2018ರಿಂದ ನೇಮಕವಾದ ಗ್ರಾಪಂ ಸಿಬ್ಬಂದಿಗೆ ಕುತ್ತು

By Web Desk  |  First Published Aug 2, 2019, 9:44 AM IST

ಕರ್ನಾಟಕ ಸರ್ಕಾರ ಗ್ರಾಮ ಪಂಚಾಯಿತಿಗಳಿಗೆ ಕಡಿವಾಣ ಹಾಕಲು ಮುಂದಾಗಿದೆ. ಇಚ್ಛೆಗೆ ಅನುಸಾರ ಸಿಬ್ಬಂದಿ ನೇಮಿಸಿದ್ದಕ್ಕೂ ಅನುಮೋದಲೇ ನೀಡಬಾರದು ಎಂದು ಜಿಲ್ಲಾ ಪಂಚಾಯತ್ ಅಧಿಕಾರಿಗಳಿಗೂ ಸೂಚನೆ ನೀಡಲಾಗಿದೆ. 


ಬೆಂಗಳೂರು (ಆ.02):  ಗ್ರಾಮ ಪಂಚಾಯಿತಿಗಳು ತಮ್ಮ ಇಚ್ಛೆಗೆ ಅನುಸಾರ ಸಿಬ್ಬಂದಿ ನೇಮಕ ಮಾಡಿಕೊಳ್ಳುವುದಕ್ಕೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಮುಂದಾಗಿದೆ.

2018ರ ಮಾರ್ಚ್ 12ರ ನಂತರದಲ್ಲಿ ಪೂರ್ವಾನುಮತಿ ಪಡೆಯದೆ ಗ್ರಾಮ ಪಂಚಾಯಿತಿಗಳು ನೇಮಕಾತಿ ಮಾಡಿಕೊಂಡಿರುವ ಯಾವುದೇ ಪ್ರಕರಣಕ್ಕೆ ಅನುಮೋದನೆ ನೀಡಬಾರದು ಹಾಗೂ ಪ್ರಸ್ತಾವನೆಗಳಿಗೂ ಸಹ ಒಪ್ಪಿಗೆ ನೀಡಬಾರದೆಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಿದೆ. ಇದೇ ವೇಳೆ 2017ರ ಅಕ್ಟೋಬರ್‌ 31ರೊಳಗೆ ವಿವಿಧ ಸಿಬ್ಬಂದಿಯನ್ನು ಪೂರ್ವಾನುಮತಿ ಇಲ್ಲದೇ ನೇಮಕಾತಿ ಮಾಡಿಕೊಂಡಿದ್ದರೆ ಸರ್ಕಾರ ವಿಧಿಸಿರುವ ವಿವಿಧ ಷರತ್ತಿಗೆ ಒಳಪಟ್ಟು ಅನುಮೋದನೆ ನೀಡುವಂತೆ ತಿಳಿಸಿದೆ.

Tap to resize

Latest Videos

undefined

2017ರ ಅಕ್ಟೋಬರ್‌ 31ರೊಳಗೆ ಗ್ರಾಮ ಪಂಚಾಯಿತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬಿಲ್‌ ಕಲೆಕ್ಟರ್‌, ಕ್ಲರ್ಕ್, ಕ್ಲಕ್‌ ಕಂ ಡಾಟಾ ಎಂಟ್ರಿ ಆಪರೇಟರ್‌, ವಾಟರ್‌ ಮನ್‌/ಪಂಪ್‌ ಆಪರೇಟರ್‌, ಪಂಪ್‌ ಮೆಕಾನಿಕ್‌, ಜವಾನ ಹಾಗೂ ಸ್ವಚ್ಛತಾಗಾರ ವೃಂದದ ನೌಕರರನ್ನು ಪೂರ್ವಾನುಮತಿ ಇಲ್ಲದೇ ಗ್ರಾ.ಪಂ. ನಿರ್ಣಯದ ಮೂಲಕ ನೇಮಕ ಮಾಡಿಕೊಂಡಿದ್ದರೆ ಅಂಥವರನ್ನು ಜ್ಯೇಷ್ಠತೆ ಆಧಾರದ ಮೇಲೆ ಗ್ರಾ.ಪಂ. ನಿರ್ಣಯದ ದಿನದಿಂದ (ಸೇವೆಗೆ ಸೇರಿದ ದಿನಾಂಕ) ಸೇವಾ ಜ್ಯೇಷ್ಠತೆಗೆ ಮಾತ್ರ ಪರಿಗಣಿಸಬೇಕು. ಬೇರೆ ಯಾವುದೇ ಆರ್ಥಿಕ ಸೌಲಭ್ಯಗಳಿಗೆ ಅವರು ಅರ್ಹರಾಗುವುದಿಲ್ಲ ಎಂಬುದು ಸೇರಿದಂತೆ ವಿವಿಧ ಷರತ್ತುಗಳನ್ನು ವಿಧಿಸಲಾಗಿದೆ.

