
ಪಿಟಿಐ ವಿಶ್ವಸಂಸ್ಥೆ/ಜಿನೆವಾ (ಜು.8): ಭಾರತದಲ್ಲಿ ಕೊರೋನಾ ಸೋಂಕು ಪ್ರಕರಣಗಳ ಏರಿಳಿತ ಕಂಡುಬರುತ್ತಿರುವಾಗಲೇ, ಒಮಿಕ್ರೋನ್ ತಳಿಯ ಬಿಎ.2.75 ಎಂಬ ಹೊಸ ಉಪತಳಿಯೊಂದು ಭಾರತದಲ್ಲಿ ಪತ್ತೆಯಾಗಿದೆ ಹಾಗೂ ಇದು ಸುಮಾರು 10 ದೇಶಗಳಿಗೆ ಹಬ್ಬಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಎಚ್ಚರಿಕೆಯ ಗಂಟೆ ಮೊಳಗಿಸಿದೆ.
‘ಯುರೋಪ್ ಹಾಗೂ ಅಮೆರಿಕದಲ್ಲಿ ಬಿಎ.4 ಮತ್ತು ಬಿಎ.5 ಉಪತಳಿಗಳಿಂದ ಸೋಂಕು ಪ್ರಕರಣಗಳ ಉಬ್ಬರ ಕಂಡುಬಂದಿದೆ. ಭಾರತದಂತಹ ದೇಶಗಳಲ್ಲಿ ಬಿಎ.2.75 ಉಪತಳಿ ಪತ್ತೆಯಾಗಿದ್ದು, ಅದರ ಮೇಲೆ ನಿಗಾ ಇಟ್ಟಿದ್ದೇವೆ’ ಎಂದು ಡಬ್ಲ್ಯುಎಚ್‌ಒ ಮಹಾನಿರ್ದೇಶಕ ಟೆಡ್ರೋಸ್ ಅಧನೋಮ್ ಘೇಬ್ರಿಯೇಸಸ್ ಅವರು ತಿಳಿಸಿದ್ದಾರೆ. ಆದರೆ ಈ ತಳಿಯಿಂದಾಗಿಯೇ ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆಯೇ ಎಂಬುದನ್ನು ಅವರು ಹೇಳಿಲ್ಲ.
ಜಾಗತಿಕವಾಗಿ ಕಳೆದ ಎರಡು ವಾರಗಳಿಂದ ಸೋಂಕು ಪ್ರಕರಣಗಳ ಸಂಖ್ಯೆ ಶೇ.30ರಷ್ಟುಹೆಚ್ಚಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಆರು ವಲಯಗಳ ಪೈಕಿ ನಾಲ್ಕರಲ್ಲಿ ಕಳೆದ ವಾರ ಸೋಂಕು ಹೆಚ್ಚಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕೋವಿಡ್ ವೇಳೆ ಸರ್ಕಾರಿ ಶಾಲೆ, ಕಾಲೇಜು ಪ್ರವೇಶ ಏರಿಕೆ
ಅಪಾಯಕಾರಿಯೇ?: ಈ ನಡುವೆ, ‘ಭಾರತದಲ್ಲಿ ಪತ್ತೆಯಾಗಿರುವ ಒಮಿಕ್ರೋನ್‌ನ ಹೊಸ ಉಪತಳಿ ‘ಬಿಎ.2.75’, ಹೆಚ್ಚುವರಿ ರೋಗನಿರೋಧಕ ಶಕ್ತಿಯನ್ನು ಭೇದಿಸುತ್ತದೆಯೇ ಅಥವಾ ಅತ್ಯಂತ ಅಪಾಯಕಾರಿಯಾಗಿದೆಯೇ ಎಂಬುದನ್ನು ಈಗಲೇ ಹೇಳಲು ಆಗುವುದಿಲ್ಲ. ಆ ಬಗ್ಗೆ ನಮಗೂ ಗೊತ್ತಿಲ್ಲ. ಈ ತಳಿಯ ಸೀಮಿತ ಮಾದರಿಗಳು ವಿಶ್ಲೇಷಣೆಗೆ ಲಭ್ಯವಿವೆ’ ಎಂದು ಡಬ್ಲ್ಯುಎಚ್‌ಒದ ಮುಖ್ಯ ವಿಜ್ಞಾನಿ ಸೌಮ್ಯ ಸ್ವಾಮಿನಾಥನ್ ಅವರು ಟ್ವೀಟರ್‌ನಲ್ಲಿ ವಿಡಿಯೋ ಬಿತ್ತರಿಸಿದ್ದಾರೆ. ಬಿಎ.2.75 ಮೊದಲು ಭಾರತದಲ್ಲಿ ಪತ್ತೆಯಾಗಿ, ಈಗ ಸುಮಾರು 10 ದೇಶಗಳಲ್ಲಿ ಕಾಣಿಸಿಕೊಂಡಿದೆ ಎಂದು ಹೇಳಿದ್ದಾರೆ.
ಕರ್ನಾಟಕದಲ್ಲಿ ಮತ್ತೆ 1000ಕ್ಕೂ ಅಧಿಕ ಕೋವಿಡ್ ಕೇಸ್: ರಾಜ್ಯದಲ್ಲಿ ಸತತ ಎರಡನೇ ದಿನ ಕೊರೋನಾ ಸೋಂಕು ಪ್ರಕರಣಗಳು ಒಂದು ಸಾವಿರ ಗಡಿ ದಾಟಿದ್ದು, 21 ಜಿಲ್ಲೆಗಳಲ್ಲಿ ಹೊಸ ಪ್ರಕರಣಗಳು ವರದಿಯಾಗಿವೆ.
