15ರೊಳಗೆ ಪ್ರೌಢಶಾಲಾ ಶಿಕ್ಷಕರಿಗೆ ಬಡ್ತಿ

By Kannadaprabha NewsFirst Published Sep 3, 2020, 7:26 AM IST
Highlights

ಪ್ರೌಢ ಶಾಲಾ ಶಿಕ್ಷಕರಿಗೆ ಸೆ.9ರೊಳಗೆ ಚರ್ಚಿಸಿ 15ರೊಳಗೆ ಕೌನ್ಸೆಲಿಂಗ್‌ ನಡೆಸಿ ಬಡ್ತಿ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌. ಸುರೇಶ್‌ಕುಮಾರ್‌ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
 

 ಬೆಂಗಳೂರು(ಸೆ.03) :  ಮೈಸೂರು ವಿಭಾಗದ ಪ್ರೌಢಶಾಲಾ ಗ್ರೇಡ್‌-2 ಸಹ ಶಿಕ್ಷಕರಿಂದ ಮುಖ್ಯಶಿಕ್ಷಕ ಹುದ್ದೆಗೆ ಬಡ್ತಿ ನೀಡುವ ಸಂಬಂಧ ವಲಯ ಆಯುಕ್ತರ ಜೊತೆ ಸೆ.9ರೊಳಗೆ ಚರ್ಚಿಸಿ 15ರೊಳಗೆ ಕೌನ್ಸೆಲಿಂಗ್‌ ನಡೆಸಿ ಬಡ್ತಿ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌. ಸುರೇಶ್‌ಕುಮಾರ್‌ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಬುಧವಾರ ಬೆಂಗಳೂರಿನಲ್ಲಿ ವಿಧಾನ ಪರಿಷತ್‌ ಸದಸ್ಯರಾದ ಮರಿತಿಬ್ಬೇಗೌಡ, ಎಸ್‌.ಎಲ್‌. ಭೋಜೇಗೌಡ ಮತ್ತು ರಮೇಶ್‌ಗೌಡ ಅವರೊಂದಿಗೆ ಸಚಿವರು ಸಭೆ ನಡೆಸಿ, ಬಡ್ತಿಯಲ್ಲಿನ ಲೋಪಗಳನ್ನು ಸರಿಪಡಿಸಿ ಪ್ರತಿ ವರ್ಷ ಸಹ ಶಿಕ್ಷಕ ವೃಂದದಿಂದ ಮುಖ್ಯೋಪಾಧ್ಯಾಯ ಹುದ್ದೆಗೆ ಬಡ್ತಿ ಪ್ರಕ್ರಿಯೆ ಕೈಗೊಳ್ಳುವಂತೆಯೂ ತಿಳಿಸಿದರು.

ಉದ್ಯೋಗಾಕ್ಷಿಂಗಳಿಗೆ ಗುಡ್‌ನ್ಯೂಸ್: 5846 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ...

ಆರ್‌ಟಿಇ ಶುಲ್ಕ ಮರುಪಾವತಿಸುವುದಕ್ಕಾಗಿ 2020-21ನೇ ಸಾಲಿನ ಬಜೆಟ್‌ನಲ್ಲಿ ನಿಗದಿಪಡಿಸಿದ್ದ ಅನುದಾನದಲ್ಲಿ ಮೊದಲ ಕಂತಿನಲ್ಲಿ 275 ಕೋಟಿ ರು.ಗಳನ್ನು ಶಾಲೆಗಳಿಗೆ ವಿತರಿಸಲಾಗಿದೆ. ಬಾಕಿಯಿರುವ 275 ಕೋಟಿ ರು. ಬಿಡುಗಡೆಗೆ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ. ಅನುದಾನ ಬಿಡುಗಡೆಯಾದ ತಕ್ಷಣವೇ ಶಾಲೆಗಳಿಗೆ ಆರ್‌ಟಿಇ ಶುಲ್ಕ ಬಾಕಿ ನೀಡಲಾಗುವುದು ಎಂದರು.

ಪ್ರಮುಖ ಬೇಡಿಕೆಗಳೇನು?:

ಖಾಸಗಿ ಶಿಕ್ಷಣ ಸಂಸ್ಥೆಗಳು ದಾಖಲಾತಿ ಪ್ರಕ್ರಿಯೆಗೆ ಅನುಗುಣವಾಗಿ ಹಂತಹಂತವಾಗಿ ಪಠ್ಯಪುಸ್ತಕಗಳ ಖರೀದಿಸಲು ಅವಕಾಶ ಕಲ್ಪಿಸುವುದು, 2019-20ನೇ ಸಾಲಿನ ಆರ್‌ಟಿಇ ಬಾಕಿ ಮೊತ್ತ ಕೂಡಲೇ ಪಾವತಿಸಲು ಕ್ರಮ ವಹಿಸುವುದು, ಹಳೆಯ ಶಾಲೆಗಳ ಮಾನ್ಯತೆ ನವೀಕರಣಕ್ಕೆ ಸಂಬಂಧಿಸಿದಂತೆ ಹೊಸ ಶಾಲೆಗಳಿಗೆ ವಿಧಿಸುತ್ತಿರುವ ಎರಡು ಲಕ್ಷ ರು. ಠೇವಣಿ ನೀಡಬೇಕೆಂಬ ನಿಯಮವನ್ನು ಕೈಬಿಡುವುದು ಸೇರಿದಂತೆ ಹಲವಾರು ಬೇಡಿಕೆಗಳನ್ನು ಈಡೇರಿಸಬೇಕೆಂದು ವಿಧಾನ ಪರಿಷತ್‌ ಸದಸ್ಯರು ಒತ್ತಾಯಿಸಿದರು.

ಎಲ್ಲ ಬೇಡಿಕೆಗಳ ಸಾಧಕ-ಬಾಧಕಗಳನ್ನು ಕುರಿತು ಚರ್ಚೆ ನಡೆಸಿದ ಸಚಿವರು, ಮತ್ತೊಮ್ಮೆ ಚರ್ಚಿಸಿ ಬಗೆಹರಿಸುವ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು. ಸಭೆಯಲ್ಲಿ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್‌.ಆರ್‌. ಉಮಾಶಂಕರ್‌ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಹಾಜರಿದ್ದರು.

click me!