ಆಡಿ ಮತ್ತು ಪೋರ್ಷೆ ತಯಾರಿಕಾ ಕಂಪೆನಿ ವೋಕ್ಸ್‌ವ್ಯಾಗನ್‌ನಲ್ಲಿ 1ಲಕ್ಷ ನೌಕರರ ವಜಾ!: 4 ಕಾರ್ಖಾನೆಗಳ ಮುಚ್ಚಲು ನಿರ್ಧಾರ!

Published : Jun 26, 2026, 04:05 PM IST
volkswagen

ಸಾರಾಂಶ

ಜಾಗತಿಕ ಪೈಪೋಟಿ ಎದುರಿಸಲು, ವೋಕ್ಸ್‌ವ್ಯಾಗನ್ ಸಿಇಒ ಆಲಿವರ್ ಬ್ಲೂಮ್ ಒಂದು ಲಕ್ಷ ಉದ್ಯೋಗ ಕಡಿತ ಮತ್ತು ಜರ್ಮನಿಯ ನಾಲ್ಕು ಪ್ರಮುಖ ಕಾರ್ಖಾನೆಗಳನ್ನು ಮುಚ್ಚುವ ಕಠಿಣ ಯೋಜನೆ ಪ್ರಸ್ತಾಪಿಸಿದ್ದಾರೆ. ಈ ವೆಚ್ಚ ಕಡಿತದ ಕ್ರಮವು ಕಾರ್ಮಿಕ ಸಂಘಟನೆಗಳಿಂದ ತೀವ್ರ ವಿರೋಧವನ್ನು ಎದುರಿಸುತ್ತಿದೆ, ಇದು ಕಂಪನಿಯಲ್ಲಿ ದೊಡ್ಡ ಸಂಘರ್ಷಕ್ಕೆ ಕಾರಣವಾಗುವ ಸಾಧ್ಯತೆಯಿದೆ.

ಬೆಂಗಳೂರು: ಜರ್ಮನಿಯ ಹೆಮ್ಮೆಯ ಹಾಗೂ ಯುರೋಪಿನ ಅತಿ ದೊಡ್ಡ ವಾಹನ ತಯಾರಕ ಕಂಪನಿಯಾದ 'ವೋಕ್ಸ್‌ವ್ಯಾಗನ್ ಜಿ' (Volkswagen AG) ಜಾಗತಿಕ ಮಾರುಕಟ್ಟೆಯಲ್ಲಿ ತೀವ್ರ ಪೈಪೋಟಿ ಎದುರಿಸಲು ಹೊಸ ಹೆಜ್ಜೆ ಇಡುತ್ತಿದೆ. ಕಂಪನಿಯನ್ನು ಆರ್ಥಿಕವಾಗಿ ಹೆಚ್ಚು ಸ್ಪರ್ಧಾತ್ಮಕವಾಗಿಸಲು ಅದರ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಆಲಿವರ್ ಬ್ಲೂಮ್ ಅವರು ಹತ್ತಾರು ಸಾವಿರ ಹೆಚ್ಚುವರಿ ಉದ್ಯೋಗಗಳನ್ನು ಕಡಿತಗೊಳಿಸಲು ಮತ್ತು ಹಲವು ಪ್ರಮುಖ ಕಾರ್ಖಾನೆಗಳನ್ನು ಮುಚ್ಚಲು ನಿರ್ಧರಿಸಿದ್ದಾರೆ ಎಂದು ಪ್ರತಿಷ್ಠಿತ ಜರ್ಮನ್ ಮಾಧ್ಯಮ 'ಮ್ಯಾನೇಜರ್ ಮ್ಯಾಗಜಿನ್' ವರದಿ ಮಾಡಿದೆ.

ಉದ್ಯೋಗ ಕಡಿತದ ಗುರಿ 1 ಲಕ್ಷಕ್ಕೆ ಹೆಚ್ಚಳ!

