮಹಾ ನಿರೀಕ್ಷೆ.
5. ಕಲಬುರಗಿ ಕೇಂದ್ರವಾಗಿರುವಂತೆ ರೇಲ್ವೆ ವಿಭಾಗೀಯ ಕಚೇರಿ ಯಾವಾಗಆರಂಭವಾಗುವುದೋ ಎಂಬ ಕುತೂಹಲ.
6. ಕಲಬುರಗಿ ಜಿಲ್ಲೆಯಲ್ಲಿ ಮಳೆಯಿಂದಾಗಿ ಹಾಳಾಗಿರುವ ಹೋಬಳಿ, ಹಳ್ಳಿ ರಸ್ತೆಗಳಿಗೆ ಕಾಯಕಲ್ಪ ನೀಡಬೇಕುಎಂಬ ಆಸಕ್ತಿ.
7. ಕಲಬುರಗಿ ನಗರದ ಮುಖ್ಯರಸ್ತೆ ಕಾಮಗಾರಿ ಶುರುವಾಗಿ ವರ್ಷಗಳೇ ಉರುಳಿದರೂ ಇಂದಿಗೂ ಮುಗಿಯದೆ ಹಾಗೇ ಸಾಗಿರೋದು.
8. ಹೆಸರು, ಉದ್ದು ಖರೀದಿ ಕೇಂದ್ರಗಳು ಆರಂಭವಾದರೂ ಅಲ್ಲಿನ ಅವ್ಯವಸ್ಥೆಯಿಂದಾಗಿ ಇಂದಿಗೂ ಅವುಸರಿಯಾಗಿ ಕೆಲಸ ಮಾಡುತ್ತಿಲ್ಲ.
9 ರೈತರು ತಾವು ಬೆಳೆದ ಹೆಸರು, ಉದ್ದು ಖರೀದಿ ಕೇಂದ್ರಕ್ಕೆ ತಾರದೆ ಸಿಕ್ಕಷ್ಟೇ ಬೆಲೆಗೆ ಮಾರಿ ಮನೆಗೆ ಮರಳುತ್ತಿದ್ದಾರೆ.
10. ಸರ್ಕಾರದ ಕಾಮಗಾರಿಗಳ ಪ್ರಗತಿ ಪರಿಶೀಲನೆ ನನೆಗುದಿಗೆ, ಹೀಗಾಗಿ ಮೂಲ ಸೌಲಭ್ಯದ ಅನೇಕ ಯೋಜನೆಗಳಿಗೆ ಗ್ರಹಣ.