ಅನುಕಂಪದ ನೌಕರಿ: ಬದಲಾವಣೆ ಮಾಡಿ ಸರ್ಕಾರ ಮಹತ್ವದ ಆದೇಶ

By Kannadaprabha NewsFirst Published Apr 10, 2021, 8:40 AM IST
Highlights

ಅನುಕಂಪದ ಆಧಾರದ ಮೇಲೆ ನೀಡುವ ನೌಕರಿಯ ನಿಯಮವನ್ನು ಬದಲಾವಣೆ ಮಾಡಿ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಏನದು ಮಹತ್ವದ ಆದೇಶ 

 ಬೆಂಗಳೂರು (ಏ.10):  ಸರ್ಕಾರಿ ನೌಕರರು ಅಕಾಲಿಕ ಮರಣಕ್ಕೀಡಾದ ಸಂದರ್ಭದಲ್ಲಿ ಅನುಕಂಪ ಆಧಾರಿತ ಹುದ್ದೆಗಳನ್ನು ಮೃತರ ಮಗಳಿಗೂ ನೀಡಬಹುದು. ಮೃತ ನೌಕರರ ಪತಿ ಅಥವಾ ಪತ್ನಿ ಸೂಚಿಸುವ ಅವಿವಾಹಿತ, ವಿವಾಹಿತ ಅಥವಾ ವಿಚ್ಛೇದಿತ ಮಗಳಿಗೆ ಅನುಕಂಪದ ಆಧಾರದ ಮೇಲೆ ಉದ್ಯೋಗ ನೀಡಬಹುದು ಎಂಬ ಮಹತ್ವದ ಆದೇಶವನ್ನು ರಾಜ್ಯ ಸರ್ಕಾರ ಹೊರಡಿಸಿದೆ.

ಮೃತ ನೌಕರರು ಅವಿವಾಹಿತರಾಗಿದ್ದರೆ ಅವರ ತಂದೆ ಅಥವಾ ತಾಯಿ ಸೂಚಿಸಿದ ಸಹೋದರ ಅಥವಾ ಸಹೋದರಿಯನ್ನು ನೇಮಕಾತಿ ಮಾಡಬಹುದು. ತಂದೆ, ತಾಯಿಯೂ ಮೃತಪಟ್ಟಿದ್ದರೆ ವಯಸ್ಸಿನ ಆಧಾರದ ಮೇಲೆ ಹಿರಿಯ ಸಹೋದರ ಅಥವಾ ಸಹೋದರಿಗೆ ಅನುಕಂಪದ ಆಧಾರದ ಮೇಲೆ ಕೆಲಸ ನೀಡಬಹುದು ಎಂದು ಆದೇಶಿಸಲಾಗಿದೆ.

ಈ ಸಂಬಂಧ ಕರ್ನಾಟಕ ಸಿವಿಲ್‌ ಸೇವಾ (ಅನುಕಂಪದ ಆಧಾರದ ಮೇಲೆ ನೇಮಕಾತಿ) ನಿಯಮಗಳು-1996ಕ್ಕೆ ತಿದ್ದುಪಡಿ ತಂದಿದ್ದು, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಶುಕ್ರವಾರ ಅಧಿಕೃತ ಆದೇಶ ಹೊರಡಿಸಿದೆ.

ಕರ್ನಾಟಕ ರಾಜ್ಯ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗದಲ್ಲಿ ನೇಮಕಾತಿ

ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ನೇತೃತ್ವದಲ್ಲಿ ಜನವರಿಯಲ್ಲಿ ನಡೆದಿದ್ದ ಸಚಿವ ಸಂಪುಟ ಸಭೆಯಲ್ಲಿ ವಿವಾಹಿತ ಹೆಣ್ಣು ಮಕ್ಕಳಿಗೂ ಅನುಕಂಪದ ಆಧಾರದ ಮೇಲೆ ಉದ್ಯೋಗ ನೀಡಲು ತೀರ್ಮಾನಿಸಲಾಗಿತ್ತು. ಇದರಂತೆ ಫೆ.2ರಂದು ತಿದ್ದುಪಡಿ ನಿಯಮಗಳ ಕರಡು ಪ್ರಕಟಿಸಿದ್ದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು 15 ದಿನಗಳೊಳಗಾಗಿ ಆಕ್ಷೇಪಣೆ ಸಲ್ಲಿಕೆಗೆ ಅವಕಾಶ ನೀಡಿತ್ತು.

