1.7 ಲಕ್ಷ ಗಳಿಸುವ ವೃದ್ಧೆ ಬಳಿ ಸ್ವಿಸ್‌ಬ್ಯಾಂಕಲ್ಲಿ 196 ಕೋಟಿ!

By Kannadaprabha NewsFirst Published Jul 20, 2020, 7:39 AM IST
Highlights

1.7 ಲಕ್ಷ ಗಳಿಸುವ ವೃದ್ಧೆ ಬಳಿ ಸ್ವಿಸ್‌ಬ್ಯಾಂಕಲ್ಲಿ 196 ಕೋಟಿ!| ಬೆಂಗಳೂರಿನ ವಿಳಾಸ ನೀಡಿ ಮುಂಬೈ ವೃದ್ಧೆ ವಂಚನೆ| 196 ಕೋಟಿ ರು.ಗೆ ದಂಡ, ತೆರಿಗೆ ಪಾವತಿಗೆ ಆದೇಶ

ಮುಂಬೈ(ಜು.20): ಮಾಸಿಕ ಕೇವಲ 14000 ರು. (ವಾರ್ಷಿಕ 1.68 ಲಕ್ಷ ರು.) ಆದಾಯ ಇದೆ ಎಂದು ಘೋಷಿಸಿಕೊಂಡಿದ್ದ 80 ವರ್ಷದ ವೃದ್ಧೆಯೊಬ್ಬರ ಸ್ವಿಸ್‌ ಬ್ಯಾಂಕ್‌ ಖಾತೆಯಲ್ಲಿ ಭರ್ಜರಿ 196 ಕೋಟಿ ರು. ಪತ್ತೆಯಾಗಿದೆ. ತೆರಿಗೆ ವಂಚಿಸಲು ನಾನಾ ತಂತ್ರ ರೂಪಿಸಿದರೂ ಅದು ಸಫಲವಾಗದೆ, ಇದೀಗ ಅಘೋಷಿತ ಹಣಕ್ಕೆ ದಂಡ ಮತ್ತು ತೆರಿಗೆ ಪಾವತಿಸುವಂತೆ ಆ ಮಹಿಳೆಗೆ ಮುಂಬೈನ ಆದಾಯ ತೆರಿಗೆ ಮೇಲ್ಮನವಿ ನ್ಯಾಯಾಧಿಕರಣ ಸೂಚಿಸಿದೆ.

ತಾನು ಅನಿವಾಸಿ ಭಾರತೀಯ ಮಹಿಳೆ ಎಂದು ಹೇಳಿ ಕೊನೆಗೆ ಬೆಂಗಳೂರಿನ ವಿಳಾಸ ನೀಡಿದ್ದ ರೇಣು ಥರಾಣಿ ಎಂಬ ಮಹಿಳೆಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿರುವ ನ್ಯಾಯಾಧಿಕರಣ, ಶೀಘ್ರ ದಂಡ ಮತ್ತು ತೆರಿಗೆ ಪಾವತಿಗೆ ಸೂಚಿಸಿದೆ. ದಶಕಗಳ ಹಿಂದೆಯೇ ಪತ್ತೆಯಾಗಿದ್ದ ಈ ಕೇಸಿನ ಕುರಿತು ಇದೀಗ ನ್ಯಾಯಾಧಿಕರಣ ತೀರ್ಪು ನೀಡಿದೆ.

ಸ್ವಿಸ್‌ ಬ್ಯಾಂಕಲ್ಲಿರುವ ಭಾರತೀಯರ ಹಣ 6,625 ಕೋಟಿ ರು.ಗೆ ಕುಸಿತ

ಪ್ರಕರಣ ಹಿನ್ನೆಲೆ:

