ಮಹಿಳಾ ಟಿ20 ಚಾಲೆಂಜ್ ಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಸೂಪರ್‌ನೋವಾಸ್ ಟ್ರಯಲ್ ಬ್ಲೇಜರ್ಸ್ ತಂಡವನ್ನು ಎದುರಿಸಲಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಶಾರ್ಜಾ(ನ.09): ಐಪಿಎಲ್ 13ನೇ ಆವೃತ್ತಿಯ ಫೈನಲ್‌ಗೂ ಮುನ್ನ ಮಹಿಳಾ ಟಿ20 ಚಾಲೆಂಜರ್ ಫೈನಲ್ ಪಂದ್ಯಕ್ಕೆ ವೇದಿಕೆ ಸಜ್ಜಾಗಿದ್ದು, ಸೋಮವಾರ ಇಲ್ಲಿ ನಡೆಯಲಿರುವ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಸೂಪರ್‌ನೋವಾಸ್ ಹಾಗೂ ಟ್ರೈಯಲ್ಬ್ಲೇಜರ್ಸ್ ತಂಡಗಳು ಮುಖಾಮುಖಿಯಾಗಲಿವೆ.
ಶನಿವಾರ ನಡೆದ ರೌಂಡ್-ರಾಬಿನ್ ಹಂತದ ಅಂತಿಮ ಪಂದ್ಯದಲ್ಲಿ ಸ್ಮೃತಿ ಮಂಧನಾ ನೇತೃತ್ವದ ಟ್ರೈಯಲ್ಬ್ಲೇಜರ್ಸ್ ವಿರುದ್ಧ ಗೆಲುವು ಸಾಧಿಸಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಸೂಪರ್‌ನೋವಾಸ್ ತಂಡ, ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದೆ. ಶ್ರೀಲಂಕಾದ ಹಿರಿಯ ಆಟಗಾರ್ತಿ ಚಾಮರಿ ಅಟಾಪಟ್ಟು, ಹರ್ಮನ್‌ಪ್ರೀತ್, ಜೆಮಿಮಾ ರೋಡ್ರಿಗಸ್‌ರಂತಹ ಸ್ಫೋಟಕ ಆಟಗಾರ್ತಿಯರ ಬಲ ತಂಡಕ್ಕಿದೆ.
IPL 2020: ಹೈದರಾಬಾದ್ ಮಣಿಸಿ ಫೈನಲ್ ಟಿಕೆಟ್ ಗಿಟ್ಟಿಸಿಕೊಂಡ ಡೆಲ್ಲಿ!
ಮತ್ತೊಂದೆಡೆ ಟ್ರೈಯಲ್ಬ್ಲೇಜರ್ಸ್ ತನ್ನ ನಾಯಕಿ ಸ್ಮೃತಿ, ವಿಂಡೀಸ್ ಆಲ್ರೌಂಡರ್ ದಯೇಂದ್ರ ಡಾಟಿನ್, ದೀಪ್ತಿ ಶರ್ಮಾ ಹಾಗೂ ಹರ್ಲೀನ್ ಡಿಯೋಲ್ ಮೇಲೆ ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದೆ. ಟ್ರೈಯಲ್ಬ್ಲೇಜರ್ಸ್ಗೆ ವಿಶ್ವ ನಂ.1 ಟಿ20 ಬೌಲರ್ ಸೋಫಿ ಎಕ್ಲೆಸ್ಟೋನ್, ರಾಜೇಶ್ವರಿ ಗಾಯಕ್ವಾಡ್ ಬಲವಿದ್ದರೆ, ಸೂಪರ್‌ನೋವಾಸ್ ತಂಡದಲ್ಲಿ ಭಾರತದ ತಾರಾ ಲೆಗ್‌ಸ್ಪಿನ್ನರ್ ಪೂನಂ ಯಾದವ್ ಹಾಗೂ ಯುವ ಸ್ಪಿನ್ನರ್ ರಾಧಾ ಯಾದವ್ ಇದ್ದಾರೆ. ಸಮಬಲರ ನಡುವಿನ ಹೋರಾಟ ಭಾರೀ ಕುತೂಹಲ ಮೂಡಿಸಿದೆ.
ಸ್ಥಳ: ಶಾರ್ಜಾ
ಪಂದ್ಯ ಆರಂಭ: ಸಂಜೆ 7.30ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್