ಕಳೆದ ವಾರ ನಡೆದ ಉನ್ನತ ಮಟ್ಟದ ನಿರ್ವಹಣಾ ಮಂಡಳಿಯ ಸಭೆಯಲ್ಲಿ ಸಿಇಒ ಆಲಿವರ್ ಬ್ಲೂಮ್ ಅವರು ಮಂಡಿಸಿದ ಹೊಸ ಯೋಜನೆಯ ಪ್ರಕಾರ, ಈ ಹಿಂದೆ ಯೋಜಿಸಲಾಗಿದ್ದ ಸಿಬ್ಬಂದಿ ಕಡಿತದ ಪ್ರಮಾಣವನ್ನು ದ್ವಿಗುಣಗೊಳಿಸಲು ನಿರ್ಧರಿಸಲಾಗಿದೆ. ಇದರ ಅನ್ವಯ ಕಂಪನಿಯು ಬರೋಬ್ಬರಿ 1,00,000 (ಒಂದು ಲಕ್ಷ) ನೌಕರರನ್ನು ಕೆಲಸದಿಂದ ತೆಗೆದುಹಾಕಲು ಸಜ್ಜಾಗಿದೆ. ಪ್ರಸ್ತುತ ಪೋರ್ಷೆ (Porsche) ಮತ್ತು ಆಡಿ (Audi) ಬ್ರ್ಯಾಂಡ್‌ಗಳ ಮಾಲೀಕತ್ವ ಹೊಂದಿರುವ ವೋಕ್ಸ್‌ವ್ಯಾಗನ್ ಸಮೂಹವು ವಿಶ್ವಾದ್ಯಂತ ಸುಮಾರು 6,57,000 ಜನರನ್ನು ನೇಮಿಸಿಕೊಂಡಿದೆ. ಈ ಬೃಹತ್ ಕಾರ್ಯಪಡೆಯಲ್ಲಿ ಶೇ.15 ಕ್ಕಿಂತ ಹೆಚ್ಚು ಜನರನ್ನು ಕಡಿತಗೊಳಿಸುವುದು ಸಿಇಒ ಅವರ ಆಲೋಚನೆಯಾಗಿದೆ.

ಜರ್ಮನಿಯ 4 ಪ್ರಮುಖ ಕಾರ್ಖಾನೆಗಳಿಗೆ ಬೀಗ?

ವೆಚ್ಚ ನಿಯಂತ್ರಣದ ಭಾಗವಾಗಿ ಈ ದಶಕದ (2030) ಅಂತ್ಯದ ವೇಳೆಗೆ ಸುಮಾರು €11 ಬಿಲಿಯನ್ (ಅಂದಾಜು 12.5 ಬಿಲಿಯನ್ ಡಾಲರ್) ಓವರ್‌ಹೆಡ್ ವೆಚ್ಚವನ್ನು ಕಡಿತಗೊಳಿಸುವ ಗುರಿಯನ್ನು ಕಂಪನಿ ಹೊಂದಿದೆ. ಇದಕ್ಕಾಗಿ ಮಧ್ಯಮ ಅವಧಿಯಲ್ಲಿ ಜರ್ಮನಿಯಲ್ಲೇ ಇರುವ 4 ಪ್ರಮುಖ ಕಾರು ಉತ್ಪಾದನಾ ಘಟಕಗಳನ್ನು ಮುಚ್ಚಲು ನಿರ್ಧರಿಸಲಾಗಿದೆ. ಅವುಗಳೆಂದರೆ:

  • ನೆಕ್ಕರ್‌ಸಲ್ಮ್‌ನಲ್ಲಿರುವ ಆಡಿ (Audi) ತಾಣ
  • ಹ್ಯಾನೋವರ್‌ನಲ್ಲಿರುವ ವಿಡಬ್ಲ್ಯೂ (VW) ಸ್ಥಾವರ
  • ಜ್ವಿಕೌನಲ್ಲಿರುವ ವಿಡಬ್ಲ್ಯೂ (VW) ಸ್ಥಾವರ
  • ಎಮ್ಡೆನ್‌ನಲ್ಲಿರುವ ವಿಡಬ್ಲ್ಯೂ (VW) ಸ್ಥಾವರ

ಜೊತೆಗೆ, ದೀರ್ಘಕಾಲದಿಂದ ಕಡಿಮೆ ಲಾಭದಾಯಕತೆಯಿಂದ ತತ್ತರಿಸುತ್ತಿರುವ ಮುಖ್ಯ 'ವೋಕ್ಸ್‌ವ್ಯಾಗನ್' ಬ್ರ್ಯಾಂಡ್ ಅನ್ನು ಸಮೂಹದಿಂದ ಪ್ರತ್ಯೇಕಿಸಿ, ಇಡೀ ಗ್ರೂಪ್ ಅನ್ನು ಹೆಚ್ಚು ಚುರುಕಾಗಿಸಲು (Lean) ಬ್ಲೂಮ್ ಚಿಂತನೆ ನಡೆಸುತ್ತಿದ್ದಾರೆ.

