RCB ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಧೋನಿ ಪಡೆ..!

By Suvarna NewsFirst Published Oct 25, 2020, 6:49 PM IST
Highlights

ಬಲಿಷ್ಠ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್‌ 8 ಎಸೆತಗಳು ಬಾಕಿ ಇರುವಂತೆಯೇ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ದುಬೈ(ಅ.25): ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಎಂಟು ಎಸೆತಗಳು ಬಾಕಿ ಇರುವಂತೆಯೇ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ.  ಈ ಗೆಲುವಿನೊಂದಿಗೆ ಸಿಎಸ್‌ಕೆ ತಂಡ ರಾಜಸ್ಥಾನ ರಾಯಲ್ಸ್ ತಂಡವನ್ನು ಹಿಂದಿಕ್ಕಿ ಅಂಕಪಟ್ಟಿಯಲ್ಲಿ 7ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದೆ.

ಹೌದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ನೀಡಿದ್ದ 146 ರನ್‌ಗಳ ಸಾಧಾರಣ ಗುರಿ ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್ ಉತ್ತಮ ಆರಂಭವನ್ನೇ ಪಡೆಯಿತು. ಮೊದಲ ವಿಕೆಟ್‌ಗೆ ಫಾಫ್ ಡುಪ್ಲೆಸಿಸ್ ಹಾಗೂ ಋತುರಾಜ್ ಗಾಯಕ್ವಾಡ್ ಜೋಡಿ 46 ರನ್‌ಗಳ ಜತೆಯಾಟವಾಡಿತು. ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಕ್ರಿಸ್ ಮೋರಿಸ್ ಯಶಸ್ವಿಯಾದರು. ಸ್ಪೋಟಕ ಬ್ಯಾಟಿಂಗ್ ಆಡುತ್ತಿದ್ದ ಡುಪ್ಲೆಸಿಸ್ ಕೇವಲ 13 ಎಸೆತಗಳಲ್ಲಿ 2 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 25 ರನ್ ಬಾರಿಸಿ ಸಿರಾಜ್‌ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು.

That's that from Match 44. WIN by 8 wickets with 8 deliveries to spare. pic.twitter.com/pwaVHhARS8

— IndianPremierLeague (@IPL)

ಐಪಿಎಲ್ 2020: ಚೆನ್ನೈಗೆ ಸಾಧಾರಣ ಗುರಿ ನೀಡಿದ ಅರ್‌ಸಿಬಿ..!

ಆಸರೆಯಾದರ ರಾಯುಡು-ಗಾಯಕ್ವಾಡ್: ಇನ್ನು ಎರಡನೇ ವಿಕೆಟ್‌ಗೆ ಜತೆಯಾದ ಋತುರಾಜ್ ಗಾಯಕ್ವಾಡ್ ಹಾಗೂ ಅಂಬಟಿ ರಾಯುಡು ಜೋಡಿ ಕೂಡಾ ಚುರುಕಿನ ಬ್ಯಾಟಿಂಗ್‌ ಮಾಡಲು ಮುಂದಾಯಿತು. ಈ ಜೋಡಿ 67 ರನ್‌ಗಳ ಜತೆಯಾಟವಾಡುವ ಮೂಲಕ ತಂಡದ ಮೊತ್ತವನ್ನು ನೂರರ ಗಡಿ ದಾಟಿಸಿದರು. ಉತ್ತಮವಾಗಿ ಆಡುತ್ತಿದ್ದ ರಾಯುಡು(39) ಯುಜುವೇಂದ್ರ ಚಹಲ್ ಬೌಲಿಂಗ್‌ನಲ್ಲಿ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ಇನ್ನು ಮತ್ತೊಂದು ತುದಿಯಲ್ಲಿ ಎಚ್ಚರಿಕೆಯ ಆಟವಾಡಿದ ಯುವ ಬ್ಯಾಟ್ಸ್‌ಮನ್ ಋತುರಾಜ್ ಗಾಯಕ್ವಾಡ್ 42 ಎಸೆತಗಳನ್ನು ಎದುರಿಸಿ ಐಪಿಎಲ್‌ನಲ್ಲಿ ಚೊಚ್ಚಲ ಅರ್ಧಶತಕ ಬಾರಿಸಿದರು. ಅಂತಿಮವಾಗಿ ಗಾಯಕ್ವಾಡ್ 65 ರನ್ ಬಾರಿಸಿದರೆ ನಾಯಕ ಎಂ ಎಸ್ ಧೋನಿ 19 ರನ್ ಬಾರಿಸಿ ಅಜೇಯರಾಗುಳಿದರು.

ಇದಕ್ಕೂ ಮೊದಲು ಟಾಸ್ ಗೆದ್ದ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ಎಬಿ ಡಿವಿಲಿಯರ್ಸ್(39) ಹಾಗೂ ವಿರಾಟ್ ಕೊಹ್ಲಿ(50) ಹೊರತುಪಡಿಸಿ ಉಳಿದ್ಯಾವ ಬ್ಯಾಟ್ಸ್‌ಮನ್‌ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿ ಬರಲಿಲ್ಲ. ಮೊಯಿನ್ ಅಲಿ(1), ಕ್ರಿಸ್ ಮೋರಿಸ್ (2) ಎರಡಂಕಿ ಮೊತ್ತ ದಾಖಲಿಸಲು ವಿಫಲರಾದರು.

ಚೆನ್ನೈ ಸೂಪರ್ ಕಿಂಗ್ಸ್ ಪರ ಸ್ಯಾಮ್ ಕರ್ರನ್ 3 ವಿಕೆಟ್ ಪಡೆದರೆ, ದೀಪಕ್ ಚಹಾರ್ 2 ಹಾಗೂ ಮಿಚೆಲ್ ಸ್ಯಾಂಟ್ನರ್ ಒಂದು ವಿಕೆಟ್ ಪಡೆದರು. 

click me!