
ರಾಂಚಿ (ಮೇ.26): 2018ರಲ್ಲಿ ಅಮಿತ್ ಶಾ ಅವರ ವಿರುದ್ಧ ಆಕ್ಷೇಪಾರ್ಹ ಪದಬಳಕೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಜಾರ್ಖಂಡ್‌ನ ಜನಪ್ರತಿನಿಧಿಗಳ ನ್ಯಾಯಾಲಯ ಜಾಮೀನುರಹಿತ ವಾರಂಟ್ ಹೊರಡಿಸಿದೆ. ಜೂ.26ರೊಳಗೆ ಸ್ವತಃ ವಿಚಾರಣೆಗೆ ಹಾಜರಾಗಬೇಕು ಎಂದು ಸೂಚನೆ ನೀಡಿದೆ. ಸ್ವತಃ ತಾವೇ ವಿಚಾರಣೆಗೆ ಹಾಜರಾಗಲು ವಿನಾಯಿತಿ ನೀಡಬೇಕು ಎಂದು ರಾಹುಲ್ ಗಾಂಧಿ ಸಲ್ಲಿಸಿದ ಮನವಿಯನ್ನು ಕೋರ್ಟ್ ತಿರಸ್ಕರಿಸಿದೆ.
ಏನಿದು ಪ್ರಕರಣ?: 2018ರ ಕಾಂಗ್ರೆಸ್ ಮಹಾಧಿವೇಶನದ ಸಂದರ್ಭದಲ್ಲಿ, ‘ಕೊಲೆ ಆರೋಪ ಎದುರಿಸುತ್ತಿರುವ ಯಾರು ಬೇಕಾದರೂ ಬಿಜೆಪಿಯ ಅಧ್ಯಕ್ಷರಾಗಬಹುದಾಗಿದೆ’ ಎಂದು ಅಮಿತ್ ಶಾ ವಿರುದ್ಧ ರಾಹುಲ್ ಗಾಂಧಿ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದರು.
ರಾಹುಲ್ ಗಾಂಧಿ ಹೇಳಿಕೆ ಎಲ್ಲ ಬಿಜೆಪಿ ಕಾರ್ಯಕರ್ತರಿಗೆ ಮಾಡಿರುವ ಅವಮಾನ ಎಂದು ಆರೋಪಿಸಿ, ಬಿಜೆಪಿ ನಾಯಕ ಪ್ರತಾಪ್ ಕಟಿಯಾರ್ ದಾವೆ ಹೂಡಿದ್ದರು. ಕೋರ್ಟ್ ಪದೇ ಪದೇ ಸಮನ್ಸ್ ಜಾರಿಗೊಳಿಸಿದ್ದರೂ ರಾಹುಲ್ ವಿಚಾರಣೆಗೆ ಗೈರಾಗಿದ್ದರು.
ನವದೆಹಲಿ: ಜಾಗತಿಕ ಗುಣಮಟ್ಟದ ಶಿಕ್ಷಣವನ್ನು ಭಾರತೀಯ ವಿದ್ಯಾರ್ಥಿಗಳಿಗೂ ಒದಗಿಸುವ ನಿಟ್ಟಿನಲ್ಲಿ ವಿಶ್ವ ವಿದ್ಯಾಲಯಗಳ ಧನಸಹಾಯ ಆಯೋಗ (ಯುಜಿಸಿ) 5 ವಿದೇಶಿ ವಿವಿಗಳಿಗೆ ಭಾರತದಲ್ಲಿ ಕ್ಯಾಂಪಸ್ ತೆರೆಯಲು ಅನುಮತಿ ನೀಡಿದೆ. ಅಮೆರಿಕದ ಇಲಿನಾಯ್ಸ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ, ಬ್ರಿಟನ್‌ನ ಲಿವರ್‌ಪೂಲ್ ವಿವಿ, ಆಸ್ಟ್ರೇಲಿಯಾದ ವಿಕ್ಟೋರಿಯಾ ವಿವಿ, ವೆಸ್ಟರ್ನ್ ಸಿಡ್ನಿ ವಿವಿ ಮತ್ತು ಇಟಲಿಯ ಐಸ್ಟಿಟ್ಯುಟೋ ಯೂರೋಪಿಯೋ ಡಿ ಡಿಸೈನ್‌ಗೆ ಭಾರತದಲ್ಲಿ ಕ್ಯಾಂಪಸ್ ಆರಂಭಿಸಲು ಕೇಂದ್ರ ಅನುಮತಿ ನೀಡಿದೆ. ಈ ವಿವಿಗಳು 2026-27 ನಡುವೆ ತಮ್ಮ ಕಾಲೇಜುಗಳನ್ನು ತೆರೆಯಲಿವೆ. 2023ರಲ್ಲಿ ಯುಜಿಸಿ ತಂದ ತಿದ್ದುಪಡಿ ಅನ್ವಯ ವಿಶ್ವದ ಟಾಪ್ 500 ವಿವಿಗಳು ಭಾರತದಲ್ಲಿ ಕ್ಯಾಂಪಸ್ ತೆರೆಯಬಹುದಾಗಿದೆ. ಇದರಡಿಯಲ್ಲಿ 2023ರಲ್ಲಿ ಸೌಥಾಂಪ್ಟನ್ ವಿವಿಗೆ ಮೊದಲ ಅನುಮತಿ ಕೊಡಲಾಗಿತ್ತು.
