ಅಹೋರಾತ್ರಿ ಧರಣಿ ನಡೆಸಿದ್ದ ಉಪನ್ಯಾಸಕರಿಗೆ ಗುಡ್‌ ನ್ಯೂಸ್‌

By Kannadaprabha NewsFirst Published Nov 18, 2020, 9:08 AM IST
Highlights

 ಪಿಯು ಭಾವಿ ಉಪನ್ಯಾಸಕರಿಗೆ ನ.20ರಿಂದ ನೇಮಕಾತಿ ಆದೇಶ ನೀಡಲಾಗುತ್ತಿದೆ. ಈ ಸಂಬಂಧ ಇಲಾಖೆಯ ಅಧಿಕಾರಿಗಳಿಗೆ ಸ್ಪಷ್ಟಸೂಚನೆ ನೀಡಲಾಗಿದೆ

ಬೆಂಗಳೂರು (ನ.18):  ನೇಮಕಾತಿ ಆದೇಶಕ್ಕಾಗಿ ಕಳೆದ ತಿಂಗಳು ಅಹೋರಾತ್ರಿ ಧರಣಿ ನಡೆಸಿದ್ದ ಪಿಯು ಭಾವಿ ಉಪನ್ಯಾಸಕರಿಗೆ ನ.20ರಿಂದ ನೇಮಕಾತಿ ಆದೇಶ ನೀಡಲಾಗುವುದು. ಈ ಸಂಬಂಧ ಇಲಾಖೆಯ ಅಧಿಕಾರಿಗಳಿಗೆ ಸ್ಪಷ್ಟಸೂಚನೆ ನೀಡಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌. ಸುರೇಶ್‌ಕುಮಾರ್‌ ತಿಳಿಸಿದ್ದಾರೆ.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಕೌನ್ಸೆಲಿಂಗ್‌ ಮೂಲಕ ಸ್ಥಳ ನಿಯುಕ್ತಿಗೊಂಡಿರುವ ನೂತನ ಪಿಯು ಉಪನ್ಯಾಸಕ ಅಭ್ಯರ್ಥಿಗಳಿಗೆ ನ.20ರಿಂದ ನೇಮಕಾತಿ ಆದೇಶಗಳನ್ನು ನೀಡಲಾಗುವುದು. ಅಂದು ಇಲಾಖೆಯಿಂದ ಕೆಲ ಅಭ್ಯರ್ಥಿಗಳಿಗೆ ಸಾಂಕೇತಿಕವಾಗಿ ನೇಮಕಾತಿ ಆದೇಶ ನೀಡಲಾಗುವುದು, ನಂತರ ಉಳಿದವರಿಗೆ ವಿತರಿಸಲಾಗುವುದು ಎಂದು ತಿಳಿಸಿದರು.

2 ಸಾವಿರ ಹುದ್ದೆಗಳ ನೇಮಕಾತಿಗೆ SBI ಅರ್ಜಿ ಆಹ್ವಾನ ...

ಕಾಲೇಜುಗಳು ಆರಂಭವಾದ ದಿನದಿಂದ ನೇಮಕಾತಿ ಆದೇಶ ಜಾರಿಗೆ ಬರಲಿದ್ದು, ಅದಕ್ಕೂ ಮೊದಲು ನೂತನ ಉಪನ್ಯಾಸಕರಿಗೆ ಇಲಾಖೆಯ ನಿಯಮಗಳು, ಆಡಳಿತ, ವೃಂದ ಮತ್ತು ನೇಮಕಾತಿ ನಿಯಮಗಳು, ಉಪನ್ಯಾಸಕರ ವೃತ್ತಿ ಧರ್ಮ, ವೃತ್ತಿ ಗೌರವ ಸೇರಿದಂತೆ ಪ್ರೇರಣಾದಾಯಕ ತರಬೇತಿ ಕಾರ್ಯಾಗಾರವನ್ನು ಜಿಲ್ಲೆಗಳಲ್ಲಿ ಇಲ್ಲವೇ ವಿಭಾಗಗಳಲ್ಲಿ ನೀಡಲಾಗುವುದು ಎಂದು ಅವರು ವಿವರಿಸಿದರು.

ಕೋವಿಡ್‌ನಿಂದಾಗಿ ಆರ್ಥಿಕ ಇಲಾಖೆ ಮತ್ತು ಸಿಬ್ಬಂದಿ ಆಡಳಿತ ಸುಧಾರಣಾ ಇಲಾಖೆಗಳ ಆರ್ಥಿಕ ಮಿತವ್ಯಯ ಆದೇಶವಿತ್ತು ಹಾಗೂ ಶಾಲಾ ಕಾಲೇಜುಗಳ ಆರಂಭ ಕುರಿತು ಅನಿಶ್ಚಿತತೆ ಹಿನ್ನೆಲೆಯಲ್ಲಿ ಉಪನ್ಯಾಸಕ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಲು ಸಾಧ್ಯವಾಗಿರಲಿಲ್ಲ. ಈ ಮಿತವ್ಯಯ ಆದೇಶವಿದ್ದರೂ ಸಹ ಅಭ್ಯರ್ಥಿಗಳ ಹಿತದೃಷ್ಟಿಯಿಂದ ಕೌನ್ಸೆಲಿಂಗ್‌ ನಡೆಸಿ ಸ್ಥಳ ನಿಯುಕ್ತಿಗೆ ಅವಕಾಶ ನೀಡಲಾಗಿತ್ತು ಎಂದು ಅವರು ತಿಳಿಸಿದ್ದಾರೆ.

click me!