ಆಟೋಮೊಬೈಲ್ ಉದ್ಯಮದಲ್ಲಿ 3.5 ಲಕ್ಷ ಉದ್ಯೋಗಕ್ಕೆ ಕೊಕ್|| ತೀವ್ರ ಆರ್ಥಿಕ ಹಿಂಜರಿತ| ಕಂಪನಿಗಳು ತಾತ್ಕಾಲಿಕ ಬಂದ್| ಉತ್ತೇಜನಾ ಪ್ಯಾಕೇಜ್‌ಗಾಗಿ ಕಂಪನಿಗಳಿಂದ ಕೇಂದ್ರಕ್ಕೆ ಮೊರೆ
ನವದೆಹಲಿ[ಆ.08]: ದೇಶದಲ್ಲಿ ಆರ್ಥಿಕ ಹಿಂಜರಿತ ಉಂಟಾಗಿದೆ ಎಂಬ ಆರೋಪಗಳು ನಿಜವಾಗಿದ್ದು, ಆಟೋಮೊಬೈಲ್ ಉದ್ಯಮ ಭಾರಿ ಹೊಡೆತಕ್ಕೆ ಒಳಗಾಗಿದೆ. ಕಾರು ಹಾಗೂ ಮೋಟರ್‌ಸೈಕಲ್‌ಗಳ ಮಾರಾಟ ತೀವ್ರ ರೀತಿಯಲ್ಲಿ ಕುಸಿದಿರುವ ಹಿನ್ನೆಲೆಯಲ್ಲಿ ಕಳೆದ ಏಪ್ರಿಲ್‌ನಿಂದ 3.50 ಲಕ್ಷ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ರಾಯಿಟರ್ಸ್ ಸುದ್ದಿಸಂಸ್ಥೆ ವರದಿ ಮಾಡಿದೆ. ಈಗಲೂ ಉತ್ಪಾದನೆ ಸ್ಥಗಿತಗೊಳಿಸಿ ಕಂಪನಿಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗುತ್ತಿದೆ. ಶಿಫ್ಟ್‌ಗಳನ್ನು ರದ್ದುಗೊಳಿಸಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಈ ನಡುವೆ, ಬುಧವಾರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾದ ಆಟೋಮೊಬೈಲ್ ಉದ್ಯಮದ ಪ್ರಮುಖರು ವಾಹನಗಳ ಮೇಲಿನ ಜಿಎಸ್‌ಟಿ ಕಡಿತ ಒಳಗೊಂಡ ಉತ್ತೇಜನಾ ಪ್ಯಾಕೇಜ್ ಘೋಷಿಸುವಂತೆ ಮೊರೆ ಇಟ್ಟಿದ್ದಾರೆ. ರಿಸವ್‌ರ್ ಬ್ಯಾಂಕ್ ಮಾಡಿರುವ ಬಡ್ಡಿ ಕಡಿತವನ್ನು ಬ್ಯಾಂಕುಗಳು ಗ್ರಾಹಕರಿಗೆ ವರ್ಗಾಯಿಸಬೇಕು. ಉತ್ತಮ ಹಣಕಾಸು ನಿರ್ವಹಣೆ ಹೊಂದಿರುವ ಜನರಿಗೆ ಸಾಲ ನೀಡುವುದನ್ನು ಸ್ಥಗಿತಗೊಳಿಸಬಾರದು. ಎಲ್ಲ ಡೀಲರ್‌ಗಳನ್ನು ಸುಸ್ತಿದಾರರು ಎಂದು ಪರಿಗಣಿಸಬಾರದು ಎಂದು ಮೊರೆ ಇಟ್ಟಿವೆ.
ಭಾರಿ ಕುಸಿತ:
ಮಾರಾಟ ಕುಸಿತದಿಂದ ಆರ್ಥಿಕ ಹಿಂಜರಿತ ಕಂಡುಬಂದಿರುವ ಹಿನ್ನೆಲೆಯಲ್ಲಿ ಆಟೋಮೊಬೈಲ್ ಉದ್ಯಮ ಕಂಪನಿಗಳು, ಬಿಡಿಭಾಗ ತಯಾರಕರು ಹಾಗೂ ಡೀಲರ್‌ಗಳು ಕಳೆದ ಏಪ್ರಿಲ್‌ನಿಂದ 3.50 ಲಕ್ಷ ಮಂದಿಯನ್ನು ವಜಾಗೊಳಿಸಿವೆ. ಆಟೋ ಮೊಬೈಲ್ ಉದ್ಯಮ ದೇಶದ ಜಿಡಿಪಿಗೆ ಶೇ.7ರಷ್ಟುಕೊಡುಗೆ ನೀಡುತ್ತಿದೆ. ಆದರೆ ಇತ್ತೀಚಿನ ದಿನಗಳಲ್ಲಿ ತೀವ್ರ ರೀತಿಯಲ್ಲಿ ಹೊಡೆತಕ್ಕೆ ಒಳಗಾಗಿದೆ. ಕಳೆದ 9 ತಿಂಗಳಿನಿಂದ ವಾಹನ ಮಾರಾಟ ಕುಸಿಯುತ್ತಲೇ ಸಾಗಿದೆ. ವರ್ಷದಿಂದ ವರ್ಷದ ಲೆಕ್ಕ ಹಿಡಿದರೆ ಕೆಲವು ಆಟೋಮೊಬೈಲ್ ಕಂಪನಿಗಳ ವಾಹನಗಳ ಮಾರಾಟ ಇತ್ತೀಚಿನ ತಿಂಗಳಲ್ಲಿ ಶೇ.30ರಷ್ಟುಕುಸಿತ ಅನುಭವಿಸಿದೆ ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ.
ಏಪ್ರಿಲ್- ಜೂನ್ ಅವಧಿಯಲ್ಲಿ ದೇಶದಲ್ಲಿ ಕಳೆದ ವರ್ಷ 69.42 ಲಕ್ಷ ವಾಹನಗಳು ಮಾರಾಟವಾಗಿದ್ದವು. ಆದರೆ ಈ ವರ್ಷ ಅದೇ ಅವಧಿಯಲ್ಲಿ 60.85 ಲಕ್ಷ ವಾಹನಗಳು ಮಾರಾಟ ಕಂಡಿವೆ. ಸುದ್ದಿಸಂಸ್ಥೆಯ ವರದಿಗೆ ಪೂರಕವೆನ್ನುವಂತೆ, ಕಳೆದ 3 ತಿಂಗಳಲ್ಲಿ ಆಟೋಮೊಬೈಲ್ ಉದ್ಯಮದಲ್ಲಿ ಸುಮಾರು 2 ಲಕ್ಷ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ಡೀಲರ್‌ಗಳ ಸಂಘಟನೆ ಒಕ್ಕೂಟ ಮಾಹಿತಿ ನೀಡಿದೆ.