ತೀವ್ರಗೊಂಡ ಜಾಗತಿಕ ಪೈಪೋಟಿ ಮತ್ತು ಹಿನ್ನಡೆ

ವೋಕ್ಸ್‌ವ್ಯಾಗನ್ ಇಷ್ಟೊಂದು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಲು ಜಾಗತಿಕ ಮಾರುಕಟ್ಟೆಯಲ್ಲಿ ಎದುರಾಗುತ್ತಿರುವ ಸವಾಲುಗಳೇ ಪ್ರಮುಖ ಕಾರಣ. ವಿಶ್ವದ ಅತಿ ದೊಡ್ಡ ಆಟೋ ಮಾರುಕಟ್ಟೆಯಾದ ಚೀನಾದಲ್ಲಿ ವೋಕ್ಸ್‌ವ್ಯಾಗನ್ ಮಾರಾಟ ಕುಸಿದಿದೆ.  ಚೀನಾದ ಬಿವೈಡಿ (BYD Co.) ಮತ್ತು ಯುರೋಪಿನ ಸ್ಟೆಲ್ಲಾಂಟಿಸ್ (Stellantis NV) ನಂತಹ ದೈತ್ಯ ಇವಿ ಹಾಗೂ ಆಟೋ ಕಂಪನಿಗಳಿಂದ ತೀವ್ರ ಪೈಪೋಟಿ ಎದುರಾಗಿದೆ. ಅಮೆರಿಕ ವಿಧಿಸುತ್ತಿರುವ ಹೊಸ ಆಮದು ಸುಂಕಗಳು ಜರ್ಮನ್ ಕಾರುಗಳ ಮಾರುಕಟ್ಟೆಗೆ ಹೊಡೆತ ನೀಡಿವೆ.

ಇದಕ್ಕೆ ಪೂರಕ ಎಂಬಂತೆ, ಈಗಾಗಲೇ ಕಂಪನಿಯು ತನ್ನ ಒಟ್ಟಾರೆ ಉತ್ಪಾದನಾ ಸಾಮರ್ಥ್ಯವನ್ನು ವಾರ್ಷಿಕ 12 ಮಿಲಿಯನ್ ವಾಹನಗಳಿಂದ 9 ಮಿಲಿಯನ್‌ಗೆ ಇಳಿಸಿದೆ. ಅಲ್ಲದೆ, ವೆಚ್ಚ ಸರಿದೂಗಿಸಲು 'ಎವರ್ಲೆನ್ಸ್ ಮೆರೈನ್-ಎಂಜಿನ್' ಘಟಕದಲ್ಲಿದ್ದ ಶೇ. 51 ರಷ್ಟು ಪಾಲನ್ನು ಮಾರಾಟ ಮಾಡಿದೆ. ಈಗಾಗಲೇ 28,000 ಕಾರ್ಮಿಕರು ಸ್ವಯಂಪ್ರೇರಿತರಾಗಿ ಕಂಪನಿ ತೊರೆಯಲು ಒಪ್ಪಿಕೊಂಡಿದ್ದಾರೆ.

ಕಾರ್ಮಿಕ ಸಂಘಟನೆಗಳಿಂದ ಉಗ್ರ ಪ್ರತಿಭಟನೆಯ ಎಚ್ಚರಿಕೆ

ಸಿಇಒ ಆಲಿವರ್ ಬ್ಲೂಮ್ ಅವರ ಈ ಕಠಿಣ ಪರಿಷ್ಕೃತ ಯೋಜನೆಯನ್ನು ಮುಂದಿನ ತಿಂಗಳು ಮೇಲ್ವಿಚಾರಣಾ ಮಂಡಳಿಯ (Supervisory Board) ಮುಂದೆ ಚರ್ಚೆಗೆ ಇಡಲಾಗುವುದು. ಆದರೆ, ಈ ಯೋಜನೆಗಳು ಸುಲಭವಾಗಿ ಜಾರಿಯಾಗುವುದು ಅನುಮಾನ ಎನ್ನಲಾಗಿದೆ.

