ಕಲಬುರಗಿಯಲ್ಲಿರುವ ದರ್ಗಾದಲ್ಲಿ ವಿಚಿತ್ರ ಅಗೋಚರ ಶಬ್ದ ಕೇಳುತ್ತಿದ್ದು, ಉಸಿರಾಡಿದಂತೆ ಕಾಣಿಸುತ್ತಿದೆ. ಇದೀಗ ಈ ವಿಚಾರ ಎಲ್ಲೆಡೆ ಹಬ್ಬಿದ್ದು ವೀಕ್ಷಣೆಗೆ ಸಾವಿರಾರು ಜನರು ಆಗಮಿಸುತ್ತಿದ್ದಾರೆ.
ಕಲಬುರಗಿ[ನ.05]: ಕಾಳಗಿ ಪಟ್ಟಣದ ಬಸ್ ನಿಲ್ದಾಣದ ಬಳಿ ಇರುವ ಲಾಲ್ ಅಹ್ಮದ್ ಮುತ್ಯಾನ ಸಮಾಧಿಯಿಂದ ಅಗೋಚರ ಶಬ್ದ ಕೇಳಿಸುತ್ತಿದ್ದು, ಈ ಸುದ್ದಿ ಕಾಡಗಿಚ್ಚಿನಂತೆ ಹರಡಿ ಕಳೆದ 5 ದಿನದಿಂದ ನೂರಾರು ಭಕ್ತರು ತಂಡೋಪತಂಡವಾಗಿ ಸಮಾಧಿಗೆ ಭೇಟಿ ನೀಡುತ್ತಿದ್ದಾರೆ. ಅ.28ರ ದೀಪಾವಳಿ ಅಮಾವಾಸ್ಯೆ ದಿನದಿಂದ ಲಾಲ್ ಅಹ್ಮದ್ ಸಮಾಧಿಗೆ ಹೊದಿಸಿದ್ದ ಚಾದರ್ ಹಾರುತ್ತಿದೆ. ಹೃದಯ ಬಡಿತ ಹೋಲುವ ಸದ್ದು ಕೇಳಿಬರುತ್ತಿವೆ.
ಗೋರಿಗೆ ಹೊದಿಸಲಾಗಿರುವ ಚಾದರ್ (ಬಟ್ಟೆ) ತೆಗೆದು, ಹೂವಿನ ಹಾರ ಬದಿಗಿರಿಸಿ ನೋಡಿದರೂ ಅದರುವಿಕೆ ಸಮಾಧಿಯಲ್ಲಿ ಕಂಡಿದೆ ಎಂದು ಲಾಲ್ ಅಹ್ಮದ್ ಅವರ ಮೊಮ್ಮಗ ಸಾದಿಕ್ ಮಿಯಾ ಗಾಡಿವಾನ್ ಹೇಳಿದ್ದಾರೆ.
ಲಾಲ್ ಅಹ್ಮದ್ ಮುತ್ಯಾ ಯಾರು?: ಲಾಲ್ ಅಹ್ಮದ್ ಮುತ್ಯಾ ಅವರು ಸಂತ ಶಿಶುವಿನಾಳ ಶರೀಫ ಅವರ ತತ್ವ ಆದರ್ಶ ಪರಿಪಾಲಿಸಿದವರು. ಲಾಲ್ ಅಹ್ಮದ್ ಮುತ್ಯಾ ಕಾಳಗಿಯಲ್ಲಿ ಸಂತರಂತೆ ಬಾಳಿದವರು. ಸಾಮರಷ್ಯ ಬದುಕಿನ ಜತೆಗೆ ಊರಲ್ಲಿನ ಜನ, ಜಾನುವಾರ ಭವ ರೋಗಕ್ಕೆ ಮದ್ದು ಅರೆಯುವ ಕೆಲಸ ಮಾಡಿದ್ದರು. ಲಾಲ್ ಅಹ್ಮದ್ 44 ವರ್ಷಗಳ ಹಿಂದೆಯೇ ಇಹಲೋಕ ತ್ಯಜಿಸಿದಾಗ ಅವರ ಕುಟುಂಬ ಸಮಾಧಿ ನಿರ್ಮಿಸಿತ್ತು.
