
ನವದೆಹಲಿ: ಭಾನುವಾರ ಬೆಳಗ್ಗೆ ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗುಡುಗು ಸಹಿತ ಭಾರಿ ಮಳೆಯಾಗಿದೆ. ಈ ಮಳೆಯಿಂದಾಗಿ ವಿಮಾನ ನಿಲ್ದಾಣದ ಟರ್ಮಿನಲ್ 1ರ ಪ್ರವೇಶ ದ್ವಾರದ ಮೇಲ್ಛಾವಣಿಯ ಒಂದು ಭಾಗ ಕುಸಿದು ಬಿದ್ದಿದೆ. ಈ ಅವಘಡದಿಂದ ಕೆಲ ಸಮಯದವರೆಗೆ ವಿಮಾನಗಳ ಕಾರ್ಯಾಚರಣೆಯಲ್ಲಿ ಅಡಚಣೆಯುಂಟಾಯ್ತು ಎಂದು ವರದಿಯಾಗಿದೆ. ಟರ್ಮಿನಲ್ 1ರ ಪ್ರವೇಶ ದ್ವಾರ ಕುಸಿತದ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.
ದೆಹಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ (DIAL) ರಾಜಧಾನಿಯಲ್ಲಿ ಭಾರಿ ಮಳೆ ಮತ್ತು ಬಲವಾದ ಗಾಳಿ ಬೀಸುತ್ತಿದ್ದಂತೆ ಮಧ್ಯರಾತ್ರಿಯ ಸುಮಾರಿಗೆ ಈ ಘಟನೆ ಸಂಭವಿಸಿದೆ ಎಂದು ಹೇಳಿದೆ. “T1 ಆಗಮನದ ಮುಂಭಾಗದಲ್ಲಿರುವ ಬಾಹ್ಯ ಟೆನ್ಸೈಲ್ ಫ್ಯಾಬ್ರಿಕ್‌ನ ಒಂದು ಭಾಗವು ಒತ್ತಡದಲ್ಲಿ ಹೊಂದಿಕೊಂಡಿದೆ, ಇದು ನೀರಿನ ಹರಡುವಿಕೆಗೆ ಸಹಾಯ ಮಾಡುತ್ತದೆ” ಎಂದು DIAL ವಕ್ತಾರರು ಯಾವುದೇ ರಚನಾತ್ಮಕ ಹಾನಿಯನ್ನು ನಿರಾಕರಿಸಿದ್ದಾರೆ.
ಕಾರ್ಯಾಚರಣೆಗಳು ತಾತ್ಕಾಲಿಕವಾಗಿ ಪರಿಣಾಮ ಬೀರಿತು. ಆದರೆ ಸಿಬ್ಬಂದಿಯ ತ್ವರಿತ ಕ್ರಮದಿಂದ ಬೆಳಗ್ಗೆ ವೇಳೆಗಾಗಲೇ ಎಲ್ಲವೂ ಸರಿಪಡಿಸಲಾಗಿತ್ತು. ಮಳೆಯಿಂದಾಗಿ ವಿಮಾನ ಹಾರಾಟದಲ್ಲಿ ಕೊಂಚ ವ್ಯತ್ಯಯ ಉಂಟಾಗಿರೋದನ್ನು ಇಂಡಿಗೋ ಏರ್‌ಲೈನ್ಸ್ ಖಚಿತಪಡಿಸಿದೆ. ಈ ಸಂಬಂಧ ಪ್ರಯಾಣಿಕರಿಗೆ ಮಾಹಿತಿಯನ್ನು ರವಾನಿಸಲಾಗಿತ್ತು.