ಸ್ವಿಜಲೆಂಡ್‌ನಲ್ಲಿರುವ ಎಚ್‌ಎಸ್‌ಬಿಸಿ ಜಿನೆವಾ ಶಾಖೆಯಲ್ಲಿ 2004ಲ್ಲಿ ಥರಾಣಿ ಫ್ಯಾಮಿಲಿ ಟ್ರಸ್ಟ್‌ ಹೆಸರಲ್ಲಿ ಖಾತೆಯೊಂದನ್ನು ತೆರೆಯಲಾಗಿತ್ತು. ಬಳಿಕ ಈ ಖಾತೆಗೆ ಏಕಾಏಕಿ, ತೆರಿಗೆ ವಂಚಕರ ಸ್ವರ್ಗವಾದ ಕೇಮನ್‌ ಐಲ್ಯಾಂಡ್‌ನ ಜಿಡಬ್ಲ್ಯು ಇನ್ವೆಸ್ಟ್‌ಮೆಂಟ್‌ ಕಂಪನಿಯಿಂದ 196 ಕೋಟಿ ರು. ವರ್ಗಾಯಿಸಲಾಗಿತ್ತು.

ಆದರೆ 2005-06ರಲ್ಲಿ ಸಲ್ಲಿಸಲಾದ ಆದಾಯ ತೆರಿಗೆ ಮಾಹಿತಿಯಲ್ಲಿ ರೇಣು ಅವರು ಸ್ವಿಸ್‌ ಬ್ಯಾಂಕ್‌ ಖಾತೆಯ ಮಾಹಿತಿ ನೀಡಿರಲಿಲ್ಲ. ತಮ್ಮ ವಾರ್ಷಿಕ ಆದಾಯ 1.7 ಲಕ್ಷ ಎಂದು ನಮೂದಿಸಿದ್ದರು.

ಭಾರತದ 15 ಸ್ವಿಸ್ ಖಾತೆ ನಿಷ್ಕ್ರಿಯ; ವಾರಸ್ಥಾರರೇ ಇಲ್ಲ!

ಬಳಿಕ ಎಚ್‌ಎಸ್‌ಬಿಸಿ ಖಾತೆಯಲ್ಲಿ ರೇಣು ಅವರ ಖಾತೆ ಮತ್ತು ಅದರಲ್ಲಿನ ಠೇವಣಿ ಬಗ್ಗೆ ಆದಾಯ ತೆರಿಗೆ ಇಲಾಖೆಗೆ ಮಾಹಿತಿ ಸಿಕ್ಕಿ, 2014ರಲ್ಲಿ ನೋಟಿಸ್‌ ಜಾರಿ ಮಾಡಿತ್ತು. ಇದಕ್ಕೆ ಉತ್ತರಿಸಿದ್ದ ರೇಣು, ‘ತಾವು ಸ್ವಿಸ್‌ ಬ್ಯಾಂಕ್‌ನಲ್ಲಿ ಯಾವುದೇ ಖಾತೆ ಹೊಂದಿಲ್ಲ. ಜೊತೆಗೆ ಜಿಡಬ್ಲ್ಯು ಇನ್ವೆಸ್ಟ್‌ಮೆಂಟ್‌ ಬ್ಯಾಂಕ್‌ನಲ್ಲಿ ಷೇರುದಾರರಾಗಲೀ, ನಿರ್ದೇಶಕರಾಗಲಿ ಆಗಿಲ್ಲ ಎಂದು ಸ್ಪಷ್ಟನೆ ನೀಡಿದ್ದರು. ಜೊತೆಗೆ ತಾವು ಟ್ಯಾಕ್ಸ್‌ ರೆಸಿಡೆಂಟ್‌ ಆಫ್‌ ಇಂಡಿಯಾ (ನಿಗದಿತ ಅವಧಿಯಲ್ಲಿ ಮಾತ್ರವೇ ಭಾರತದ ಯಾವುದೇ ಸ್ಥಳದಲ್ಲಿ ಇರುವ ಬಗ್ಗೆ ನೀಡಿದ ಮಾಹಿತಿ) ಆಗಿರುವ ಕಾರಣ, ವಿದೇಶದಲ್ಲಿ ಪಡೆದ ಯಾವುದೇ ಆದಾಯಕ್ಕೆ ಭಾರತದಲ್ಲಿ ಯಾವುದೇ ತೆರಿಗೆ ವಿಧಿಸುವಂತಿಲ್ಲ’ ಎಂದು ವಾದಿಸಿದ್ದರು. ಅಲ್ಲದೆ ತಾವು ಬೆಂಗಳೂರಿನ ನಿವಾಸಿಯಾಗಿರುವುದಾಗಿಯೂ ದಾಖಲೆ ಸಲ್ಲಿಸಿದ್ದರು.