ಅನುಮೋದನೆಗೆ ಷರತ್ತುಗಳು: ಪ್ರತಿ ಕೆಲಸಕ್ಕೆ ಸರ್ಕಾರ ನಿಗದಿಪಡಿಸಿರುವ ಕನಿಷ್ಠ ವಿದ್ಯಾರ್ಹತೆ ಕಡ್ಡಾಯವಾಗಿ ಹೊಂದಿದ್ದರೆ ಮಾತ್ರ ಅಂತಹ ನೇಮಕಾತಿಗೆ ಅನುಮೋದನೆ ನೀಡಬೇಕು. ವಾಟರ್‌ಮನ್‌, ಪಂಪ್‌ ಮೆಕಾನಿಕ್‌/ಅಟೆಂಡರ್‌ ಹುದ್ದೆಯಲ್ಲಿ ಸತತವಾಗಿ ಐದು ವರ್ಷಗಳ ಸೇವೆ ಸಲ್ಲಿಸಿ ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾಗಿರುವ ನೌಕರರನ್ನು ಗ್ರಾಮ ಪಂಚಾಯಿತಿಯಲ್ಲಿ ಖಾಲಿ ಇರುವ ಬಿಲ್‌ ಕಲೆಕ್ಟರ್‌ ಅಥವಾ ಕ್ಲರ್ಕ್ ಹುದ್ದೆಗೆ ಮುಂಬಡ್ಡಿ ನೀಡಿರಬೇಕು. ನೌಕರರ ನೇಮಕಾತಿ ಸಂಬಂಧ ಗ್ರಾ.ಪಂ. ಸಭೆ ಅಥವಾ ವಿಶೇಷ ಸಭೆ ತೆಗೆದುಕೊಂಡ ನಿರ್ಣಯದ ಮೂಲ ಪ್ರತಿಯನ್ನು ಕಡ್ಡಾಯವಾಗಿ ಹೊಂದಿರಬೇಕು.

ನೌಕರರ ಹಾಜರಾತಿ/ಬಯೋಮೆಟ್ರಿಕ್‌ ಹಾಜರಾತಿ ಇರುವುದನ್ನು ಖಚಿತಪಡಿಸಿಕೊಳ್ಳಬೇಕು. ನೌಕರರಿಗೆ ವೇತನ ಪಾವತಿಸಿರುವ ವೇತನ ಬಟವಾಡೆ ರಿಜಿಸ್ಟರ್‌ ಇರುವುದನ್ನು ಖಚಿತಪಡಿಸಿಕೊಳ್ಳಬೇಕು. ಯಾವುದೇ ಗ್ರಾ.ಪಂ. ವಾರ್ಷಿಕ ಆದಾಯ 30 ಸಾವಿರಕ್ಕಿಂತ ಹೆಚ್ಚು ಇದ್ದಲ್ಲಿ ಅಂತಹ ಗ್ರಾ.ಪಂ.ಗಳು ಹೆಚ್ಚುವರಿಯಾಗಿ ಒಂದು ಬಿಲ್‌ ಕಲೆಕ್ಟರ್‌ ಹುದ್ದೆಗೆ ನೇಮಕ ಮಾಡಿಕೊಂಡಿದ್ದರೆ ಅವರು ಹಾಲಿ ಕರ್ತವ್ಯ ನಿರ್ವಹಿಸುತ್ತಿರಬೇಕು. ಖಾಲಿ ಇದ್ದ ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್‌ ಹುದ್ದೆಗಳಿಗೆ ನೇಮಕ ಮಾಡಿಕೊಂಡವರು ಹಾಲಿ ಕರ್ತವ್ಯ ನಿರ್ವಹಿಸುತ್ತಿರಬೇಕು. ಮಂಜೂರಾದ ಸ್ವಚ್ಛತಾಗಾರರ ಒಂದು ಹುದ್ದೆಯ ಜೊತೆಗೆ ಐದು ಸಾವಿರ ಜನಸಂಖ್ಯೆಗೆ ಒಂದು, ಒಂಬತ್ತು ಸಾವಿರ ಜನಸಂಖ್ಯೆಗೆ ಇಬ್ಬರು ಮತ್ತು 13 ಸಾವಿರ ಜನಸಂಖ್ಯೆಗೆ ಮೂರು ಮಂದಿಯನ್ನು ಸ್ವಚ್ಛತಾಗಾರ ಹುದ್ದೆಗಳಿಗೆ ನೇಮಿಸಿಕೊಂಡು ಹಾಲಿ ಕರ್ತವ್ಯ ನಿರ್ವಹಿಸುತ್ತಿದ್ದರೆ ಅಂತಹ ನೇಮಕಾತಿಗಳಿಗೆ ಅನುಮೋದನೆ ನೀಡಲಾಗುವುದು.

ಅನುಮೋದನೆಗೆ ಗಡುವು: ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಅನುಮೋದನೆಗೆ ನೀಡಲು ಬಾಕಿ ಇರುವ ಪ್ರಕರಣಗಳ ಕುರಿತು ಜ್ಯೇಷ್ಠತೆ ಆಧಾರದ ಮೇಲೆ ಸಿದ್ಧಪಡಿಸಿದ ಪಟ್ಟಿಯನ್ನು ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳು ಆಗಸ್ಟ್‌ 15ರೊಳಗೆ ಸಂಬಂಧಿಸಿದ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸಲ್ಲಿಸಬೇಕು. ಈ ಪಟ್ಟಿಯನ್ನು ಪರಿಶೀಲಿಸಿ ಬರುವ ಸೆಪ್ಟೆಂಬರ್‌ 15ರೊಳಗೆ ಕಡ್ಡಾಯವಾಗಿ ಅನುಮೋದನೆ ನೀಡಬೇಕು ಎಂದು ಸೂಚನೆಯಲ್ಲಿ ಸ್ಪಷ್ಟಪಡಿಸಲಾಗಿದೆ.

ಸರ್ಕಾರ ವಿಧಿಸಿದ ಷರತ್ತಿನ ಪ್ರಕಾರ ಯಾವುದೇ ಹಂತದಲ್ಲಿ ಲೋಪವಾದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಥವಾ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಸರ್ಕಾರಕ್ಕೆ ಸಂಬಂಧಪಟ್ಟಜಿ.ಪಂ. ಮುಖ್ಯಕಾರ್ಯ ನಿರ್ವಾಹಕ ಅಧಿಕಾರಿಗಳು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ತಿಳಿಸಲಾಗಿದೆ.

click me!