ಕರ್ನಾಟಕಕ್ಕೆ ಹೋಲಿಸಿದರೆ ಖಾಲಿ ಹುದ್ದೆಗಳ ಸಂಖ್ಯೆಯಲ್ಲಿ ಕೇಂದ್ರ ಸರ್ಕಾರ ಉತ್ತಮ ಸ್ಥಿತಿಯಲ್ಲಿದ್ದು, ಹೆಚ್ಚಿನ ಅವಕಾಶವಿದೆ.
ನವದೆಹಲಿ [ಜು.26]: ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಉಳಿದಿರುವ ಹುದ್ದೆಗಳ ಪ್ರಮಾಣ ಗಣನೀಯವಾಗಿ ಕಡಿಮೆಯಾಗುತ್ತಾ ಬಂದಿದೆ. ಕರ್ನಾಟಕಕ್ಕೆ ಹೋಲಿಸಿದರೆ ಖಾಲಿ ಹುದ್ದೆಗಳ ಸಂಖ್ಯೆಯಲ್ಲಿ ಕೇಂದ್ರ ಸರ್ಕಾರ ಉತ್ತಮ ಸ್ಥಿತಿಯಲ್ಲೇ ಇದೆ ಎಂದು ಸ್ವತಃ ಸರ್ಕಾರ ರಾಜ್ಯಸಭೆಗೆ ಗುರುವಾರ ಮಾಹಿತಿ ನೀಡಿದೆ.
ಪ್ರಶ್ನೋತರ ಕಲಾಪದ ವೇಳೆ ಉತ್ತರ ನೀಡಿದ ಸಿಬ್ಬಂದಿ, ಸಾರ್ವಜನಿಕ ಅಹವಾಲು ಹಾಗೂ ಪಿಂಚಣಿ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್, ಕೇಂದ್ರ ಸರ್ಕಾರದ ಹುದ್ದೆಗಳನ್ನು ಭರ್ತಿ ಮಾಡುವುದು ನಿರಂತರ ಪ್ರಕ್ರಿಯೆ. ಖಾಲಿ ಉಳಿದಿರುವ ಹುದ್ದೆಗಳ ಪ್ರಮಾಣವನ್ನು ಮತ್ತಷ್ಟುಕುಗ್ಗಿಸುವ ಪ್ರಯತ್ನ ನಡೆಯುತ್ತಿದೆ. ಹಲವು ರಾಜ್ಯಗಳಿಗೆ ಹೋಲಿಸಿದರೆ ಖಾಲಿ ಹುದ್ದೆಗಳ ವಿಚಾರದಲ್ಲಿ ಕೇಂದ್ರ ಸರ್ಕಾರವೇ ಪರವಾಗಿಲ್ಲ ಎಂದು ಹೇಳಿದರು.
undefined
ನರೇಂದ್ರ ಮೋದಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಅಂದರೆ 2014ರ ಮಾ.31ಕ್ಕೆ ಅನುಗುಣವಾಗಿ ಖಾಲಿ ಹುದ್ದೆಗಳ ಸಂಖ್ಯೆ ಕೇಂದ್ರ ಸರ್ಕಾರದಲ್ಲಿ ಶೇ.16.2ರಷ್ಟಿತ್ತು. 2016-17ರಲ್ಲಿ ಅದು ಶೇ.11.36ಕ್ಕೆ ಇಳಿಸಿದೆ. ಆದರೆ ಅದೇ ಕರ್ನಾಟಕದಲ್ಲಿ 2014-15ನೇ ಸಾಲಿನಲ್ಲಿ ಖಾಲಿ ಹುದ್ದೆ ಪ್ರಮಾಣ ಶೇ.27.3ರಷ್ಟಿತ್ತು. 2018-19ರಲ್ಲಿ ಅದು ಶೇ.32.56ಕ್ಕೇರಿಕೆಯಾಗಿದೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಿಗೆ 4 ಲಕ್ಷ ಹುದ್ದೆಗಳನ್ನು ತುಂಬಲು ಕ್ರಮ ಕೈಗೊಳ್ಳಲಾಗಿದೆ. 2020ರೊಳಗೆ ಅದನ್ನು ಪೂರ್ಣ ಗೊಳಿಸಲಾಗುತ್ತದೆ ಎಂದು ತಿಳಿಸಿದರು.