ಆಗ್ರಾ: ಪಹಲ್ಗಾಂ ನರಮೇಧದದ ಬಳಿಕ ಉತ್ತರ ಪ್ರದೇಶದ ಪ್ರಸಿದ್ಧ ಪ್ರವಾಸಿ ತಾಣ ತಾಜ್ ಮಹಲ್‌ಗೆ ಭದ್ರತೆ ಹೆಚ್ಚಿಸಲು ಮುಂದಾಗಿದ್ದು, ಸಂಭಾವ್ಯ ವೈಮಾನಿಕ ಬೆದರಿಕೆಯನ್ನು ಎದುರಿಸಲು ಸಂಕೀರ್ಣದಲ್ಲಿ ಡ್ರೋನ್ ನಿಗ್ರಹ ವ್ಯವಸ್ಥೆ ಅಳವಡಿಸಲು ಮುಂದಾಗಿದೆ. ತಾಜ್ ಮಹಲ್ ಪ್ರಸ್ತುತ ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಮತ್ತು ಉತ್ತರ ಪ್ರದೇಶ ಪೊಲೀಸರ ಕಣ್ಗಾವಲಿನಲ್ಲಿದೆ.
ಶೀಘ್ರದಲ್ಲಿ ಈ ಸ್ಮಾರಕ ಹೈಟೆಕ್ ಭದ್ರತೆಗೆ ಒಳಪಡಲಿದ್ದು, ಶೀಘ್ರದಲ್ಲೇ ಸುಧಾರಿತ ಡೋನ್ ತಟಸ್ಥೀಕರಣ ತಂತ್ರಜ್ಞಾನ ಹೆಚ್ಚುವರಿ ರಕ್ಷಣೆ ಪಡೆಯಲಿದೆ. ಈ ಬಗ್ಗೆ ಸಹಾಯಕ ಪೊಲೀಸ್ ಆಯುಕ್ತ ಸೈಯದ್ ಅರಿಬ್ ಅಹ್ಮದ್ ಮಾಹಿತಿ ನೀಡಿದ್ದು, ‘ ಈ ವ್ಯವಸ್ಥೆಯು 7-8 ಕಿಮೀ ವ್ಯಾಪ್ತಿ ಹೊಂದಿದ್ದು, ಆದರೆ ಪ್ರಾಥಮಿಕವಾಗಿ ಸ್ಮಾರಕದ ಗುಮ್ಮಟದಿಂದ 200 ಮೀ. ವ್ಯಾಪ್ತಿ ತನಕ ಪರಿಣಾಮಕಾರಿಯಾಗಿರಲಿದೆ. ಡ್ರೋನ್ ಸಿಗ್ನಲ್‌ನ್ನು ಸ್ವಯಂಚಾಲಿತವಾಗಿ ಜಾಮ್ ಮಾಡುತ್ತದೆ, ಸಾಪ್ಟ್ ಕಿಲ್ ಮೂಲಕ ಅದನ್ನು ನಿಷ್ಕ್ರಿಯಗೊಳಿಸುತ್ತದೆ. ವ್ಯವಸ್ಥೆ ನಿರ್ವಹಣೆಗೆ ಸಿಬ್ಬಂದಿಗೆ ತರಬೇತಿ ನೀಡಲಾಗುತ್ತದೆ’ ಎಂದಿದ್ದಾರೆ.
ನವದೆಹಲಿ: ನಾನಾ ಕಾರಣಗಳಿಂದ ನಾಲ್ಕು ರಾಜ್ಯಗಳಲ್ಲಿ ತೆರವುಗೊಂಡ 5 ವಿಧಾನಸಭಾ ಕ್ಷೇತ್ರಗಳಿಗೆ ಜೂ.19ರಂದು ಉಪಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗ ಭಾನುವಾರ ಹೇಳಿದೆ. ಗುಜರಾತ್‌ನ ಎರಡು, ಕೇರಳ, ಪಶ್ಚಿಮ ಬಂಗಾಳ ಮತ್ತು ಪಂಜಾಬ್‌ನಲ್ಲಿ ತಲಾ ಒಂದು ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಜೂ.23ಕ್ಕೆ ಮತಎಣಿಕೆ ನಡೆಯಲಿದೆ. ಗುಜರಾತ್‌ನ ಕಡಿ, ವಿಸಾವದರ್ ಕ್ಷೇತ್ರ, ಕೇರಳದ ನೀಲಂಬೂರ್, ಪಂಜಾಬ್‌ನ ಲೂಧಿಯಾನ ಮತ್ತು ಪಶ್ಚಿಮ ಬಂಗಾಳದ ಕಲಿಗಂಜ್ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ ಎಂದು ಆಯೋಗ ತಿಳಿಸಿದೆ.