Goa: ಮಹದಾಯಿ ರಕ್ಷಿತಾರಣ್ಯದಲ್ಲಿ ಭಾರಿ ಕಾಡ್ಗಿಚ್ಚು: ಒಟ್ಟು 11 ವಿವಿಧ ಬೆಟ್ಟಗಳಿಗೆ ಹರಡಿರುವ ಬೆಂಕಿ

By Kannadaprabha News  |  First Published Mar 12, 2023, 8:46 AM IST

ಮಹದಾಯಿ ರಕ್ಷಿತಾರಣ್ಯದಲ್ಲಿ ಭಾರಿ ಕಾಡ್ಗಿಚ್ಚು ಕಾಣಿಸಿಕೊಂಡಿದ್ದು, ಕಳೆದ 1 ವಾರದಿಂದ ವನ್ಯಜೀವಿ ಧಾಮದಲ್ಲಿ ಬೆಂಕಿ ಹರಡಿದೆ. ಒಟ್ಟು 11 ವಿವಿಧ ಬೆಟ್ಟಗಳಿಗೆ ಕಾಡ್ಗಿಚ್ಚು ಹರಡಿದ್ದು, ಬೆಂಕಿ ನಂದಿಸಲು ವಾಯುಪಡೆ, ನೌಕಾದಳ ಬಳಕೆ ಮಾಡಲಾಗ್ತಿದೆ.


ಪಣಜಿ (ಮಾರ್ಚ್‌ 12, 2023): ಕರ್ನಾಟಕದ ಗಡಿಗೆ ಹೊಂದಿಕೊಂಡಂತಿರುವ ಗೋವಾದ ಮಹಾದಾಯಿ ವನ್ಯಜೀವಿ ಧಾಮದಲ್ಲಿ ಭಾರಿ ಕಾಡ್ಗಿಚ್ಚು ಕಾಣಿಸಿಕೊಂಡಿದ್ದು, 11 ವಿವಿಧ ಬೆಟ್ಟಗಳಿಗೆ ಬೆಂಕಿ ಹಬ್ಬಿದೆ. ಕಳೆದ 1 ವಾರದಿಂದ ಬೆಂಕಿ ನಂದಿಸಲು ಸರ್ಕಾರ ವಿವಿಧ ಕ್ರಮಗಳನ್ನು ಕೈಗೊಂಡಿದ್ದು, ಈಗ ಇದಕ್ಕಾಗಿ ಭಾರತೀಯ ವಾಯುಪಡೆ ಮತ್ತು ನೌಕಾಪಡೆಯನ್ನು ಸಹ ಬಳಸಿಕೊಳ್ಳಲಾಗುತ್ತಿದೆ.

ಮಹಾದಾಯಿ (Mahadayi) ವನ್ಯಜೀವಿ ಧಾಮದಲ್ಲಿರುವ ಸಾಟ್ರೆಮ್‌ ಗ್ರಾಮದ ಬಳಿ ಮಾರ್ಚ್‌ 5ರಂದು ಮೊದಲ ಬಾರಿಗೆ ಸಣ್ಣ ಪ್ರಮಾಣದಲ್ಲಿ ಕಾಣಿಸಿಕೊಂಡ ಬೆಂಕಿ (Fire) 1 ವಾರದಲ್ಲಿ ರಕ್ಷಿತಾರಣ್ಯದ ಬಹುತೇಕ ಭಾಗಗಳಿಗೆ ಹಬ್ಬಿದೆ. ಗೋವಾದ (Goa) ಈ ಅರಣ್ಯಭಾಗದಲ್ಲಿ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಕೊನೆಯ ಬಾರಿ ಮಳೆಯಾಗಿದ್ದು, ಇದೀಗ ಬೇಸಿಗೆ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಇಡೀ ಅರಣ್ಯ ಬಹುತೇಕ ಒಣಗಿದೆ. ಹೀಗಾಗಿ ಬೆಂಕಿ ಬಹುಬೇಗವಾಗಿ ಹಬ್ಬುತ್ತಿದೆ ಎಂದು ಅರಣ್ಯಾಧಿಕಾರಿಗಳು ಹೇಳಿದ್ದಾರೆ. ಕಾಡ್ಗಿಚ್ಚಿನಿಂದಾಗಿ ನೆಲದ ಮೇಲೆ ಬಿದ್ದಿರುವ ಒಣಗಿದ ಎಲೆಗಳು, ಸಣ್ಣ ಗಾತ್ರದ ಸಸ್ಯಗಳು ಬಹುತೇಕ ಸುಟ್ಟುಹೋಗಿವೆ. ಇಡೀ ಅರಣ್ಯ ಪ್ರದೇಶದಲ್ಲಿ (Forest Region) ದಟ್ಟ ಹೊಗೆ ಆವರಿಸಿದೆ. ಸುಮಾರು 48 ಪ್ರದೇಶಗಳಲ್ಲಿ ಬೆಂಕಿ ಉರಿಯುತ್ತಿದ್ದು, ಕೇವಲ 2 ಬೆಂಕಿಗಳನ್ನು ಮಾತ್ರ ಯಶಸ್ವಿಯಾಗಿ ನಂದಿಸಲಾಗಿದೆ. ಬೆಂಕಿ ನಂದಿಸಲು 512 ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ ಎಂದು ಅರಣ್ಯ ಇಲಾಖೆ ಹೇಳಿದೆ.

