
ನವದೆಹಲಿ(ಸೆ.09): ಇನ್ನು ಮುಂದೆ ಮಹಿಳೆಯರು ತಮ್ಮ ನಿವೃತ್ತಿ ಅವಧಿಯವರೆಗೂ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಿ ಉನ್ನತ ಹುದ್ದೆ ಪಡೆಯಬಹುದಾದ ಐತಿಹಾಸಿಕ ನಿರ್ಧಾರವನ್ನು ಕೇಂದ್ರ ಸರ್ಕಾರ ಕೈಗೊಂಡಿದೆ. ಈ ಪ್ರಕಾರ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ (ಎನ್ಡಿಎ) ಪ್ರವೇಶಿಸಿ ಉತ್ತೀರ್ಣರಾಗಿ ತರಬೇತಿ ಪಡೆದ ಮಹಿಳೆಯರಿಗೆ ಸೇನೆಯಲ್ಲಿ ಪರ್ಮನೆಂಟ್ ಕಮಿಶನ್‌ಗೆ (ನಿವೃತ್ತಿಯಾಗುವವರೆಗೂ ಸೇವೆ ಸಲ್ಲಿಸುವ) ಅವಕಾಶ ಲಭಿಸಲಿದೆ.
‘ಈವರೆಗೆ ಸಶಸ್ತ್ರ ಪಡೆಗಳಲ್ಲಿ ಮಹಿಳೆಯರಿಗೆ, ನಿವೃತ್ತಿ ವಯಸ್ಸಿನವರೆಗೂ ಸೇವೆ ಸಲ್ಲಿಸಲು ಅವಕಾಶವಿಲ್ಲ. ಕೇವಲ 14 ವರ್ಷ (ಶಾರ್ಟ್ ಸವೀರ್‍ಸ್ ಕಮಿಶನ್) ಸೇವೆಗೆ ಮಾತ್ರ ಅವಕಾಶವಿತ್ತು. ಇದರಿಂದಾಗಿ ಮಹಿಳೆಯರು ಸೇನೆಯಲ್ಲಿ ಉನ್ನತ ಹುದ್ದೆಗಳ ಅವಕಾಶದಿಂದ ವಂಚಿತರಾಗಿದ್ದಾರೆ’ ಎಂದು ಆರೋಪಿಸಿ ಸಲ್ಲಿಸಲಾದ ಅರ್ಜಿ ವಿಚಾರಣೆ ವೇಳೆ ಸರ್ಕಾರ ತನ್ನ ನಿರ್ಧಾರ ಪ್ರಕಟಿಸಿದ್ದು, ಸುಪ್ರೀಂ ಕೋರ್ಟ್‌ಗೆ ಬುಧವಾರ ಮಾಹಿತಿ ನೀಡಿದೆ.
ಈ ಐತಿಹಾಸಿಕ ನಿರ್ಧಾರಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ‘ಲಿಂಗ ತಾರತಮ್ಯ ತೊಡೆದುಹಾಕುವಲ್ಲಿ ಇದೊಂದು ಮೈಲುಗಲ್ಲು’ ಎಂದು ಬಣ್ಣಿಸಲಾಗಿದೆ.
ಕಾಲ ಈಗ ಕೂಡಿಬಂದಿದೆ- ಸರ್ಕಾರ:
‘ಇನ್ನು ಮುಂದೆ ಎನ್ಡಿಎ ಪ್ರವೇಶಿಸಿ ತರಬೇತಿ ಪಡೆದ ಮಹಿಳೆಯರಿಗೆ ಪರ್ಮನಂಟ್ ಕಮಿಶನ್ ನೀಡಲಾಗುವುದು’ ಎಂದು ಕೇಂದ್ರದ ಪರವಾಗಿ ಹಾಜರಾಗಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯಾ ಭಾಟಿ ನ್ಯಾಯಾಲಯದ ಮುಂದೆ ಹೇಳಿದರು.
‘ಸಶಸ್ತ್ರ ಪಡೆಗಳು ಮತ್ತು ಸರ್ಕಾರದ ಉನ್ನತ ಮಟ್ಟದಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ. ಇಂಥದ್ದೊಂದು ಚಿಂತನೆ ಇತ್ತಾದರೂ ಅದರ ಜಾರಿಗೆ ಕಾಲ ಕೂಡಿ ಬಂದಿರಲಿಲ್ಲ. ಇದೀಗ ಅಂಥ ನಿರ್ಧಾರ ಕೈಗೊಳ್ಳಲಾಗಿದೆ. ಈ ಕುರಿತು ಸರ್ಕಾರ ಸೆ.20ರೊಳಗೆ ಅಫಿಡವಿಟ್ ಮೂಲಕ ಸಮಗ್ರ ಮಾಹಿತಿ ನೀಡಲಿದೆ. ಅದಕ್ಕೆ ಕಾಲಾವಕಾಶ ನೀಡಬೇಕು’ ಎಂದು ಕೋರಿದರು.
ಅಲ್ಲದೆ, ‘ಈ ನಿರ್ಧಾರ ಜಾರಿಗೆ ತರುವ ಸಲುವಾಗಿ ಈ ವರ್ಷದ ಪರೀಕ್ಷೆಗಳ ಮೇಲೆ ಯಥಾಸ್ಥಿತಿ ಕಾಯ್ದುಕೊಳ್ಳಲು ಸೂಚಿಸಬೇಕು’ ಎಂದು ಮನವಿ ಮಾಡಿದರು. ಇದಕ್ಕೆ ಒಪ್ಪಿದ ನ್ಯಾಯಾಲಯ, ಅರ್ಜಿ ವಿಚಾರಣೆಯನ್ನು 2 ವಾರಗಳ ಕಾಲ ಮುಂದೂಡಿತು.
ಕಿವಿಮಾತು:
ಅರ್ಜಿ ವಿಚಾರಣೆ ವೇಳೆ ಸೇನೆಗೆ ಕಿವಿ ಮಾತು ಹೇಳಿದ ನ್ಯಾ| ಎಸ್.ಕೆ. ಕೌಲ್, ‘ಇಂಥದ್ದೊಂದು ನಿರ್ಧಾರ ಕೈಗೊಳ್ಳಿ ಎಂದು ನಾವು ಕಾಲಕಾಲಕ್ಕೆ ಅಧಿಕಾರಿಗಳಿಗೆ ಸೂಚಿಸುತ್ತಲೇ ಇದ್ದೆವು. ಆದರೆ ಅವರು ಕಿವಿಗೊಡದೇ ಇದ್ದಾಗ ನಾವು ಅನಿವಾರ್ಯವಾಗಿ ಮಧ್ಯಪ್ರವೇಶ ಮಾಡಬೇಕಾಗಿ ಬಂತು. ಆದರೆ ನಮಗೆ ಇದೇನು ಸಂತಸದ ವಿಷಯವಲ್ಲ. ಏಕೆಂದರೆ ಸೇನೆಗೆ ಅತ್ಯಂತ ಗೌರವವಿದೆ. ಹೀಗಾಗಿ ಲಿಂಗ ಸಮಾನತೆ ವಿಷಯದಲ್ಲಿ ಸೇನೆ ಇನ್ನಷ್ಟುಸಂವೇದನಶೀಲವಾಗಬೇಕು. ಕೊನೆಗೂ ಈ ವಿಷಯದಲ್ಲಿ ಸೂಕ್ತವಾಗಿ ಸ್ಪಂದಿಸಿದ್ದು ತೃಪ್ತಿ ತಂದಿದೆ’ ಎಂದು ಹೇಳಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