ಐಪಿಎಲ್ ಟೂರ್ನಿ ಆಯೋಜನೆಗೆ ಇದೀಗ ಬಿಸಿಸಿಐಗೆ ತಲೆನೋವಾಗಿ ಪರಿಣಮಿಸಿದೆ. ಏಪ್ರಿಲ್ 15ರಿಂದ ಟೂರ್ನಿ ಆರಂಭಿಸಲು ಪ್ಲಾನ್ ಮಾಡಿರುವ ಬಿಸಿಸಿಐಗೆ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಶಾಕ್ ನೀಡಿದ್ದಾರೆ.
ನವದೆಹಲಿ(ಮಾ.20): ಕೊರೋನಾ ಸೋಂಕು ಭಾರತದಲ್ಲೂ ಹರಡುತ್ತಿರುವ ಭೀತಿಯಿಂದಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟಿ20 ಟೂರ್ನಿಯನ್ನು ಏಪ್ರಿಲ್ 15ರ ವರೆಗೂ ಅಮಾನತುಗೊಳಿಸಿದೆ. ಐಪಿಎಲ್ ಪಂದ್ಯಗಳನ್ನು ನಡೆಸಲು ಈಗಾಗಲೇ 3 ರಾಜ್ಯ ಸರ್ಕಾರಗಳು ನಿಕಾಕರಿಸಿದ್ದು, ಬಿಸಿಸಿಐ ಟೂರ್ನಿ ನಡೆಸಲು ತನ್ನ ಮುಂದಿರುವ ಆಯ್ಕೆಗಳನ್ನು ಪಟ್ಟಿಮಾಡುತ್ತಿದೆ. ಈ ನಡುವೆ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಗುರುವಾರ ಐಪಿಎಲ್ ಭವಿಷ್ಯದ ಬಗ್ಗೆ ಮಾತನಾಡಿದ್ದು, ಏ.15ರ ಬಳಿಕವಷ್ಟೇ ನಿರ್ಧರಿಸಲು ಸಾಧ್ಯ ಎಂದಿದ್ದಾರೆ.
ಒಂದು ವರ್ಷ ಐಪಿಎಲ್ ರದ್ದಾದರೆ ಬಿಸಿಸಿಐಗೆ ಆಗೋ ನಷ್ಟ ಎಷ್ಟು..?
‘ಏ.15ರ ಬಳಿಕ ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಿದೆ. ಬಿಸಿಸಿಐ ಕೇಂದ್ರ ಕ್ರೀಡಾ ಸಚಿವಾಲಯದ ವ್ಯಾಪ್ತಿಗೆ ಒಳಪಡುವುದಿಲ್ಲ. ಆದರೆ ಇದು ಸಾರ್ವಜನಿಕರ ಸುರಕ್ಷತೆಯ ವಿಷಯವಾಗಿರುವುದರಿಂದ ನಿಯಮಗಳನ್ನು ಪಾಲಿಸಬೇಕಿದೆ. ಪರಿಸ್ಥಿತಿ ನೋಡಿಕೊಂಡು ಟೂರ್ನಿ ನಡೆಸುವ ಬಗ್ಗೆ ನಿರ್ಧರಿಸಬಹುದಾಗಿದೆ’ ಎಂದು ರಿಜಿಜು ಹೇಳಿದ್ದಾರೆ.
ಇದೇ ವೇಳೆ ಕೇಂದ್ರ ಸರ್ಕಾರದ ಅಧಿಕಾರಿಯೊಬ್ಬರು ಗುರುವಾರ ಇಲ್ಲಿ ಪತ್ರಿಕಾಗೋಷ್ಠಿಯನ್ನು ನಡೆಸಿ, ‘ಈ ವರ್ಷ ಐಪಿಎಲ್ ನಡೆಸಬೇಡಿ ಎನ್ನುವುದು ನಮ್ಮ ಸಲಹೆ. ಆದರೆ ನಿರ್ಧಾರ ಬಿಸಿಸಿಐಗೆ ಬಿಟ್ಟಿದ್ದು. ಅವರು ನಡೆಸಲು ನಿರ್ಧರಿಸಿದರೆ ಸರ್ಕಾರ ಮಾರ್ಗಸೂಚಿಯ ಪ್ರಕಾರ ನಡೆಸಬೇಕು’ ಎಂದಿದ್ದಾರೆ.