ಶೇ.100 ಶಿಕ್ಷಣ ಸಿಬ್ಬಂದಿ ಭರ್ತಿ ಮಾಡಿ: ವಾಲಾ

By Kannadaprabha NewsFirst Published Sep 3, 2020, 7:41 AM IST
Highlights

ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಅನುಷ್ಠಾನಗೊಳಿಸಿದರೆ ಉತ್ತಮ ಫಲಿತಾಂಶ ಪಡೆಯಬಹುದು. ಹಾಗೂ ಶಿಕ್ಷಣ ಇಲಾಖೆಯಲ್ಲಿ ಸಿಬ್ಬಂದಿ ಪೂರ್ತಿ ಆಯ್ಕೆ ನಡೆಯಬೇಕು ಎಂದು ರಾಜ್ಯಪಾಲ ಹಾಗೂ ವಿವಿಗಳ ಕುಲಾಧಿಪತಿಗಳೂ ಆಗಿರುವ ವಿ.ಆರ್‌. ವಾಲಾ ಸಲಹೆ ನೀಡಿದ್ದಾರೆ.

ಬೆಂಗಳೂರು (ಸೆ.03):  ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಶೇಕಡಾ ನೂರರಷ್ಟು ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಭರ್ತಿ ಮಾಡಿ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಅನುಷ್ಠಾನಗೊಳಿಸಿದರೆ ಉತ್ತಮ ಫಲಿತಾಂಶ ಪಡೆಯಬಹುದು ಎಂದು ರಾಜ್ಯಪಾಲ ಹಾಗೂ ವಿವಿಗಳ ಕುಲಾಧಿಪತಿಗಳೂ ಆಗಿರುವ ವಿ.ಆರ್‌. ವಾಲಾ ಸಲಹೆ ನೀಡಿದರು.

ರಾಜಭವನದಲ್ಲಿ ಬುಧವಾರ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಅನುಷ್ಠಾನ ಕುರಿತು ರಾಜ್ಯದ ಎಲ್ಲ ವಿವಿಗಳ ಕುಲಪತಿ ಮತ್ತು ಉನ್ನತ ಶಿಕ್ಷಣ ಸಚಿವರ ಜೊತೆಗೆ ನಡೆಸಿದ ಸಭೆಯಲ್ಲಿ ಅವರು ಮಾತನಾಡಿದರು.

ಉದ್ಯೋಗಾಕ್ಷಿಂಗಳಿಗೆ ಗುಡ್‌ನ್ಯೂಸ್: 5846 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ...

ಗುಣಮಟ್ಟವಿಚಾರದಲ್ಲಿ ರಾಜ್ಯ ವಿಶ್ವಮಟ್ಟದಲ್ಲಿ ಸ್ಪರ್ಧೆ ನಡೆಸಲು ಸಜ್ಜುಗೊಳ್ಳಬೇಕು. ಈ ಸಂಬಂಧ ಎದುರಾಗುವ ಸವಾಲುಗಳನ್ನು ಎದುರಿಸಲು ಕುಲಪತಿಗಳು ಸಿದ್ಧರಾಗಬೇಕು, ಅಲ್ಲದೆ, ಎಲ್ಲ ಕುಲಪತಿಗಳು ಎನ್‌ಇಪಿ ಅನುಷ್ಠಾನದ ತಮ್ಮ ಅಭಿಪ್ರಾಯಗಳನ್ನು ನೀಡಬೇಕು. ಇವುಗಳನ್ನು ಸಂಗ್ರಹಿಸಿ ಸಮನ್ವಯ ಮತ್ತು ತಂತ್ರಜ್ಞಾನ ಸಮಿತಿ ತಮಗೆ ವರದಿ ನೀಡಬೇಕು ಎಂದರು.

ಸ್ವಾಯತ್ತತೆ ಬೇಕೆಂದ ಉಪ ಕುಲಪತಿಗಳು:

ವಿಶ್ವವಿದ್ಯಾಲಯಗಳು ಇನ್ನಷ್ಟುಪರಿಣಾಮಕಾರಿಯಾಗಿ ಕೆಲಸ ಮಾಡಲು ಹಾಗೂ ಶಿಕ್ಷಣ ನೀತಿಯನ್ನು ಉತ್ತಮವಾಗಿ ಜಾರಿ ಮಾಡಲು ವಿವಿಗಳಿಗೆ ಆಡಳಿತಾತ್ಮಕ, ಶೈಕ್ಷಣಿಕ ಹಾಗೂ ಆರ್ಥಿಕ ಸ್ವಾಯತ್ತೆ ನೀಡಬೇಕು. ವಿವಿಗಳನ್ನು ತಾಂತ್ರಿಕವಾಗಿ ಮೇಲ್ದರ್ಜೆಗೇರಿಸಬೇಕು ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ಕೆಲವು ಕುಲಪತಿಗಳು ಅಭಿಪ್ರಾಯಪಟ್ಟರು.

ಅಜೀಂ ಪ್ರೇಮ್‌ಜೀ ವಿಶ್ವವಿದ್ಯಾಲಯದ ಕುಲಪತಿ ಅನುರಾಗ್‌ ಬೇಹಾರ್‌ ಎನ್‌ಇಪಿ ಅನುಷ್ಠಾನದ ಬಗ್ಗೆ ಪ್ರಾತ್ಯಕ್ಷಿಕೆಯನ್ನು ನೀಡಿದರು. ಬೆಂ.ವಿವಿ ಕುಲಪತಿ ಪ್ರೊ. ಕೆ.ಆರ್‌. ವೇಣುಗೋಪಾಲ್‌, ವಿಟಿಯು ವಿವಿ ಪ್ರೊ. ಕರಿಸಿದ್ದಪ್ಪ ಸೇರಿದಂತೆ ರಾಜ್ಯದ 27 ವಿವಿಗಳ ಕುಲಪತಿಗಳು ಸಭೆಯಲ್ಲಿ ಭಾಗವಹಿಸಿದ್ದರು.

click me!