ಕಾರ್ಮಿಕ ಮಂಡಳಿ ಮತ್ತು ಐಜಿ ಮೆಟಾಲ್ ಒಕ್ಕೂಟದ ಜಂಟಿ ಹೇಳಿಕೆ:

ಈ ನಿರ್ಧಾರಗಳು ನಮ್ಮ ಒಟ್ಟಾರೆ ಕಾರ್ಯಪಡೆ ಮತ್ತು ನಾವು ಕಾರ್ಯನಿರ್ವಹಿಸುವ ಇಡೀ ಪ್ರದೇಶಗಳನ್ನು ಅಸ್ಥಿರಗೊಳಿಸುತ್ತವೆ. ಇಂತಹ ಯೋಜನೆಗಳನ್ನು ಹಠ ಹಿಡಿದು ಜಾರಿಗೊಳಿಸಲು ಮುಂದಾದರೆ, ನಾವು ನಮ್ಮ ಸಂಪೂರ್ಣ ಶಕ್ತಿಯನ್ನು ಬಳಸಿ ಉಗ್ರವಾಗಿ ಪ್ರತಿರೋಧಿಸುತ್ತೇವೆ."

ವೋಕ್ಸ್‌ವ್ಯಾಗನ್ ಕಂಪನಿಯ ನಿಯಮಾವಳಿಗಳ ಪ್ರಕಾರ ಉದ್ಯೋಗ ಕಡಿತ ಮಾಡುವುದು ಅಷ್ಟು ಸುಲಭವಲ್ಲ. ಏಕೆಂದರೆ ಕಂಪನಿಯ ಮೇಲ್ವಿಚಾರಣಾ ಮಂಡಳಿಯಲ್ಲಿ ಅರ್ಧದಷ್ಟು ಸ್ಥಾನಗಳನ್ನು ಕಾರ್ಮಿಕ ಪ್ರತಿನಿಧಿಗಳೇ ಹೊಂದಿದ್ದಾರೆ. ಉಳಿದಂತೆ ಯೂನಿಯನ್‌ಗಳ ಪರವಾಗಿ ಒಲವು ಹೊಂದಿರುವ ಜರ್ಮನಿಯ ಲೋವರ್ ಸ್ಯಾಕ್ಸೋನಿ ರಾಜ್ಯ ಸರ್ಕಾರವು ಇನ್ನೂ ಎರಡು ಪ್ರಮುಖ ಸ್ಥಾನಗಳನ್ನು ಹೊಂದಿದೆ. ಹೀಗಾಗಿ, ಕಂಪನಿ ಮತ್ತು ಕಾರ್ಮಿಕ ಸಂಘಟನೆಗಳ ನಡುವೆ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಸಂಘರ್ಷ ಏರ್ಪಡುವ ಲಕ್ಷಣಗಳು ದಟ್ಟವಾಗಿವೆ.

PREV
Read more Articles on
click me!

Recommended Stories

Govt Jobs: ಸರ್ಕಾರಿ ನೌಕರಿ ಆಕಾಂಕ್ಷಿಗಳಿಗೆ ಸಿಹಿಸುದ್ದಿ: 6 ತಿಂಗಳಲ್ಲಿ 72,186 ಹುದ್ದೆಗಳ ಭರ್ತಿಗೆ ಸರ್ಕಾರ ಆದೇಶ!
ಪ್ರತಿಷ್ಠಿತ ಪವನ್ ಹನ್ಸ್ ಲಿಮಿಟೆಡ್‌ನಲ್ಲಿ ಭರ್ಜರಿ ಉದ್ಯೋಗಾವಕಾಶ: 22 ಹುದ್ದೆಗಳಿಗೆ ನೇಮಕಾತಿ, 1ಲಕ್ಷಕ್ಕೂ ಅಧಿಕ ವೇತನ!