2020ನೇ ಸಾಲಿನ ಐಪಿಎಲ್ ಟೈಟಲ್ ಪ್ರಾಯೋಜಕತ್ವದಲ್ಲಿ ಚೀನಾ ಮೊಬೈಲ್ ಕಂಪನಿ ವಿವೋ ಹಿಂದೆ ಸರಿದ ಬೆನ್ನಲ್ಲೇ ಬಿಸಿಸಿಐ ಹೊಸ ಸ್ಪಾನ್ಸರ್ಸ್ ಹುಡುಕಾಟದಲ್ಲಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ನವದೆಹಲಿ(ಆ.13): ಈ ವರ್ಷದ ಐಪಿಎಲ್ ಟೈಟಲ್ ಪ್ರಾಯೋಜಕತ್ವದಿಂದ ಚೀನಾ ಮೊಬೈಲ್ ಕಂಪನಿ ವಿವೋ ಹೊರನಡೆದ ಬಳಿಕ ಬಿಸಿಸಿಐ ಕೆಲವೇ ದಿನಗಳಲ್ಲಿ 440 ಕೋಟಿ ರು. ಪ್ರಾಯೋಜಕತ್ವ ಹುಡುಕಬೇಕಾದ ಅನಿವಾರ್ಯತೆಗೆ ಸಿಲುಕಿದೆ.
ಕೊರೋನಾ ಆರ್ಥಿಕ ಸಂಕಷ್ಟದ ನಡುವೆ ಈ ಮೊತ್ತದ ಪ್ರಾಯೋಜಕತ್ವವನ್ನು ಗಳಿಸಲು ಸಾಧ್ಯವಾಗದೆ ಇದ್ದರೂ ಕನಿಷ್ಠ 300 ಕೋಟಿ ರು. ಆದಾಯ ಗಳಿಸಲು ಬಿಸಿಸಿಐ ಯೋಜನೆ ರೂಪಿಸಿದೆ. ಪ್ರಮುಖ ಟೈಟಲ್ ಪ್ರಾಯೋಜಕತ್ವವನ್ನು ಅಮೆಜಾನ್, ಅನ್ ಅಕಾಡಮಿ, ಬೈಜೂಸ್ ಅಂತಹ ಕಂಪನಿಗೆ ನೀಡಿ, ಅಧಿಕೃತ ಪ್ರಾಯೋಜಕರ ಹೆಸರಲ್ಲಿ ಇನ್ನೂ 2 ಅಧಿಕ ಕಂಪನಿಗಳಿಗೆ ತಲಾ 40 ಕೋಟಿ ರು.ಗೆ ಪ್ರಾಯೋಜಕತ್ವ ಹಕ್ಕನ್ನು ಮಾರಾಟ ಮಾಡಲು ಸಿದ್ಧತೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ. ಸಂಕಷ್ಟದ ನಡುವೆಯೂ ಬಿಸಿಸಿಐ ಲಾಭ ಗಳಿಸಲು ದಾರಿ ಹುಡುಕುತ್ತಿದೆ ಎಂದು ಅಧಿಕಾರಿಯೊಬ್ಬರು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.
ಈಗಾಗಲೇ ಕೋಕೋ, ಬೈಜೂಸ್, ಡ್ರೀಮ್ ಇಲೆವನ್, ಅಮೆಜಾನ್ ಸೇರಿದಂತೆ ಹಲವು ಕಂಪನಿಗಳು 2020ರ ಇಂಡಿಯನ್ ಪ್ರೀಮಿಯರ್ ಲೀಗ್ ಟೈಟಲ್ ಪ್ರಾಯೋಜಕತ್ವ ಪಡೆಯಲು ಆಸಕ್ತಿ ತೋರಿವೆ ಎನ್ನಲಾಗಿದೆ. ಇದರ ನಡುವೆ ಬಾಬಾ ರಾಮ್‌ದೇವ್ ಅವರ ಪತಾಂಜಲಿ ಕಂಪನಿ ಕೂಡಾ ಐಪಿಎಲ್ ಟೈಟಲ್ ಪ್ರಾಯೋಜಕತ್ವ ಪಡೆಯುವ ಲೆಕ್ಕಾಚಾರದಲ್ಲಿದೆ ಎಂದು ವರದಿಯಾಗಿದೆ.
IPL 2020: ವಿವೋ ಔಟ್, ಐಪಿಎಲ್ ಟೈಟಲ್ ಪ್ರಾಯೋಕತ್ವಕ್ಕೆ ಮುಂದಾದ ಪತಾಂಜಲಿ
ಪೂರ್ವ ಲಡಾಖ್‌ನ ಗಲ್ವಾನ್ ಕಣಿವೆ ಪ್ರದೇಶದಲ್ಲಿ ನಡೆದ ಭಾರತ-ಚೀನಾ ಸೈನಿಕರ ನಡುವಿನ ಘರ್ಷಣೆಯಲ್ಲಿ ಭಾರತದ 20 ಯೋಧರು ವೀರ ಮರಣವನ್ನು ಅಪ್ಪಿದ್ದರು. ಇದರ ಬೆನ್ನಲ್ಲೇ ಚೀನಾ ಉತ್ಫನ್ನಗಳನ್ನು ಬಹಿಷ್ಕರಿಸಬೇಕು ಎನ್ನುವ ಕೂಗು ದೇಶಾದ್ಯಂತ ಸಂಚಲನ ಮೂಡಿಸಿತ್ತು. ನಂತರ ಚೀನಾ ಮೊಬೈಲ್ ತಯಾರಿಕಾ ಸಂಸ್ಥೆ ವಿವೋ 13ನೇ ಆವೃತ್ತಿಯ ಐಪಿಎಲ್ ಟೈಟಲ್ ಪ್ರಾಯೋಜಕತ್ವದಿಂದ ಹಿಂದೆ ಸರಿದಿತ್ತು.
ಭಾರತದಲ್ಲಿ ನಡೆಯಬೇಕಿದ್ದ 13ನೇ ಆವೃತ್ತಿಯ ಐಪಿಎಲ್ ಟೂರ್ನಿಯು ಕೊರೋನಾ ಭೀತಿಯಿಂದಾಗಿ ಯುನೈಟೆಡ್ ಅರಬ್ ಎಮಿರೇಟ್ಸ್‌ಗೆ ಸ್ಥಳಾಂತರಗೊಂಡಿದೆ. ಸೆಪ್ಟೆಂಬರ್ 19ರಿಂದ ನವೆಂಬರ್ 10ರವರೆಗೆ ಟೂರ್ನಿ ಜರುಗಲಿದ್ದು, ದುಬೈ, ಅಬುದಾಬಿ ಹಾಗೂ ಶಾರ್ಜಾ ಮೈದಾನಗಳು ಚುಟುಕು ಮಹಾ ಸಂಗ್ರಾಮಕ್ಕೆ ವೇದಿಕೆ ಒದಗಿಸಲಿವೆ.