ಐಪಿಎಲ್ 2020: ಆರ್‌ಸಿಬಿಗೆ ಸವಾಲಿನ ಗುರಿ ನೀಡಿದ ರಾಜಸ್ಥಾನ ರಾಯಲ್ಸ್

By Suvarna NewsFirst Published Oct 17, 2020, 5:22 PM IST
Highlights

ನಾಯಕ ಸ್ಟೀವ್ ಸ್ಮಿತ್ ಆಕರ್ಷಕ ಅರ್ಧಶತಕದ ನೆರವಿನಿಂದ ರಾಜಸ್ಥಾನ ರಾಯಲ್ಸ್ ತಂಡ 5 ವಿಕೆಟ್ ಕಳೆದುಕೊಂಡು 175 ರನ್ ಬಾರಿಸಿದ್ದು, ಆರ್‌ಸಿಬಿಗೆ ಸವಾಲಿನ ಗುರಿ ನೀಡಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ದುಬೈ(ಅ.17): ಸ್ಟೀವ್ ಸ್ಮಿತ್ ಆಕರ್ಷಕ ಅರ್ಧಶತಕ(57) ಹಾಗೂ ಆರಂಭಿಕನಾಗಿ ಕಣಕ್ಕಿಳಿದ ಕನ್ನಡಿಗ ರಾಬಿನ್ ಉತ್ತಪ್ಪ(41) ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ರಾಜಸ್ಥಾನ ರಾಯಲ್ಸ್ 5 ವಿಕೆಟ್ ಕಳೆದುಕೊಂಡು 177 ರನ್ ಬಾರಿಸಿದ್ದು, ಆರ್‌ಸಿಬಿಗೆ ಸವಾಲಿನ ಗುರಿ ನೀಡಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಬೆನ್ ಸ್ಟೋಕ್ಸ್ ಹಾಗೂ ರಾಬಿನ್ ಉತ್ತಪ್ಪ ಉತ್ತಮ ಆರಂಭವನ್ನು ಒದಗಿಸಿಕೊಟ್ಟರು. ಮೊದಲ ವಿಕೆಟ್‌ಗೆ ಈ ಜೋಡಿ 50 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ನೆರವಾದರು. ಅಂದಹಾಗೆ ಪ್ರಸಕ್ತ ಆವೃತ್ತಿಯ ಐಪಿಎಲ್‌ನಲ್ಲಿ ರಾಜಸ್ಥಾನ ಆರಂಭಿಕರು ಮೊದಲ ವಿಕೆಟ್‌ಗೆ ದಾಖಲಿಸಿದೆ ಗರಿಷ್ಠ ಜತೆಯಾಟ ಇದಾಗಿದೆ. ಕ್ರಿಸ್ ಮೋರಿಸ್ ಆರಂಭಿಕ ಬ್ಯಾಟ್ಸ್‌ಮನ್ ಬೆನ್ ಸ್ಟೋಕ್ಸ್(15) ವಿಕೆಟ್ ಕಬಳಿಸುವ ಮೂಲಕ ಆರ್‌ಸಿಬಿಗೆ ಮೊದಲ ಯಶಸ್ಸು ದಕ್ಕಿಸಿಕೊಟ್ಟರು. ಇನ್ನು ಸ್ಫೋಟಕ ಬ್ಯಾಟಿಂಗ್ ನಡೆಸಿದ ಉತ್ತಪ್ಪ ಕೇವಲ 22 ಎಸೆತಗಳಲ್ಲಿ 7 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 41 ರನ್ ಬಾರಿಸಿ ಯುಜುವೇಂದ್ರ ಚಹಲ್‌ಗೆ ವಿಕೆಟ್ ಒಪ್ಪಿಸಿದರು. ಮರು ಎಸೆತದಲ್ಲಿ ಸಂಜು ಸ್ಯಾಮ್ಸನ್ ಕೂಡ ದೊಡ್ಡ ಹೊಡೆತಕ್ಕೆ ಕೈ ಹಾಕಿ ವಿಕೆಟ್ ಒಪ್ಪಿಸಿದರು.

"

ಆಸರೆಯಾದ ಸ್ಮಿತ್-ಬಟ್ಲರ್-ತೆವಾಟಿಯಾ: ಎರಡು ಎಸೆತಗಳಲ್ಲಿ 2 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ರಾಜಸ್ಥಾನ ರಾಯಲ್ಸ್ ತಂಡಕ್ಕೆ ನಾಯಕ ಸ್ಟೀವ್ ಸ್ಮಿತ್ ಹಾಗೂ ಜೋಸ್ ಬಟ್ಲರ್ ನಾಲ್ಕನೇ ವಿಕೆಟ್‌ಗೆ 58 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಬಟ್ಲರ್ 24 ರನ್ ಬಾರಿಸಿದರೆ, ನಾಯಕ ಸ್ಟೀವ್ ಸ್ಮಿತ್ 36 ಎಸೆತಗಳಲ್ಲಿ 6 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 57 ರನ್ ಬಾರಿಸಿ ಶಹಬಾಜ್ ಅಹಮ್ಮದ್ ಹಿಡಿದ ಅದ್ಭುತ ಕ್ಯಾಚ್‌ಗೆ ಪೆವಿಲಿಯನ್ ಸೇರಿದರು.. ಇನ್ನು ತೆವಾಟಿಯಾ 19 ರನ್ ಬಾರಿಸಿ ಅಜೇಯರಾಗುಳಿದರು.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಕ್ರಿಸ್ ಮೋರಿಸ್ 4 ವಿಕೆಟ್ ಪಡೆದರೆ, ಯುಜುವೇಂದ್ರ ಚಹಲ್ 2 ವಿಕೆಟ್ ಪಡೆದರು. 

click me!