ಮುಂಬೈ ಇಂಡಿಯನ್ಸ್ ಅಬ್ಬರ ಮುಂದೆ ಕಿಂಗ್ಸ್ ಇಲೆವೆನ್ ಪಂಜಾಬ್ ಸೋಲಿಗೆ ಶರಣಾಗಿದೆ. ಅಬು ಧಾಬಿಯಲ್ಲಿ ನಡೆದ ಈ ಪಂದ್ಯದ ಬಳಿಕ ಅಂಕಪಟ್ಟಿಯಲ್ಲೂ ಬದಲಾವಣೆಗಳಾಗಿದೆ.
ಅಬು ಧಾಬಿ(ಅ.01): 13ನೇ ಆವೃತ್ತಿ ಐಪಿಎಲ್ ಟೂರ್ನಿಯಲ್ಲಿ ಅಬ್ಬರಿಸುತ್ತಿರು ಕಿಂಗ್ಸ್ ಇಲವೆನ್ ಪಂಜಾಬ್ ತಂಡಕ್ಕೆ ಮತ್ತೆ ಆಘಾತ ಎದುರಾಗಿದೆ. ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಪಂಜಾಬ್ ಬ್ಯಾಟ್ಸ್‌ಮನ್ ಅಬ್ಬರಿಸಿಲ್ಲ. ನಾಯಕ ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್ ಸೇರಿದಂತೆ ಘಟಾನುಘಟಿ ಬ್ಯಾಟ್ಸ್‌ಮನ್ ಕಟ್ಟಿಹಾಕಿದ ಮುಂಬೈ 48 ರನ್ ಗೆಲುವು ಸಾಧಿಸಿದೆ.
192 ರನ್ ಬೃಹತ್ ಟಾರ್ಗೆಟ್ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ ಅಸಾಧ್ಯವಾಗಿರಲಿಲ್ಲ. ಈಗಾಗಲೇ ಪಂಜಾಬ್ ಸುಲಭವಾಗಿ 200 ರನ್ ಸಿಡಿಸಿ ಮೆರೆದಾಡಿದೆ. ಆದರೆ ಮುಂಬೈ ಬೌಲಿಂಗ್ ದಾಳಿ ಎದುರು ಪಂಜಾಬ್ ತತ್ತರಿಸಿತು. ಕೆಎಲ್ ರಾಹುಲ್ 17 ರನ್ ಸಿಡಿಸಿ ಔಟಾದರು. ಇತ್ತ ಮಯಾಂಕ್ ಅಗರ್ವಾಲ್ 25 ರನ್ ಕಾಣಿಕೆ ನೀಡಿದರು. ಆದರೆ ಕರುಣ್ ನಾಯರ್ ಮತ್ತೆ ವೈಫಲ್ಯ ಅನುಭವಿಸಿದರು. ಕರುಣ್ ಶೂನ್ಯಕ್ಕೆ ವಿಕೆಟ್ ಕೈಚೆಲ್ಲಿದರು.
ನಿಕೋಲಸ್ ಪೂರನ್ ಏಕಾಂಗಿ ಹೋರಾಟ ನೀಡಿದರು. ಆದರೆ ಗ್ಲೆನ್ ಮ್ಯಾಕ್ಸ್‌ವೆಲ್ 11 ರನ್ ಸಿಡಿಸಿ ಔಟಾದರು. 27 ಎಸೆತದಲ್ಲಿ 3 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ ನಿಕೊಲಸ್ ಪೂರನ್ 44 ರನ್ ಸಿಡಿಸಿ ಔಟಾದರು. ಜೇಮ್ಸ್ ನೀಶನ್, ಸರ್ಫರಾಜ್ ಖಾನ್ ಆಸರೆಯಾಗಲಿಲ್ಲ. ಕೆ ಗೌತಮ್ ಅಜೇಯ 22 ರನ್ ಸಿಡಿಸಿದರು. ಈ ಮೂಲಕ ಪಂಜಾಬ್ 8 ವಿಕೆಟ್ ಕಳೆದುಕೊಂಡು 143 ರನ್ ಸಿಡಿಸಿತು. ಮಂಬೈ ಇಂಡಿಯನ್ಸ್ 48 ರನ್ ಗೆಲುವು ಸಾಧಿಸಿತು.
ಭರ್ಜರಿ ಗೆಲುವಿನೊಂದಿಗೆ ಮುಂಬೈ ಇಂಡಿಯನ್ಸ್ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿತು. ಕಿಂಗ್ಸ್ ಇಲೆವೆನ್ ಪಂಜಾಬ್ 6ನೇ ಸ್ಥಾನಕ್ಕೆ ಕುಸಿಯಿತು. ಇತ್ತ ಟೇಬಲ್ ಟಾಪ್ 4ನಲ್ಲಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು 5ನೇ ಸ್ಥಾನಕ್ಕೆ ಕುಸಿದಿದೆ.