Tap to resize

Latest Videos

ಇದನ್ನು ಓದಿ: ಮಲೆನಾಡಿನಲ್ಲಿ ಹೆಚ್ಚಾಗುತ್ತಿದೆ ಕಾಡ್ಗಿಚ್ಚು, ಬೆಂಕಿ ನಂದಿಸಲು ಹೋಗಿದ್ದ ಮೂವರು ಅರಣ್ಯ ಅಧಿಕಾರಿಗಳ ಬೈಕ್ ಭಸ್ಮ!

ನೌಕಾದಳದ ಹೆಲಿಕಾಪ್ಟರ್‌ ಬಳಕೆ: ಭಾರಿ ವಿಸ್ತಾರವಾದ ಬೆಂಕಿಯನ್ನು ನಂದಿಸಲು ನೌಕಾದಳದ ಹೆಲಿಕಾಪ್ಟರ್‌ಗಳನ್ನು (Navy Helicopter) ಬಳಕೆ ಮಾಡಲಾಗುತ್ತಿದ್ದು, ಇವುಗಳು ಬೆಂಕಿ ಉರಿಯುತ್ತಿರುವ ಪ್ರದೇಶಗಳ ಮೇಲೆ ನೀರು ಚೆಲ್ಲುವ ಮೂಲಕ ಬೆಂಕಿ ನಂದಿಸಲು ಪ್ರಯತ್ನಿಸುತ್ತಿವೆ. ಇದಲ್ಲದೇ ವಾಯುಪಡೆಯ ಸಿಬ್ಬಂದಿಗಳು ಸಹ ಅರಣ್ಯ ಇಲಾಖೆಯ ಸಿಬ್ಬಂದಿ ಜೊತೆ ಸೇರಿ ಬೆಂಕಿ ನಂದಿಸುವ ಕೆಲಸದಲ್ಲಿ ತೊಡಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕೇಂದ್ರ ಸರ್ಕಾರದಿಂದ ಮೇಲ್ವಿಚಾರಣೆ: ಭಾರಿ ಬೆಂಕಿ ಕಾಣಿಸಿಕೊಂಡಿರುವುದರಿಂದ ಇಡೀ ಘಟನೆಯನ್ನು ಕೇಂದ್ರ ಸರ್ಕಾರ (Central Government) ಮೇಲ್ವಿಚಾರಣೆ ನಡೆಸುತ್ತಿದ್ದು, ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡಿದೆ. ಅಲ್ಲದೇ ಈ ವಿಚಾರವಾಗಿ ಸಂಪೂರ್ಣ ಸಹಾಯ ಒದಗಿಸುವುದಾಗಿ ಪ್ರಧಾನಮಂತ್ರಿ ಸಚಿವಾಲಯ ಭರವಸೆ ನೀಡಿದೆ ಎಂದು ಗೋವಾ ಅರಣ್ಯ ಸಚಿವ ವಿಶ್ವಜಿತ್‌ ರಾಣೆ ಹೇಳಿದ್ದಾರೆ.

ಇದನ್ನೂ ಓದಿ: ಚಾಮುಂಡಿಬೆಟ್ಟ ಸೇರಿ 4 ಕಡೆ ಕಾಳ್ಗಿಚ್ಚು: ಅಪಾರ ಪ್ರಮಾಣದ ಅರಣ್ಯ ಪ್ರದೇಶ ಬೆಂಕಿಗೆ ಆಹುತಿ

click me!