ಆಕ್ಷೇಪಣೆಗಳನ್ನು ಪರಿಶೀಲಿಸಿ ಇದೀಗ ಅನುಕಂಪದ ಆಧಾರದಲ್ಲಿ ನೌಕರಿ ಪಡೆಯಲು ಕುಟುಂಬ ಸದಸ್ಯರ ಪೈಕಿ ಯಾರು ಅರ್ಹರು ಎಂಬುದರ ವ್ಯಾಖ್ಯೆಯನ್ನು ಕರ್ನಾಟಕ ನಾಗರಿಕ ಸೇವಾ (ಅನುಕಂಪದ ಆಧಾರದ ಮೇಲೆ ನೇಮಕಾತಿ) ತಿದ್ದುಪಡಿ ನಿಯಮಗಳು-2020ರಲ್ಲಿ ಸ್ಪಷ್ಟಪಡಿಸಲಾಗಿದೆ.

ಯಾರು ಅರ್ಹರು?:  ಮೃತ ಪುರುಷ ವಿವಾಹಿತ ನೌಕರನಾಗಿದ್ದರೆ ಆತನ ಮೇಲೆ ಅವಲಂಬಿತರಾಗಿದ್ದ ಆತನ ವಿಧವಾ ಪತ್ನಿ, ಮಗ ಮತ್ತು ಮಗಳು ಅರ್ಹರಾಗಿರುತ್ತಾರೆ. ಮೃತನ ಪತ್ನಿಯು ನೇಮಕಾತಿಗೆ ಅರ್ಹಳಲ್ಲದಿದ್ದರೆ ಅವರು ಸೂಚಿಸಿದ ಮಗ ಅಥವಾ ಮಗಳನ್ನು ನೇಮಕಾತಿ ಮಾಡಬಹುದು.

ಮಹಿಳಾ ಉದ್ಯೋಗಿ ವಿವಾಹಿತೆಯಾಗಿದ್ದು ಮೃತಪಟ್ಟರೆ ಆಕೆಯ ಮೇಲೆ ಅವಲಂಬಿತರಾಗಿದ್ದ ಆಕೆಯ ಮಗ, ಮಗಳು ಅಥವಾ ಪತಿಯು ಅರ್ಹರಾಗಿರುತ್ತಾರೆ. ಅವಿವಾಹಿತೆಯಾಗಿದ್ದರೆ ಆಕೆಯೊಂದಿಗೆ ವಾಸವಿದ್ದ ಸಹೋದರ ಅಥವಾ ಸಹೋದರಿ ಅರ್ಹರಾಗುತ್ತಾರೆ.

ಮೃತ ನೌಕರರ ಪತಿ ಅಥವಾ ಪತ್ನಿ ಈಗಾಗಲೇ ನಿಧನರಾಗಿದ್ದು ಮಕ್ಕಳು ಅಪ್ರಾಪ್ತರಾಗಿದ್ದರೆ 2 ವರ್ಷದೊಳಗೆ 18 ವರ್ಷ ಪೂರೈಸುವವರಿಗೆ ಅವಕಾಶ ನೀಡಬಹುದು. 18 ವರ್ಷ ತುಂಬಿದ ಬಳಿಕ ಸಂಬಂಧಪಟ್ಟಇಲಾಖಾ ಮುಖ್ಯಸ್ಥರಿಗೆ ಅರ್ಜಿ ಸಲ್ಲಿಸಲು ಎರಡು ವರ್ಷ ಕಾಲಾವಕಾಶ ನೀಡಬೇಕು. ಅಪ್ರಾಪ್ತ ಮಕ್ಕಳ ವಯಸ್ಸು ಸೂಕ್ತವಾಗಿಲ್ಲದಿದ್ದರೆ ಅವರೊಂದಿಗೆ ವಾಸಿಸುವ ಹಾಗೂ ಅವರನ್ನು ಪೋಷಿಸುವ ಕಾನೂನಿನ ಪ್ರಕಾರ ಪ್ರಮಾಣೀಕೃತ ಪೋಷಕರು ಅರ್ಹರಾಗುತ್ತಾರೆ ಎಂದು ಆದೇಶಿಸಲಾಗಿದೆ.

click me!