ಬಿಎಸ್‌ವೈಗೆ ಬ್ಯಾಂಕ್‌ಗಳ ಲಿಂಕ್, ಸಾಲ ಮನ್ನಾಗೆ ತೊಡಕು: ಸಿಎಂ ಬಿಚ್ಚಿಟ್ಟ ಗುಟ್ಟು!

By Web Desk  |  First Published Dec 21, 2018, 12:42 PM IST

ಬಿಎಸ್‌ವೈಗೆ ಬ್ಯಾಂಕ್‌ಗಳ ಲಿಂಕ್‌ ಇರುವುದರಲ್ಲಿ ಸಂದೇಹವೇ ಇಲ್ಲ| ಬಿಎಸ್‌ವೈ ಕಡ್ಡಿ ಆಡಿಸುತ್ತಿದಿದ್ದರೆ ಸರಾಗ ಸಾಲ ಮನ್ನಾ ಎಂದು ಹಿಂದೆಯೇ ಹೇಳಿದ್ದೆ| ಯಡಿಯೂರಪ್ಪರೇ ಅಸಾಂವಿಧಾನಿಕ ಪದ ಬಳಸಿದ್ದಾರೆ| ಉ.ಪ್ರ, ಮಹಾರಾಷ್ಟ್ರದಲ್ಲೂ ಇನ್ನೂ ಪೂರ್ಣ ಸಾಲ ಮನ್ನಾ ಆಗಿಲ್ಲ: ತಿರುಗೇಟು| ದಿಲ್ಲಿಯಲ್ಲಿ ರೈತರು ಅರೆಬೆತ್ತಲೆ ಪ್ರತಿಭಟಿಸುತ್ತಿದ್ದರೆ ಮೋದಿ ವಿದೇಶದಲ್ಲಿದ್ದರು


ಬೆಳಗಾವಿ[ಡಿ.21]: ‘ರೈತ ಮನ್ನಾ ಸಂಬಂಧ ರಾಷ್ಟ್ರೀಕೃತ ಬ್ಯಾಂಕ್‌ಗಳೊಂದಿಗೆ ಪ್ರತಿಪಕ್ಷದ ನಾಯಕ ಬಿ.ಎಸ್‌. ಯಡಿಯೂರಪ್ಪ ಸಂಪರ್ಕ ಹೊಂದಿದ್ದಾರೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಹೀಗಾಗಿ ನಾನು ಬಿಜೆಪಿಯವರ ಕ್ಷಮೆ ಕೋರುವ ಪ್ರಶ್ನೆಯೇ ಉದ್ಭವಿಸುವುದಿಲ್ಲ’ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ಸಾಲ ಮನ್ನಾ ಘೋಷಣೆ ಮಾಡಿದಾಗಲೇ ‘ನೀವು ಕಡ್ಡಿ ಆಡಿಸದಿದ್ದರೆ ಸರಾಗವಾಗಿ ಸಾಲ ಮನ್ನಾ ಮಾಡುತ್ತೇನೆ’ ಎಂದು ವಿರೋಧಪಕ್ಷದ ನಾಯಕ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಹೇಳಿದ್ದೇನೆ. ಆದರೆ, ಅವರು ಬ್ಯಾಂಕ್‌ಗಳೊಂದಿಗೆ ನಿರಂತರ ಸಂಪರ್ಕ ಹೊಂದಿದ್ದಾರೆ. ನಾನು ರೈತರ ಸಾಲ ಮನ್ನಾ ಮಾಡುವುದಕ್ಕಾಗಿ ಇವರ ಕ್ಷಮೆ ಕೇಳಬೇಕೆ ಎಂದು ಪ್ರಶ್ನೆ ಮಾಡಿದ್ದಾರೆ.

Tap to resize

Latest Videos

undefined

ಸುವರ್ಣ ವಿಧಾನಸೌಧದಲ್ಲಿ ಗುರುವಾರ ಸಂಜೆ ಕಲಾಪ ಮುಗಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸದನದಲ್ಲಿ ಬಿ.ಎಸ್‌. ಯಡಿಯೂರಪ್ಪ ಅವರು ಸುಳ್ಳು, ಟೋಪಿ ಎಂಬ ಪದ ಬಳಸಿದ್ದಾರೆ. ಅವರ ಪಕ್ಷ ಶಾಸಕರು ಸರ್ಕಾರ ಜೀವಂತ ಇದೆಯೇ ಸತ್ತಿದೆಯೇ ಎಂದು ಪ್ರಶ್ನಿಸಿದ್ದಾರೆ. 1990ರಲ್ಲಿ ಸ್ಪೀಕರ್‌ ಸುಳ್ಳು ಎಂಬ ಪದವೂ ಅಸಂವಿಧಾನಿಕ ಎಂದು ಕಡತದಿಂದ ತೆಗೆಸಿದ ದಾಖಲೆ ನನ್ನ ಬಳಿ ಇದೆ’ ಎಂದರು.