ಭಾರತೀಯ ಹವಾಮಾನ ಇಲಾಖೆ (IMD) ಶನಿವಾರ ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ರೆಡ್ ಅಲರ್ಟ್ ಘೋಷಿಸಿದೆ. ಗುಡುಗು ಸಹಿತ ಭಾರಿ ಮಳೆ ಮತ್ತು 40-60 ಕಿಮೀ ವೇಗದಲ್ಲಿ ಗಾಳಿ ಬೀಸುವ ಮುನ್ಸೂಚನೆ ನೀಡಿತ್ತು. ಅನಾವಶ್ಯಕವಾಗಿ ಮನೆಯಿಂದ ಹೊರಗೆ ಬರದಂತೆ ಸಾರ್ವಜನಿಕರಿಗೆ ಸೂಚನೆ ನೀಡಲಾಗಿದೆ. ರಾತ್ರಿಯಿಡೀ ಭಾರೀ ಮಳೆಯಿಂದಾಗಿ ದೆಹಲಿ, ಎನ್‌ಸಿಆರ್ ಸೇರಿದಂತೆ ಹಲವು ಭಾಗಗಳಲ್ಲಿ ನೀರು ತುಂಬಿಕೊಂಡಿದೆ. ಬೃಹತ್ ಮರಗಳು ಧರೆಗೆ ಉರುಳಿದ್ದು, ದೆಹಲಿ ಭಾಗದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು ಮಿಂಟೊ ರಸ್ತೆ, ಮೋತಿ ಬಾಗ್ ಮತ್ತು ವಿಮಾನ ನಿಲ್ದಾಣ ವಲಯವು ಹೆಚ್ಚು ಹಾನಿಗೊಳಗಾದವುಗಳಲ್ಲಿ ಸೇರಿವೆ. ಘಾಜಿಯಾಬಾದ್ ಮತ್ತು ನೋಯ್ಡಾದ ಕೆಲವು ಭಾಗಗಳಲ್ಲಿ ವಿದ್ಯುತ್ ಕಡಿತ ಮತ್ತು ರಸ್ತೆಗಳಲ್ಲಿ ನೀರು ತುಂಬಿದೆ ಎಂದು ವರದಿಯಾಗಿದೆ.
ವಾಯುಭಾರ ಕುಸಿತ
ಮಧ್ಯಪಶ್ಚಿಮ ಮತ್ತು ಉತ್ತರ ಬಂಗಾಳಕೊಲ್ಲಿ ಪ್ರದೇಶಗಳಲ್ಲಿ 27 ತಾರೀಕಿನ ಹೊತ್ತಿಗೆ ವಾಯುಭಾರ ಕುಸಿತ ಉಂಟಾಗುವ ಸಾಧ್ಯತೆಯಿದೆ. ಇದರಿಂದ ತಮಿಳುನಾಡಿನ ಕೆಲವು ಕಡೆಗಳಲ್ಲಿ, ಪುದುಚೇರಿ ಮತ್ತು ಕಾರೈಕಲ್ ಪ್ರದೇಶಗಳಲ್ಲಿ ಗುಡುಗು, ಮಿಂಚು ಮತ್ತು ಬಿರುಗಾಳಿಯೊಂದಿಗೆ (ಗಂಟೆಗೆ 40 ರಿಂದ 50 KM ವೇಗದಲ್ಲಿ) ಸಾಧಾರಣದಿಂದ ಮಧ್ಯಮ ಮಳೆಯಾಗುವ ಸಾಧ್ಯತೆಯಿದೆ. ಕೊಯಮತ್ತೂರು ಜಿಲ್ಲೆಯ ಬೆಟ್ಟ ಪ್ರದೇಶಗಳು ಮತ್ತು ನೀಲಗಿರಿ ಜಿಲ್ಲೆಯ ಒಂದೆರಡು ಕಡೆಗಳಲ್ಲಿ ಭಾರಿಯಿಂದ ಅತಿ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ತಿರುನೆಲ್ವೇಲಿ ಜಿಲ್ಲೆಯ ಬೆಟ್ಟ ಪ್ರದೇಶಗಳು, ತೇಣಿ ಮತ್ತು ತೆಂಕಾಶಿ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಭಾರಿಯಿಂದ ಅತಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ತಿರುಪ್ಪೂರ್, ದಿಂಡಿಗಲ್ ಮತ್ತು ಕನ್ಯಾಕುಮಾರಿ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ.
ಕೊಡಗು ಮಳೆ
ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ರಸ್ತೆಗಳ ಮೇಲೆ ಮರಗಳು ಉರುಳಿ ಬಿದ್ದು ಸಂಚಾರಕ್ಕೆ ಅಡಚಣೆಯಾಗಿದೆ. ಕಾವೇರಿ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದು, ಹಲವು ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿದೆ. ತ್ರಿವೇಣಿ ಸಂಗಮ ಸ್ನಾನಘಟ್ಟ, ಪಕ್ಕದ ಉದ್ಯಾನ ಮುಳುಗಿದೆ. ಭಾಗಮಂಡಲ ನಾಪೋಕ್ಲು, ಭಾಗಮಂಡಲ ಮತ್ತು ಮಡಿಕೇರಿ ರಸ್ತೆಗಳ ಮೇಲು ನೀರು ಹರಿಯಲಿದೆ. ಕಾವೇರಿ ನದಿಯಲ್ಲಿ ಒಂದೇ ದಿನಕ್ಕೆ ಆರು ಅಡಿ ನೀರು ಪ್ರಮಾಣ ಏರಿಕೆಯಾಗಿದೆ.