ಗುರುವಾರ 1053 ಕೊರೋನಾ ಹೊಸ ಪ್ರಕರಣಗಳು ವರದಿಯಾಗಿದ್ದು, 1080 ಮಂದಿ ಗುಣಮುಖರಾಗಿದ್ದಾರೆ. ಸೋಂಕಿತರ ಸಾವಾಗಿಲ್ಲ. ಸದ್ಯ 6,454 ಸೋಂಕಿತರು ಆಸ್ಪತ್ರೆ/ಮನೆಯಲ್ಲಿ ಚಿಕಿತ್ಸೆ, ಆರೈಕೆಯಲ್ಲಿದ್ದಾರೆ. 27 ಸಾವಿರ ಸೋಂಕು ಪರೀಕ್ಷೆಗಳು ನಡೆದಿದ್ದು, ಪಾಸಿಟಿವಿಟಿ ದರ ಶೇ.3.8 ದಾಖಲಾಗಿದೆ. ಬುಧವಾರದಷ್ಟೇ ಸೋಂಕು ಪರೀಕ್ಷೆಗಳು ನಡೆದಿದ್ದು, ಹೊಸ ಪ್ರಕರಣಗಳು ಮಾತ್ರ 74 ಕಡಿಮೆಯಾಗಿವೆ (ಬುಧವಾರ 1127, ಸಾವು ಶೂನ್ಯ).
ವಾರದ ಆರಂಭದಲ್ಲಿ 800 ಆಸುಪಾಸಿನಲ್ಲಿದ್ದ ಹೊಸ ಪ್ರಕರಣಗಳು ಬುಧವಾರದಿಂದ ಒಂದು ಸಾವಿರಕ್ಕಿಂತ ಅಧಿಕ ವರದಿಯಾಗಿವೆ. ಸದ್ಯ ಸಕ್ರಿಯ ಸೋಂಕಿತರ ಪೈಕಿ 94 ಮಂದಿ ಮಾತ್ರ ಆಸ್ಪತ್ರೆಯಲ್ಲಿದ್ದಾರೆ. ಉಳಿದಂತೆ 6,364 ಮಂದಿ ಮನೆಯಲ್ಲಿಯೇ ಆರೈಕೆಯಲ್ಲಿದ್ದಾರೆ. ರಾಜ್ಯದಲ್ಲಿ ಈವರೆಗೆ 39.7 ಲಕ್ಷ ಮಂದಿಗೆ ಸೋಂಕು ತಗುಲಿದೆ. 39.2 ಲಕ್ಷ ಮಂದಿ ಗುಣಮುಖರಾಗಿದ್ದು, 40,080 ಮಂದಿ ಸಾವಿಗೀಡಾಗಿದ್ದಾರೆ ಎಂದು ಆರೋಗ್ಯ ಇಲಾಖೆಯ ಕೊರೋನಾ ವರದಿಯಲ್ಲಿ ತಿಳಿಸಿದೆ.
ಮತ್ತೆ ಕೊರೋನಾ ಸ್ಫೋಟ, ಭಾರತದಲ್ಲಿ 18 ಸಾವಿರ ಕೇಸ್, 35 ಸಾವು!
21 ಜಿಲ್ಲೆಗಳಲ್ಲಿ ಹೊಸ ಪ್ರಕರಣ: ಬೆಂಗಳೂರಿಗೆ ಸೀಮಿತವಾಗಿದ್ದ ಹೊಸ ಪ್ರಕರಣಗಳು ದಿನದಿಂದ ದಿನಕ್ಕೆ ಇತರೆ ಜಿಲ್ಲೆಗಳಲ್ಲಿಯೂ ವರದಿಯಾಗುತ್ತಿದೆ. ಗುರುವಾರ ಹೊಸ ಪ್ರಕರಣಗಳ ಪೈಕಿ ಬೆಂಗಳೂರಿನಲ್ಲಿ 966 ಪತ್ತೆಯಾಗಿವೆ. ಉಳಿದಂತೆ ದಕ್ಷಿಣ ಕನ್ನಡ 15, ಮೈಸೂರು 10, ಧಾರವಾಡ 9, ಕೋಲಾರ 8, ಹಾಸನ 6, ದಾವಣಗೆರೆ, ಮಂಡ್ಯ, ರಾಮನಗರ, ಶಿವಮೊಗ್ಗ, ತುಮಕೂರು ಹಾಗೂ ಉತ್ತರಕನ್ನಡಲ್ಲಿ ತಲಾ ಮೂರು, ಬೆಳಗಾವಿ, ಬಾಗಲಕೋಟೆ, ಬೀದರ್, ಚಾಮರಾಜನಗರ, ಹಾವೇರಿಯಲ್ಲಿ ತಲಾ ಒಬ್ಬರಿಗೆ ಸೋಂಕು ತಗುಲಿದೆ. ಈ ಮೂಲಕ ರಾಜ್ಯದ 21 ಜಿಲ್ಲೆಗಳಲ್ಲಿ ಹೊಸ ಪ್ರಕರಣಗಳು ವರದಿಯಾಗಿವೆ. ಒಂಬತ್ತು ಜಿಲ್ಲೆಗಳಲ್ಲಿ ಹೊಸ ಪ್ರಕರಣಗಳು ಪತ್ತೆಯಾಗಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