
ಕೋಲ್ಕತಾ(ಡಿ.11) ಕೇಂದ್ರ ಚುನಾವಣಾ ಆಯೋಗದ ಮತದಾರರ ಪಟ್ಟಿ ಪರಿಷ್ಕರಣೆ (SIR)ಗೆ ಕಾಂಗ್ರೆಸ್ ಸೇರಿದಂತೆ ಹಲವು ಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸುತ್ತಿದೆ. ಈ ಪೈಕಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಕೂಡ ಒಂದು. ಪಶ್ಚಿಮ ಬಂಗಾಳದಲ್ಲಿ SIRಗೆ ಭಾರಿ ವಿರೋದ ವ್ಯಕ್ತಪಡಿಸಿದ್ದು ಮಾತ್ರವಲ್ಲ, ಕೇಂದ್ರ ಚುನಾವಣಾ ಆಯೋಗದ SIR ವಿರುದ್ದ ಹೋರಾಟ ಮಾಡಲು ಮಹಿಳೆಯರಿಗೆ ಕರೆ ನೀಡಿದ್ದರೆ. ನಿಮ್ಮ ಮನೆಯ ಅಡುಗೆ ವಸ್ತುಗಳಾದ ಸೌಟು, ಕುಕ್ಕರ್, ಪಾತ್ರೆ ಹಿಡಿದು ಹೋರಾಡಲು ಮಮತಾ ಬ್ಯಾನರ್ಜಿ ಕರೆ ನೀಡಿದ್ದಾರೆ.
ಪಶ್ಚಿಮ ಬಂಗಾಳದ ಕೃಷ್ಣನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಮಮತಾ ಬ್ಯಾನರ್ಜಿ, ಕೇಂದ್ರ ಬಿಜೆಪಿ ಹಾಗೂ ಚುನಾವಣಾ ಆಯೋಗದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಅಸ್ಸಾಂನಲ್ಲಿ ಕೇಂದ್ರ ಚುನಾವಣಾ ಆಯೋಗ SIR ಮಾಡುತ್ತಿಲ್ಲ. ಕಾರಣ ಅದು ಬಿಜೆಪಿ ಆಡಳಿತ ರಾಜ್ಯ. ಪಶ್ಚಿಮ ಬಂಗಾಳದಲ್ಲಿ SIR ಮಾಡುವ ಮೂಲಕ ಹೆಣ್ಣುಮಕ್ಕಳು, ತಾಯಂದಿರು ಒಳಗೊಂಡ ಮಹಿಳೆಯರ ಮತದಾನದ ಹಕ್ಕು ಕಸಿದುಕೊಳ್ಳಲಾಗುತ್ತದೆ. ಇದಕ್ಕಾಗಿ ದೆಹಲಿಯಿಂದ ಪೊಲೀಸರನ್ನು ತರಿಸಿಕೊಂಡು ಆಯೋಗ SIR ನಡೆಸುತ್ತಿದೆ. ಹೀಗಾಗಿ ಪಶ್ಚಿಮ ಬಂಗಾಳದ ಪ್ರತಿ ಮಹಿಳೆ, ನಿಮ್ಮ ಮತದಾನ ಹಕ್ಕು ಕಡಿತಗೊಳಿಸಿದರೆ SIR ವಿರುದ್ದ ಅಡುಗೆ ಕೋಣೆಯಲ್ಲಿರುವ ಸೌಟು, ಕುಕ್ಕುರ್, ಪಾತ್ರೆ ಸೇರಿದಂತೆ ಸಲಕರಣೆ ಹಿಡಿದು ಹೋರಾಟಬೇಕು ಎಂದು ಮಮತಾ ಬ್ಯಾನರ್ಜಿ ಕರೆ ನೀಡಿದ್ದಾರೆ.
SIR ಹೆಸರನಲ್ಲಿ ನಿಮ್ಮ ಹೆಸರು ಮತದಾನ ಪಟ್ಟಿಯಿಂದ ತೆಗೆದು ಹಾಕಿದರೆ, ನಿಮ್ಮ ಮನೆಯಲ್ಲಿ ಅಡುಗೆ ಸಲಕರಣೆ ಇದೆ ತಾನೆ, ಇದರಲ್ಲಿ ಹೋರಾಡಿ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಮಹಿಳೆಯರು ಈ ಹೋರಾಟದ ಮುಂದಾಳತ್ವ ವಹಿಸಿದರೆ, ಪುರುಷರು ಹಿಂದೆ ನಿಲ್ಲುತ್ತಾರೆ. ನಮ್ಮ ಮಹಿಳೆಯರು ಬಿಜೆಪಿಗಿಂತ ಹೆಚ್ಚು ಸ್ಟ್ರಾಂಗ್ ಎಂದು ತೋರಿಸಿಕೊಡಬೇಕು ಎಂದು ಮಮತಾ ಬ್ಯಾನರ್ಜಿ ಮಹಿಳೆಯನ್ನು SIR ವಿರುದ್ಧ ಪ್ರಚೋದಿಸಿದ್ದಾರೆ.
ಇದೇ ವೇಳೆ ಕೋಲ್ಕತಾದಲ್ಲಿ ಆಯೋಜಿಸಿದ ಭಗವದ್ಗೀತಾ ಕಾರ್ಯಕ್ರಮ ಕುರಿತು ಮಮತಾ ಬ್ಯಾನರ್ಜಿ ಕೆಂಡ ಕಾರಿದ್ದಾರೆ. ಭಗವದ್ಗೀತೆ ನಮ್ಮ ಹೃದಯದಲ್ಲಿ , ಮನಸ್ಸಿನಲ್ಲಿ ಇದ್ದರೆ ಸಾಕು. ಮನೆಯಲ್ಲಿ ಗೀತೆ ಹೇಳುತ್ತೇವೆ. ಅದನ್ನು ಸಾರ್ವಜನಿಕ ಕಾರ್ಯಕ್ರಮವಾಗಿ ಮಾಡುವ ಅವಶ್ಯಕತೆ ಇತ್ತಾ ಎಂದು ಮಮತಾ ಬ್ಯಾನರ್ಜಿ ಪ್ರಶ್ನಿಸಿದ್ದಾರೆ. ಭಗವದ್ಗೀತೆ ಹೆಸರಲ್ಲಿ ಸಮುದಾಯ, ಧರ್ಮಗಳ ನಡುವೆ ದ್ವೇಷ ಬಿತ್ತಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