ಸಮಾಧಿ ಸದ್ದಿಗೇನು ಕಾರಣ?: ‘ಸಾವಿಗೀಡಾದವರ ದೇಹ ಇಟ್ಟು ಕಟ್ಟಲಾಗುವ ಸಮಾಧಿಯಿಂದ ಇಂತಹ ಸದ್ದು ಏಕಾಏಕಿ ಬರೋದು ಅಸಾಧ್ಯ. ದೂರದಲ್ಲೇನಾದರೂ ನೆಲ ಅದರಿಸುವಂತಹ ವಸ್ತುಗಳು (ಶಕ್ತಿಯುತ ವೈಬ್ರೆಟರ್) ಕೆಲಸ ಮಾಡುತ್ತಿದ್ದರೆ (ಜೋರಾಗಿ ಸದ್ದು ಮಾಡುವ, ಸುರಂಗ ಸ್ಫೋಟ ಇತ್ಯಾದಿ) ಅಥವಾ ಭಾರಿ ಸಾಮರ್ಥ್ಯದ ಧ್ವನಿ ವರ್ಧಕಗಳಿದ್ದರೆ ಅಥವಾ ವಿದ್ಯುನ್ಮಾನ ಸಾಧನಗಳಿದ್ದರೆ ಮಾತ್ರ ಇಂತಹ ಅದರುವಿಕೆ, ಸದ್ದು ಕೇಳಿಬರಬಹುವ ಸಾಧ್ಯತೆ ಇದೆ. ಹೀಗಾಗಿ ಬೇರೆ ಕಾರಣಗಳಿಂದಲೂ ಇಂತಹ ಸದ್ದು ಸಮಾಧಿಯಿಂದ ಬರೋದಿಲ್ಲ’ ಎಂದು ಖ್ಯಾತ ವೈದ್ಯ ಡಾ. ಮಲ್ಲಾರಾವ್ ಮಲ್ಲೆ ಸ್ಪಷ್ಟಪಡಿಸಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಹಿರಿಯರ ಸಭೆ, ಪೂಜೆ, ಪುನಸ್ಕಾರಕ್ಕೆ ನಿರ್ಧಾರ: ಭಾನುವಾರ ರಾತ್ರಿ ಕಾಳಗಿ ಗ್ರಾಮದ ಸರ್ವ ಸಮಾಜ, ಸಮುದಾಯದ ಹಿರಿಯರು ಸಭೆ ಸೇರಿ ಲಾಲ್ ಅಹ್ಮದ್ ಮುತ್ಯಾರ ಸಮಾಧಿ ಸದ್ದಿನ ವಿಚಾರ ಚರ್ಚಿಸಿದ್ದಾರೆ. ಕಾಳಗಿ ಗ್ರಾಮದ ದೇವರುಗಳಿಗೆಲ್ಲ ವಿಶೇಷ ಪೂಜೆ, ಪುನಸ್ಕಾರ ಮಾಡಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಕಾಳಗಿಯಲ್ಲಿ ನಡೆದ ಸಭೆಯಲ್ಲಿ ಶರಣಗೌಡ ಪಾಟೀಲ, ಶಿವಶರಣಪ್ಪ ಕಮಲಾಪೂರ, ಸುಭಾಷ ಕದಂ, ವಿಶ್ವನಾಥ ವನಮಾಲಿ, ಚಂದ್ರು ಮಹಾರಾಜ, ಸಾದಿಕ್‌ಮೀಯಾ ಗಾಡಿವಾನ್, ಜಿಯಾವುದ್ದಿನ ಸೌದಾಗರ ರಾಘವೇಂದ್ರ ಗುತ್ತೇದಾರ ಇದ್ದರು.