‘ನಾನು ಸದನದಲ್ಲಿ ಸರ್ಕಾರವು ಋುಣಮುಕ್ತ ಪ್ರಮಾಣಪತ್ರ ಸಿದ್ಧಪಡಿಸಿದ್ದೇವೆ. ರೈತರ ಮನೆ ಬಾಗಿಲಿಗೆ ಸದ್ಯದಲ್ಲೇ ತಲುಪಿಸುತ್ತೇವೆ ಎಂದು ಹೇಳಿದ ತಕ್ಷಣ ಬಿ.ಎಸ್‌. ಯಡಿಯೂರಪ್ಪ ಅವರು, ಬ್ಯಾಂಕ್‌ಗಳು ನಿಮಗೆ ಅನುಮತಿ ನೀಡಿಲ್ಲ. ನೀವು ಹೇಗೆ ಪ್ರಮಾಣಪತ್ರ ನೀಡುತ್ತೀರಿ ಎಂದು ಪ್ರಶ್ನಿಸುತ್ತಾರೆ. ಹೀಗಿದ್ದಾಗ ಅವರೊಂದಿಗೆ ಸಂಪರ್ಕ ಹೊಂದಿದ್ದೀರಿ ಎಂದರೆ ಏನು ತಪ್ಪು’ ಎಂದು ಪ್ರಶ್ನಿಸಿದರು.

ಮೋದಿಯನ್ನು ಪ್ರಶ್ನಿಸಲಿ:

ಘೋಷಣೆ ಮಾಡಿದ ತಕ್ಷಣ ಅಷ್ಟೂಮೊತ್ತ ಯಾರಿಗೂ ಬಿಡುಗಡೆ ಮಾಡಲು ಸಾಧ್ಯವಿಲ್ಲ. ಬಿಜೆಪಿ ಆಡಳಿತದ ಉತ್ತರ ಪ್ರದೇಶದ ಸರ್ಕಾರ 36 ಸಾವಿರ ಕೋಟಿ ರು. ಮನ್ನಾ ಮಾಡಿ ಒಂದೂವರೆ ವರ್ಷ ಆಗಿದೆ. ಆದರೆ, ಇಲ್ಲಿಯವರೆಗೂ ಸಂಪೂರ್ಣ ಮನ್ನಾ ಆಗಿಲ್ಲ. ಮಹಾರಾಷ್ಟ್ರ ಸರ್ಕಾರವು 25 ಸಾವಿರ ಕೋಟಿ ರು. ಸಾಲ ಮನ್ನಾವನ್ನೂ ಸಂಪೂರ್ಣ ಮಾಡಿಲ್ಲ ಎಂದು ಇದೇ ವೇಳೆ ಕುಮಾರಸ್ವಾಮಿ ತಿಳಿಸಿದರು.

‘ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೆಹಲಿಯಲ್ಲಿ ರೈತರು ಅರೆಬೆತ್ತಲೆಯಾಗಿ ನಿಂತರೂ ಅಹವಾಲು ಸ್ವೀಕರಿಸದೆ ವಿದೇಶದಲ್ಲಿ ಸುತ್ತುತ್ತಾರೆ. ಕೇಂದ್ರ ಕೃಷಿ ಸಚಿವರೂ ಕೂಡ ಅಹವಾಲು ಸ್ವೀಕರಿಸಲಿಲ್ಲ. ಇತ್ತೀಚೆಗೆ ಒಂದು ಲಕ್ಷ ರೈತರು ಪ್ರತಿಭಟನೆ ನಡೆಸಿದರು. ಈ ವೇಳೆಯೂ ಯಾವೊಬ್ಬ ಪ್ರತಿನಿಧಿಯೂ ಅತ್ತ ಸುಳಿದಿಲ್ಲ. ಬೇಕಾದರೆ ಯಡಿಯೂರಪ್ಪ ಅವರು ಪ್ರಧಾನಿ ಬಳಿ ಹೋಗಿ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿರುವ ರಾಜ್ಯದ ರೈತರ ಸಾಲಮನ್ನಾ ಮಾಡಿಸಲಿ’ ಎಂದು ಮುಖ್ಯಮಂತ್ರಿಗಳು ಹೇಳಿದರು.

ನಾನು ಪ್ರತಿಭಟನೆ ಮಾಡಿದ ಪ್ರತಿಯೊಂದು ಸಂಘಟನೆಯೊಂದಿಗೂ ಸಭೆ ನಡೆಸಿದ್ದೇನೆ. ರೈತರೊಂದಿಗೆ ಐದು ಬಾರಿ ಸಭೆ ಮಾಡಿದ್ದೇನೆ. ರೈತರನ್ನು ಯಾವ ರೀತಿ ಕಾಪಾಡಬೇಕು ಎಂಬುದನ್ನು ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.

click me!