ಈ ಪ್ರಕರಣ ತೆರಿಗೆ ಮೇಲ್ಮನವಿ ನ್ಯಾಯಾಧಿಕರಣದ ಮೆಟ್ಟಿಲೇರಿತ್ತು. ಈ ಕುರಿತು ವಿಸ್ತೃತ ವಿಚಾರಣೆ ನಡೆಸಿದ ನ್ಯಾಯಾಧಿಕರಣ, ‘ರೇಣು ಥರಾಣಿ ಅವರು ತಮ್ಮ ಆದಾಯ ತೆರಿಗೆ ಸಲ್ಲಿಕೆ ವೇಳೆ ನೀಡಿದಂತೆ ಅವರ ವಾಸಸ್ಥಳ ಇಲ್ಲ. ಇನ್ನು ಅವರು ಹೇಳಿದ್ದನ್ನೇ ಒಪ್ಪಿಕೊಂಡರೂ, ಅಷ್ಟುಸೀಮಿತ ಅವಧಿಯಲ್ಲಿ ಅವರ ಸ್ವಿಸ್‌ ಖಾತೆಗೆ 196 ಕೋಟಿ ರು. ಆದಾಯ ಹರಿದು ಬರುವ ಯಾವುದೇ ಸಾಧ್ಯತೆ ಇಲ್ಲ. ಹಿಂದಿನ ವರ್ಷದ ಆದಾಯ ತೆರಿಗೆ ಮಾಹಿತಿ ಅನ್ವಯವೇ ಲೆಕ್ಕ ಹಾಕಿದರೆ, ರೇಣು ಅವರು 196 ಕೋಟಿ ರು. ಆದಾಯ ಸಂಗ್ರಹಿಸಲು 11500 ವರ್ಷ ಬೇಕಾಗುತ್ತದೆ. ಇನ್ನು ಯಾವುದೋ ಸಂಸ್ಥೆಯೊಂದು ಸುಮ್ಮನೆ 196 ಕೋಟಿ ರು. ಹಣವನ್ನು ಖಾತೆಗೆ ಹಾಕಲು ಈ ತೆರಿಗೆದಾರರು ಮದರ್‌ ಥೆರೇಸಾ ರೀತಿಯಲ್ಲಿ ಯಾವುದೇ ಸಾರ್ವಜನಿಕ ಸೇವೆಯಲ್ಲಿರುವ ವ್ಯಕ್ತಿಯಲ್ಲ. ಮೇಲಾಗಿ ಕೇಮನ್‌ ಐಲ್ಯಾಂಡ್‌ ದಾನಿಗಳ ಕಾರ್ಯನಿರ್ವಹಣೆಗೆ ಹೆಸರಾದ ಪ್ರದೇಶವಲ್ಲ. ಅದು ಕಾಳಧನಿಕರಿಗೆ ತೆರಿಗೆ ವಂಚಿಸಲು ಸ್ವರ್ಗವೆಂದೇ ಹೆಸರಾಗಿರುವ ಪ್ರದೇಶ. ಹೀಗಾಗಿ ಇದು ವಿದೇಶದಿಂದ ಬಂದ ಆದಾಯವಲ್ಲ. ರೇಣು ಅವರು 196 ಕೋಟಿ ರು. ಅಘೋಷಿತ ಹಣಕ್ಕೆ ತೆರಿಗೆ ಮತ್ತು ದಂಡವನ್ನು ಪಾವತಿಸಬೇಕು ಎಂದು ಸೂಚಿಸಿತು.

click me!