ಚೆನ್ನೈ ವಿರುದ್ಧ ಶಿಖರ್ ಶತಕ, ಅಕ್ಸರ್ ಸಿಕ್ಸರ್‌; ಡೆಲ್ಲಿಗೆ 5 ವಿಕೆಟ್ ಗೆಲುವು!

By Suvarna NewsFirst Published Oct 17, 2020, 11:22 PM IST
Highlights

ಶಿಖರ್ ಧವನ್  ಸೆಂಚುರಿ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ಶಾರ್ಜಾ ಮೈದಾನದಲ್ಲಿ ಅಬ್ಬರಿಸಿದೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಅಬ್ಬರಿಸಿದ ಡೆಲ್ಲಿ 5 ವಿಕೆಟ್ ಗೆಲುವು ದಾಖಲಿಸಿದೆ.

ಶಾರ್ಜಾ(ಅ.17): ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಗೆಲುವಿನೊಂದಿಗೆ ಸತತ ಸೋಲಿನಿಂದ ಹೊರ ಬಂದ ಚೆನ್ನೈ ಸೂಪರ್ ಕಿಂಗ್ಸ್ ಇದೀಗ ಮತ್ತೆ ಸೋಲಿಗೆ ಗುರಿಯಾಗಿದೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಸಿಎಸ್‌ಕೆ ಮುಗ್ಗರಿಸಿದೆ. ಶಿಖರ್ ಧವನ್ ಶತಕ ಹಾಗೂ ಅಕ್ಸರ್ ಪಟೇಲ್ ಸಿಡಿಸಿದ ಸತತ ಸಿಕ್ಸರ್ ನೆರವಿನಿಂದ ಡೆಲ್ಲಿ 5 ವಿಕೆಟ್ ಗೆಲುವು ಕಂಡಿದೆ. ಈ ಮೂಲಕ ಅಂಕಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನಕ್ಕೇರಿದೆ. ಇಷ್ಟೇ ಅಲ್ಲ ಪ್ಲೇ ಆಫ್ ಸ್ಥಾನ ಬಹುತೇಕ ಖಚಿತಪಡಿಸಿಕೊಂಡಿದೆ.

180 ರನ್ ಟಾರ್ಗೆಟ್ ಪಡೆದ ಡೆಲ್ಲಿ ಕ್ಯಾಪಿಟಲ್ಸ್ ನಿರೀಕ್ಷಿತ ಆರಂಭ ಪಡೆಯಲಿಲ್ಲ. ಪೃಥ್ವಿ ಶಾ ಡಕೌಟ್ ಆದರು. ಆದರೆ ಶಿಖರ್ ಧವನ್ ಹೋರಾಟ ಮುಂದುವರಿಸಿದರು. ಇತ್ತ ಅಜಿಂಕ್ಯ ರಹಾನೆ 8 ರನ್ ಸಿಡಿಸಿ ಔಟಾದರು. 26 ರನ್ ಸಿಡಿಸುವಷ್ಟರಲ್ಲೇ  ಡೆಲ್ಲಿ ಕ್ಯಾಪಿಟಲ್ಸ್ 2 ವಿಕೆಟ್ ಕಳೆದುಕೊಂಡಿತು. 

ನಾಯಕ ಶ್ರೇಯಸ್ ಅಯ್ಯರ್ ಜೊತೆ ಸೇರಿದ ಶಿಖರ್ ಧವನ್ ಉತ್ತಮ ಜೊತೆಯಾಟ ನೀಡಿದರು. ಅರ್ಧಶತಕ ಸಿಡಿಸಿದ ಧವನ್, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆತಂಕ ಹೆಚ್ಚಿಸಿದರು. ಆದರೆ ನಾಯಕ ಶ್ರೇಯಸ್ ಅಯ್ಯರ್ 23 ರನ್ ಸಿಡಿಸಿ ನಿರ್ಗಮಿಸಿದರು. 

ಮಾರ್ಕಸ್ ಸ್ಟೊಯ್ನಿಸ್ ಹಾಗೂ ಶಿಖರ್ ಧವನ್ ಜೊತೆಯಾಟ ಪಂದ್ಯದ ರೋಚಕತ ಹೆಚ್ಚಿಸಿತು. ಸ್ಟೊಯ್ನಿಸ್ 24 ರನ್ ಸಿಡಿಸಿ ಔಟಾದರು. ಇತ್ತ ಅಬ್ಬರಿಸಿದ ಶಿಖರ್ ಧವನ್ ಆಕರ್ಷಕ ಸೆಂಚುರಿ ಸಿಡಿಸಿದರು. ಇದು ಶಿಖರ್ ಧವನ್ ಸಿಡಿಸಿದ ಚೊಚ್ಚಲ ಐಪಿಎಲ್ ಶತಕ

ಅಂತಿಮ 6 ಎಸೆತದಲ್ಲಿ ಡೆಲ್ಲಿ ಗೆಲುವಿಗೆ 17 ರನ್ ಅವಶ್ಯಕತೆ ಇತ್ತು. ಅಕ್ಸರ್ ಪಟೇಲ್ ಸತತ 2 ಸಿಕ್ಸರ್ ಸಿಡಿಸಿ ಡೆಲ್ಲಿ ಗೆಲುವಿನ ಹಾದಿ ಸುಗಮಗೊಳಿಸಿದರು. 5ನೇ ಎಸೆತವನ್ನು ಮತ್ತೆ ಸಿಕ್ಸರ್‌ಗಟ್ಟಿದ ಅಕ್ಸರ್ ಪಟೇಲ್ ಡೆಲ್ಲಿ ತಂಡಕ್ಕೆ 5 ವಿಕೆಟ್ ಗೆಲುವು ತಂದುಕೊಟ್ಟರು. ಡೆಲ್ಲಿ 19.5 ಓವರ್‌ಗಳಲ್ಲಿ ಗೆಲುವು ದಾಖಲಿಸಿತು. 

click me!