ಕಲಬುರಗಿಯಿಂದ ವಿಮಾನಯಾನ ಸೇವೆ ಆರಂಭಿಸಲು ಇಂಡಿಗೋ ಏರ್‌ಲೈನ್ಸ್ ಸಂಸ್ಥೆ ತಾತ್ವಿಕ ಒಪ್ಪಿಗೆ|ಕಲಬುರಗಿಯಿಂದ ವಿಮಾನ ಸೌಲಭ್ಯ ಆರಂಭಿಸಬೇಕೆಂಬ ಹಲವು ದಶಕಗಳ ಬೇಡಿಕೆ ಈಡೇರಲಿದೆ|ಸ್ಟಾರ್‌ಲೈನ್ ಸಂಸ್ಥೆ ಈಗಾಗಲೇ ಕಲಬುರಗಿ ಮತ್ತು ಬೆಂಗಳೂರು ಮಧ್ಯೆ ವಿಮಾನಯಾನ ಸೇವೆ ಆರಂಭಿಸಲು ಮುಂದಾಗಿದೆ|
ಕಲಬುರಗಿ[ನ.8]: ಕಲಬುರಗಿಯಿಂದ ವಿಮಾನಯಾನ ಸೇವೆ ಆರಂಭಿಸಲು ಪ್ರತಿಷ್ಠಿತ ಇಂಡಿಗೋ ಏರ್‌ಲೈನ್ಸ್ ಸಂಸ್ಥೆ ತಾತ್ವಿಕವಾಗಿ ಒಪ್ಪಿಕೊಂಡಿದೆ ಎಂದು ಸಂಸದ ಡಾ. ಉಮೇಶ ಜಿ. ಜಾಧವ ಅವರು ತಿಳಿಸಿದ್ದಾರೆ.
ನವದೆಹಲಿಯಲ್ಲಿ ಬುಧವಾರ ಕೇಂದ್ರ ಸರ್ಕಾರದ ನಾಗರಿಕ ವಿಮಾನಯಾನ ಇಲಾಖೆಯ ಕಾರ್ಯದರ್ಶಿ ಪ್ರದೀಪ ಸಿಂಗ್ ಖರೋಲಾ ಅವರ ಸಮ್ಮುಖದಲ್ಲಿ ಇಂಡಿ ಗೋ ಏರ್‌ಲೈನ್ಸ್ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ರಾಹುಲ್ ಭಾಟಿಯಾ ಹಾಗೂ ಮಾರ್ಕೆಟಿಂಗ್ ವಿಭಾಗದ ಉಪಾಧ್ಯಕ್ಷೆ ರಾಗಿಣಿ ಚೋಪ್ರಾ ಅವರೊಂದಿಗೆ ಮಾತುಕತೆ ನಡೆಸಿದ್ದು, ಕಲಬುರಗಿಯಿಂದ ವಿಮಾನಯಾನ ಸೇವೆ ಪ್ರಾರಂಭಿಸುವುದಕ್ಕಾಗಿ ತಾತ್ವಿಕವಾಗಿ ಒಪ್ಪಿಕೊಂಡಿದ್ದಾರೆಂದು ಮಾಹಿತಿ ನೀಡಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಕಲಬುರಗಿಯಿಂದ ಸೇವೆ ಆರಂಭಿಸುವಂತೆ ಖರೋಲಾ ಅವರು ಕೂಡ ಇಂಡಿಗೋ ಏರ್‌ಲೈನ್ಸ್ ಅಧ್ಯಕ್ಷರ ಮೇಲೆ ಒತ್ತಡ ತಂದರು. ತಾವು ಕೂಡ ವಿಭಾಗೀಯ ಕೇಂದ್ರವಾಗಿರುವ ಕಲಬುರಗಿಯಿಂದ ವಿಮಾನ ಸೇವೆ ಆರಂಭಿಸುವ ಅಗತ್ಯತೆ ಕುರಿತು ಮನವರಿಕೆ ಮಾಡಿಕೊಟ್ಟಿದ್ದಾಗಿ ತಿಳಿಸಿದ್ದಾರೆ.
ವಿಮಾನಯಾನ ಆರಂಭಿಸುವುದಕ್ಕೆ ಒಪ್ಪಿಕೊಂಡಿರುವುದರಿಂದ ಕಲ್ಯಾಣ ಕರ್ನಾಟಕದ ಕೇಂದ್ರ ಸ್ಥಾನವಾಗಿರುವ ಕಲಬುರಗಿಯಿಂದ ವಿಮಾನ ಸೌಲಭ್ಯ ಆರಂಭಿಸಬೇಕೆಂಬ ಹಲವು ದಶಕಗಳ ಬೇಡಿಕೆ ಈಡೇರಲಿದೆ. ಕಲಬುರಗಿಯಿಂದ ಬೆಂಗಳೂರಿಗೆ ವಿಮಾನ ಆರಂಭಿಸಿದರೆ ಅಷ್ಟೊಂದು ಜನ ಬರುವುದಿಲ್ಲ. ನಷ್ಟವಾಗುವ ಸಾಧ್ಯತೆಗಳಿರುತ್ತವೆ ಎಂದು ರಾಹುಲ್ ಭಾಟಿಯಾ ಆತಂಕ ವ್ಯಕ್ತಪಡಿಸಿದರು, ಆದರೆ ತಾವು, ಕಲಬುರಗಿಯಿಂದ ಬೆಂಗಳೂರಿಗೆ ವಿಮಾನ ಆರಂಭಿಸುವುದು ಲಾಭದಾಯಕವಾಗಲಿದೆ, ಅಲ್ಲದೇ ಈಗಲೇ ಮೂರು ತಿಂಗಳ ಅಡ್ವಾನ್ಸ್ ಬುಕಿಂಗ್ ಮಾಡಿಕೊಡಬಲ್ಲೆ, ಅಷ್ಟೊಂದು ಅಗತ್ಯತೆ, ಸಾಮರ್ಥ್ಯ ಇದೆ ಎಂದು ಮನವರಿಕೆ ಮಾಡಿಕೊಟ್ಟಿದ್ದಾಗಿ ತಿಳಿಸಿದರು.
ಸ್ಟಾರ್‌ಲೈನ್ ಸಂಸ್ಥೆ ಈಗಾಗಲೇ ಕಲಬುರಗಿ ಮತ್ತು ಬೆಂಗಳೂರು ಮಧ್ಯೆ ವಿಮಾನಯಾನ ಸೇವೆ ಆರಂಭಿಸಲು ಮುಂದಾಗಿದ್ದು, ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದರು.